ಮುಂಬೈನಲ್ಲಿ ಬೆಚ್ಚಿಬೀಳಿಸುವ ದುರಂತ: 18 ತಿಂಗಳ ಹಸುಗೂಸನ್ನು 6ನೇ ಮಹಡಿಯಿಂದ ಎಸೆದು ಕೊಂದ 10 ವರ್ಷದ ಬಾಲಕಿ
ಮುಂಬೈನ ಗೊರೆಗಾಂವ್ನಲ್ಲಿ 10 ವರ್ಷದ ಬಾಲಕಿ 18 ತಿಂಗಳ ಹಸುಗೂಸನ್ನು 6ನೇ ಮಹಡಿಯಿಂದ ಎಸೆದು ಕೊಂದ ಹೃದಯವಿದ್ರಾವಕ ಘಟನೆ ವರದಿಯಾಗಿದೆ. ಸಿಸಿಟಿವಿ ದೃಶ್ಯಾವಳಿಗಳಿಂದ ಕೃತ್ಯ ಬಹಿರಂಗಗೊಂಡಿದ್ದು, ಬಾಲಕಿಯ ಮಾನಸಿಕ ಆರೋಗ್ಯದ ಬಗ್ಗೆ ಪ್ರಶ್ನೆಗಳು ಎದ್ದಿವೆ. ಪೊಲೀಸರು ಬಾಲನ್ಯಾಯ ಕಾಯ್ದೆ ಅಡಿಯಲ್ಲಿ ತನಿಖೆ ನಡೆಸುತ್ತಿದ್ದು, ಮಕ್ಕಳ ಸುರಕ್ಷತೆ ಮತ್ತು ಪೋಷಕರ ಜವಾಬ್ದಾರಿಯ ಕುರಿತು ಚರ್ಚೆ ಶುರುವಾಗಿದೆ.

ಮುಂಬೈ, ಅಕ್ಟೋಬರ್ 16: ಹತ್ತು ವರ್ಷದ ಬಾಲಕಿ ಪಕ್ಕದ ಮನೆಯ 18 ತಿಂಗಳ ಮಗುವನ್ನು 6ನೇ ಮಹಡಿಯಿಂದ ಕೆಳಗೆ ಎಸೆದು ಕೊಂದಿರುವ ಘಟನೆ ಮುಂಬೈನ ಉಪನಗರ ಗೋರೆಗಾಂವ್ನಲ್ಲಿ ನಡೆದಿದೆ. ಬುಧವಾರ ರಾತ್ರಿ 9 ಗಂಟೆ ಸುಮಾರಿಗೆ ಗೋರೆಗಾಂವ್ನ ಶಿವಶಾಹಿ ಅಪಾರ್ಟ್ಮೆಂಟ್ ಕಟ್ಟಡದಲ್ಲಿ ಈ ಘಟನೆ ನಡೆದಿದ್ದು, ಕಾರಿಡಾರ್ನಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಇಡೀ ದೃಶ್ಯ ದಾಖಲಾಗಿದೆ. ಘಟನೆಯ ಬೆನ್ನಲ್ಲೇ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಮೃತ ಮಗುವಿನ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿ, ಕೃತ್ಯವೆಸಗಿದ ಅಪ್ರಾಪ್ತ ಬಾಲಕಿ ಹಾಗೂ ಆಕೆಯ ತಾಯಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ, ಬಾಲಕಿಯು 18 ತಿಂಗಳ ಕಂದಮ್ಮನನ್ನು ಎತ್ತಿಕೊಂಡು ಬಂದು 6ನೇ ಮಹಡಿಯ ಕಾರಿಡಾರ್ನ ರೇಲಿಂಗ್ನಿಂದ ಕೆಳಕ್ಕೆ ಎಸೆಯುತ್ತಾಳೆ.
ಮಗುವನ್ನು ಕೆಳಗೆ ಎಸೆದ ಕೆಲವೇ ಕ್ಷಣಗಳಲ್ಲಿ ಬಾಲಕಿ ಕಾರಿಡಾರ್ನ ಇನ್ನೊಂದು ಬದಿಗೆ ಓಡಿಹೋಗಿ, ಏನೂ ತಿಳಿಯದಂತೆ ಅದೇ ಮಹಡಿಯಲ್ಲಿ ಸೈಕಲ್ ಸವಾರಿ ಮಾಡುತ್ತಾ ತಿರುಗಾಡುವುದು ಕ್ಯಾಮೆರಾದಲ್ಲಿ ಕಂಡುಬಂದಿದೆ. 6ನೇ ಮಹಡಿಯಿಂದ ನೆಲಕ್ಕೆ ಬಿದ್ದ ಪರಿಣಾಮ ಗಂಭೀರವಾಗಿ ಗಾಯಗೊಂಡ ಮಗು ಸ್ಥಳದಲ್ಲೇ ಕೊನೆಯುಸಿರೆಳೆದಿದೆ.
ಮೃತ ಮಗುವಿನ ಕುಟುಂಬಸ್ಥರು ಅಕ್ಟೋಬರ್ 1 ರಂದು ಈ ಕಟ್ಟಡಕ್ಕೆ ಹೊಸದಾಗಿ ಬಾಡಿಗೆಗೆ ಬಂದಿದ್ದರು. ಎರಡೂ ಕುಟುಂಬಗಳ ನಡುವೆ ಸಾಕು ಬೆಕ್ಕಿನ ವಿಷಯಕ್ಕೆ ಸಂಬಂಧಿಸಿದಂತೆ ಹಿಂದಿನಿಂದಲೂ ಸಣ್ಣಪುಟ್ಟ ಜಗಳಗಳು ನಡೆಯುತ್ತಿದ್ದವು ಎಂದು ಮಗುವಿನ ಪೋಷಕರು ಆರೋಪಿಸಿದ್ದಾರೆ. ಘಟನೆಯನ್ನು ಮುಚ್ಚಿಹಾಕಲು ಬಾಲಕಿಯ ಕುಟುಂಬಸ್ಥರು ಕಟ್ಟಡದಲ್ಲಿದ್ದ ಸಿಸಿಟಿವಿ ಕ್ಯಾಮೆರಾಗಳ ಸಂಪರ್ಕವನ್ನು ಆಫ್ ಮಾಡಲು ಪ್ರಯತ್ನಿಸಿದ್ದರು ಎಂದು ಸಂತ್ರಸ್ತ ಕುಟುಂಬವು ಪೊಲೀಸರ ಮುಂದೆ ಗಂಭೀರ ಆರೋಪ ಮಾಡಿದೆ.
ಮತ್ತಷ್ಟು ಓದಿ: ಹುಟ್ಟಿ 28 ದಿನಕ್ಕೆ ಷೇರು ಮಾರುಕಟ್ಟೆ ಪ್ರವೇಶ: ಅಂಬೆಗಾಲಿಡುವ ಮುನ್ನವೇ ಇನ್ವೆಸ್ಟರ್ ಆದ ಮಗು!
ಕೃತ್ಯವೆಸಗಿದ 10 ವರ್ಷದ ಬಾಲಕಿ ಮಾನಸಿಕ ಅಸ್ವಸ್ಥತೆ ಮತ್ತು ನಡವಳಿಕೆಯ ಸಮಸ್ಯೆಗಳಿಂದ ಬಳಲುತ್ತಿದ್ದಳು ಎಂದು ಪ್ರಾಥಮಿಕ ಮಾಹಿತಿಯಿಂದ ತಿಳಿದುಬಂದಿದೆ. ದಿಂಡೋಶಿ ಪೊಲೀಸ್ ಠಾಣೆಯ ಪೊಲೀಸರು ಸದ್ಯ ಅಪಘಾತ ಸಾವಿನ ವರದಿ (ADR) ದಾಖಲಿಸಿಕೊಂಡು ಸಮಗ್ರ ತನಿಖೆ ಕೈಗೊಂಡಿದ್ದಾರೆ.
ಆರೋಪಿ ಬಾಲಕಿಗೆ ಕೇವಲ 10 ವರ್ಷ ವಯಸ್ಸಾಗಿರುವುದರಿಂದ, ಆಕೆಯ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) ಬದಲಿಗೆ ಬಾಲನ್ಯಾಯ ಕಾಯ್ದೆಯ ನಿಬಂಧನೆಗಳ ಪ್ರಕಾರ ಕ್ರಮ ಕೈಗೊಳ್ಳಬೇಕಾಗುತ್ತದೆ. ಬಾಲಕಿಯನ್ನು ಬಾಲ ನ್ಯಾಯ ಮಂಡಳಿಯ (JJB) ಮುಂದೆ ಹಾಜರುಪಡಿಸಿ, ಕೌನ್ಸಿಲಿಂಗ್ ಹಾಗೂ ಬಾಲಮಂದಿರಕ್ಕೆ ರವಾನಿಸುವ ಸಾಧ್ಯತೆಯಿದೆ.
ಘಟನೆಯಲ್ಲಿ ಅಥವಾ ಅದಕ್ಕೂ ಮುನ್ನ ನಡೆದ ಗಲಾಟೆಯಲ್ಲಿ ಆಕೆಯ ತಾಯಿಯ ಪ್ರಚೋದನೆ ಅಥವಾ ನಿರ್ಲಕ್ಷ್ಯವಿದೆಯೇ ಎಂಬುದನ್ನು ಪತ್ತೆಹಚ್ಚಲು ಪೊಲೀಸರು ಆಕೆಯನ್ನೂ ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಸಣ್ಣ ವಯಸ್ಸಿನ ಮಕ್ಕಳಲ್ಲಿ ಕಂಡುಬರುವ ನಡವಳಿಕೆಯ ವೈಪರೀತ್ಯಗಳು ಮತ್ತು ಆಕ್ರಮಣಕಾರಿ ವರ್ತನೆಗಳನ್ನು ಪೋಷಕರು ಆರಂಭದಲ್ಲೇ ಗುರುತಿಸಿ ಸೂಕ್ತ ಮಾನಸಿಕ ತಜ್ಞರ ಚಿಕಿತ್ಸೆ ಕೊಡಿಸದಿದ್ದರೆ ಇಂತಹ ಭೀಕರ ದುರಂತಗಳಿಗೆ ದಾರಿಯಾಗುತ್ತವೆ ಎಂದು ಮಕ್ಕಳ ಮನಶ್ಶಾಸ್ತ್ರಜ್ಞರು ಎಚ್ಚರಿಸಿದ್ದಾರೆ.
ಅಪಾರ್ಟ್ಮೆಂಟ್ಗಳ ಎತ್ತರದ ಮಹಡಿಗಳಲ್ಲಿ ಕಾರಿಡಾರ್ ಗ್ರಿಲ್ಗಳ ಎತ್ತರವನ್ನು ಹೆಚ್ಚಿಸುವುದು ಮತ್ತು ಸಣ್ಣ ಮಕ್ಕಳು ತೆರೆದ ಜಾಗಗಳಿಗೆ ಏಕಾಂಗಿಯಾಗಿ ಹೋಗದಂತೆ ಸುರಕ್ಷತಾ ಬಾಗಿಲುಗಳನ್ನು ಅಳವಡಿಸುವುದು ಇಂತಹ ಅವಘಡಗಳನ್ನು ತಡೆಯಲು ಅತ್ಯಗತ್ಯವಾಗಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




