ಪಕ್ಷ ಬಿಟ್ಟವರೆಲ್ಲ ಹೇಡಿಗಳು ಎಂದ ರಾಹುಲ್ಗೆ ಖರ್ಗೆ ನಗೆಚಟಾಕಿ: ಆದರೆ ಅವರೆಲ್ಲ ನಿಮ್ಮ ಫ್ರೆಂಡ್ಸ್ ಅಲ್ವಾ? ಎಂದ ಕಾಂಗ್ರೆಸ್ ಅಧ್ಯಕ್ಷ
ಕಾಂಗ್ರೆಸ್ ತೊರೆದ ನಾಯಕರನ್ನು 'ಹೇಡಿಗಳು' ಎಂದ ರಾಹುಲ್ ಗಾಂಧಿಗೆ, ಖರ್ಗೆ ಹಾಸ್ಯಭರಿತವಾಗಿ 'ಅವರೆಲ್ಲ ನಿಮ್ಮ ಸ್ನೇಹಿತರಲ್ವಾ?' ಎಂದು ಕಾಲೆಳೆದರು. ಸಿಂಧಿಯಾ ಎಂದಿಗೂ ಸ್ನೇಹಿತನಾಗಿರಲಿಲ್ಲ ಎಂದು ರಾಹುಲ್ ಸ್ಪಷ್ಟಪಡಿಸಿ, ಇಂದಿರಾ ಗಾಂಧಿ ರಾಜಕೀಯದಲ್ಲಿ ಶಾಶ್ವತ ಸ್ನೇಹಿತರಿಲ್ಲವೆಂಬ ಪಾಠ ನೆನಪಿಸಿಕೊಂಡರು. ಮಲ್ಲಿಕಾರ್ಜುನ ಖರ್ಗೆ ಅವರ ನಿಷ್ಠೆಯನ್ನು ರಾಹುಲ್ ಶ್ಲಾಘಿಸಿದರು.

ನವದೆಹಲಿ, ಅಕ್ಟೋಬರ್ 16: ಕಾಂಗ್ರೆಸ್ ಪಕ್ಷ ತೊರೆದವರೆಲ್ಲಾ “ಹೇಡಿಗಳು ಮತ್ತು ದುರಾಸೆ ಹೊಂದಿದ್ದವರು’’ ಎಂದು ರಾಹುಲ್ ಗಾಂಧಿ ಹೇಳಿದಾಗ, “ಅವರೆಲ್ಲ ನಿಮ್ಮ ಸ್ನೇಹಿತರಾಗಿದ್ದರು” ಎಂದು ಖರ್ಗೆ ನಗೆ ಚಟಾಕಿ ಹಾರಿಸಿದ್ದಾರೆ ಎಂದು ವರದಿಯಾಗಿದೆ. ಕಾಂಗ್ರೆಸ್ ತೊರೆದ ನಾಯಕರ ಬಗ್ಗೆ ರಾಹುಲ್ ಗಾಂಧಿ ಮಾತನಾಡುತ್ತಿದ್ದ ವೇಳೆ, ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಡಿದ ಹಾಸ್ಯಭರಿತ ಮಾತುಗಳು ಎಲ್ಲರ ಗಮನ ಸೆಳೆಯಿತು. ಈ ಸಂಭಾಷಣೆಯಲ್ಲಿ ರಾಜಕೀಯ ಸ್ನೇಹದ ಬಗ್ಗೆಯೂ ರಾಹುಲ್ ಗಾಂಧಿ ತಮ್ಮ ಅಜ್ಜಿ ಇಂದಿರಾ ಗಾಂಧಿ ಹೇಳಿದ್ದ ಘಟನೆಯೊಂದನ್ನು ಹಂಚಿಕೊಂಡಿದ್ದಾರೆ.
ಕಾಂಗ್ರೆಸ್ ಪಕ್ಷ ತೊರೆದ ನಾಯಕರ ಬಗ್ಗೆ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮಾತನಾಡಿದ್ದಾರೆ. ಜ್ಯೋತಿರಾದಿತ್ಯ ಸಿಂಧಿಯಾ ಮತ್ತು ಗುಲಾಂ ನಬಿ ಆಜಾದ್ ಅವರ ಹೆಸರು ಪ್ರಸ್ತಾಪಿಸಿದ ಅವರು, ಹೇಡಿಗಳು ಮತ್ತು ದುರಾಸೆಯವರು ಪಕ್ಷ ಬಿಟ್ಟಿದ್ದಾರೆ, ಈಗ ಕಾಂಗ್ರೆಸ್ನಲ್ಲಿ ಸಿಂಹಗಳು ಮಾತ್ರ ಉಳಿದಿದ್ದಾರೆ ಎಂದು ಹೇಳಿದ್ದಾರೆ. ಈ ವೇಳೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, “ಪಕ್ಷ ಬಿಟ್ಟವರೆಲ್ಲ ನಿಮ್ಮ ಸ್ನೇಹಿತರಾಗಿದ್ದರು” ಎಂದು ತಮಾಷೆಯಾಗಿ ಕಾಲೆಳೆದಿದ್ದಾರೆ.
ಇದೇ ವೇಳೆ, ಕಾಂಗ್ರೆಸ್ ಅಧ್ಯಕ್ಷ ಖರ್ಗೆ ಅವರ ಬದ್ಧತೆಯನ್ನು ರಾಹುಲ್ ಗಾಂಧಿ ಶ್ಲಾಘಿಸಿದ್ದಾರೆ. ಎರಡು ಬಾರಿ ಮುಖ್ಯಮಂತ್ರಿ ಆಗುವ ಅವಕಾಶ ತಪ್ಪಿದರೂ ಖರ್ಗೆ ತಮ್ಮ ಸಿದ್ಧಾಂತದಲ್ಲಿ ರಾಜಿ ಮಾಡಿಕೊಂಡಿಲ್ಲ ಎಂದು ಹೇಳಿದ್ದಾರೆ. ಪ್ರತಿಭಟನೆ ಮತ್ತು ಹೋರಾಟಗಳು ಯುವ ಕಾರ್ಯಕರ್ತರ ರಾಜಕೀಯ ತರಬೇತಿಯ ಭಾಗವಾಗಿದ್ದು, ಹೊಸ ರೀತಿಯಲ್ಲಿ ಪ್ರತಿಭಟನೆ ನಡೆಸುವಂತೆ ರಾಹುಲ್ ಕರೆ ನೀಡಿದ್ದಾರೆ. ಮೋದಿ ಸರ್ಕಾರಕ್ಕೆ ಇನ್ನು ಎಂಟರಿಂದ ಹತ್ತು ತಿಂಗಳು ಮಾತ್ರ ಉಳಿದಿವೆ ಎಂದೂ ಅವರು ಹೇಳಿದ್ದಾರೆ.
‘ಕಾಂಗ್ರೆಸ್ನಲ್ಲಿ ಈಗ ಸಿಂಹಗಳಷ್ಟೇ ಉಳಿದಿವೆ’:
ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಮತ್ತು ಮಾಜಿ ನಾಯಕ ಗುಲಾಮ್ ನಬಿ ಆಜಾದ್ ಅವರ ಹೆಸರನ್ನು ಉಲ್ಲೇಖಿಸಿದ ರಾಹುಲ್ ಗಾಂಧಿ, “ಇಡಿ ಮತ್ತು ಸಿಬಿಐ ಭಯಕ್ಕೆ ಅಥವಾ ಅಧಿಕಾರದ ದುರಾಸೆಗೆ ಬಿದ್ದು ಕೆಲ ಹೇಡಿಗಳು ಪಕ್ಷ ಬಿಟ್ಟು ಹೋದರು. ಈಗ ಪಕ್ಷದಲ್ಲಿ ಹೋರಾಟದ ಕಿಚ್ಚಿರುವ ‘ಸಿಂಹಗಳು’ ಮಾತ್ರ ಉಳಿದುಕೊಂಡಿವೆ” ಎಂದು ಯುವ ಕಾರ್ಯಕರ್ತರಲ್ಲಿ ಹುರುಪು ತುಂಬಲು ಯತ್ನಿಸಿದರು.
ಮತ್ತಷ್ಟು ಓದಿ: ಬ್ಯಾನರ್ಗಳು ಬೇರೆ, ಕಾರಣ ಒಂದೇ: ಜೈಲುಪಾಲಾದ ಸಿಜೆಪಿ ನಾಯಕರ ಬೆಂಬಲಕ್ಕೆ ನಿಂತ ರಾಹುಲ್ ಗಾಂಧಿ, ಪ್ರತಿಭಟನಾ ಐಕ್ಯತೆಗೆ ಕರೆ
ಖರ್ಗೆಯವರ ವ್ಯಂಗ್ಯ ಮತ್ತು ರಾಹುಲ್ ಸಮರ್ಥನೆ
ಖರ್ಗೆಯವರು ಮಧ್ಯಪ್ರವೇಶಿಸಿ “ಅವರೆಲ್ಲ ನಿಮ್ಮ ಫ್ರೆಂಡ್ಸ್ ಅಲ್ವಾ?” ಎಂದಾಗ ಸಭೆಯಲ್ಲಿ ನಗುವಿನ ಅಲೆ ಎದ್ದಿತು. ಕೊಂಚ ಮುಜುಗರಕ್ಕೊಳಗಾದ ರಾಹುಲ್, ಇಲ್ಲಿ ನನ್ನ ಸಹೋದರಿ ಪ್ರಿಯಾಂಕಾ ಕುಳಿತಿದ್ದಾಳೆ, ಸಿಂಧಿಯಾ ಎಂದಿಗೂ ನನ್ನ ಆಪ್ತ ಸ್ನೇಹಿತನಾಗಿರಲಿಲ್ಲ ಎಂಬುದು ಆಕೆಗೂ ಗೊತ್ತು ಎಂದು ಸ್ಪಷ್ಟನೆ ನೀಡಿದರು.
ಇಂದಿರಾ ಗಾಂಧಿಯವರ ಒಡನಾಟದ ಪಾಠ
ತಮ್ಮ ಅಜ್ಜಿ, ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ದಿನಗಳನ್ನು ನೆನಪಿಸಿಕೊಂಡ ರಾಹುಲ್, ನನ್ನ ರಾಜಕೀಯ ತರಬೇತಿ ಅಜ್ಜಿಯಿಂದಲೇ ಬಂದಿದೆ. ಒಮ್ಮೆ ನಾನು ಅವರಿಗೆ ನಿಮ್ಮ ಬೆಸ್ಟ್ ಫ್ರೆಂಡ್ ಯಾರು ಎಂದು ಕೇಳಿದಾಗ, ನನಗೆ ಯಾರೂ ಆಪ್ತ ಸ್ನೇಹಿತರಿಲ್ಲ. ನಾನು ಇತರರಿಗೆ ಆಪ್ತ ಸ್ನೇಹಿತೆಯಾಗಿರಬಹುದು, ಆದರೆ ರಾಜಕೀಯದಲ್ಲಿ ಯಾರೂ ಶಾಶ್ವತ ಸ್ನೇಹಿತರಲ್ಲ ಎಂದು ಅಜ್ಜಿ ಹೇಳಿದ್ದರು. ರಾಜಕೀಯದಲ್ಲಿ ಸ್ನೇಹಿತನಂತೆ ಕಾಣುವವನು ಮಿತ್ರನಲ್ಲದಿರಬಹುದು, ಶತ್ರುವಿನಂತೆ ಕಾಣುವವನು ನಿಜವಾದ ಶತ್ರುವಲ್ಲದಿರಬಹುದು ಎಂದು ವಿವರಿಸಿದರು.
ಖರ್ಗೆಯವರ ನಿಷ್ಠೆಗೆ ಶ್ಲಾಘನೆ:
ಕರ್ನಾಟಕದಲ್ಲಿ ಎರಡು ಬಾರಿ ಮುಖ್ಯಮಂತ್ರಿಯಾಗುವ ಅವಕಾಶ ಕೈತಪ್ಪಿದರೂ, ಪಕ್ಷ ಮತ್ತು ಸಿದ್ಧಾಂತದೊಂದಿಗೆ ಎಂದಿಗೂ ರಾಜಿ ಮಾಡಿಕೊಳ್ಳದೆ ನಿಷ್ಠೆಯಿಂದ ಉಳಿದ ಮಲ್ಲಿಕಾರ್ಜುನ ಖರ್ಗೆಯವರ ಬದ್ಧತೆಯನ್ನು ಯುವ ಪೀಳಿಗೆ ಮಾದರಿಯಾಗಿ ತೆಗೆದುಕೊಳ್ಳಬೇಕು ಎಂದು ರಾಹುಲ್ ಇದೇ ವೇಳೆ ಪ್ರಶಂಸಿಸಿದರು.
ಕೇಂದ್ರದ ನರೇಂದ್ರ ಮೋದಿ ಸರ್ಕಾರಕ್ಕೆ ಇನ್ನು ಕೇವಲ 8 ರಿಂದ 10 ತಿಂಗಳು ಮಾತ್ರ ಆಯಸ್ಸು ಉಳಿದಿದೆ ಎಂದು ಭವಿಷ್ಯ ನುಡಿದ ರಾಹುಲ್, ಜಂತರ್ ಮಂತರ್ನಂತಹ ನಿರ್ಬಂಧಿತ ಸ್ಥಳಗಳಲ್ಲೂ ಹೊಸ ಬಗೆಯ ಸೃಜನಶೀಲ ಪ್ರತಿಭಟನೆಗಳನ್ನು ನಿರಂತರವಾಗಿ ಮುಂದುವರೆಸುವಂತೆ ಕಾರ್ಯಕರ್ತರಿಗೆ ಕರೆ ನೀಡಿದರು.
ಸಿಂಧಿಯಾ-ರಾಹುಲ್ ಹಿಂದಿನ ಒಡನಾಟ: 2020 ರಲ್ಲಿ ಕಾಂಗ್ರೆಸ್ ತೊರೆದು ಮಧ್ಯಪ್ರದೇಶದಲ್ಲಿ ಕಮಲ್ನಾಥ್ ಸರ್ಕಾರ ಪತನಗೊಳ್ಳಲು ಕಾರಣವಾಗಿದ್ದ ಜ್ಯೋತಿರಾದಿತ್ಯ ಸಿಂಧಿಯಾ, ಅದಕ್ಕೂ ಮುನ್ನ ಕಾಂಗ್ರೆಸ್ನ ಯುವ ಬ್ರಿಗೇಡ್ನಲ್ಲಿ ರಾಹುಲ್ ಗಾಂಧಿಯವರ ಅತ್ಯಂತ ಆಪ್ತ ವಲಯದಲ್ಲಿದ್ದರು ಎಂಬುದು ರಾಜಕೀಯವಾಗಿ ಬಹಿರಂಗ ಸತ್ಯ. ಸಚಿನ್ ಪೈಲಟ್, ಜಿತಿನ್ ಪ್ರಸಾದ್, ಮಿಲಿಂದ್ ದೇವಾರಾ ಮತ್ತು ಸಿಂಧಿಯಾ ಈ ನಾಲ್ವರ ತಂಡವನ್ನು ಈ ಹಿಂದೆ ರಾಹುಲ್ ಗಾಂಧಿಯವರ ಆಪ್ತ ಬಳಗವೆಂದೇ ಕರೆಯಲಾಗುತ್ತಿತ್ತು.
ಇತ್ತೀಚೆಗಷ್ಟೇ ದೆಹಲಿಯಲ್ಲಿ ವಿಪಕ್ಷಗಳು ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ (SIR) ವಿರೋಧಿಸಿ ರಸ್ತೆಗಿಳಿದು ಹೋರಾಟ ನಡೆಸಿದ್ದವು. ಈ ಪ್ರತಿಭಟನೆಯಲ್ಲಿ ಲಾಠಿಚಾರ್ಜ್ ಎದುರಿಸಿ ಗಾಯಗೊಂಡ ಯುವ ಕಾಂಗ್ರೆಸ್, ಎನ್ಎಸ್ಯುಐ ಕಾರ್ಯಕರ್ತರನ್ನು ಪ್ರೋತ್ಸಾಹಿಸಲು ಪಕ್ಷದ ಕಚೇರಿಯಲ್ಲಿ ಈ ವಿಶೇಷ ಚಹಾ ಕೂಟವನ್ನು ಆಯೋಜಿಸಲಾಗಿತ್ತು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




