ನವದೆಹಲಿ: ವಂಚನೆ ಆರೋಪದಲ್ಲಿ ಬಂಧನಕ್ಕೊಳಗಾಗಿದ್ದ ಯುನಿಟೆಕ್ ಮಾಜಿ ಪ್ರವರ್ತಕರಿಗೆ ಸಹಾಯ ಮಾಡಿದ ಆರೋಪದಡಿ ತಿಹಾರ್ ಜೈಲಿನ 30 ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ಯುನಿಟೆಕ್ ಸಂಸ್ಥೆಯ ಮಾಜಿ ಮುಖ್ಯಸ್ಥರಾದ ಸಂಜಯ್ ಚಂದ್ರ ಮತ್ತು ಅಜಯ್ ಚಂದ್ರ ಅವರಿಗೆ ಸಹಾಯ ಮಾಡಿದ ಆರೋಪದ ಮೇಲೆ ತಿಹಾರ್ ಜೈಲು ಆಡಳಿತ ಮಂಡಳಿ 30 ಅಧಿಕಾರಿಗಳು ಸೇರಿದಂತೆ ಇಬ್ಬರು ಗುತ್ತಿಗೆ ನೌಕರರನ್ನು ಅಮಾನತು ಮಾಡಲಾಗಿದೆ.
ಈ ಬಗ್ಗೆ ದೆಹಲಿ ಜೈಲು ಅಧಿಕಾರಿಗಳು ಮಾಹಿತಿ ನೀಡಿದ್ದು, ಯುನಿಟೆಕ್ ಹಗರಣದ ಆರೋಪಿಗಳ ಜೊತೆ ಕೈ ಜೋಡಿಸಿರುವ ಆರೋಪದಲ್ಲಿ 32 ಜೈಲು ಸಿಬ್ಬಂದಿಯ ಹೆಸರುಗಳನ್ನು ದೆಹಲಿ ಪೊಲೀಸರು ತಿಹಾರ್ ಜೈಲಿನ ಮಹಾನಿರ್ದೇಶಕ ಸಂದೀಪ್ ಗೋಯೆಲ್ಅವರಿಗೆ ಪತ್ರ ಕಳುಹಿಸಿದ್ದರು. ಅದರಂತೆ 30 ಜೈಲು ಸಿಬ್ಬಂದಿ ಮತ್ತು ಇಬ್ಬರು ಗುತ್ತಿಗೆ ನೌಕರರನ್ನು ಅಮಾನತು ಮಾಡಲಾಗಿದೆ.
ತಿಹಾರ್ ಜೈಲು ಅಧಿಕಾರಿಗಳನ್ನು ಅಮಾನತು ಮಾಡಲು ಸುಪ್ರೀಂಕೋರ್ಟ್ ಆದೇಶಿಸಿದ ನಂತರ ಈ ಕ್ರಮ ಕೈಗೊಳ್ಳಲಾಗಿದೆ. ವಿಚಾರಣಾ ವರದಿಯನ್ನು ಪರಿಶೀಲಿಸಿದ ನಂತರ ಸುಪ್ರೀಂ ಕೋರ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪೂರ್ಣ ಪ್ರಮಾಣದ ಕ್ರಿಮಿನಲ್ ತನಿಖೆ ನಡೆಸಲು ಅನುಮತಿ ನೀಡಿತ್ತು. ವಂಚನೆ ಪ್ರಕರಣದಲ್ಲಿ ತಿಹಾರ್ ಜೈಲು ಸೇರಿರುವ ಯುನಿಟೆಕ್ ಕಂಪನಿಯ ಮಾಜಿ ನಿರ್ದೇಶಕರಾದ ಸಂಜಯ್‌ಚಂದ್ರ ಹಾಗೂ ಅಜಯ್ ಚಂದ್ರ ಅವರನ್ನು ಮುಂಬೈನ ಆರ್ಥರ್ ರೋಡ್ ಜೈಲು ಹಾಗೂ ತಲೋಜಾ ಜೈಲಿಗೆ ಸ್ಥಳಾಂತರಿಸುವಂತೆ ಸುಪ್ರೀಂಕೋರ್ಟ್ ಆದೇಶ ನೀಡಿತ್ತು. ಅಲ್ಲದೆ, ತಿಹಾರ್ ಜೈಲಿನ ಅಧಿಕಾರಿಗಳ ಬಗ್ಗೆ ನ್ಯಾಯಾಲಯಕ್ಕೆ ನಂಬಿಕೆಯೇ ಹೋಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿತ್ತು. ಈ ಇಬ್ಬರು ಆರೋಪಿಗಳೊಂದಿಗೆ ತಿಹಾರ್ ಜೈಲು ಸಿಬ್ಬಂದಿ ನಡೆದುಕೊಳ್ಳುತ್ತಿದ್ದ ರೀತಿ ಕುರಿತು ಖುದ್ದಾಗಿ ತನಿಖೆ ನಡೆಸಿ, ವರದಿ ಸಲ್ಲಿಸಬೇಕು ಎಂದು ದೆಹಲಿ ಪೊಲೀಸ್ ಕಮಿಷನರ್‌ಗೆ ನ್ಯಾಯಪೀಠ ನಿರ್ದೇಶನ ನೀಡಿತ್ತು.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿರುವ ತಿಹಾರ್ ಜೈಲಿನಲ್ಲೇ ಜೈಲಿನ ಅಧಿಕಾರಿಗಳು ಸುಪ್ರೀಂ ಕೋರ್ಟ್ನ ಆದೇಶವನ್ನು ಕಡೆಗಣಿಸಿ, ತಮಗೆ ಬೇಕಾದಂತೆ ವರ್ತನೆ ಮಾಡುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ಸುಪ್ರೀಂ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿತ್ತು. ಯುನಿಟೆಕ್‌ನ ಸಂಸ್ಥಾಪಕ ರಮೇಶ್ ಚಂದ್ರ ರಹಸ್ಯವಾಗಿ ಭೂಗತ ಕಚೇರಿ ಸ್ಥಾಪಿಸಿರುವುದು ನಮಗೆ ತಿಳಿದುಬಂದಿದೆ ಎಂಬ ವಿಷಯವನ್ನು ಇಡಿ ಅಧಿಕಾರಿಗಳು ನ್ಯಾಯಪೀಠದ ಗಮನಕ್ಕೆ ತಂದಿದ್ದರು. ಈ ಹಿನ್ನೆಲೆಯಲ್ಲಿ ತಿಹಾರ್ ಜೈಲಿನ ಅಧಿಕಾರಿಗಳ ವಿರುದ್ಧ ಅಸಮಾಧಾನ ಹೊರಹಾಕಿದ್ದ ಸುಪ್ರೀಂ ಕೋರ್ಟ್ ನ್ಯಾಯಪೀಠ, ಸಂಜಯ್ ಚಂದ್ರ- ಅಜಯ್ ಚಂದ್ರ ಅವರ ವರ್ತನೆ ಹಾಗೂ ಈ ಬಗ್ಗೆ ತಿಹಾರ್ ಜೈಲು ಅಧಿಕಾರಿಗಳು ಯಾವುದೇ ಕ್ರಮಗಳನ್ನು ಕೈಗೊಳ್ಳದ ಬಗ್ಗೆ ಇ.ಡಿ ಅಧಿಕಾರಿಗಳು ಎರಡು ವರದಿಗಳನ್ನು ಸಲ್ಲಿಸಿದ್ದಾರೆ. ಈ ಇಬ್ಬರು ಆರೋಪಿಗಳ ವರ್ತನೆ ಹಾಗೂ ತಿಹಾರ್ ಜೈಲಿನ ಅಧಿಕಾರಿಗಳ ನಡವಳಿಕೆ ನಾಚಿಕೆಗೇಡಿನ ಸಂಗತಿ. ಇದು ಬಹಳ ಗಂಭೀರವಾದ ವಿಷಯವಾಗಿದೆ ಎಂದು ತಿಹಾರ್ ಜೈಲಿನ ಅಧಿಕಾರಿಗಳಿಗೆ ಛೀಮಾರಿ ಹಾಕಿತ್ತು.
ಸಂಜಯ್ ಚಂದ್ರ ಮತ್ತು ಅಜಯ್ ಚಂದ್ರ ಸಹೋದರರು ಹಾಗೂ ಯುನಿಟೆಕ್ ಲಿಮಿಟೆಡ್ ಕಂಪನಿಯ ವಿರುದ್ಧದ ವಂಚನೆ ಮತ್ತು ಅಕ್ರಮ ಹಣ ವರ್ಗಾವಣೆ ಆರೋಪಗಳ ಕುರಿತು ಜಾರಿ ನಿರ್ದೇಶನಾಲಯ (ಇ.ಡಿ) ತನಿಖೆ ನಡೆಸುತ್ತಿದೆ. 2015ರಲ್ಲಿ ಸಂಜಯ್ ಮತ್ತು ಅಜಯ್ ಚಂದ್ರ ವಿರುದ್ಧ ಕೇಸ್ ದಾಖಲಾಗಿತ್ತು. ಸುಪ್ರೀಂ ಕೋರ್ಟ್ 2021ರ ಜೂನ್ 4ರಂದು ಸಂಜಯ್ ಚಂದ್ರ ಅವರಿಗೆ ತನ್ನ ಮಾವನ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು 15 ದಿನಗಳ ಮಧ್ಯಂತರ ಜಾಮೀನು ನೀಡಿತ್ತು. ಸಂಜಯ್ ಚಂದ್ರ ಅವರ ಪರವಾದ ಹಿರಿಯ ವಕೀಲರ ಕೋರಿಕೆಯಂತೆ ಸಂಜಯ್ಗೆ ಹೆಚ್ಚಿನ ಸಮಯಾವಕಾಶ ನೀಡಲು ಕೋರ್ಟ್ ನಿರಾಕರಿಸಿತ್ತು. 2020ರ ಆಗಸ್ಟ್ 14ರಂದು ಸಂಜಯ್ ಚಂದ್ರ ಅವರ ಜಾಮೀನು ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿತ್ತು. ಆದರೆ, ಒಂದು ತಿಂಗಳ ಹಿಂದೆ ಅವರ ಪೋಷಕರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದ್ದರಿಂದ ಮಾನವೀಯತೆಯ ಆಧಾರದ ಮೇಲೆ ಅವರಿಗೆ ಮಧ್ಯಂತರ ಜಾಮೀನು ನೀಡಲಾಗಿತ್ತು.
ವಸೂಲಿ ದಂಧೆ: ತಿಹಾರ್ ಜೈಲಿನಲ್ಲಿದ್ದುಕೊಂಡೇ 200 ಕೋಟಿ ಹಣ ವಸೂಲಿ ಮಾಡಿದ ಸುಕೇಶ್ ಚಂದ್ರಶೇಖರ್