ಬಿಸ್ಕತ್ತು ಬೇಡ, ನಂಗೆ ಮದ್ಯವೇ ಬೇಕು: ವೈನ್ ಶಾಪ್ಗೆ ನುಗ್ಗಿ ಹಲ್ಲಿನಿಂದ ಹೆಂಡದ ಬಾಟಲಿ ಮುಚ್ಚಳ ತೆಗೆದು ಗುಟುಕು ಹಾಕಿದ ಮಂಗ
ರಾಂಚಿಯ ಮದ್ಯದ ಅಂಗಡಿಗೆ ನುಗ್ಗಿದ ಕೋತಿಯೊಂದು ಬಿಸ್ಕತ್ತು ತಿರಸ್ಕರಿಸಿ, ವೈನ್ ಬಾಟಲಿ ತೆರೆದು ಮದ್ಯಪಾನ ಮಾಡಿ ಮತ್ತೆಯಾಗಿ ಕೌಂಟರ್‌ನಲ್ಲೇ ನಿದ್ರಿಸಿದೆ. ಈ ವಿಡಿಯೋ ವೈರಲ್ ಆಗಿದೆ. ಪ್ರಾಣಿಗಳಿಗೆ ಮದ್ಯ ವಿಷಕಾರಿ ಎಂದು ತಜ್ಞರು ಎಚ್ಚರಿಸಿದ್ದು, ನಗರ ಪ್ರದೇಶಗಳಲ್ಲಿ ವನ್ಯಜೀವಿಗಳ ಆಹಾರ ಪದ್ಧತಿ ಬದಲಾವಣೆ ಮತ್ತು ಮಾನವ-ವನ್ಯಜೀವಿ ಸಂಘರ್ಷದ ಕುರಿತು ಕಾಳಜಿ ವ್ಯಕ್ತಪಡಿಸಿದ್ದಾರೆ.

ರಾಂಚಿ, ಸೆಪ್ಟೆಂಬರ್ 27: ಜಾರ್ಖಂಡ್‌ನ ರಾಜಧಾನಿ ರಾಂಚಿಯ ಓರ್ಮಾಂಜಿ ಚೌಕ್‌ನಲ್ಲಿರುವ ಮದ್ಯದ ಅಂಗಡಿಯೊಂದರಲ್ಲಿ ಅತ್ಯಂತ ವಿಚಿತ್ರ ಹಾಗೂ ಅಷ್ಟೇ ನಗು ತರಿಸುವ ಘಟನೆಯೊಂದು ನಡೆದಿದೆ. ಅಂಗಡಿಯೊಳಗೆ ನುಗ್ಗಿದ ಕೋತಿಯೊಂದು ಮದ್ಯದ ಬಾಟಲಿಯನ್ನು ಎತ್ತಿಕೊಂಡು ಹಲ್ಲಿನಿಂದ ಮುಚ್ಚಳ ತೆಗೆದು ಪೂರ್ತಿ ಕುಡಿದು ಕೌಂಟರ್ ಮೇಲೆಯೇ ಮಲಗಿ ನಿದ್ರಿಸಿದ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.
ಅಂಗಡಿಯಲ್ಲಿ ನಡೆದಿದ್ದೇನು?
ಪ್ರತ್ಯಕ್ಷದರ್ಶಿಗಳು ಮತ್ತು ಸಿಬ್ಬಂದಿಯ ಪ್ರಕಾರ, ಕೋತಿಯು ಅನಿರೀಕ್ಷಿತವಾಗಿ ಅಂಗಡಿಯ ಕೌಂಟರ್ ಬಳಿ ಬಂದಾಗ ಕೆಲಸಗಾರರು ಅದನ್ನು ಓಡಿಸಲು ಯತ್ನಿಸಿದರು. ಅದರ ಗಮನ ಬೇರೆಡೆ ಸೆಳೆಯಲು ಬಿಸ್ಕತ್ತುಗಳನ್ನು ಮುಂದಿಟ್ಟರೂ, ಅದು ಆಹಾರವನ್ನು ಮುಟ್ಟದೆ ನೇರವಾಗಿ ಮದ್ಯದ ಬಾಟಲಿಯೊಂದನ್ನು ಕೈಗೆತ್ತಿಕೊಂಡಿತು. ಬಳಿಕ ತನ್ನ ಕೈ ಮತ್ತು ಹಲ್ಲುಗಳನ್ನು ಬಳಸಿ ಅತ್ಯಂತ ಲೀಲಾಜಾಲವಾಗಿ ಬಾಟಲಿಯ ಮುಚ್ಚಳವನ್ನು ತೆರೆದು, ಮದ್ಯವನ್ನು ಗಟಗಟನೇ ಕುಡಿಯಲಾರಂಭಿಸಿತು. ಇದನ್ನು ಕಂಡು ಸ್ಥಳದಲ್ಲಿದ್ದ ಗ್ರಾಹಕರು ಹಾಗೂ ಸಿಬ್ಬಂದಿ ಬೆರಗಾದರು.
ಮದ್ಯದ ಮತ್ತಿನಲ್ಲಿ ಕೌಂಟರ್‌ನಲ್ಲೇ ನಿದ್ದೆ
ಹೆಚ್ಚಿನ ಪ್ರಮಾಣದಲ್ಲಿ ಮದ್ಯ ಸೇವಿಸಿದ ಸ್ವಲ್ಪ ಹೊತ್ತಿನಲ್ಲೇ ನಶೆ ತಲೆಗೇರಿದಂತೆ ಕಂಡ ಮಂಗ, ತೂರಾಡುತ್ತಾ ಅಂಗಡಿಯ ಕೌಂಟರ್ ಮೇಲೆಯೇ ಗಾಢ ನಿದ್ರೆಗೆ ಜಾರಿತು. ಗಂಟೆಗಳ ಕಾಲ ಅಲ್ಲಿಯೇ ನಿದ್ರಿಸಿದ ಮಂಗ, ನಶೆ ಇಳಿದ ನಂತರ ಪ್ರಜ್ಞೆ ಬಂದು ನಿಧಾನವಾಗಿ ಅಂಗಡಿಯಿಂದ ಹೊರನಡೆದಿದೆ.
ಹಿಂದೆಯೂ ಖಾಲಿ ಬಾಟಲಿ ನೆಕ್ಕುತ್ತಿದ್ದ ಮಂಗ
ಸ್ಥಳೀಯರು ತಿಳಿಸಿರುವ ಪ್ರಕಾರ, ಈ ಮಂಗವು ಈ ಹಿಂದೆಯೂ ರಸ್ತೆ ಬದಿಯಲ್ಲಿ ಬಿಸಾಡುತ್ತಿದ್ದ ಖಾಲಿ ಮದ್ಯದ ಬಾಟಲಿಗಳಲ್ಲಿ ಉಳಿದ ಹನಿಗಳನ್ನು ನೆಕ್ಕುತ್ತಿರುವುದು ಕಾಣಿಸುತ್ತಿತ್ತು. ಆದರೆ ಅಂಗಡಿಯೊಳಗೇ ನುಗ್ಗಿ ಇಡೀ ಬಾಟಲಿಯನ್ನು ಕದ್ದು ಕುಡಿದಿರುವುದು ಇದೇ ಮೊದಲು ಎಂದು ಅವರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
ವಿಡಿಯೋ
रांची के ओरमांझी ब्लॉक चौक के पास एक हैरान कर देने वाली घटना घाटी…. दरअसल रांची के ओरमांझी ब्लॉक चौक के पास वाले दारू दुकान में एक बन्दर घूंस गया… बन्दर अंदर घुस कर शराब की एक पूरी बोतल भी गटक गया.. जब बन्दर को शराब का नशा आया तो बन्दर दारू दुकान के एक कोने में ही सो गया…… pic.twitter.com/VYGA4eyDs1
— News Frame (@news_frame24X7) September 25, 2026
ಪ್ರಾಣಿಗಳಿಗೆ ಆಲ್ಕೋಹಾಲ್ ವಿಷಕಾರಿ: ವನ್ಯಜೀವಿ ತಜ್ಞರ ಪ್ರಕಾರ, ಮದ್ಯದಲ್ಲಿರುವ ಇಥೆನಾಲ್ ಮಾನವರಿಗಿಂತ ಪ್ರಾಣಿಗಳ ಸಣ್ಣ ಲಿವರ್ (ಯಕೃತ್ತು) ಮತ್ತು ನರಮಂಡಲದ ಮೇಲೆ ಅತ್ಯಂತ ಮಾರಕ ಪರಿಣಾಮ ಬೀರುತ್ತದೆ. ಇದು ಪ್ರಾಣಿಗಳಲ್ಲಿ ನಿರ್ಜಲೀಕರಣ, ವಾಂತಿ, ಉಸಿರಾಟದ ತೊಂದರೆ ಮತ್ತು ಕೋಮಾಗೆ ಕಾರಣವಾಗಬಹುದು.
ಮತ್ತಷ್ಟು ಓದಿ: ಬೈಕ್ ನಿಲ್ಲಿಸಲಿಲ್ಲವೆಂದು ಉದ್ದೇಶಪೂರ್ವಕವಾಗಿಯೇ ಗುದ್ದಿದ್ರು: ಹಿಟ್ ಆ್ಯಂಡ್ ರನ್ ಕೇಸ್‌ನಲ್ಲಿ ಬೆಚ್ಚಿಬೀಳಿಸುವ ಹೊಸ ಆ್ಯಂಗಲ್ ವಿಡಿಯೋ ವೈರಲ್
ನಗರ ಪ್ರದೇಶದಲ್ಲಿ ವನ್ಯಜೀವಿಗಳ ಆಹಾರ ಪದ್ಧತಿ ಬದಲಾವಣೆ: ನಗರ ಮತ್ತು ಪ್ರವಾಸಿ ತಾಣಗಳಲ್ಲಿ ಜನರು ಬಿಸಾಡುವ ಸಂಸ್ಕರಿತ ಆಹಾರ ಮತ್ತು ಮದ್ಯದ ಬಾಟಲಿಗಳ ಸಂಪರ್ಕಕ್ಕೆ ಬರುವ ವಾನರ ಪಡೆಗಳು ಕ್ರಮೇಣ ಇಂತಹ ಅಪಾಯಕಾರಿ ಅಭ್ಯಾಸಗಳಿಗೆ ದಾಸರಾಗುತ್ತಿದ್ದು, ಇದು ಮಾನವ-ವನ್ಯಜೀವಿ ಸಂಘರ್ಷಕ್ಕೆ ಹೊಸ ಆಯಾಮ ನೀಡುತ್ತಿದೆ.
ಸಾಮಾಜಿಕ ಜಾಲತಾಣಗಳಲ್ಲಿ ತಮಾಷೆಯ ಕಮೆಂಟ್‌ಗಳು: ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು “ವಾರಾಂತ್ಯದ ಮೂಡ್‌ನಲ್ಲಿದ್ದ ಕೋತಿ”, “ಪಾರ್ಟಿ ಮುಗಿಸಿ ನಿದ್ದೆ ಹೊಡೆದ ಮಂಗಣ್ಣ” ಎಂದು ತಮಾಷೆಯಾಗಿ ಕಾಮೆಂಟ್ ಮಾಡುತ್ತಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




