AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರತಿ ವರ್ಷ ಆಗಸ್ಟ್ ತಿಂಗಳಲ್ಲೇ ಕಾವೇರಿ ನೀರಿಗಾಗಿ ತಮಿಳುನಾಡು ಬೇಡಿಕೆ ಇಡುವುದೇಕೆ?

ಕರ್ನಾಟಕ-ತಮಿಳುನಾಡು ರಾಜ್ಯಗಳ ನಡುವಿನ ಕಾವೇರಿ ವಿವಾದ ನಿನ್ನೆ-ಮೊನ್ನೆಯದಲ್ಲ. ಶತಮಾನದ ಇತಿಹಾಸವಿರುವ ಈ ನೀರಿನ ವಿವಾದವನ್ನೇ ಮುಂದಿಟ್ಟುಕೊಂಡು ಪಕ್ಷಗಳು ರಾಜ್ಯದ ಚುನಾವಣೆಯನ್ನೇ ಗೆದ್ದಿರುವ ನಿದರ್ಶನಗಳೂ ಇವೆ. ಸಾಮಾಜಿಕವಾಗಿ, ರಾಜಕೀಯವಾಗಿ ಕಾವೇರಿ ಜಲ ವಿವಾದ ಬಹಳ ಪ್ರಾಮುಖ್ಯತೆ ಪಡೆದಿದೆ. ಸಾಮಾನ್ಯವಾಗಿ ಜೂನ್​ನಲ್ಲಿ ಭಾರತದಲ್ಲಿ ಮುಂಗಾರು ಪ್ರವೇಶವಾಗುತ್ತದೆ. ಆದರೂ, ಪ್ರತಿ ವರ್ಷ ತಮಿಳುನಾಡು ಆಗಸ್ಟ್ ತಿಂಗಳಲ್ಲಿ ಕರ್ನಾಟಕದ ಮುಂದೆ ಕಾವೇರಿ ನೀರಿಗಾಗಿ ಬೇಡಿಕೆ ಇಡುತ್ತದೆ. ಆಗಸ್ಟ್-ಸೆಪ್ಟೆಂಬರ್ ತಿಂಗಳಲ್ಲಿ ಈ ಕಾವೇರಿ ನೀರಿನ ಹೋರಾಟಕ್ಕೆ ಮರುಜೀವ ಬರುತ್ತದೆ. ಇದಕ್ಕೆ ಕಾರಣವೇನು ಎಂದು ನಿಮಗೆ ಗೊತ್ತಾ? ಆ ಕುರಿತ ವಿವರವಾದ ಮಾಹಿತಿ ಇಲ್ಲಿದೆ.

ಪ್ರತಿ ವರ್ಷ ಆಗಸ್ಟ್ ತಿಂಗಳಲ್ಲೇ ಕಾವೇರಿ ನೀರಿಗಾಗಿ ತಮಿಳುನಾಡು ಬೇಡಿಕೆ ಇಡುವುದೇಕೆ?
ಕೆಆರ್​ಎಸ್​ ಡ್ಯಾಂImage Credit source: PTI
ಸುಷ್ಮಾ ಚಕ್ರೆ
| Edited By: |

Updated on:Sep 08, 2026 | 5:14 PM

Share

ಮುಖ್ಯಾಂಶಗಳು

  • ಏನಿದು ಕಾವೇರಿ ಜಲ ವಿವಾದ?
  • ತಮಿಳುನಾಡಿಗೆ ಆಗಸ್ಟ್ ತಿಂಗಳಲ್ಲಿ ಕಾವೇರಿ ನೀರು ಏಕೆ ಅಗತ್ಯ?
  • ಕರ್ನಾಟಕ ಕಾವೇರಿ ನೀರು ಬಿಡದಿದ್ದರೆ ತಮಿಳುನಾಡಿನ ಮೇಲಾಗುವ ಪರಿಣಾಮಗಳೇನು?

ಬೆಂಗಳೂರು, ಸೆಪ್ಟೆಂಬರ್ 8: ಕರ್ನಾಟಕದಲ್ಲಿ ಕಾವೇರಿಯನ್ನು ‘ಜೀವನದಿ’ ಎಂದು ಕರೆಯಲಾಗುತ್ತದೆ. ಕರ್ನಾಟಕದ ಕೊಡಗು, ಮೈಸೂರು, ಮಂಡ್ಯ, ಚಾಮರಾಜನಗರ, ರಾಮನಗರ, ಬೆಂಗಳೂರು ಜಿಲ್ಲೆಗಳಿಗೆ ಕಾವೇರಿ ನದಿಯ ನೀರೇ ಜೀವನಾಧಾರ. ಹಾಗೇ, ತಮಿಳುನಾಡಿನ ಕೃಷಿಕರು ಕಾವೇರಿ ನದಿಯ ನೀರಿನ ಮೇಲೇ ಅವಲಂಬಿತರಾಗಿದ್ದಾರೆ. ಹೀಗಾಗಿ, ಎರಡೂ ರಾಜ್ಯಗಳಿಗೆ ಕಾವೇರಿ ನದಿ ನೀರು ಅತ್ಯಗತ್ಯ. ಈ 2 ರಾಜ್ಯಗಳ ನಡುವಿನ ಕಾವೇರಿ ಜಲ ವಿವಾದ ಬ್ರಿಟಿಷರ ಕಾಲದಿಂದಲೂ ಇದೆ. ಅದಾಗಿ ಶತಮಾನವೇ ಕಳೆದರೂ ಈ ಜಲವಿವಾದ ಬಗೆಹರಿದಿಲ್ಲ. ಪ್ರತಿ ವರ್ಷ ಜೂನ್​ನಲ್ಲಿ ಮಳೆಗಾಲ ಆರಂಭವಾದರೂ ತಮಿಳುನಾಡು ಆಗಸ್ಟ್​ನಲ್ಲಿ ಕಾವೇರಿ ನೀರಿಗಾಗಿ ಪಟ್ಟು ಹಿಡಿದು ಕೂರುತ್ತದೆ. ಇದಕ್ಕೆ ಕಾರಣವೇನೆಂಬುದರ ಮಾಹಿತಿ ಇಲ್ಲಿದೆ.

ತಮಿಳುನಾಡಿನ ಕಾವೇರಿ ಜಲಾನಯನ ಪ್ರದೇಶಗಳು ಕೃಷಿ ಅವಲಂಬಿತ ಜಿಲ್ಲೆಗಳಾಗಿವೆ. ತಮಿಳುನಾಡಿನಲ್ಲಿ ‘ಸಾಂಬಾ’ ಎಂಬ ದೀರ್ಘಾವಧಿಯ ಬೆಳೆ ಮತ್ತು ‘ಕುರುವೈ’ ಎಂಬ ಅಲ್ಪಾವಧಿ ಭತ್ತದ ಬೆಳೆಯನ್ನು ಬೆಳೆಯಲಾಗುತ್ತದೆ. ಇವೆರಡೂ ಬೆಳೆಗೆ ಆಗಸ್ಟ್-ಸೆಪ್ಟೆಂಬರ್​ನಲ್ಲಿ ಹೆಚ್ಚಿನ ನೀರು ಬೇಕು. ಕುರುವೈಗೆ ಜುಲೈ-ಆಗಸ್ಟ್​ನಲ್ಲಿ ಬಿತ್ತನೆ ಮಾಡಲು ಹಾಗೂ ಪೈರು ಬೆಳೆಯಲು ಕಾವೇರಿಯಿಂದ ನೀರು ಹರಿಯುವುದು ಅಗತ್ಯ. ಸಾಂಬಾಗೆ ಆಗಸ್ಟ್ ಮತ್ತು ಸೆಪ್ಟೆಂಬರ್‌ನಲ್ಲಿ ಬಿತ್ತನೆ ಮಾಡಲು ಕಾವೇರಿ ನೀರು ಬೇಕು. ನಂತರ ಅಕ್ಟೋಬರ್‌ನಿಂದ ಆರಂಭವಾಗುವ ಈಶಾನ್ಯ ಮುಂಗಾರು ಮಳೆಯೇ ಈ ಬೆಳೆಗೆ ಮುಖ್ಯ ಆಸರೆಯಾಗುತ್ತದೆ.

ತಮಿಳುನಾಡಿನಲ್ಲಿ ಸಾಮಾನ್ಯವಾಗಿ ಅಕ್ಟೋಬರ್​ನಿಂದ ಡಿಸೆಂಬರ್​ವರೆಗೆ ಭಾರೀ ಮಳೆಯಾಗುತ್ತದೆ. ಹೀಗಾಗಿ, ಆಗಸ್ಟ್ ತಿಂಗಳಲ್ಲಿ ಕೃಷಿ ಬೆಳೆಗಳಿಗೆ ಬಿತ್ತನೆ ಮಾಡಲು ನೀರಿನ ಅಭಾವ ಉಂಟಾಗುತ್ತದೆ. ಅಷ್ಟರೊಳಗೆ ಕರ್ನಾಟಕದಲ್ಲಿ ಭಾರೀ ಮಳೆಯಾಗಿ ಕೆಆರ್​ಎಸ್​ ಡ್ಯಾಂ ತುಂಬುವುದರಿಂದ ಕೃಷಿ ಚಟುವಟಿಕೆಗಳಿಗೆ ತಮಿಳುನಾಡು ಕರ್ನಾಟಕದಿಂದ ಕೆಳಗೆ ಹರಿಯುವ ಕಾವೇರಿ ನದಿ ನೀರಿನ ಮೇಲೆಯೇ ಅವಲಂಬಿತರಾಗಿದ್ದಾರೆ. ಇದೇ ಕಾರಣಕ್ಕೆ ಆಗಸ್ಟ್ ತಿಂಗಳಲ್ಲಿ ತಮಿಳುನಾಡಿನಲ್ಲಿ ಕಾವೇರಿ ನದಿ ನೀರಿಗಾಗಿ ಹೋರಾಟ ತೀವ್ರಗೊಳ್ಳುತ್ತದೆ.

ಇದನ್ನೂ ಓದಿ: ಕಾವೇರಿ ಜಲ ವಿವಾದ: ತಮಿಳುನಾಡಿಗೆ ನೀರು ಹರಿಸಬೇಕಿರುವ ಪ್ರಮಾಣ ಇಳಿಕೆಗೆ ಆಗ್ರಹಿಸಿ CWMAಗೆ ಕರ್ನಾಟಕ ಮನವಿ

‘ಕುರುವೈ’ ಕೃಷಿ ಋತುವಿನ ಅಗತ್ಯ:

ತಮಿಳುನಾಡಿನ ಕಾವೇರಿ ಬಲಚರಡು (Cauvery Delta) ಪ್ರದೇಶಗಳಾದ ತಂಜಾವೂರು, ತಿರುವಾರೂರ್ ಮತ್ತು ನಾಗಪಟ್ಟಣಂ ಜಿಲ್ಲೆಗಳಲ್ಲಿ ಜೂನ್-ಜುಲೈ- ಆಗಸ್ಟ್​ನಲ್ಲಿ ‘ಕುರುವೈ’ ಎಂಬ ಪ್ರಮುಖ ಭತ್ತದ ಬೆಳೆ ಬೆಳೆಯಲಾಗುತ್ತದೆ. ಆಗಸ್ಟ್ ತಿಂಗಳಲ್ಲಿ ಈ ಬೆಳೆಗೆ ತೀವ್ರ ಪ್ರಮಾಣದ ನೀರು ಅಗತ್ಯವಿರುತ್ತದೆ. ಈ ಹಂತದಲ್ಲಿ ನೀರು ಸಿಗದಿದ್ದರೆ ಬೆಳೆ ಪೂರ್ತಿ ಒಣಗಿ ಅಪಾರ ನಷ್ಟ ಸಂಭವಿಸುತ್ತದೆ.

ಮುಂಗಾರು ಮಳೆಯ ಅಭಾವ:

ನೈಋತ್ಯ ಮುಂಗಾರು ಅವಧಿಯಲ್ಲಿ (ಜೂನ್‌ನಿಂದ ಸೆಪ್ಟೆಂಬರ್) ಕರ್ನಾಟಕದ ಕೊಡಗು ಮತ್ತು ಪಶ್ಚಿಮ ಘಟ್ಟಗಳಲ್ಲಿ ಭಾರಿ ಮಳೆಯಾಗುತ್ತದೆ. ಆದರೆ, ತಮಿಳುನಾಡು ಮಳೆ ನೆರಳಿನ ಪ್ರದೇಶದಲ್ಲಿರುವುದರಿಂದ ಈ ಅವಧಿಯಲ್ಲಿ ಅಲ್ಲಿ ನೇರ ಮಳೆ ಕಡಿಮೆಯಿರುತ್ತದೆ. ಆದ್ದರಿಂದ ಅವರು ಕರ್ನಾಟಕದ ಜಲಾಶಯಗಳನ್ನೇ ಆಶ್ರಯಿಸಿರುತ್ತಾರೆ. ತಮಿಳುನಾಡಿಗೆ ಮುಖ್ಯವಾಗಿ ಮಳೆ ಬರುವುದು ಅಕ್ಟೋಬರ್‌ನಿಂದ ಡಿಸೆಂಬರ್ ಅವಧಿಯಲ್ಲಿ ಬರುವ ಈಶಾನ್ಯ ಮುಂಗಾರಿನಿಂದ. ಆಗಸ್ಟ್‌ನಲ್ಲಿ ಅವರಿಗೆ ಸ್ವಂತ ಮಳೆಯ ಆಸರೆ ಇರುವುದಿಲ್ಲ. ಹೀಗಾಗಿ ಅಕ್ಟೋಬರ್‌ವರೆಗೆ ತಮ್ಮ ಕೃಷಿ ಮತ್ತು ಕುಡಿಯುವ ನೀರಿನ ಅಗತ್ಯಕ್ಕೆ ಕಾವೇರಿ ನೀರು ಅತ್ಯಗತ್ಯವಾಗಿರುತ್ತದೆ.

ಮೆಟ್ಟೂರು ಡ್ಯಾಂ ತುಂಬಬೇಕು:

ತಮಿಳುನಾಡಿನ ಪ್ರಮುಖ ನೀರಾವರಿ ಆಧಾರವಾದ ಮೆಟ್ಟೂರು ಜಲಾಶಯ ತುಂಬಲು ಹಾಗೂ ಅಲ್ಲಿಂದ ಡೆಲ್ಟಾ ಕಾಲುವೆಗಳಿಗೆ ನೀರು ಹರಿಸಲು ಆಗಸ್ಟ್‌ನಲ್ಲಿ ಹರಿವು ಹೆಚ್ಚಿರಬೇಕಾಗುತ್ತದೆ. ಹೀಗಾಗಿ, ಕಾವೇರಿ ನದಿಯ ನೀರಿನ ಹರಿವು ಹೆಚ್ಚಾಗಿರಬೇಕಾಗುತ್ತದೆ.

ಇದನ್ನೂ ಓದಿ: ಕರ್ನಾಟಕಕ್ಕೆ ಮತ್ತೊಮ್ಮೆ ಆಘಾತ: ತಮಿಳುನಾಡಿಗೆ ಮತ್ತೆ ಕಾವೇರಿ ನೀರು ಹರಿಸುವಂತೆ ಆದೇಶ

ಸಾಂಬಾ ಬೆಳೆ ಎಂದರೇನು?:

‘ಸಾಂಬಾ’ ಎಂಬುದು ತಮಿಳುನಾಡಿನಲ್ಲಿ ಅತ್ಯಂತ ಪ್ರಮುಖವಾದ ಹಾಗೂ ದೀರ್ಘಾವಧಿಯ ಭತ್ತ ಬೆಳೆಯುವ ಕೃಷಿ ಋತುವಾಗಿದೆ. ಸಾಮಾನ್ಯವಾಗಿ ಆಗಸ್ಟ್‌ನಿಂದ ಜನವರಿ ಅವಧಿಯಲ್ಲಿ ಈ ಬೆಳೆ ಬೆಳೆಯಲಾಗುತ್ತದೆ. ಈ ಋತುವಿನಲ್ಲಿ ಬೆಳೆಯಲಾಗುವ ಸಾಂಪ್ರದಾಯಿಕ, ಗಟ್ಟಿ ಧಾನ್ಯದ ಅಕ್ಕಿ ತಳಿಗಳ ಕುಟುಂಬವನ್ನು ಸಹ ‘ಸಾಂಬಾ’ ಎಂದೇ ಕರೆಯಲಾಗುತ್ತದೆ. ಈ ಭತ್ತಕ್ಕೆ ಆಗಸ್ಟ್‌ನಲ್ಲಿ ಬಿತ್ತನೆ ಮಾಡಿ, ಜನವರಿ ಸಮಯದಲ್ಲಿ ಕೊಯ್ಲು ಮಾಡಲಾಗುತ್ತದೆ. ಈ ಬೆಳೆ ಕೊಯ್ಲಿಗೆ ಬರಲು ಸುಮಾರು 130ರಿಂದ 165 ದಿನಗಳು ಬೇಕಾಗುತ್ತದೆ. ಈ ಬೆಳೆಯನ್ನು ಬೆಳೆಯುವ ರೈತರು ಈಶಾನ್ಯ ಮುಂಗಾರು ಮಳೆ ಹಾಗೂ ಕಾವೇರಿ ಡೆಲ್ಟಾದ ಮೆಟ್ಟೂರು ಜಲಾಶಯದಿಂದ ಹರಿಯುವ ಕಾಲುವೆ ನೀರನ್ನು ಹೆಚ್ಚಾಗಿ ನೆಚ್ಚಿಕೊಂಡಿದೆ.

ಮಧ್ಯ ಮತ್ತು ಕರಾವಳಿ ತಮಿಳುನಾಡಿನ ಕಾವೇರಿ ಡೆಲ್ಟಾ ಪ್ರದೇಶವು ಸಾಂಬಾ ಬೆಳೆಗೆ ಪ್ರಮುಖ ಕೇಂದ್ರವಾಗಿದೆ. ತಮಿಳುನಾಡಿನ ತಂಜಾವೂರು, ತಿರುವಾರೂರ್, ನಾಗಪಟ್ಟಣಂ ಮತ್ತು ಮೈಲಾಡುತುರೈ, ತಿರುಚಿರಾಪಳ್ಳಿ, ಕಡಲೂರು, ಪುದುಕ್ಕೊಟ್ಟೈ, ಅರಿಯಲೂರ್, ವಿಲ್ಲುಪುರಂ, ರಾಮನಾಥಪುರಂ ಮತ್ತು ಕನ್ಯಾಕುಮಾರಿಯಲ್ಲಿ ಈ ಸಾಂಬಾ ಬೆಳೆ ಬೆಳೆಯುತ್ತಾರೆ.

‘ಕುರುವೈ’ ಬೆಳೆ ಎಂದರೇನು?:

ಅಲ್ಪಾವಧಿಯ ಬೇಸಿಗೆ ಬೆಳೆಯಾದ ‘ಕುರುವೈ’ ನೈಋತ್ಯ ಮುಂಗಾರನ್ನು ನೆಚ್ಚಿಕೊಂಡಿದೆ. ಆದರೆ ಕರಾವಳಿ ತಮಿಳುನಾಡಿನಲ್ಲಿ ಈಶಾನ್ಯ ಮುಂಗಾರು (ಅಕ್ಟೋಬರ್‌ನಿಂದ ಡಿಸೆಂಬರ್) ಭಾರಿ ಮಳೆಯಾಗುತ್ತದೆ. ಅಷ್ಟರೊಳಗೆ ಕುರುವೈ ಬೆಳೆಗೆ ಕಾವೇರಿ ನೀರೇ ಆಧಾರ. ನೀರಿನ ಅಭಾವದಿಂದ ಮೆಟ್ಟೂರು ಜಲಾಶಯವು ನಿಗದಿತ ಜೂನ್ 12ರ ಗಡುವಿನೊಳಗೆ ತೆರೆಯದಿದ್ದಾಗ ‘ಕುರುವೈ’ ಬೆಳೆಯುವ ಅವಕಾಶ ಕೈತಪ್ಪುತ್ತದೆ. ಆಗಸ್ಟ್ ಅಥವಾ ಸೆಪ್ಟೆಂಬರ್‌ನಲ್ಲಿ ನೀರು ಬಿಟ್ಟಾಗ ರೈತರು ಕುರುವೈ ಬಿಟ್ಟು ನೇರವಾಗಿ ‘ಸಾಂಬಾ’ ಬೆಳೆಗೇ ಇಳಿಯುತ್ತಾರೆ.

ಕಾವೇರಿ ವಿವಾದದ ಇತಿಹಾಸ:

1924ರ ಸಂದರ್ಭದಲ್ಲಿ ಮದ್ರಾಸ್ ಪ್ರೆಸಿಡೆನ್ಸಿ ಮತ್ತು ಮೈಸೂರು ಸಂಸ್ಥಾನದ ನಡುವೆ ಒಪ್ಪಂದ ನಡೆದಿತ್ತು. ಮದ್ರಾಸ್ ಪ್ರೆಸಿಡೆನ್ಸಿ (ಈಗಿನ ತಮಿಳುನಾಡು) ಮತ್ತು ಮೈಸೂರು ಸಂಸ್ಥಾನದ (ಈಗಿನ ಕರ್ನಾಟಕ) ನಡುವೆ ಬ್ರಿಟಿಷರ ಅವಧಿಯಲ್ಲಿ 2 ಪ್ರಮುಖ ಒಪ್ಪಂದಗಳು ನಡೆದವು. 1924ರ ಒಪ್ಪಂದವು ಕೃಷ್ಣರಾಜಸಾಗರ (ಕೆಆರ್​ಎಸ್​) ಮತ್ತು ಮೆಟ್ಟೂರು ಡ್ಯಾಂಗಳ ನಿರ್ಮಾಣಕ್ಕೆ ದಾರಿ ಮಾಡಿಕೊಟ್ಟಿತು. ಆಗ ನಡೆದ ಈ ಒಪ್ಪಂದಗಳು ಮದ್ರಾಸ್ ಪ್ರೆಸಿಡೆನ್ಸಿಗೆ ಹೆಚ್ಚು ಅನುಕೂಲಕರವಾಗಿದ್ದವು, ಮೈಸೂರು ಸಂಸ್ಥಾನಕ್ಕೆ ನೀರಾವರಿ ವಿಸ್ತರಣೆಗೆ ಕಠಿಣ ಷರತ್ತುಗಳನ್ನು ಹೇರಿದ್ದವು ಎಂಬುದು ಕರ್ನಾಟಕದ ನಿರಂತರ ವಾದ. 1924ರ ಒಪ್ಪಂದದ 50 ವರ್ಷಗಳ ಅವಧಿ 1974ಕ್ಕೆ ಅಂತ್ಯಗೊಂಡ ನಂತರ, ಕರ್ನಾಟಕವು ತನ್ನ ಭಾಗದ ಹಾರಂಗಿ, ಹೇಮಾವತಿ, ಕಬಿನಿ ಜಲಾಶಯಗಳಲ್ಲಿ ಡ್ಯಾಂ ನಿರ್ಮಿಸಿ ನೀರಾವರಿ ವಿಸ್ತರಿಸಲು ತೊಡಗಿದಾಗ ವಿವಾದ ತೀವ್ರಗೊಂಡಿತು. ಇಂದಿಗೂ ಕರ್ನಾಟಕ ಮತ್ತು ತಮಿಳುನಾಡು ನಡುವಿನ ಕಾವೇರಿ ವಿವಾದ ಇತ್ಯರ್ಥಗೊಂಡಿಲ್ಲ.

References: Tamil Nadu Agriculture University Agri Tech portal

Down To Earth

The Week

Times of India

ANI

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:39 pm, Tue, 8 September 26

Follow Us