ಆಕ್ರಂದನ : ಇದು ಅಂತರಾತ್ಮದ ಕೂಗು…. ಭಾಗ -3
ಎಚ್ಚರವಾಗುವ ಹೊತ್ತಿಗೆ ಮನೆಯಲ್ಲಿ ದೇವು ಇಲ್ಲ. ಅಕ್ಕಪಕ್ಕದಲ್ಲೆಲ್ಲಾ ಹುಡುಕಿದರು. ಬಾವಿಕಟ್ಟೆ, ಕೆರೆ ಎಲ್ಲವೂ ನೋಡಾಯಿತು. ದೇವು ಎಲ್ಲೂ ಇಲ್ಲ. ಅಮ್ಮ ಮಗ ಇಬ್ಬರೂ ತಲೆ ಮೇಲೆ ಕೈ ಹೊತ್ತು ಕುಳಿತರು......ಹಿಂದಿನ ಸಂಚಿಕೆಯ ಆಕ್ರಂದನ 3ನೇ ಭಾಗವಾಗಿ ಇಲ್ಲಿ ಮುಂದುವರಿಯಲಿದೆ
ಸಂಜೆ ಹೊತ್ತಿಗೆ ಊರಿನವರಾರೋ ಬಂದು ದೇವು ಊರಿನ ಪಂಚಾಯ್ತಿ ಕಟ್ಟೆಯ ಹತ್ತಿರ ಇದ್ದಾನೆ, ಸ್ವಲ್ಪ ಭಿನ್ನವಾಗಿ ವರ್ತಿಸುತ್ತಿದ್ದಾನೆ ಎಂದಾಗ ಅಮ್ಮ ಮಗ ಗಾಬರಿಯಿಂದ ಓಡಿ ಹೋದರು. ಕೈಯಲ್ಲಿ, ಮೈಯಲ್ಲೆಲ್ಲಾ ಮಣ್ಣು. ಸೊಂಟದಲ್ಲೊಂದು ಗಂಟು. ಕೈಯಲ್ಲೊಂದು ದೊಡ್ಡ ಪ್ಲಾಸ್ಟಿಕ್ ಗೋಣಿ ಅದರ ತುಂಬಾ ಕಸಗಳು.. ದೇವು ನಡುಗುತ್ತಿದ್ದ. ಕಣ್ಣು ಕೆಂಪಾಗಿತ್ತು. ಯಾರನ್ನೂ ಹತ್ತಿರ ಸುಳಿಯಲು ಬಿಡುತ್ತಿರಲಿಲ್ಲ. ಪದೇ ಪದೇ ಅವನ ಕೈ ಸೊಂಟದಲ್ಲಿನ ಗಂಟಿನ ಹತ್ತಿರ ಹೋಗುತ್ತಿತ್ತು. ಮಗನನ್ನು ಆ ಸ್ಥಿತಿಯಲ್ಲಿ ಕಂಡ ಲಚ್ಚಿಗೆ ಕರುಳು ಕಿವುಚಿದಂತಾಯ್ತು. ಗೋಳಾಡಿದಳು. ಮಗ ಹತ್ತಿರ ಬರುತ್ತಿಲ್ಲ. ಮತ್ತೆ ಮತ್ತೆ ದೂರ ಓಡಿ ಹೋಗುತ್ತಿದ್ದ. ಕುಂಞ ಹಾಗೋ ಹೀಗೋ ಮಾಡಿ ದೇವುನ ಸಮಾಧಾನಿಸಿ ಮನೆಗೆ ಕರೆದುಕೊಂಡು ಬಂದ. ದೇವು ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದ. ಪರಿಸ್ಥಿತಿ ಕೈ ಮೀರಿ ಹೋಗಿತ್ತು.
ಮರುದಿನ ಕುಂಞ ಮತ್ತು ಲಚ್ಚಿ ದೇವುವನ್ನೂ ಕರೆದುಕೊಂಡು ಅರಮನೆಗೆ ಹೋದರು. ಅರಮನೆಯ ಮುಖಂಡರೆದುರು ಚಿನ್ನದ ಗಂಟು ಇಟ್ಟು ಕಾಲಿಗೆ ಬಿದ್ದ ಕುಂಞ “ ಧನಿ, ತಪ್ಪಾಯಿತು. ಮೊನ್ನೆ ಕುಡಿದ ಅಮಲಿನಲ್ಲಿ ನಾವು ಮಣ್ಣು ತಿನ್ನುವ ಕೆಲಸ ಮಾಡಿ ಬಿಟ್ಟೆವು. ದೇವರ ಚಿನ್ನ ಕದ್ದವರು ನಾವೇ.. ನೀವು ಯಾವ ಶಿಕ್ಷೆ ಕೊಟ್ಟರೂ ಅನುಭವಿಸಲು ನಾವು ತಯಾರು. ನಮಗೆ ಮಾಪು(ಕ್ಷಮೆ) ನೀಡಿ” ಎಂದಾಗ ಅಲ್ಲಿದ್ದವರೆಲ್ಲಾ ದಂಗುಬಡಿದಂತಾದರು. “ ಕುಂಞ, ನಮ್ಮಲ್ಲಿ ಕೆಲಸ ಮಾಡುವ ಎಲ್ಲಾ ಕೆಲಸಗಾರರನ್ನೂ ವಿಚಾರಣೆ ಮಾಡಿದ್ದೆವು.. ಆದರೆ ನಿಮ್ಮಿಬ್ಬರನ್ನು ಮಾಡಲಿಲ್ಲ ಕಾರಣ ಏನು ಗೊತ್ತಾ ಅದೇ ದೈವದ ಕಾರ್ಯ ಮಾಡುವವರು ನೀವು. ನಿಮ್ಮನ್ನು ಅನುಮಾನಿಸಿದರೆ ದೈವವನ್ನು ಅನುಮಾನಿಸಿದಂತೆ ಎಂದು ತಿಳಿದಿದ್ದೆ.
ಪರಂಪರೆಯಿಂದ ಆ ದೈವದ ಕಾರ್ಯ ಮಾಡಿಕೊಂಡು ಬಂದಿದ್ದೀರಿ. ಇಂತಹಾ ಹೇಯ ಕೃತ್ಯ ಮಾಡಲು ನಿಮ್ಮಿಂದ ಹೇಗೆ ಸಾದ್ಯವಾಯಿತು. ನಂಬಿಕೆಗೆ ಬೆಲೆ ಇಲ್ಲದಂತಾಯಿತಲ್ಲಾ?” ಎಂದು ಕೋಪದಲ್ಲಿ ಹೇಳಿದ ಮುಖಂಡರ ಮಾತು ಕುಂಞನನ್ನು ಈಟಿಯಂತೆ ಇರಿದವು. “ತಪ್ಪಾಯಿತು ಒಡೆಯ. ಶಿಕ್ಷೆ ಕೊಡಿ” ಎಂದು ಮೊಣಕಾಲೂರಿ ಅಳುತ್ತಾ ಹೇಳಿದ. ಮತ್ತೊಮ್ಮೆ ಊರಿನ ಮುಖಂಡರ ಸಭೆ ಸೇರಿತು. ಚರ್ಚೆಗಳು ನಡೆದವು. “ ದೇವು, ಕುಂಞ ಮಾಡಿದ್ದು ಕೇವಲ ಕಳ್ಳತನ ಅಲ್ಲ ಅದು ಇಡೀ ಊರಿನ ಜನರ, ದೈವ-ದೇವರುಗಳ ನಂಬಿಕೆಗೆ ಇಟ್ಟ ಕೊಳ್ಳಿ. ದೇವು ಮಾಡಿದ ತಪ್ಪಿಗೆ ದೈವ ಉತ್ತರ ಕೊಟ್ಟಿದೆ. ಕುಂಞನನ್ನೂ ಆ ದೈವವೇ ನೋಡಿಕೊಳ್ಳಲಿ” ಎಂದು ಹೇಳುತ್ತಾರೆ.
ದಂಗಾದ ಕುಂಞ “ದಯವಿಟ್ಟು ನನಗೆ ಶಿಕ್ಷೆ ಕೊಡಿ, ನನ್ನ ಪಾಪಕ್ಕೆ ಪ್ರಾಯಶ್ಚಿತ ಮಾಡಿಕೊಳ್ಳುವೆ.” ಎಂದು ಬೇಡಿಕೊಂಡ.. ಬೇಡಿಕೊಳ್ಳುತ್ತಲೇ ಇದ್ದ. ಅದಾಗಲೇ ಮುಖಂಡರು ಎದ್ದುಹೋಗಿದ್ದರು. ಲಚ್ಚಿ ಅಳುತ್ತಿದ್ದಳು, ದೇವು ನಗುತ್ತಿದ್ದ. ಭಯದಲ್ಲೇ ರಾತ್ರಿಗಳನ್ನು ಕಳೆದರು. ದೇವುನ ಪರಿಸ್ಥಿತಿ ಸುಧಾರಿಸಲೆ ಇಲ್ಲ. ಮನೆ ಬಿಟ್ಟು ಊರೂರು ಅಲೆಯುತ್ತಿದ್ದ.. ಚಿಂದಿ ಹೆಕ್ಕುತ್ತಾ,ಬಿಕ್ಷೆ ಬೇಡುತ್ತಾ ದಿನ ಕಳೆಯಲು ಶುರು ಮಾಡಿದ್ದ. ಕುಂಞ ತನ್ನನ್ನೇ ತಾನು ದ್ವೇಷಿಸಲು ಶುರುಮಾಡಿದ್ದ. ಆತ್ಮ ಸಾಕ್ಷಿಯನ್ನೂ ಕೊಂದು, ನಂಬಿಕೆಯನ್ನೂ ಕಳೆದುಕೊಂಡು ಬದುಕಿನ ಹಳಿ ತಪ್ಪಿದಂತಾಗಿತ್ತು. ಒಂಟಿತನದ ಭಯದೊಂದಿಗೆ ಕುಡಿತವೂ ಹೆಚ್ಚಾಗಿತ್ತು. ಪ್ರತೀ ದಿನ ಗಂಟೆ ಗಟ್ಟಲೆ ದೈವ ಸ್ಥಾನದ ಒಂದು ಮೂಲೆಯಲ್ಲಿ ನಡುಗುತ್ತಾ ಕುಳಿತು ಬಿಡುತ್ತಿದ್ದ. ಶಾಂತಿಯ ಪ್ರತಿರೂಪದಂತಿದ್ದ ದೈವದ ಮುಖ ಕುಂಞನಿಗೆ ಉಗ್ರ ರೂಪದಂತೆ ಕಾಣತೊಡಗಿತ್ತು. “ನಾನೇಕೆ ಹೀಗೆ ಮಾಡಿದೆ? ನನ್ನನ್ನು ನೀನು ಯಾಕೆ ತಿದ್ದಲಿಲ್ಲ? ನಾನು ತಪ್ಪು ಮಾಡಿದೆ.. ಶಿಕ್ಷೆ ಕೊಡು, ಮಾಪು ಕೊಡು” ಎಂದು ಒಬ್ಬನೇ ಭ್ರಮಾಧೀನನಾಗಿ ಮಾತನಾಡುತಲೇ ಇರುತ್ತಿದ್ದ.
ತಿಂಗಳು ಕಳೆಯಿತು.ಜಾತ್ರೆ ದಿನ ಹತ್ತಿರ ಬಂದಿತ್ತು. ಆ ದಿನ ರಾತ್ರಿ ಇದ್ದಕ್ಕಿದ್ದ ಹಾಗೇ ಕುಂಞ ಬೆಚ್ಚಿ ಬಿದ್ದ. ಮೈಯೆಲ್ಲಾ ಬಿಸಿ ಏರಿತು. ಕಿವಿಯೊಳಗೆ ಲಚ್ಚಿಯ ಪಾಡ್ದನ, ದೇವುನ ತೆಂಬರೆ ವಾದನ, ತ್ರಾಸಿನ ಸದ್ದು ಕೇಳುತ್ತಿದೆ. ದೇಹದೊಳಗೆ ಶಕ್ತಿಯೊಂದು ಪ್ರವೇಶವಾದಂತೆ ಮೈಯೆಲ್ಲಾ ನಡುಗಲು ಶುರುವಾಯ್ತು. ಕುಂಞ ಅರಿವಿಲ್ಲದಂತೆಯೇ ‘ಓ’ ಎಂಬ ವಿಚಿತ್ರ ಆವೇಶದ ಕೂಗು ಹಾಕಿದ. ಕಣ್ಣೆದುರು ದೈವದ ಅಸ್ಪಷ್ಟ ಮುಖವೊಂದು ಕಾಣಿಸಿತು.. ಪ್ರಸನ್ನವಾಗಿದ್ದ ಆ ಮುಖ ಉಗ್ರ ರೂಪವಾಯ್ತು. ಮತ್ತೊಂದು ಕೂಗು ಹಾಕುವ ಹೊತ್ತಿಗೆ ಕುಂಞನ ಕತ್ತು ಹಿಸುಕಿದಂತಾಯ್ತು ವಿಲಕ್ಷಣ ಕೀರಲು ಸ್ವರವೊಂದು ಕುಂಞನ ಗಂಟಲಿನಿಂದ ಹೊರಬಂತು. ನಿರಂತರವಾಗಿ ಬರುತ್ತಲೇ ಇತ್ತು.. ಪರಿಸ್ಥಿತಿ ಹಿಡಿತಕ್ಕೆ ಸಿಗದೇ ಕುಂಞ ಒದ್ದಾಡುತ್ತಿದ್ದ. ತನ್ನ ಕೂಗು ನಿಲ್ಲಿಸಲು ಹುಚ್ಚರಂತೆ ಓಡಿದ, ಹೊಡೆದುಕೊಂಡ, ನೆಲದಲ್ಲಿ ಹೊರಳಾಡಿದ.. ಕಣ್ಣೀರಾದ. ಒಂಬತ್ತು ದಿನದ ಊರ ಜಾತ್ರೆ ಮುಗಿಯುವವರೆಗೂ ಕುಂಞ ಕೀರುತ್ತಲೇ ಇದ್ದ.
ಉಳಿದ ದಿನಗಳಲ್ಲಿ ಸ್ವಲ್ಪ ಸುಧಾರಿಸಿದಂತಿರುದ್ದ ಕುಂಞ ವರ್ಷದ ಜಾತ್ರೆ ಹತ್ತಿರ ಬರುತ್ತಿದ್ದಂತೆ ಮತ್ತೆ ವಿಲಕ್ಷಣ ಕೂಗು ಹಾಕುತ್ತಿದ್ದ. ಇತ್ತ ಸಂಪೂರ್ಣ ಹುಚ್ಚನಾಗಿ ಅಲೆದಾಡುತ್ತಿದ್ದ ದೇವು ಕೊನೆಗೊಂದು ದಿನ ದೇವಸ್ಥಾನದ ಕೆರೆಯಲ್ಲಿ ಹೆಣವಾಗಿ ತೇಲಿದ. ತನ್ನ ಮಕ್ಕಳ ಪರಿಸ್ಥಿತಿಯನ್ನು ಕಂಡ ಲಚ್ಚಿ ನೋವು ತಾಳಲಾರದೆ ಅದೇ ದಿನ ಆತ್ಮ ಹತ್ಯೆ ಮಾಡಿಕೊಂಡಳು. ತಾಯಿ, ತಮ್ಮನ ಸಾವು ಕುಂಞನನ್ನು ಮತ್ತಷ್ಟು ಕುಗ್ಗಿಸಿತು. “ನನ್ನ ತಪ್ಪಿನಿಂದಾಗಿ ನಿರಪರಾಧಿ ತಾಯಿ ಹೊರಟುಹೋದಳು.ತಮ್ಮ ಹೊರಟು ಹೋದ. ಅಂದು ತಾನು ಅಷ್ಟು ಮುಂದುವರಿಯದಿದ್ದರೆ ಹೀಗೆಲ್ಲಾ ಆಗುತ್ತಲೇ ಇರಲಿಲ್ಲ.ಇದೆಲ್ಲಾ ಆ ದೈವದ ಶಿಕ್ಷೆ ಎಂದುಕೊಂಡು ಅವರಿಬ್ಬರ ಹೆಣದ ಮುಂದೆ ಕುಳಿತು ಗೋಳಾಡಿದ.. ಕೂಗಾಡಿದ.ತನನ್ನೇ ತಾನು ಹಳಿದುಕೊಂಡ. ಅಂದು ಮತ್ತೆ ಅವನ ಗಂಟಲು ಕಟ್ಟಿದಂತಾಯ್ತು.. ‘ಓ’ ಎಂಬ ದೀರ್ಘ ವಿಕಾರ ಸ್ವರ ಹೊರಟಿತ್ತು.ಮನದೊಳಗೆ ಅದೇನೋ ಆವೇಶ..ತನ್ನನ್ನೇ ತಾನು ಕೊಲ್ಲುವ ದ್ವೇಷ, ನೋವು, ದೈನ್ಯ ಭಾವ ಕಣ್ಣಲ್ಲಿ ಗೋಚರಿಸುತ್ತಿತ್ತು. ಗಂಟಲಿನ ಆ ಕೀರಲು ಸ್ವರ, ಮನದೊಳಗಿನ ಆಕ್ರಂದನ ನಿಲ್ಲಲೇ ಇಲ್ಲ.. ಕೂಗಾಡುತ್ತಲೇ ಇದ್ದ.. ಊರಿನ ಜನ ಎಲ್ಲದಕ್ಕೂ ಸಾಕ್ಷಿಯಾದರು. ಅವರೊಳಗಿನ ದೈವ ಜಾಗೃತವಾಯಿತು.
-ಗಾರ್ಗಿ