Column: ಎಲ್ರೂ ಬದುಕಬೇಕಲ್ವಾ?; ಇನ್ನು ಸಾಕಲ್ವಾ ಸಹಿಸಿಕೊಂಡಿದ್ದು…

Column: ಎಲ್ರೂ ಬದುಕಬೇಕಲ್ವಾ?; ಇನ್ನು ಸಾಕಲ್ವಾ ಸಹಿಸಿಕೊಂಡಿದ್ದು...

Guts : "ಅಲ್ವೇ, ಈಗಲೂ ನೀವಿಬ್ಬರೂ ಪ್ರತಿಭಟಿಸಿ, ಇನ್ನು ಸಾಕು, ಈ ದೌರ್ಜನ್ಯ ಎಂದು ಹೊರನಡೆದರೆ ಅವರು ದಾರಿಗೆ ಬರುತ್ತಾರೆ. ಅದಕ್ಕೆ ಧೈರ್ಯ ಬೇಕು. ಮೊದಲಿಗೆ ವಿರಸವಾದರೂ ಆಮೇಲೆ ಸರಿ ಹೋಗುತ್ತದೆ" ಎಂದಳು ಚೈತ್ರ.

TV9kannada Web Team

| Edited By: ಶ್ರೀದೇವಿ ಕಳಸದ | Shridevi Kalasad

Jun 22, 2022 | 7:24 PM

Patience : ‘ಅಲ್ವೇ, ಇನ್ನೂ ಇವಳೇ ಕೆಲಸಕ್ಕೆ ಬರುತ್ತಾ ಇದಾಳಾ? ಕಳ್ಳಿ, ಸುಳ್ಳಿ, ಬರೀ ಚಕ್ಕರ್ ಹಾಕ್ತಾಳೆ ಅಂತಿದ್ದೆ?’ ಗೆಳತಿ ಚೈತ್ರಾಳ ಮನೆಗೆ ಬಂದಿದ್ದ ಪವಿತ್ರಾ ಅವಳ ಕೆಲಸದ ಹೆಂಗಸನ್ನು ನೋಡಿ ಉದ್ಗಾರ ತೆಗೆದಳು. ನಿಟ್ಟುಸಿರಿಟ್ಟು ಚೈತ್ರ ನುಡಿದಳು ‘ಇವಳಿಗೆ ಸಾಲ ಕೊಟ್ಟಿರುವೆ. ಬೇಕಾದಷ್ಟು ಮನೆ ಸಾಮಾನು, ಸೀರೆ-ಬಟ್ಟೆ ಎಲ್ಲಾ ಕೊಟ್ಟು ಇಷ್ಟು ವರುಷದಿಂದ ನೋಡಿಕೊಂಡಿರುವೆ.ಈಗ ಇವಳನ್ನು ಬಿಡಿಸಿದರೆ ನನ್ನ ಹಣದ ಜತೆ ಹೊರಟುಹೋಗುತ್ತಾಳೆ. ಅವಳಿಗೆ ಕೊಟ್ಟಿರುವ ಸಾಮಾನು, ಅವಳ ಮೇಲೆ ವ್ಯಯಿಸಿರುವ ಹಣ, ವಸ್ತುಗಳು, ಎಲ್ಲವೂ ಹಾಳಾದ ಲೆಕ್ಕ, ಹೊಳೆಯಲ್ಲಿ ಹುಣಸೆಹಣ್ಣು ಕಿವಿಚಿದ ಹಾಗೆ!’ ಚಿತ್ರಾಳ ಮಾತು ಕೇಳಿ ಪವಿತ್ರ ಯೋಚಿಸತೊಡಗಿದಳು. ಸಂಬಂಧಗಳಲ್ಲೂ ಹಾಗೆಯೆ ಅಲ್ಲವಾ? ನಾವು ಬಹಳಷ್ಟು ಭಾವನೆಗಳು, ಸಮಯ, ಕೆಲವೊಮ್ಮೆ ಹಣ ಕೂಡ ಹೂಡಿರುತ್ತೇವೆ. ‘ಅಯ್ಯೋ, ಈ ಸಂಬಂಧಕ್ಕೆ ಇಷ್ಟೆಲ್ಲಾ ಸಮಯ ವ್ಯಯಿಸಿದ ಮೇಲೆ ಹೇಗೆ ತ್ಯಜಿಸುವುದು? ಇಷ್ಟು ಸಮಯ ಮಾಡಿದ್ದೆಲ್ಲವೂ ವ್ಯರ್ಥವಾಗುವುದಲ್ಲ’ ಎಂದು ಜೀರ್ಣವಾದ, ರಿಪೇರಿ ಮಾಡಲಾಗದ ಸಂಬಂಧವನ್ನು ನಿಭಾಯಿಸಲು ಹೆಣಗಾಡುತ್ತೀವಿ. ಡಾ. ಸಹನಾ ಪ್ರಸಾದ (Dr. Sahana Prasad)

ಚೈತ್ರ ತಂದಿಟ್ಟ ಕಾಫಿ ಸವಿಯುತ್ತಾ ಪವಿತ್ರ ತನ್ನ ಮನಸ್ಸಿನ ಯೋಚನೆಗಳನ್ನು ಬಿಚ್ಚಿಟ್ಟಳು. ಅವಳು ಹಾಗೂ ಚೈತ್ರ ಚಿಕ್ಕವಯಸ್ಸಿನ ಗೆಳತಿಯರು. ಎಲ್ಲ ಗೆಳತಿಯರ ಮಧ್ಯೆ ಇರುವಂತೆ ಅವರಿಬ್ಬರ ನಡುವೆಯೂ ಜಗಳ, ಅಸೂಯೆ, ತಪ್ಪು ತಿಳುವಳಿಕೆಗಳು ಇತ್ಯಾದಿ ಬಂದು ಹೋಗಿದ್ದವು. ಆದರೂ ಇವರು ತಮ್ಮ ಗೆಳೆತನ ಉಳಿಸಿಕೊಂಡು ೨೦ ವರುಷಗಳಾಗಿತ್ತು. ಒಬ್ಬರಿಗೊಬ್ಬರು ಕಷ್ಟ ಸುಖ ಹಂಚಿಕೊಂಡು, ಸಾಧ್ಯವಾದಾಗಲೆಲ್ಲಾ ಕರೆ ಮಾಡಿ ಮಾತನಾಡುತ್ತಿದ್ದರು. ಆದರೆ ಅವರ ಬದುಕಿನ ಧಾವಂತದಲ್ಲಿ ಭೇಟಿ ಆಗಲು ಸಮಯವೇ ಸಿಗುತ್ತಿರಲಿಲ್ಲ. ಬಹಳ ದಿನಗಳ ನಂತರ ಚೈತ್ರಾಳ ಫ್ಲಾಟ್ಗೆ ಬಂದ ಪವಿತ್ರ, ಅವಳು ದೂರು ಹೇಳುತ್ತಿದ್ದ ಕೆಲಸದ ಹೆಂಗಸು ಕಸ ಗುಡಿಸುತ್ತ ಇದ್ದದ್ದು ನೋಡಿ ಅಚ್ಚರಿಗೊಂಡಳು. ಕರೆ ಮಾಡಿದಾಗಲೆಲ್ಲಾ ತನ್ನ ಮನೆ ಕೆಲಸದಾಕೆಯ ಬಗ್ಗೆ ದೂರು ಹೇಳುತ್ತಿದ್ದಳು, ಅವಳು ಬೇಕಾಬಿಟ್ಟಿ ಕೆಲಸ ಮಾಡುವುದು, ಮನಬಂದಂತೆ ರಜೆ ಹಾಕುವುದು, ಮನೆ ಸಾಮಾನು ಕದಿಯುವುದು, ಎಲ್ಲವೂ ಪವಿತ್ರಳಿಗೆ ಗೊತ್ತಿತ್ತು. ಆದರೆ ಆಕೆ ಇನ್ನೂ ಇವಳ ಮನೆಯಲ್ಲಿ ಇದಾಳೆ ಎಂದು ಅಚ್ಚರಿಯಾಯಿತು ಪವಿತ್ರಳಿಗೆ. ಚೈತ್ರ ಕೆಲಸಕ್ಕೆ ಹೋಗಿ, ಅಡುಗೆ,ಮನೆ ವಾರ್ತೆ ನೋಡಿಕೊಂಡು, ಟೀನ್ ಏಜ್ ಮಗಳನ್ನು ಸುಧಾರಿಸುತ್ತಾ ಚೈತ್ರ ಬಸವಳಿದಿದ್ದಳು. ಕೆಲಸ ಮಾಡಿ, ಮನೆ ನೋಡಿಕೊಳ್ಳುವ ಬಹುತೇಕ ಹೆಂಗಸರಂತೆ ಯಾವಾಗಲೂ ಒತ್ತಡದಲ್ಲಿ ಇರುತ್ತಿದ್ದ ಅವಳಿಗೆ ಪವಿತ್ರಳ ಸ್ನೇಹ ತಂಗಾಳಿಯಂತೆ.

ಇದನ್ನೂ ಓದಿ : Mothers Day: ಗಂಡ ಅಥವಾ ಮಕ್ಕಳ ಬಾಯಿಂದ ಈ ಮಾತು ಬಂದರೆ ಅವಳ ಜನುಮ ಸಾರ್ಥಕ!

ಚೈತ್ರಳದ್ದು ಗಂಡ-ಹೆಂಡತಿ-ಮಗು ಇದ್ದ ಸಂಸಾರ, ಆಸ್ತಿಪಾಸ್ತಿ ಏನಿಲ್ಲ, ಹಾಗೆಯೇ ಜವಾಬ್ದಾರಿಗಳೂ ಕೂಡ. ಚೈತ್ರಾಳ ಅತ್ತೆಮಾವ ದೂರದ ಊರಿನಲ್ಲಿ ತಮ್ಮ ಪಾಡಿಗೆ ತಾವು ಹಾಯಾಗಿದ್ದರು. ಮಗನಿಂದ ಯಾವ ರೀತಿಯ ಸಹಾಯ ಅಪೇಕ್ಷಿಸುತ್ತಿರಲಿಲ್ಲ, ಹಾಗೆಯೇ ಮಕ್ಕಳಿಗೆ ಯಾವ ರೀತಿಯ ಸಹಾಯವೂ ಮಾಡುತ್ತಿರಲಿಲ್ಲ.ಇವರಿಬ್ಬರಿಗೆ ನಗರದ ಜೀವನ ಕಷ್ಟ ಎಂದರಿತರೂ ಅವರಿಬ್ಬರೂ ನಿರ್ಲಿಪ್ತವಾಗಿದ್ದರು.ಮಕ್ಕಳನ್ನು ಬೆಳೆಸುವುದಷ್ಟೇ ನಮ್ಮ ಕರ್ತವ್ಯ, ಆಮೇಲೆ ಅವರ ಪಾಡು ಅವರದ್ದು ಎಂಬ ಸಿದ್ಧಾಂತ ಅವರದ್ದು.

ಪವಿತ್ರಳದ್ದು ಕೂಡು ಕುಟುಂಬ. ಸಾಕಷ್ಟು ಕೊಂಚ ಆಸ್ತಿ ಇದ್ದರೂ, ಅದಕ್ಕೆ ಸಾಕಷ್ಟು ಹಕ್ಕುದಾರರಿದ್ದರು. ಪವಿತ್ರಳ ಗಂಡ ಶರತ್ ಎಲ್ಲಾ ಜವಾಬ್ದಾರಿ ಹೊತ್ತಿದ್ದ. ಅವನ ತಂದೆ, ಹೆಂಡತಿ ಹಾಗೂ ಮಿಕ್ಕ ೪ ಜನ ಮಕ್ಕಳ ಜವಾಬ್ದಾರಿ ಇವನ ಮೇಲೆ ಹಾಕಿ ಆರಾಮಾಗಿ ಇದ್ದುಬಿಟ್ಟಿದ್ದರು. ಮೊದಲನೇ ಮಗ, ಹಿರಿಮಗ, ಮನೆಗೆ ಆಸರೆ ಇತ್ಯಾದಿ ಬಿರುದುಗಳನ್ನು ಅವನಿಗೆ ಅಂಟಿಸಿ, ಅವನು ಎಂದೆಂದಿಗೂ ಮನೆಗಾಗಿ ಶ್ರಮಿಸುವಂತೆ ಮಾಡಿದ್ದರು. ಅತ್ತೆಮಾವನ ಸೇವೆ , ಮೈದುನ ನಾದಿನಿಯರ ಓದು, ಮಾಡುವೆ, ಬಸುರಿ ಬಾಣಂತನ ಇತ್ಯಾದಿ ನಿಭಾಯಿಸುವಷ್ಟರಲ್ಲಿ ಪವಿತ್ರ ಹಾಗೂ ಶರತ್ ಸುಸ್ತಾಗಿದ್ದರು. ಅತ್ತೆಯ ಕಟು ನುಡಿ , ನಾದಿನಿಯರ ಕೊಂಕು ಮಾತು, ಮೈದುನರ ದುರಹಂಕಾರದ ನುಡಿಗಳು ಕೇಳಿ ಅವಳು ಹಾಗೂ ಶರತ್ ಬೇಸತ್ತಿದ್ದರು .ಆದರೆ ೨೦ ವರುಷ ನಿಭಾಯಿಸಿರುವೆ, ಇನ್ನು ಏನಿದೆ ತನ್ನದಾಗಿ ಬದುಕು ಸ್ಥಾಪಿಸಿಕೊಳ್ಳಲು ಎನ್ನುವ ಹತಾಶೆಯ ಮನೋಭಾವ ತಲುಪಿದ್ದಳು ಪವಿತ್ರ. ಹೊರಗಡೆ ಕೆಲಸಕ್ಕೆ ಹೋಗದೆ ಇದ್ದರೂ ಅವಳಿಗೆ ಬಹಳ ಒತ್ತಡವಿತ್ತು.

ಇದನ್ನೂ ಓದಿ : Column: ಎಲ್ರೂ ಬದುಕಬೇಕಲ್ವಾ?; ಮಾತನಾಡದೆ ಇರುವುದೂ ತಪ್ಪೇ

ಕಾಫಿ ಹೀರುತ್ತಾ ಗೆಳತಿಯರಿಬ್ಬರೂ ತಮ್ಮ ತಮ್ಮ ಬದುಕಿನಲ್ಲಿ ಮಾಡಿಕೊಂಡಿರುವ ಹೊಂದಾಣಿಕೆಗಳ ಬಗ್ಗೆ ಚರ್ಚಿಸತೊಡಗಿದರು. “ಇಷ್ಟು ವರುಷ ನಿಭಾಯಿಸಿದ ಸಂಬಂಧಗಳು ನಮ್ಮನ್ನು ಬಂದಿಯಾಗಿ ಮಾಡಿವೆ, ಇದರಿಂದ ಮುಕ್ತಿ ಇಲ್ಲ” ಎಂದು ಚೈತ್ರಾಳ ಮನಸ್ಸಿನ ಭಾವನೆ. ಹೆಚ್ಚುಕಡಿಮೆ ಪವಿತ್ರಳದ್ದೂ ಅದೇ ಭಾವನೆ. ” ಇವಳು ಈಗ ಸಹ, ಸುಳ್ಳು ಹೇಳುತ್ತಾಳೆ, ಸಣ್ಣ ಪುಟ್ಟ ಕಳ್ಳತನ ಮಾಡುತ್ತಾಳೆ, ಆದರೆ ಬಿಡಿಸಲು ಆಗುತ್ತಿಲ್ಲ” ಎಂದು ಚೈತ್ರ ನುಡಿದರೆ, ಪವಿತ್ರಾ” ಅತ್ತೆ ಮನೆಯಲ್ಲಿ ಎಲ್ಲರೂ ಮಾಡುವೆ ಆದಾಗಲಿಂದ ಒಂದೇ ರೀತಿ ನನ್ನನ್ನು ಹಾಗೂ ನನ್ನ ಗಂಡನನ್ನು ಶೋಷಣೆ ಮಾಡುತ್ತಾ ಇದಾರೆ. ಅದನ್ನು ಸಹಿಸುತ್ತಾ ಬಂದಿದೀವಿ ನಾವು. ಭಾವನಾತ್ಮಕವಾಗಿ ನಮ್ಮನ್ನು ಬ್ಲ್ಯಾಕ್ಮೇಲ್ ಮಾಡುತ್ತಾ, ಅವರಿಗೆ ಬೇಕಾದ ಹಾಗೆ ನಮ್ಮನ್ನು ಕುಣಿಸುತ್ತಾ ಇದಾರೆ ” ಎಂದು ತನ್ನ ಅಳಲು ತೋಡಿಕೊಂಡಳು.

ಇದನ್ನೂ ಓದಿ

“ಅಲ್ವೇ, ಈಗಲೂ ನೀವಿಬ್ಬರೂ ಪ್ರತಿಭಟಿಸಿ, ಇನ್ನು ಸಾಕು, ಈ ದೌರ್ಜನ್ಯ ಎಂದು ಹೊರನಡೆದರೆ ಅವರು ದಾರಿಗೆ ಬರುತ್ತಾರೆ. ಅದಕ್ಕೆ ಧೈರ್ಯ ಬೇಕು. ಮೊದಲಿಗೆ ವಿರಸವಾದರೂ ಆಮೇಲೆ ಸರಿ ಹೋಗುತ್ತದೆ” ಎಂದಳು ಚೈತ್ರ. ” ಆದರೆ ಇಷ್ಟು ವರುಷ ..” ಎಂದು ಶುರು ಮಾಡಿದ ಪವಿತ್ರಳ ಮಾತನ್ನು ತುಂಡರಿಸುತ್ತಾ ನುಡಿದಳು ಚೈತ್ರ ” ಆಗ ಗೊತ್ತಿರಲಿಲ್ಲ, ಧೈರ್ಯ ಇರಲಿಲ್ಲ. ಹಾಗಂತ ಈಗಲೂ ಅದೇ ತಪ್ಪು ಮಾಡುತ್ತಾ ಇರುವೆ ಎನ್ನುತ್ತೀಯಾ?” ಉಳಿದಿದ್ದ ಕಾಫಿ ಮುಗಿಸಿ ಗೆಳತಿಯ ಮುಖವನ್ನೇ ದಿಟ್ಟಿಸಿದಳು ಪವಿತ್ರ, ಕಾಫಿ ಮುಗಿದ ತಕ್ಷಣ ಮನೆಕೆಲಸದಾಕೆಯನ್ನು ಕರೆದಳು ಚೈತ್ರ. ಖಡಾಖಂಡಿತವಾಗಿ ಅವಳು “ನನ್ನ ದುಡ್ಡು ತಂದುಕೊಡು, ಇಲ್ಲವಾದರೆ ನನ್ನ ಪ್ರಕಾರ ಕೆಲಸ ಮಾಡಿಕೊಂಡು ಹೋಗು ” ಎಂದು ಹೇಳುವುದನ್ನು ಕೇಳಿ, ತಕ್ಷಣ ಶರತ್ ಗೆ ಫೋನ್ ಹಚ್ಚಿದಳು ” ಹೊರಗಡೆ ಎಲ್ಲಾದರೂ ಸಿಗುತ್ತೀರಾ, ಮನೆಯಲ್ಲಿ ಮಾತನಾಡಲು ಆಗುವುದಿಲ್ಲ”

Follow us on

Most Read Stories

Click on your DTH Provider to Add TV9 Kannada