ಟ್ರೋಲ್ ಮಾಡಿದ್ರೆ ಹುಷಾರ್! ಟ್ರೋಲಿಗರಿಗೆ ಭಾರತದ ಕಾನೂನಿನಲ್ಲಿ ಏನಿದೆ ಶಿಕ್ಷೆ?
ಸಾಮಾಜಿಕ ಮಾಧ್ಯಮ, ಸಂಪರ್ಕದ ಸಾಧನವೆಂದು ಹೇಳಲಾಗುತ್ತದೆ. ಆದರೆ, ಇದು ಇಂದು ಟ್ರೋಲಿಂಗ್ನಿಂದ ತುಂಬಿ ಹೋಗಿದೆ. ಇನ್ಸ್ಟಾಗ್ರಾಮ್ನಲ್ಲಿ ಟ್ರೋಲಿಂಗ್ಗೆಂದೇ ಲೆಕ್ಕವಿಲ್ಲದಷ್ಟು ಆಕೌಂಟ್ ಹುಟ್ಟುಕೊಂಡಿವೆ. ಇವುಗಳನ್ನು ತಡೆಗಟ್ಟುವುದೇ ದೊಡ್ಡ ಸವಾಲಾಗಿದೆ. ಈ ಆನ್‌ಲೈನ್ ಟ್ರೋಲ್‌ಗಳನ್ನು ನಿಭಾಯಿಸಲು ನಿಮಗೆ ಸಹಾಯ ಮಾಡುವ ಕೆಲವು ಕಾನೂನುಗಳ ಕುರಿತ ಮಾಹಿತಿ ಇಲ್ಲಿವೆ.
ಇಂದಿನ ಆಧುನಿಕ ಸಮಾಜವು ಡಿಜಿಟಲ್ ಕ್ರಾಂತಿಯನ್ನು ತನಗೆ ಬೇಕಾದಂತೆ ಅನುಭವಿಸುತ್ತಿದೆ. ವಿಶೇಷವಾಗಿ ಕೊರೊನಾ ನಂತರದ ಕಾಲದಲ್ಲಿ ಸ್ಮಾರ್ಟ್‌ಫೋನ್‌ಗಳು ಮತ್ತು ಸಾಮಾಜಿಕ ಮಾಧ್ಯಮ ಬಳಕೆ ಹದಿಹರೆಯದವರಲ್ಲಿ ಗಣನೀಯವಾಗಿ ಹೆಚ್ಚಾಗಿದೆ. ಇದರ ಜೊತೆಗೆ, ಬೆದರಿಸುವಿಕೆಯು ಆನ್‌ಲೈನ್ ಟ್ರೋಲಿಂಗ್‌ನ ರೂಪವನ್ನು ಪಡೆದುಕೊಂಡಿದ್ದು, ಇದು ಹದಿಹರೆಯದವರ ಮಾನಸಿಕ ಆರೋಗ್ಯದ ಮೇಲೂ ಪರಿಣಾಮ ಬೀರುತ್ತಿದೆ. ಟ್ರೋಲಿಂಗ್ ಎನ್ನುವುದು ಉದ್ದೇಶಪೂರ್ವಕವಾಗಿ ಪ್ರಚೋದಿಸುವ ಅಥವಾ ನಕಾರಾತ್ಮಕ ಪ್ರತಿಕ್ರಿಯೆಗಳನ್ನು ಹೊರಹೊಮ್ಮಿಸುವ ಆನ್‌ಲೈನ್ ಕ್ರಿಯೆಯಾಗಿದೆ. ಟ್ರೋಲಿಂಗ್ನಿಂದಲೇ ಇಂದು ಅನೇಕ ಜನರು ಜೀವನಸಾಗಿಸುತ್ತಿದ್ದರೆ, ಇನ್ನೂ ಕೆಲವರು ಜೀವವನ್ನೇ ಕಳೆದುಕೊಂಡಿದ್ದಾರೆ. ಹಾಗಾದರೆ, ಈ ಟ್ರೋಲ್ ಅನ್ನು ತಡೆಗಟ್ಟುವುದು ಹೇಗೆ?, ಇದಕ್ಕೆ ಭಾರತದ ಕಾನೂನಿನಲ್ಲಿ ಶಿಕ್ಷೆ ಇಲ್ಲವೇ?. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ.
ಇತ್ತೀಚೆಗಷ್ಟೇ ನಮ್ಮ ದೇಶದಲ್ಲಿ ಒಂದು ಘಟನೆ ನಡೆಯಿತು. ಆಂಧ್ರಪ್ರದೇಶದಲ್ಲಿ ಗೀತಾಂಜಲಿ ಎಂಬ ಮಹಿಳೆ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಸರ್ಕಾರದ ಯೋಜನೆಗಳಿಂದ ತನಗೆ ಹೇಗೆ ಲಾಭವಾಗಿದೆ ಎಂಬುದರ ಕುರಿತು ಮಾತನಾಡಿದ್ದರು. ಈ ಯೋಜನೆಗಳಿಂದ ತಮ್ಮ ಕುಟುಂಬಕ್ಕೆ ಎಷ್ಟು ಲಾಭವಾಗಿದೆ ಮತ್ತು ಭವಿಷ್ಯದಲ್ಲಿ ಅವರ ಮಕ್ಕಳಿಗೂ ಸರ್ಕಾರಿ ಶಿಕ್ಷಣ ವ್ಯವಸ್ಥೆಯಿಂದ ಎಷ್ಟು ಪ್ರಯೋಜನವಾಗಲಿದೆ ಎಂಬ ಮಾಹಿತಿಯನ್ನು ಹಂಚಿಕೊಂಡಿದ್ದರು. ಆದರೆ ಕೆಲವು ಜನರು ಇವರ ಅಭಿಪ್ರಾಯವನ್ನು ಸಾಮಾಜಿಕ ಮಾಧ್ಯಮದಲ್ಲಿ ಟ್ರೋಲ್ ಮಾಡಿದ್ದರು. ಅನೇಕರು ಕೆಟ್ಟದಾಗಿ ಕಾಮೆಂಟ್ ಮಾಡಿದ್ದರು. ಇದರಿಂದ ಮಾನಸಿಕ ಖಿನ್ನತೆಗೆ ಒಳಗಾದ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರಿಗೆ ಇಬ್ಬರು ಚಿಕ್ಕ ಮಕ್ಕಳು ಕೂಡ ಇದ್ದರು.
ಈ ಘಟನೆಗೆ ಕಾರಣ ‘ಸೋಷಿಯಲ್ ಟ್ರೋಲಿಂಗ್’. ಈಗಂತು ಸಿನಿಮಾ, ರಾಜಕೀಯಗಳ ವಿಚಾರದಲ್ಲಿ ಟ್ರೋಲ್ ಹೆಚ್ಚಾಗುತ್ತಿದೆ. ಯಾವುದೇ ನಟ ಅಥವಾ ನಟಿ ಎಲ್ಲೇ ಹೋದರೂ, ಏನೇ ಮಾತನಾಡಿದರೂ ಬಹಳ ಎಚ್ಚರಿಕೆಯಿಂದ ಇರಬೇಕು. ಒಂದು ಸಮುದಾಯ ತಪ್ಪನ್ನು ಹುಡುಕಿ, ಅಥವಾ ಕೆಟ್ಟದನ್ನು ಸೃಷ್ಟಿಸಿ ಟ್ರೋಲ್ ಮಾಡಲು ಕಾದುಕುಳಿತಿರುತ್ತದೆ. ರಾಜಕೀಯದ ವಿಷಯಕ್ಕೆ ಬಂದರೆ ಒಂದು ಪಕ್ಷ, ವ್ಯಕ್ತಿ, ನಾಯಕ ಏನಾದರು ತಪ್ಪಿ ಮಾತಾಡಿದರೆ, ತಕ್ಷಣವೇ ವಿರೋಧ ಪಕ್ಷಗಳ ಜನರು ಸಾಮಾಜಿಕ ಜಾಲತಾಣಗಳಲ್ಲಿ ಟೀಕಿಸುತ್ತಾರೆ. ಆದರೆ, ಟ್ರೋಲಿಂಗ್ನಲ್ಲಿ ಮಹಿಳೆಯರನ್ನು ಅವಮಾನಿಸುವುದು, ಕೀಳಾಗಿ ಮಾತನಾಡುವುದು, ಅವಾಚ್ಯವಾಗಿ ಮಾತನಾಡುವುದು ನೋವಿನ ಸಂಗತಿ.
ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಮಾಡುವುದು ರಾಜಕೀಯ-ಸಿನಿಮಾ ವಲಯಗಳ ಬಗ್ಗೆ ಮಾತ್ರವಲ್ಲದೆ, ಸಾಮಾನ್ಯ ಜನರು ಕೂಡ ಇದಕ್ಕೆ ಬಲಿಯಾಗುತ್ತಿದ್ದಾರೆ. ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ಹುಡುಗಿಯರು ಮಾತನಾಡುವ ಇಂಗ್ಲಿಷ್ ಬಗ್ಗೆ ಸಾಕಷ್ಟು ಟ್ರೋಲ್‌ಗಳು ಬಂದಿವೆ. ಇಂತಹ ಮಕ್ಕಳು ಮಾತನಾಡುವ ಇಂಗ್ಲಿಷಿನ ಮೇಲೆ ವ್ಯಂಗ್ಯಭರಿತ ಮಾತುಗಳನ್ನು ಸೇರಿಸಿ ಟ್ರೋಲ್ ಮಾಡುವುದು ನಿಜಕ್ಕೂ ನಾಚಿಕೆಗೇಡಿನ ಸಂಗತಿ. ಕರ್ನಾಟದಲ್ಲಿ ಕೂಡ ಟ್ರೋಲಿಗರ ಸಂಖ್ಯೆ ಕಡಿಮೆಯೇನಿಲ್ಲ. ಟ್ರೋಲ್ಗೆ ತುತ್ತಾದವರು ನಮ್ಮ ರಾಜ್ಯದಲ್ಲಿಯೂ ಅನೇಕರಿದ್ದಾರೆ. ಕೆಲವರ ಖಾಸಗಿ ವಿಡಿಯೋಗಳನ್ನು ಬಳಸಿ ಅದನ್ನು ಟ್ರೋಲ್ ಮಾಡುವವರೂ ಇದ್ದಾರೆ.
”ಕೇವಲ ಟ್ರೋಲ್ನಿಂದಲೇ ಅವಮಾನಕ್ಕೊಳಗಾಗಿ ಆತ್ಮಹತ್ಯೆ ಮಾಡಿಕೊಳ್ಳುವ ಸಂಖ್ಯೆ ಹೆಚ್ಚಾಗಿದೆ. ಸಾಮಾಜಿಕ ಮಾಧ್ಯಮ ದೈತ್ಯರಾದ ಫೇಸ್ಬುಕ್, ಇನ್ಸ್ಟಾಗ್ರಾಮ್, ಯೂಟ್ಯೂಬ್ ಮತ್ತು ಎಕ್ಸ್ (ಟ್ವಿಟ್ಟರ್) ಟ್ರೋಲ್‌ಗಳನ್ನು ಗುರುತಿಸಲು ಮತ್ತು ನಿಯಂತ್ರಿಸಲು ವಿಶೇಷ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಬೇಕಾಗಿದೆ. ಅಲ್ಲದೆ ಸರ್ಕಾರ ತನ್ನ ಐಟಿ ಇಲಾಖೆಯ ಮೂಲಕ ಸೂಕ್ತ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಬೇಕು. ಅಂತಹವರಿಗೆ ದೊಡ್ಡ ಮಟ್ಟದ ದಂಡ ವಿಧಿಸಬೇಕು,” ಎಂದು ಕರ್ನಾಟಕದ ಪ್ರಸಿದ್ಧ ಸೋಷಿಯಲ್ ಮೀಡಿಯಾ ಸ್ಟಾರ್ ಟಿವಿ9 ಪ್ರೀಮಿಯಂ ನ್ಯೂಸ್ ಆ್ಯಪ್ಗೆ ಹೇಳಿದರು.
ಈ ಟ್ರೋಲಿಂಗ್ನಲ್ಲಿ ಭಾಗವಹಿಸುವವರಲ್ಲಿ ಹೆಚ್ಚಿನವರು ಯುವಕರೇ ಆಗಿದ್ದಾರೆ. ಅಭಿವ್ಯಕ್ತಿ ಸ್ವಾತಂತ್ರ್ಯವಿದೆ ಎಂದು ಇತರರ ಭಾವನೆಗಳಿಗೆ ಧಕ್ಕೆಯಾಗುವಂತೆ ವರ್ತಿಸುವುದು ಸರಿಯಲ್ಲ. ಇಂತಹ ನಡವಳಿಕೆಯು ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿರುವ ಯುವಕರ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.
ಆನ್‌ಲೈನ್ ಹಿಂಸೆಯಿಂದ ಆತ್ಮಹತ್ಯೆ ಸಂಖ್ಯೆ ಹೆಚ್ಚಳ:
ಪ್ರತಿ ವರ್ಷ 700000 ಕ್ಕೂ ಹೆಚ್ಚು ಜನರು ಆತ್ಮಹತ್ಯೆಯಿಂದ ಸಾಯುತ್ತಾರೆ. ಹದಿಹರೆಯದವರಲ್ಲಿ ಆತ್ಮಹತ್ಯೆಗಳ ವ್ಯಾಪಕ ಏರಿಕೆಗೆ ಟ್ರೋಲಿಂಗ್ ಮತ್ತು ಆನ್ಲೈನ್ನಿಂದ ಉಂಟಾಗುವ ಕೆಟ್ಟ ಅನುಭವ ಕಾರಣ ಎನ್ನಲಾಗಿದೆ. ದೆಹಲಿಯ ಕೌನ್ಸಿಲರ್ ಮತ್ತು ಫ್ಯಾಮಿಲಿ ಥೆರಪಿಸ್ಟ್ ಅರ್ಚನಾ ಸಿಂಘಾಲ್ ಅವರು ಹದಿಹರೆಯದವರ ಮಾನಸಿಕ ಆರೋಗ್ಯದ ಮೇಲೆ ಟ್ರೋಲಿಂಗ್‌ನ ಪ್ರಭಾವ ಮತ್ತು ಸಾಮಾಜಿಕ ಮಾಧ್ಯಮದ ವ್ಯಾಪಕ ಪ್ರಭಾವದ ಕುರಿತು ಮಾತನಾಡಿದ್ದಾರೆ.
“ಇಂದಿನ ದಿನಗಳಲ್ಲಿ ಅವಹೇಳನಕಾರಿ ಕಾಮೆಂಟ್‌ಗಳು, ಸೈಬರ್‌ಬುಲ್ಲಿಂಗ್, ಟ್ರೋಲಿಂಗ್ ಆತಂಕದ ವಾತಾವರಣವನ್ನು ಸೃಷ್ಟಿಸುತ್ತಿದೆ. ಇದರಿಂದ ಹದಿಹರೆಯದವರು ಖಿನ್ನತೆಗೆ ಒಳಗಾಗುತ್ತಿದ್ದಾರೆ, ಒತ್ತಡ ಅನುಭವಿಸುತ್ತಿದ್ದಾರೆ. ಟ್ರೋಲಿಂಗ್ ಯುವಕರನ್ನು ಹಾನಿಕಾರಕದೆಡೆಗೆ ಕೊಂಡೊಯ್ಯುತ್ತಿದೆ. ತನ್ನ ಭಾವನೆಯನ್ನು ಹಿಡಿದಿಟ್ಟುಕೊಳ್ಳಲಾಗದೆ ಕೆಲವರು ಆ ಸಂದರ್ಭಗಳಲ್ಲಿ ಆತ್ಮಹತ್ಯೆಯ ಆಲೋಚನೆ ಮಾಡುತ್ತಾರೆ,” ಎಂದು ಅರ್ಚನಾ ಸಿಂಘಾಲ್ ಹೇಳಿದ್ದಾರೆ.
ಸಾಮಾಜಿಕ ಮಾಧ್ಯಮ, ಸಂಪರ್ಕದ ಸಾಧನವೆಂದು ಹೇಳಲಾಗುತ್ತದೆ. ಆದರೆ, ಇದು ಇಂದು ಟ್ರೋಲಿಂಗ್ನಿಂದ ತುಂಬಿ ಹೋಗಿದೆ. ಇನ್ಸ್ಟಾಗ್ರಾಮ್ನಲ್ಲಿ ಟ್ರೋಲಿಂಗ್ಗೆಂದೇ ಲೆಕ್ಕವಿಲ್ಲದಷ್ಟು ಆಕೌಂಟ್ಗಳು ಹುಟ್ಟುಕೊಂಡಿದೆ. ಇವುಗಳನ್ನು ತಡೆಗಟ್ಟುವುದೇ ದೊಡ್ಡ ಸವಾಲಾಗಿದೆ.
ಭಾರತದಲ್ಲಿ ಟ್ರೋಲಿಂಗ್ ವಿರುದ್ಧ ಕಾನೂನುಗಳಿವೆಯೇ?
ಭಾರತದಲ್ಲಿ ಆನ್‌ಲೈನ್ ಮೂಲಕ ಬೆದರಿಸುವುದು-ಟ್ರೋಲ್ ಮಾಡುವುದು ತುಂಬಾ ಸಾಮಾನ್ಯವಾಗಿದೆ. ಇದು ಪ್ರಸಿದ್ಧ ವ್ಯಕ್ತಿಯಿಂದ ಹಿಡಿದು ನಿಮಗೂ ಸಹ ಅನುಭವ ಆಗಿರಬಹುದು. ಟ್ರೋಲಿಂಗ್ ತಡೆಗಟ್ಟಲು ಭಾರತದಲ್ಲಿ ಯಾವುದೇ ನಿರ್ದಿಷ್ಟವಾದ ಕಾನೂನುಗಳಿಲ್ಲ. ವಾಸ್ತವವಾಗಿ, ವಾಕ್ ಸ್ವಾತಂತ್ರ್ಯದ ಹಕ್ಕನ್ನು ನಿಷೇಧಿಸುವ ಹಾಗಿಲ್ಲ. ಆದರೆ, ಈ ಆನ್‌ಲೈನ್ ಟ್ರೋಲ್ನಿಂದ ಪಾರಾಗಲು ನಿಮಗೆ ಸಹಾಯ ಮಾಡುವ ಕೆಲವು ಕಾನೂನುಗಳು ಇಲ್ಲಿವೆ.
ಆನ್‌ಲೈನ್ ಸ್ಟಾಕಿಂಗ್: ಸೆಕ್ಷನ್ 354D IPC ಅಡಿಯಲ್ಲಿ, ಮಹಿಳೆಯನ್ನು ಇಂಟರ್ನೆಟ್ ಅಥವಾ ಯಾವುದೇ ಎಲೆಕ್ಟ್ರಾನಿಕ್ ಸಂವಹನ ವೇದಿಕೆಯ ಮೂಲಕ ಮೇಲ್ವಿಚಾರಣೆ ಮಾಡುವುದು ಮತ್ತು ಮಹಿಳೆಯ ವಿರೋಧದ ನಡುವೆಯೂ ಸಂವಹನ ಪ್ರಾರಂಭಿಸುವ ಪ್ರಯತ್ನವು ಶಿಕ್ಷಾರ್ಹವಾಗಿದೆ. ಅಂತಹ ಅಪರಾಧಕ್ಕೆ 3-5 ವರ್ಷಗಳವರೆಗೆ ಕಡ್ಡಾಯ ದಂಡದೊಂದಿಗೆ ಜೈಲಿಗೆ ಕಳುಹಿಸುವ ಕಾನೂನಿದೆ.
ಮಾನನಷ್ಟ: ಯಾರಾದರೂ ನಿಮ್ಮ ಬಗ್ಗೆ ಸುಳ್ಳು ಹೇಳಿಕೆಗಳನ್ನು ನೀಡಿದರೆ ಅಥವಾ ನಿಮ್ಮ ಖ್ಯಾತಿಗೆ ಧಕ್ಕೆ ತರುವ ಉದ್ದೇಶದಿಂದ ಏನನ್ನಾದರೂ ಪ್ರಕಟಿಸಿದರೆ, ಅವರ ಮೇಲೆ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 499 ರ ಅಡಿಯಲ್ಲಿ ಮಾನನಷ್ಟ ಮೊಕದ್ದಮೆ ಹೂಡಬಹುದು. ಈ ಅಪರಾಧವು ಸಾಮಾಜಿಕ ಮಾಧ್ಯಮದಲ್ಲಿ ಮಾಡಿದ ಕಾಮೆಂಟ್‌ಗಳು ಮತ್ತು ಸಾರ್ವಜನಿಕ ವೀಕ್ಷಣೆಗಾಗಿ ಪೋಸ್ಟ್ ಮಾಡಲಾದ ಅಶ್ಲೀಲ ಛಾಯಾಚಿತ್ರಗಳು ಅಥವಾ ವೀಡಿಯೊಗಳನ್ನು ಸಹ ಒಳಗೊಂಡಿದೆ. ಇದರಿಂದ 2 ವರ್ಷಗಳ ಕಾಲ ಜೈಲು ಪಾಲಾಗಬಹುದು.
ಲೈಂಗಿಕತೆಗೆ ಸಂಬಂಧಿಸಿದ ವಿಷಯ: ಎಲೆಕ್ಟ್ರಾನಿಕ್ ಮಾಧ್ಯಮದಲ್ಲಿ ಅಶ್ಲೀಲ ವಿಷಯವನ್ನು ಪ್ರಕಟಿಸುವುದು ಅಥವಾ ಕಳುಹಿಸುವುದು ಐಟಿ ಕಾಯಿದೆಯ ವಿರುದ್ಧವಾಗಿದೆ. ಹೀಗೆ ಮಾಡಿದರೆ ರೂ. 10 ಲಕ್ಷ ದಂಡದೊಂದಿಗೆ 5-7 ವರ್ಷಗಳವರೆಗೆ ಜೈಲಿಗೆ ಹಾಕಬಹುದು.
ಕ್ರಿಮಿನಲ್ ಬೆದರಿಕೆ: ಸೆಕ್ಷನ್ 503 IPC ಅಡಿಯಲ್ಲಿ ಒಬ್ಬ ವ್ಯಕ್ತಿಯು ಮಹಿಳೆಯ ಪ್ರತಿಷ್ಠೆಗೆ ಹಾನಿ ಮಾಡುವ ಉದ್ದೇಶವನ್ನು ಹೊಂದಿದ್ದರೆ ಅಥವಾ ಬೆದರಿಕೆ ಹಾಕಿದರೆ ಶಿಕ್ಷೆ ವಿಧಿಸಬಹುದು. ಅಂತೆಯೇ, ಸೆಕ್ಷನ್ 507 ಐಪಿಸಿ ಅನಾಮಧೇಯ ಸಂವಹನದ ಮೂಲಕ ಮಹಿಳೆಗೆ ಬೆದರಿಕೆ ಹಾಕುವ ವ್ಯಕ್ತಿಯನ್ನು ಅಪರಾಧಿ ಎಂದು ಪರಿಗಣಿಸಲಾಗುತ್ತದೆ.
ಐಟಿ ಕಾಯಿದೆಯ ಸೆಕ್ಷನ್ 66 ಇ: ವ್ಯಕ್ತಿಯ ಖಾಸಗಿತನದ ಉಲ್ಲಂಘನೆಗೆ ಕಾರಣವಾಗುವ ಮುದ್ರಣ ಅಥವಾ ವೀಡಿಯೊ ರೂಪದಲ್ಲಿ ವ್ಯಕ್ತಿಯ ದೃಶ್ಯ ಚಿತ್ರವನ್ನು ಪ್ರಕಟಿಸಿದರೆ ಮೂರು ವರ್ಷಗಳ ಜೈಲು ಶಿಕ್ಷೆ ಅಥವಾ 2 ಲಕ್ಷದಿಂದ 10 ಲಕ್ಷದವರೆಗೆ ದಂಡ ವಿಧಿಸಲಾಗುತ್ತದೆ.
ಭಾರತದಲ್ಲಿ ಟ್ರೋಲಿಂಗ್ ವಿರುದ್ಧ ಲಿಂಗ ತಟಸ್ಥ ಕಾನೂನುಗಳ ಕೊರತೆ
ಭಾರತದಲ್ಲಿ ಟ್ರೋಲಿಂಗ್ ವಿರುದ್ಧದ ಹೆಚ್ಚಿನ ಕಾನೂನುಗಳು ಮಹಿಳೆಯರಿಗಾಗಿವೆ. ಮಹಿಳೆಯರ ಸುರಕ್ಷತೆಯು ಪ್ರಧಾನ ಕಾಳಜಿಯಾಗಿ ಉಳಿಯಬೇಕಾದರೂ, ಲಿಂಗ-ತಟಸ್ಥ ಕಾನೂನುಗಳ ಕೊರತೆಯು ಸಾಮಾಜಿಕ ಮಾಧ್ಯಮದಲ್ಲಿ ಟ್ರೋಲ್ ಮಾಡುವವರಿಗೆ ಲೋಪದೋಷವಾಗಿ ಪರಿಣಮಿಸಬಹುದು.
ಭಾರತದಲ್ಲಿ ಟ್ರೋಲಿಂಗ್ ವಿರುದ್ಧ ಸರಿಯಾದ ಕಾನೂನುಗಳ ಕೊರತೆಯು ಭವಿಷ್ಯದಲ್ಲಿ ದೊಡ್ಡ ನಷ್ಟಕ್ಕೆ ಕಾರಣವಾಗಬಹುದು. ಆದಾಗ್ಯೂ, ಮೇಲೆ ಪಟ್ಟಿ ಮಾಡಲಾದ ಕಾನೂನುಗಳ ಪ್ರಯೋಜನವನ್ನು ಪಡೆದುಕೊಂಡು ನೀವು ಸುರಕ್ಷಿತವಾಗಿರಬಹುದು. ಇದಲ್ಲದೆ, ಸಂಸತ್ತಿನಲ್ಲಿ ಸಾಮಾಜಿಕ ಮಾಧ್ಯಮ ಟ್ರೋಲಿಂಗ್ ಬಗ್ಗೆ ಚರ್ಚೆಗಳು ನಡೆದಿವೆ ಮತ್ತು ಸರಿಯಾದ ಕಾನೂನು ತರುವ ಭರವಸೆ ನೀಡಿದೆ.
ಇಂದು ಪ್ರತಿಯೊಬ್ಬ ಪ್ರಜೆಗೂ ನಿಸ್ಸಂದೇಹವಾಗಿ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕಿದೆ. ಆನ್‌ಲೈನ್ ಖಾತೆಯನ್ನು ರಚಿಸುವ ಪ್ರತಿಯೊಬ್ಬ ವ್ಯಕ್ತಿಯು ಅದರಲ್ಲಿ ಪೋಸ್ಟ್ ಮಾಡುವ ಹಕ್ಕನ್ನು ಹೊಂದಿದ್ದು, ಅವನ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕನ್ನು ಚಲಾಯಿಸಲು ಅನುವು ಮಾಡಿಕೊಡುತ್ತದೆ. ಆದಾಗ್ಯೂ, ಈ ಇಂಟರ್ನೆಟ್ ಬಳಕೆದಾರರ ಹಕ್ಕು ಸಂಪೂರ್ಣವಾಗಿರಬಾರದು ಮತ್ತು ಮಿತಿಗಳಿಗೆ ಒಳಪಟ್ಟಿರಬೇಕು. ಸಾಮಾಜಿಕ ಮಾಧ್ಯಮ ಖಾತೆಯನ್ನು ರಚಿಸುವ ವ್ಯಕ್ತಿಯು ಜವಾಬ್ದಾರಿಯಿಂದ ವರ್ತಿಸಬೇಕು ಮತ್ತು ಕೆಲವು ಮಾನದಂಡಗಳನ್ನು ಪಾಲಿಸಬೇಕು.