Mahalakshmi: ಇಂದು ಶುಭ ಶುಕ್ರವಾರ -ಮಾತೆ ಮಹಾಲಕ್ಷ್ಮಿ ಕುರಿತು ಕೆಲ ವಿಸ್ಮಯಕಾರಿ ‌ಮಾಹಿತಿಗಳು ಇಲ್ಲಿವೆ

ಅಷ್ಟ ಲಕ್ಷ್ಮಿ ಅಂದರೆ ನಮಗೆ ಹಣವನ್ನು ಪಡೆಯಲಿಕ್ಕೆ ಇರುವ ಬೇರೆ ಬೇರೆ ಮೂಲಗಳನ್ನು ಪ್ರತಿನಿಧಿಸುವ ಲಕ್ಷ್ಮಿಯ ಎಂಟು ವಿವಿಧ ರೂಪಗಳು. ಮಹಾಲಕ್ಷ್ಮಿ ಅಂದರೆ 18 ರೀತಿಯ ಸಂಪತ್ತಿಗೆ ಒಡತಿ ಅಂತ ಅರ್ಥ. ಆ 18ರಲ್ಲಿ 8 ಸಂಪತ್ತುಗಳನ್ನು ಅಷ್ಟ ಸಿದ್ಧಿಗಳು ಅಂತಾರೆ; ಒಂಬತ್ತನೆಯದು ಜ್ಞಾನ ಮತ್ತು ಹತ್ತನೆಯದು ಯಾರಲ್ಲೂ ಭೇದ ಭಾವ ಮಾಡದೇ ಜಗತ್ತಿಗೆ ಜ್ಞಾನವನ್ನು ಹಂಚುವುದು.

Mahalakshmi: ಇಂದು ಶುಭ ಶುಕ್ರವಾರ -ಮಾತೆ ಮಹಾಲಕ್ಷ್ಮಿ ಕುರಿತು ಕೆಲ ವಿಸ್ಮಯಕಾರಿ ‌ಮಾಹಿತಿಗಳು ಇಲ್ಲಿವೆ
ಇಂದು ಶುಭ ಶುಕ್ರವಾರ: ಮಾತೆ ಮಹಾಲಕ್ಷ್ಮಿ ಕುರಿತು ಅನೇಕ ವಿಸ್ಮಯಕಾರಿ ‌ಮಾಹಿತಿಗಳು ಇಲ್ಲಿವೆ
Follow us
TV9 Web
| Updated By: ಸಾಧು ಶ್ರೀನಾಥ್​

Updated on: Jan 14, 2022 | 6:06 AM

ಲಕ್ಷ್ಮಿಯ ಬಗ್ಗೆ ದೇಶದ ನಾನಾ ಕಡೆ ಯಾವ ಯಾವ ತರಹದ ನಂಬಿಕೆಗಳಿವೆ ಎಂಬುದ ತಿಳಿದುಕೊಳ್ಳೋಣ. ಲಕ್ಷ್ಮೀ ಎನ್ನುವ ಪದ ಸಂಸ್ಕೃತದ “ಲಕ್ಷ್” ಎನ್ನುವ ಪದದಿಂದ ಬಂದಿದೆ; “ಲಕ್ಷ್” ಅಂದ್ರೆ ಗುರಿ ಅಂತ ಅರ್ಥ. ಸಂಸ್ಕೃತದಲ್ಲಿ ಇದರರ್ಥ “ಗಮನಿಸುವುದು” ಅಥವಾ “ಅಂದುಕೊಳ್ಳುವುದು”. ಇದಕ್ಕೆ “ಗುರಿ” ಎನ್ನುವ ಅರ್ಥ ಸಹ ಇದೆ. ಲಕ್ಷ್ಮಿಗೆ ಅನೇಕ ಹೆಸರುಗಳಿವೆ. ಲಕ್ಷ್ಮಿಯ ನೆರಳನ್ನು “ಅಲಕ್ಷ್ಮೀ” ಎಂದು ಕರೆಯುತ್ತಾರೆ. ಬಂಗಾಳದ ಕೆಲವು ಕಡೆ ದೀಪಾವಳಿ ಹಬ್ಬದಲ್ಲಿ “ಅಲಕ್ಷ್ಮಿ”ಗೂ ಪೂಜೆ ಮಾಡುವ ವಾಡಿಕೆ ಇದೆ. ಕೋಲ್ಕತಾದ ಕಾಳಿಘಾಟ್‍ನಲ್ಲಿರುವ ಕಾಳಿಯನ್ನು ದೀಪಾವಳಿ ಸಮಯದಲ್ಲಿ ಮಹಾಲಕ್ಷ್ಮಿ ರೂಪದಲ್ಲಿ ಪೂಜಿಸುತ್ತಾರೆ.

1. ಲಕ್ಷ್ಮಿಗೆ ಇರುವ ನೂರಾರು ಹೆಸರುಗಳೂ ತಾವರೆ ಹೂವಿಂದಾನೇ ಬಂದಿರುವುದು. ನಮ್ಮಲ್ಲಿ ಲಕ್ಷ್ಮಿಗೂ, ತಾವರೆ ಹೂವಿಗೂ ನೇರವಾದ ಹೋಲಿಕೆಗಳನ್ನು ಕೊಡುತ್ತೇವೆ. ಲಕ್ಷ್ಮಿಗೆ ಈ ಹೆಸರುಗಳು ಬಂದಿರುವುದೇ ತಾವರೆ ಹೂವಿನಿಂದ. ಪದ್ಮ, ಕಮಲ ಅಂದರೆ ತಾವರೆ ಹೂವಲ್ಲಿ ನೆಲೆಸಿರುವವಳು. ಪದ್ಮಪ್ರಿಯೆ ಅಂದರೆ ತಾವರೆ ಹೂವನ್ನು ಇಷ್ಟ ಪಡುವವಳು. ಪದ್ಮ ಮಾಲಾಧರಾದೇವಿ ಅಂದರೆ ತಾವರೆ ಹೂವಿನ ಹಾರ ಧರಿಸಿರುವವಳು. ಪದ್ಮಾಕ್ಷಿ ಅಂದರೆ ತಾವರೆಯಂತಹ ಕಣ್ಣುಗಳನ್ನು ಹೊಂದಿರುವವಳು.. ಹೀಗೆ ನಾನಾ ಹಸರುಗಳು ಮೂಲಸ್ವರೂಪದಲ್ಲಿವೆ.

2. ನಮ್ಮಲ್ಲಿ ಹೆಣ್ಣು ಮಕ್ಕಳಿಗೆ ಇಡುವ ಸುಮಾರು ಹೆಸರುಗಳು ಲಕ್ಷ್ಮಿಯದೇ.. ಲಕ್ಷ್ಮಿಗಿರುವ ಇನ್ನೂ ಬೇರೆ ಬೇರೆ ಹೆಸರುಗಳು ಹೀಗಿವೆ. ಮನುಶ್ರೀ, ಚಕ್ರಿಕ, ಕಮಲಿಕ, ಐಶ್ವರ್ಯ, ಲಲಿಮ, ಕಲ್ಯಾಣಿ, ನಂದಿಕ, ರಜುಲ, ವೈಷ್ಣವಿ, ಸಮೃದ್ಧಿ, ನಾರಾಯಣಿ, ಭಾರ್ಗವಿ, ಶ್ರೀದೇವಿ, ಚಂಚಲ, ಜಲಜ, ಮಾಧವಿ, ಸುಜಾತ, ಶ್ರೇಯ, ರಮಾ, ಯಶಸ್ವಿನಿ …

3. ಲಕ್ಷ್ಮಿ ಪೂಜೆಗೆ ತಾವರೆ ಹೂವು, ಶ್ರೀಗಂಧ, ಕುಂಕುಮ, ಎಲೆ-ಅಡಿಕೆ ಇಡಬೇಕು. ತೆಂಗಿನಕಾಯಿ, ಹಣ್ಣುಗಳು, ಬೆಲ್ಲದಲ್ಲಿ ಮಾಡಿದ ಸಿಹಿ ತಿನಿಸು, ಅನ್ನ ಇವು ಲಕ್ಷ್ಮಿಯ ಪೂಜೆಯಲ್ಲಿ ಮಾಡುವ ನೈವೇದ್ಯಗಳು.

4. ಲಕ್ಷ್ಮಿ ಫೋಟೋದಲ್ಲಿ ಲಕ್ಷ್ಮೀ ಕೈಯಿಂದ ನಾಣ್ಯಗಳು ಬೀಳುತ್ತಾ ಇರುತ್ತದಲ್ಲ ಅದು ಸಮೃದ್ಧಿ, ಏಳಿಗೆಯ ಸಂಕೇತ. ಲಕ್ಷ್ಮಿ ಆನೆಗಳು ಲಕ್ಷ್ಮಿಯ ಶಕ್ತಿ. ಕೆಲವು ಪುರಾಣಗಳ ಪ್ರಕಾರ ಲಕ್ಷ್ಮಿ  ಮುಖದಲ್ಲಿ ಸದಾ ನಗು ಇರುತ್ತದೆ. ನಾರಾಯಣನ ಹೊಕ್ಕಳಿಂದ ಬಂದ ಬಳ್ಳಿಯಲ್ಲಿ ಬಿಟ್ಟಿರುವ ತಾವರೆ ಹೂ ಮೇಲೆ ಕುಳಿತಿರುವ ಲಕ್ಷ್ಮಿ, ಮನುಷ್ಯನ ಜೈವಿಕ ಬೆಳವಣಿಗೆಯನ್ನು ಎತ್ತಿಹಿಡಿಯುತ್ತದೆ.

5. ಅಷ್ಟ ಲಕ್ಷ್ಮಿ ಅಂದರೆ ನಮಗೆ ಹಣವನ್ನು ಪಡೆಯಲಿಕ್ಕೆ ಇರುವ ಬೇರೆ ಬೇರೆ ಮೂಲಗಳನ್ನು ಪ್ರತಿನಿಧಿಸುವ ಲಕ್ಷ್ಮಿಯ ಎಂಟು ವಿವಿಧ ರೂಪಗಳು. ಮಹಾಲಕ್ಷ್ಮಿ ಅಂದರೆ 18 ರೀತಿಯ ಸಂಪತ್ತಿಗೆ ಒಡತಿ ಅಂತ ಅರ್ಥ. ಆ 18ರಲ್ಲಿ 8 ಸಂಪತ್ತುಗಳನ್ನು ಅಷ್ಟ ಸಿದ್ಧಿಗಳು ಅಂತಾರೆ; ಒಂಬತ್ತನೆಯದು ಜ್ಞಾನ ಮತ್ತು ಹತ್ತನೆಯದು ಯಾರಲ್ಲೂ ಭೇದ ಭಾವ ಮಾಡದೇ ಜಗತ್ತಿಗೆ ಜ್ಞಾನವನ್ನು ಹಂಚುವುದು.

6. ಅಷ್ಟೇ ಅಲ್ಲದೇ, ಇನ್ನೂ 16 ಸಂಪತ್ತುಗಳನ್ನು ಕೊಡುತ್ತಾಳಂತೆ ಲಕ್ಷ್ಮಿ. ಕೀರ್ತಿ, ಜ್ಞಾನ, ಧೈರ್ಯ, ಶಕ್ತಿ, ಗೆಲುವು, ಒಳ್ಳೆಯ ಮಕ್ಕಳು, ಪರಾಕ್ರಮ, ಚಿನ್ನ, ಹೇರಳವಾದ ಧಾನ್ಯ, ಸಂಪತ್ತು, ಸಂತೋಷ, ಆನಂದ, ಬುದ್ಧಿ, ಅಂದ, ಯಶಸ್ಸು, ಚಿಂತನೆ, ಧ್ಯಾನ ಶಕ್ತಿ, ಒಳ್ಳೆತನ, ಆರೋಗ್ಯ, ಆಯಸ್ಸು.

7. ಲಕ್ಷ್ಮಿಗೆ ಕೋಟ್ಯಂತರ ರೂಪಗಳಿವೆಯಂತೆ. ಅವಳ ದಯೆ ಇಲ್ಲದೇ ಈ ಪ್ರಪಂಚದಲ್ಲಿ ಏನೂ ಇರಲಾರದು ಎನ್ನುತ್ತಾರೆ. ಒಂದೊಂದು ಯುಗದಲ್ಲೂ ಒಂದೊಂದು ಹಿಂದೂ ಗ್ರಂಥದಲ್ಲೂ ಬೇರೆ ಬೇರೆ ಉಲ್ಲೇಖ ಇರುವುದಕ್ಕೆ ಇದೇ ಕಾರಣವಂತೆ! ದುಡ್ಡಿಲ್ಲದೇ ಏನೂ ಇಲ್ಲ ಈ ಜಗತ್ತಲ್ಲಿ. ವೇದಾಂತಿಗಳನ್ನು ಬಿಟ್ಟರೆ ಉಳಿದವರಿಗೆಲ್ಲಾ ಜೀವನದಲ್ಲಿ ತುಂಬಾ ದುಡ್ಡು ಬೇಕೇಬೇಕು. ಸ್ವರ್ಗದಲ್ಲಿರುವ ದೇವೇಂದ್ರನಿಗೂ ಅಷ್ಟೊಂದು ಸಂಪತ್ತು ಸಿಕ್ಕಿದ್ದು ಈ ತಾಯಿ ದಯದಿಂದಲೇ ಅನ್ನುತ್ತವೆ ಪುರಾಣಗಳು.

8. ಮಹಾಲಕ್ಷ್ಮಿಗೆ ಹಲವು ರೂಪಗಳಿವೆ: ಶ್ರೀದೇವಿ, ಭೂದೇವಿ, ನೀಲಾದೇವಿ. ಶ್ರೀದೇವಿ ಎನ್ನುವ ಹೆಸರು. ಅಲೆದಾಡುವ ಸಂಪತ್ತನ್ನು ತೋರುವಂತದ್ದು (ಸಂಸ್ಕೃತದಲ್ಲಿ ಅದನ್ನ ಚಂಚಲ ಅಂತಾರೆ). ಭೂದೇವಿ ಎನ್ನುವ ಹೆಸರು ಅಲೆದಾಡದೇ ಒಂದೆಡೆ ಇರುವ ಸಂಪತ್ತನ್ನು ತೋರುವಂತದ್ದು. ಚಂಚಲವಾಗಿರುವವರ ಹತ್ತಿರ ಲಕ್ಷ್ಮಿ ಇರುವುದಿಲ್ಲ ಎಂಬುದು ನಂಬಿಕೆ.

9. ಲಕ್ಷ್ಮಿಗೆ ಸಂಬಂಧಿಸಿದ 2 ದೊಡ್ಡ ಹಬ್ಬಗಳನ್ನು ನಮ್ಮಲ್ಲಿ ಆಚರಿಸುತ್ತಾರೆ. ಒಂದು ವರಮಹಾಲಕ್ಷ್ಮಿ ಪೂಜೆ, ಇನ್ನೊಂದು ದೀಪಾವಳಿ ಲಕ್ಷ್ಮಿ ಪೂಜೆ.

10. ಶ್ರೀ ಅಂದರೆ ನೆಮ್ಮದಿ-ಸಂತೋಷ ತರುವಂತದ್ದು ಎಂದು ಅರ್ಥ. ಯಾರನ್ನಾದರೂ ಆದರ-ಗೌರವದಿಂದ ಕರೆಯ ಬೇಕಾದರೆ, ಅಥವಾ ಹೆಸರು ಬರೆಯುವಾಗ, ಹೆಸರಿಗೆ ಮೊದಲು ಶ್ರೀ ಎಂದು ಸೇರಿಸುವುದು. ಅದೇ ತರಹ ಹೆಂಗಸರ ಹೆಸರಿಗೆ ಶ್ರೀಮತಿ ಅಂತಾನೂ ಸೇರಿಸುತ್ತಾರೆ.

11. ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ನೆಲೆಸಿರುವ ದೇವಿ ಹೆಸರು ಕರವೀರ ನಿವಾಸಿನಿ ಮಹಾಲಕ್ಷ್ಮಿ.  ಅಂಬಾ ಬಾಯಿ ಎಂದು ಕರೆಯುತ್ತಾರೆ.

12. ಲಕ್ಷ್ಮಿಗೆ ದಿನಾ ಪೂಜೆ ಮಾಡುತ್ತಾರೆ. ಶರದ್ ಋತುವಿನಲ್ಲಿ ವಿಶೇಷ ಪೂಜೆ, ನೈವೇದ್ಯ, ಸಹಸ್ರನಾಮ ಪಾರಾಯಣ ಎಲ್ಲಾ ನಡೆಯುತ್ತದೆ. ಬಂಗಾಳದಲ್ಲಿ ಅಕ್ಟೋಬರ್ ಸಮಯದಲ್ಲಿ ಹುಣ್ಣಿಮೆ ಇದ್ದಾಗ ಲಕ್ಷ್ಮಿ ಪೂಜೆ ಮಾಡುವ ಪದ್ದತಿ ಇದೆ. ಲಕ್ಷ್ಮಿ ವಾಹನ ಗೂಬೆ ಎನ್ನುವ ನಂಬಿಕೆ ಇಲ್ಲಿದೆ.  ನಮ್ಮ ಲೋಕಕ್ಕೆ ಹುಣ್ಣಿಮೆಯ ರಾತ್ರಿ ಬಂದು ನಮ್ಮ ಕತ್ತಲು (ಕಷ್ಟ, ನೋವು, ಕೋಪ, ಸೋಮಾರಿತನ) ಇದನ್ನೆಲ್ಲಾ ತೆಗೆದುಕೊಂಡು ಹೋಗುತ್ತಾಳೆ ಅನ್ನುವ ನಂಬಿಕೆ ಇಲ್ಲಿದೆ. ಗೂಬೆಯನ್ನು ಇಲ್ಲಿ ತೀಕ್ಷ್ಣ ಕಣ್ಣುಳ್ಳ, ವೈಭೋಗದ, ಬುದ್ಧಿವಂತಿಕೆಯ ಸಂಕೇತ ಅಂತ ನೋಡುತ್ತಾರೆ. ಇದೇ ಹಬ್ಬವನ್ನು ಒಡಿಶಾದಲ್ಲಿ ಕುಮಾರ ಪೂರ್ಣಿಮಾ ಅಂತಾರೆ. ಅಲ್ಲಿರುವ ವ್ಯಾಪಾರಿಗಳು ವಿಜೃಂಭಣೆಯಿಂದ ಮಾಡುವ ಹಬ್ಬ ಇದು. ಅಲ್ಲಿ ಆ ದಿನ ಆಸ್ಪೂಚಿ ಅನ್ನುವ ಆಟ ಆಡುವುದು ವಿಶೇಷವಂತೆ!

13. ಲಕ್ಷ್ಮಿಗೆ ಬಹುತೇಕ ಎಲ್ಲ ಫೋಟೋಗಳಲ್ಲೂ ಕೆಂಪು ಬಟ್ಟೆ ಹಾಕಿರುತ್ತಾರೆ. ಇದರ ಅರ್ಥ ನಿರಂತರವಾಗಿ ನಡೆಯುವ ಕ್ರಿಯೆ ಎಂದು. ಚಿನ್ನದ ಒಡವೆಗಳ ಅಲಂಕಾರ ಪ್ರಿಯೆ ಲಕ್ಷ್ಮಿಯು ಬೇಡಿದ ವರವನ್ನು ಈಡೇರಿಸುವ ಗುಣದವಳು.

14. ಲಕ್ಷ್ಮಿಯನ್ನು ಒಲಿಸಿಕೊಳ್ಳಲಿಕ್ಕೆ ಅಷ್ಟೋತ್ತರ, ಸಹಸ್ರನಾಮ ಹಾಡುಗಳನ್ನು ಹೇಳಬೇಕು. ಅದರಲ್ಲಿ ತುಂಬಾ ಮುಖ್ಯವಾದವು ಶ್ರೀ ಮಹಾಲಕ್ಷ್ಮೀ ಅಷ್ಟಕ, ಶ್ರೀ ಲಕ್ಷ್ಮಿ ಸಹಸ್ರನಾಮ ಸ್ತೋತ್ರ, ಶ್ರೀ ವೇದಾಂತ ದೇಸಿಕರ್ ಬರೆದಿರುವ ಶ್ರೀ ಸ್ತುತಿ, ಆದಿ ಶಂಕರಾಚಾರ್ಯರು ಬರೆದಿರುವ ಶ್ರೀ ಕನಕಧಾರಾ ಸ್ತೋತ್ರ, ಯಮುನಾಚಾರ್ಯ  ಶ್ರೀ ಚತು ಶ್ಲೋಕಿ, ಭಗವಾನ್ ಶ್ರೀ ಹರಿ ಸ್ವಾಮೀಜಿ  ಶ್ರೀ ಲಕ್ಷ್ಮಿ ಶ್ಲೋಕ, ಅಗಸ್ತ್ಯರ ಅಗಸ್ತ್ಯ ಲಕ್ಷ್ಮಿ ಸ್ತೋತ್ರ.

15. ಶ್ರೀಮನ್ನಾರಾಯಣನ ಜೊತೆ ಲಕ್ಷ್ಮಿಯನ್ನು ಪೂಜೆ ಮಾಡಿದಾಗ ಸಂಪತ್ತು ಕೊಡುವವಳಷ್ಟೇ ಅಲ್ಲದೇ ನೆಮ್ಮದಿ, ಸಕಲ ಸಿರಿ ಸೌಭಾಗ್ಯ ಕೊಡುವ ಸಿರಿದೇವತೆ ನಮ್ಮ ಮಹಾಲಕ್ಷ್ಮಿ!

ವೇದಗಳಲ್ಲಿ ಕೇಳಿಬರುವ ಶ್ರೀ ಸೂಕ್ತ. ಶ್ರೀ ಸೂಕ್ತದಲ್ಲಿರುವ ಲಕ್ಷ್ಮೀ ಗಾಯತ್ರೀ ಶ್ಲೋಕ ಹೀಗಿದೆ: ಓಂ ಮಹಾಲಕ್ಷ್ಮ್ಯೆ ಚ ವಿದ್ಮಹೇ ಶ್ರೀ ವಿಷ್ಣುಪತ್ನೀ ಚ ಧೀಮಹಿ ತನ್ನೋ ಲಕ್ಷ್ಮೀ ಪ್ರಚೋದಯಾತ್ ಅನ್ನುವ ಮಂತ್ರ ತುಂಬಾ ಜನಪ್ರಿಯ. ಲಕ್ಷ್ಮಿ ಸೋಬಾನೆ ಹಾಡುಗಳು ಎಲ್ಲರ ಮನೆಮಾತಿನ ತರಹ ಹರಡಿದೆ.

ಇನ್ನು ಅತ್ಯಂತ ಜನಪ್ರಿಯ ಶ್ರೀ ಮಹಾಲಕ್ಷ್ಮಿ ಅಷ್ಟಕ ಹೀಗಿದೆ:

ನಮಸ್ತೇಸ್ತು ಮಹಾ ಮಾಯೇ ಶ್ರೀಪೀಠೆ ಸುರಪೂಜಿತೇ | ಶಂಖಚಕ್ರಗಧಾ ಹಸ್ತೇ ಮಹಾಲಕ್ಷ್ಮೀ ನಮೋಸ್ತುತೇ ||1||

ನಮಸ್ತೇ ಗರುಡಾರೂಢೇ ಕೋಲಾಸುರ ಭಯಂಕರಿ | ಸರ್ವ ಪಾಪ ಹರೇ ದೇವೀ ಮಹಾಲಕ್ಷ್ಮೀ ನಮೋಸ್ತುತೇ ||2||

ಸರ್ವಜ್ಞೇ ಸರ್ವವರದೇ ಸರ್ವದುಷ್ಟ ಭಯಂಕರೀ | ಸರ್ವ ದುಃಖ ಹರೇ ದೇವೀ ಮಹಾಲಕ್ಷ್ಮೀ ನಮೋಸ್ತುತೇ ||3||

ಸಿದ್ಧಿ ಬುದ್ಧಿ ಪ್ರದೇ ದೇವಿ ಭುಕ್ತಿ ಮುಕ್ತಿ ಪ್ರದಾಯಿನೀ| ಮಂತ್ರ ಮೂರ್ತೇ ಸದಾದೇವೀ ಮಹಾಲಕ್ಷ್ಮೀ ನಮೋಸ್ತುತೇ ||4||

ಆದ್ಯಂತ ರಹಿತೇ ದೇವಿ ಆದಿಶಕ್ತಿ ಮಹೇಶ್ವರೀ | ಯೋಗಜ್ಞೇ ಯೋಗ ಸಂಭೂತೇ ಮಹಾಲಕ್ಷ್ಮೀ ನಮೋಸ್ತುತೇ ||5||

ಸ್ಥೂಲ ಸೂಕ್ಷ್ಮ ಮಹಾರೌದ್ರೇ ಮಹಾ ಶಕ್ತೀ ಮಹೋಧರೇ | ಮಹಾ ಪಾಪ ಹರೆ ದೇವೀ ಮಹಾಲಕ್ಷ್ಮೀ ನಮೋಸ್ತುತೇ ||6||

ಪದ್ಮಾಸನಸ್ಥಿತೇ ದೇವೀ ಪರಬ್ರಹ್ಮ ಸ್ವರೂಪಿಣೀ | ಪರಮೇಶಿ ಜಗನ್ಮಾತ ಮಹಾಲಕ್ಷ್ಮೀ ನಮೋಸ್ತುತೇ ||7||

ಶ್ವೇತಾಂಬರ ಧರೇ ದೇವೀ ನಾನಾಲಂಕಾರ ಭೂಷಿತೇ | ಜಗತ್ ಸ್ಥಿತೇ ಜಗನ್ಮಾತ ಮಹಾಲಕ್ಷ್ಮೀ ನಮೋಸ್ತುತೇ ||8||

ಮಹಾಲಕ್ಷ್ಮ್ಯಾಷ್ಟಕಂ ಸ್ತೋತ್ರಂ ಯಃ ಪಠೇತ್ ಭಕ್ತಿಮಾನ್ ನರಃ | ಸರ್ವಸಿದ್ಧಿ ಮವಾಪ್ನೋತಿ ರಾಜ್ಯಮ್ ಪ್ರಾಪ್ನೋತಿ ಸರ್ವದಾ ||9|| (ಸಂಗ್ರಹ – ನಿತ್ಯಸತ್ಯ)