ಕೋಪವೇ ದುಃಖಕ್ಕೆ ಮೂಲವಯ್ಯ, ಸುಮ್ಮನೇ ಅದು ಯಾಕೆ ಬೇಕಯ್ಯ!
ನಮ್ಮ ಕೋಪವನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ತುಂಬಾ ಮುಖ್ಯ. ಇಲ್ಲವಾದರೆ ನಾವು ನಮ್ಮ ಜೀವನ ಎಷ್ಟೋ ಉತ್ತಮವಾದ ಸನ್ನಿವೇಶಗಳನ್ನು ಕಳೆದುಕೊಳ್ಳುತ್ತೇವೆ. ಆದರೆ ಎಲ್ಲ ಸನ್ನಿವೇಶಗಳು ಒಂದೇ ತೆರನಾಗಿರುವುದಿಲ್ಲ.
ಕೋಪ ಯಾರಿಗೆ ತಾನೆ ಬರಲ್ಲ ಹೇಳಿ ನೋಡೋಣ? ಉಪ್ಪು, ಹುಳಿ, ಖಾರ ತಿನ್ನುವ ಎಲ್ಲರಿಗೂ ಕೋಪ ಎನ್ನುವುದು ಡೀಫಾಲ್ಟ್ ಆಗಿ ಬಂದೇ ಬಂದಿರುತ್ತೆ. ಕೋಪ ಎನ್ನುವುದು ಒಂದು ನ್ಯಾಚುರಲ್ ಪ್ರೊಸೆಸ್. ಅವಮಾನಕ್ಕೀಡಾದಾಗ, ಆತ್ಮಭಿಮಾನಿಮಾನಕ್ಕೆ ಧಕ್ಕೆ ಬಂದಾಗ, ತನ್ನದಲ್ಲದ್ದನ್ನು ಪಡೆಯಲೇ ಬೇಕು ಎಂದುಕೊಂಡಾಗ ಎಲ್ಲೋ ಮೂಲೆಯಲ್ಲಿ ಬಿದ್ದಿರುವ ಕೋಪವು ಬಂದೇ ಬರುತ್ತದೆ. ಏನನ್ನೂ ಅರಿಯದ ಸಣ್ಣ ಮಗುವನ್ನೇ ನೋಡಿ, ಅದಕ್ಕೆ ಇಷ್ಟವಾದ ಯಾವುದಾದರೂ ವಸ್ತುವನ್ನು ತೆಗೆದುಕೊಂಡರೆ, ಅದ ಸಿಟ್ಟುಕೊಂಡು ತನ್ನದೇ ರೀತಿಯಲ್ಲಿ ಪ್ರತಿಭಟಿಸುತ್ತದೆ. ಇನ್ನು ಎಲ್ಲವನ್ನೂ ತಿಳಿದಿದ್ದೇನೆ ಎನ್ನುವ ಹಮ್ಮಿನಿಂದ ಬೀಗುವ ದೊಡ್ಡವರ ಕಥೆಯನ್ನು ಪ್ರತ್ಯೇಕವಾಗಿ ಹೇಳಬೇಕೆ?
ರಾವಣನ ಕಥೆಯಂತೂ ಗೊತ್ತೇ ಇದೆ. ಆತ್ಮಲಿಂಗವನ್ನು ಪಡೆಯಲಾಗಲಿಲ್ಲ ಎಂದು ಬಾಲಕನ ವೇಷದ ಗಣಪತಿಗೆ ಗುದ್ದಿದ. ಹಾಗೆಯೇ ಕೋಪದಿಂದಲೇ ಗೆದ್ದಿರುವ ಕಥೆಗಳೂ ಬೇಕಾದಷ್ಟು ಇವೆ. ಕೋಪ ಬರುವುದಂತೂ ತಪ್ಪೇನಲ್ಲ ಬಿಡಿ. ಆದರೆ ಕೋಪ ಬಂದಾಗ ನಮ್ಮ ಮಾತು, ನಮ್ಮ ಮನಸ್ಸುಗಳು ಯಾವುದೂ ನಮ್ಮ ನಿಯಂತ್ರಣದಲ್ಲಿ ಇರುವುದಿಲ್ಲ. ಕೆಲವೊಮ್ಮೆ ನಮ್ಮ ಕೋಪ ಬಂದಿರುವ ಕಾರಣಕ್ಕಿಂತಲೂ ಕೋಪದ ಪರಿಣಾಮವೇ ಹೆಚ್ಚಾಗಿರುತ್ತದೆ. ಇದರಿಂದ ಕೋಪಕ್ಕೆ ವ್ಯಾಲ್ಯೂ ಇಲ್ಲದಂತಾಗುವುದು.
ನಮ್ಮ ಕೋಪವನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ತುಂಬಾ ಮುಖ್ಯ. ಇಲ್ಲವಾದರೆ ನಾವು ನಮ್ಮ ಜೀವನ ಎಷ್ಟೋ ಉತ್ತಮವಾದ ಸನ್ನಿವೇಶಗಳನ್ನು ಕಳೆದುಕೊಳ್ಳುತ್ತೇವೆ. ಆದರೆ ಎಲ್ಲ ಸನ್ನಿವೇಶಗಳು ಒಂದೇ ತೆರನಾಗಿರುವುದಿಲ್ಲ. ಕೆಲವೊಮ್ಮೆ ಕೋಪದಿಂದ ಸುಂದರ ಕ್ಷಣಗಳನ್ನು ಕಳೆದುಕೊಳ್ಳುವ ಸಂದರ್ಭವಿರುತ್ತದೆ. ಒಂದು ನಿಮಿಷದ ಕೋಪ ಇಂದು ಗಂಟೆಯ, ಒಂದು ದಿನದ, ಒಂದು ವರ್ಷದ ಮಾತ್ರವಲ್ಲ ಜೀವನ ಪೂರ್ತಿ ಪಡೆದುಕೊಳ್ಳುವ ಸಂತೋಷದಿಂದ ದೂರವಿರಬೇಕಾಗುತ್ತದೆ.
ನಿಮ್ಮ ಕೋಪದಿಂದ ಬೇರೆಯವರ ಮನಸ್ಸಿಗೂ ಅಷ್ಟೇ ಪರಿಣಾಮ ಬೀಳುತ್ತದೆ. ಮಾರ್ಕ್ಟೈನ್ ಹೇಳುತ್ತಾರೆ. ಕೋಪ ಎಂತಹ ಒಂದು ಆ್ಯಸಿಡ್ ಎಂದರೆ, ನೀವು ಯಾರ ಮೇಲೆ ಪ್ರಯೋಗಿಸಲು ಹೊರಟಿದ್ದೀರೋ ಅವರಿಗಿಂತ ಹೆಚ್ಚಾಗಿ ಅದನ್ನು ಹೊಂದಿರುವ ವ್ಯಕ್ತಿಗೇ ಅದು ಹಾನಿಯನ್ನುಂಟು ಮಾಡುತ್ತದೆ ಎಂದು. ಹಾಗಾಗಿ ಕೋಪ ಬಂದಾಗ ನಿಮ್ಮ ದೇಹ ಮತ್ತು ಮನಸ್ಸಿಗೆ ಸ್ವಲ್ಪ ಸಮಯ ನೀಡಿ ವಿಷಯವನ್ನು ಸರಿಯಾಗಿ ಅರಿತುಕೊಳ್ಳಿ. ಅನಂತರ ಅದಕ್ಕೆ ಪ್ರತ್ಯುತ್ತರವನ್ನು ನೀಡಿ. ಈಗಿನ ಕಾರ್ಪೊರೇಟ್ ಯುಗಕ್ಕೆ ತಾಳ್ಮೆ ತುಂಬಾ ಮುಖ್ಯ.
ತಾಳ್ಮೆ ಎಂಬ ಆಯುಧವನ್ನು ಹಿಡಿದರೆ ಯಾರು ತಾನೇ ಏನು ಮಾಡಿಯಾರು? ಹುಲ್ಲುಗಳಿಲ್ಲದ ಸ್ಥಳದಲ್ಲಿ ಬೆಂಕಿ ಬಿದ್ದರೆ ಅದು ತಾನಾಗಿಯೇ ಆರಿಹೋಗುತ್ತದೆ.
ಕ್ಷಮಾಶಸ್ತ್ರಂ ಕರೇ ಯಸ್ಯ ದುರ್ಜನಃ ಕಿಂ ಕರಿಷ್ಯತಿ|
ಅತೃಣೇ ಪತಿತೋ ವಹ್ನಿಃ ಸ್ವಯಮೇವೋಪಶಾಮ್ಯತಿ ||
ಭಗವದ್ಗೀತೆಯ ಸಾಲುಗಳು ಕೋಪದ ಮುಂದಿನ ಹಂತವನ್ನು ತೆರೆದಿಡುತ್ತವೆ
ಕ್ರೋಧಾತ್ ಭವತಿ ಸಮ್ಮೋಹಃ ಸಮ್ಮೋಹಾತ್ ಸ್ಮೃತಿವಿಭ್ರಮಃ |
ಸ್ಮೃತಿಭ್ರಂಶಾತ್ ಬುದ್ಧಿನಾಶಃ ಬುದ್ಧಿನಾಶಾತ್ ಪ್ರಣಶ್ಯತಿ ||
ಕೋಪದಿಂದ ತನ್ನದಲ್ಲದ ವಸ್ತು, ವ್ಯಕ್ತಿಗಳ ಮೇಲೆ ಮೋಹ ಉಂಟಾಗುತ್ತದೆ. ಮೋಹದಿಂದ ತಾನು ಯಾರು, ತನ್ನ ಕರ್ತವ್ಯಗಳೇನು ಎಂಬ ಬಗ್ಗೆ ತಿಳಿವಳಿಕೆ ಇಲ್ಲದೇ ಸ್ಮೃತಿಯು ನಾಶವಾಗುತ್ತದೆ. ಸ್ಮೃತಿಯ ನಾಶದಿಂದ ಬುದ್ಧಿಯೂ ಕೆಟ್ಟು, ಅದರಿಂದ ಜೀವನವನ್ನೇ ಹಾಳುಮಾಡಿಕೊಳ್ಳಬಹುದು.
ನಮ್ಮ ಸಲಹೆ ಇಷ್ಟೇ.. ಕೋಪ ಬಂದಾಗ ಸ್ವಲ್ಪ ಮೈಂಡ್ಗೆ ಬ್ರೇಕ್ ಕೊಡಿ, ಯೋಚಿಸಿ ಉತ್ತರ ಕೊಡಿ. ಆಮೇಲೆ ಲೈಫ್ ಸೂಪರ್ ನೋಡಿ.
-ಲೋಹಿತಶರ್ಮಾ