AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Varamahalakshmi Vrata: ವರಮಹಾಲಕ್ಷ್ಮಿ ಹಬ್ಬ; ಹೆಜ್ಜೆಯ ಮೇಲೊಂದ್ಹೆಜ್ಜೆಯನಿಕ್ಕುತ ಮಹಾಲಕ್ಷ್ಮಿ ಬರುವಳು ಮನೆಗೆ

ಶ್ರಾವಣ ಮಾಸದ ಶುಕ್ಲ ಪಕ್ಷದಲ್ಲಿ ಎರಡು ಶುಕ್ರವಾರಗಳು ಬರುತ್ತವೆ‌. ಮೊದಲನೆಯ ಶುಕ್ರವಾರವು ಮಾಸದ ಆರಂಭದಲ್ಲಿ ಬರುತ್ತದೆ. ಎರಡನೆಯದು ಶುಕ್ಲ ಪಕ್ಷದ ಅಂತ್ಯದಲ್ಲಿ ಬರುವುದು. ಶುಕ್ರವಾರವು ಲಕ್ಷ್ಮಿಗೆ ಪ್ರಿಯವಾದ ವಾರವಾಗಿದೆ. ಹಾಗಾಗಿ ಆ ದಿನ ವ್ರತವನ್ನು ಆಚರಿಸುವುದು ಹಿಂದಿನ ಪದ್ಧತಿ.

Varamahalakshmi Vrata: ವರಮಹಾಲಕ್ಷ್ಮಿ ಹಬ್ಬ; ಹೆಜ್ಜೆಯ ಮೇಲೊಂದ್ಹೆಜ್ಜೆಯನಿಕ್ಕುತ ಮಹಾಲಕ್ಷ್ಮಿ ಬರುವಳು ಮನೆಗೆ
Varalakshmi Vratham
ಲೋಹಿತ ಹೆಬ್ಬಾರ್​, ಇಡುವಾಣಿ
| Edited By: |

Updated on: Aug 14, 2024 | 3:16 PM

Share

ಶ್ರಾವಣ ಮಾಸದ ಪ್ರಮುಖ ಹಬ್ಬಗಳಲ್ಲಿ ವರಮಹಾಲಕ್ಷ್ಮೀ ವ್ರತವೂ ಒಂದು. ಶ್ರಾವಣವು ವಿಷ್ಣುವಿಗೆ ಸಂಬಂಧಿಸಿದ ಮಾಸವಾದ ಕಾರಣ, ವಿಷ್ಣುವಿನ ಪತ್ನಿಯನ್ನೂ ಈ ಮಾಸದಲ್ಲಿ ಆರಾಧಿಸುವುದು ವಿಶೇಷ. ಶ್ರಾವಣ ಮಾಸದ ಶುಕ್ರವಾದಂದು ಆರಾಧನೆ ಮಾಡುತ್ತಾರೆ. ಶುಕ್ರವಾರವು ಲಕ್ಷ್ಮಿಗೆ ಪ್ರಿಯವಾದ ವಾರವಾಗಿದೆ. ಹಾಗಾಗಿ ಆ ದಿನ ವ್ರತವನ್ನು ಆಚರಿಸುವುದು ಹಿಂದಿನ ಪದ್ಧತಿ. ಶ್ರಾವಣ ಮಾಸದಲ್ಲಿ ಬರುವುದು ನಾಲ್ಕು ಶುಕ್ರವಾರಗಳು ಮಾತ್ರ. ಈ ನಾಲ್ಕರಲ್ಲಿ ಶ್ರಾವಣ ಮಾಸದ ಎರಡನೇ ಶುಕ್ರವಾರ ಶ್ರೇಷ್ಠ.

ಯಾಕೆ ಆ ದಿನ ಒಳ್ಳೆಯದು?

ಶ್ರಾವಣ ಮಾಸದ ಶುಕ್ಲ ಪಕ್ಷದಲ್ಲಿ ಎರಡು ಶುಕ್ರವಾರಗಳು ಬರುತ್ತವೆ‌. ಮೊದಲನೆಯ ಶುಕ್ರವಾರವು ಮಾಸದ ಆರಂಭದಲ್ಲಿ ಬರುತ್ತದೆ. ಎರಡನೆಯದು ಶುಕ್ಲ ಪಕ್ಷದ ಅಂತ್ಯದಲ್ಲಿ ಬರುವುದು. ಇದು ವಿಶೇಷ. ಏಕೆಂದರೆ ಸಂಪತ್ತಿನ ಸಮೃದ್ಧಿಗಾಗಿ ಮಾಡುವ ವ್ರತ ಇದು‌. ಅದು ಹೇಗೆ ವೃದ್ಧಿಯಾಗಬೇಕು ಎಂದರೆ ಶುಕ್ಲ ಪಕ್ಷದ ಚಂದ್ರನಂತೆ ವೃದ್ಧಿಯಾಗಬೇಕು.

ಚಾಂದ್ರೀಕಲಾ ಯಥಾ ಶುಕ್ಲ ವರ್ಧತೇ ಸಾ ದಿನೇ ದಿನೇ ತಥಾ ದಯಾ ತೇ ಮಯ್ಯೇವ ವರ್ಧತಾಮಭಿವರ್ಧತಾಮ್ ||

ಚಂದ್ರನ‌ ಕಲೆಯಂತೆ ವೃದ್ಧಿಯಾಗಿ ಹುಣ್ಣಿಮೆಯ ಚಂದ್ರನಂತೆ ಪೂರ್ಣ ಸಂಪತ್ತು ಸಿಗಲಿ ಎನ್ನುವುದು ಆಶಯ. ಚಂದ್ರನ ಬಲವಿರುವ ಕಾಲವೂ ಅದೇ ಆಗಿದೆ.‌ ಚಂದ್ರನು ಮನಃಕಾರಕನಾದ ಕಾರಣ ಮಹಾಲಕ್ಷ್ಮಿಯ ಉಪಾಸನೆಯಿಂದ ಸಂತೋಷವೂ ಪ್ರಾಪ್ತಿಯಾಗಲಿ ಎನ್ನುವುದು.

ಯಾವ ಸಂಪತ್ತು ಸಿಗಬೇಕು?

ಸಂಪತ್ತು ಎಂದಾಕ್ಷಣ ಹಣ, ಒಡವೆ, ಭೂಮಿ, ವಾಹನ ಇಷ್ಟು ಮಾತ್ರ ನೆನಪಾಗುತ್ತದೆ. ಆದರೆ ಅಷ್ಟು ಮಾತ್ರ ಸಂಪತ್ತಲ್ಲ. ವಿದ್ಯೆ, ಉದ್ಯೋಗ, ಬಲ, ನೆಮ್ಮದಿ, ಸಂತೋಷ, ಆರೋಗ್ಯ, ಅಧಿಕಾರ, ಸಮ್ಮಾನ, ಸಜ್ಜನರ ಸಹವಾಸ, ಉಪಚಾರ, ಸಂತಾನ, ಎಲ್ಲವೂ ಸಂಪತ್ತೇ. ಯಾವುದು ಜೀವನಕ್ಕೆ ಬೇಕಾಗಿದ್ದು, ಸಿಗದೇ ಅಪ್ರಾಪ್ತವಾಗಿದೆಯೋ ಅಂತಹುದರ ಪ್ರಾಪ್ತಿಯಾಗುವುದು. ಮಹಾಲಕ್ಷ್ಮಿಯನ್ನು ವಿಧಿವತ್ತಾಗಿ ಆವಾಹಿಸಿ, ಆರಾಧಿಸಿ, ಬಂಧುಗಳನ್ನು, ಅತಿಥಿಗಳನ್ನು, ಸಜ್ಜನರನ್ನು ಆಹ್ವಾನಿಸಿ, ತೃಪ್ತಿಕರವಾಗಿ ಅವರಿಗೆ ಭೋಜನ ಮಾಡಿಸಿದರೆ ಲಕ್ಷ್ಮೀ ಕಟಾಕ್ಷವು ಸದಾ ಇರುವುದು.

ಇದನ್ನೂ ಓದಿ: ರಕ್ಷಾ ಬಂಧನದ ಇತಿಹಾಸ ಹಾಗೂ ರಾಖಿಯ ಮಹತ್ವದ ಬಗ್ಗೆ ಇಲ್ಲಿದೆ ಮಾಹಿತಿ

ರಾತ್ರಿ ಏಕೆ ಲಕ್ಷ್ಮೀ ಪೂಜೆ?

ಹಗಲಿನಲ್ಲಿ ಲಕ್ಷ್ಮೀಪೂಜೆ ಇಲ್ಲ. ರಾತ್ರಿ ಅಥವಾ ಸಂಜೆಯ ಹೊತ್ತಿನಲ್ಲಿ ಇದರ ಆಚರಣೆ ಇರುವುದು. ಸಂಪತ್ತು ಪ್ರದರ್ಶನಕ್ಕೆ ಇರುವುದಲ್ಲ. ಅದು ಜೀವನವು ಚೆನ್ನಾಗಿ ನಡೆಸಲು ಇರುವುದು ಎನ್ನುವುದು ತೋರಿಸುತ್ತದೆ. ಲಕ್ಷ್ಮಿಯು ಯಾರಿಗೂ ಕಾಣದಂತೆ ಬರುತ್ತಾಳೆ, ಯಾರಿಗೂ ಕಾಣದಂತೆ ಯಾವಾಗಲೋ ಹೋಗುತ್ತಾಳೆ. ರಾತ್ರಿ ಅದು ಕಾಣಿಸದು. ಆದರೆ ಸಂಪತ್ತು ಪಡೆದವನು ಅದನ್ನು ತೋರಿಸಿ, ಅಹಂಕಾರ ಪಡುತ್ತಾನೆ. ಲಕ್ಷ್ಮಿಯು ಮತ್ತೆ ಎಂದೋ ಮಾಯವಾಗುತ್ತಾಳೆ. ಹಾಗಾಗಿ ಸಂಪತ್ತಿನ ಆಗಮನದಿಂದ ಹಿಗ್ಗುವುದು, ಗಮನದಿಂದ ಕುಗ್ಗುವುದು ಆಗದೇ ಒಂದೇ ರೀತಿಯಲ್ಲಿ ಇರುವ ಸಂದೇಶವನ್ನು ಆಕೆ ಕೊಡುತ್ತಾಳೆ. ಪುರಂದರ ದಾಸರ ಭಾಗ್ಯದ ಲಕ್ಷ್ಮೀ ಬಾರಮ್ಮ ಹಾಡೂ ಕೂಡ ಲಕ್ಷ್ಮೀ ನೀಡುವ ಸಂದೇಶ ಬಗೆಗೇ ಇರುವುದಾಗಿದೆ. ಲಕ್ಷ್ಮೀನಾರಾಯಣ ಪಠಣವು ಮಂಗಲಕರವಾದುದು.‌ ಲಕ್ಷ್ಮಿಯನ್ನು ನಾರಾಯಣನ್ನು ಏಕಕಾಲಕ್ಕೆ ಅರ್ಚಿಸುವ ಸುವರ್ಣ ಅವಕಾಶ ವರಮಹಾಲಕ್ಷ್ಮೀ ವ್ರತ.

ಮತ್ತಷ್ಟು ಆಧ್ಯಾತ್ಮ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Follow Us
Lohitha Hebbar
Lohitha Hebbar

ವಿದ್ವಾನ್​ ಲೋಹಿತ ಶರ್ಮಾ. ಸಾಗರ ಮೂಲದ ಇಡುವಾಣಿ ಗ್ರಾಮ. ವೇದ ಹಾಗೂ ಸಂಸ್ಕೃತ ಅಧ್ಯಯನ, ಜ್ಯೋತಿಷ್ಯದಲ್ಲಿ ವಿದ್ವತ್ತನ್ನು ಸಂಪಾದಿಸಿರುತ್ತಾರೆ. ಹಸ್ತಪ್ರತಿಶಾಸ್ತ್ರದಲ್ಲಿ ಡಿಪ್ಲೋಮಾ ಮಾಡಿರುತ್ತಾರೆ. ಜ್ಞಾನ-ವಿಜ್ಞಾನ ಅಧ್ಯಯನ ಕೇಂದ್ರ ಬೆಂಗಳೂರಿನಲ್ಲಿ ಸಂಶೋಧಕರಾಗಿ ಮೌಲ್ಯಶಿಕ್ಷಣ ಎನ್ನುವ ಪಠ್ಯವನ್ನು ಒಂದರಿಂದ ಹತ್ತನೇ ತರಗತಿಯ ಮಕ್ಕಳಿಗೆ ರಚಿಸಿದ್ದಾರೆ. ಧರ್ಮಭಾರತೀ, ತ್ರಿವಿಕ್ರಮ ಮುಂತಾದ ಮಾಸಪತ್ರಿಕೆಯಲ್ಲಿ ಸಂಪಾದಕನಾಗಿ ಕಾರ್ಯ ಮಾಡಿರುತ್ತಾರೆ. ಹಿತೋಪದೇಶ, ಸಂತಗೋರಕ್ಷನಾಥ, ಮಹರ್ಷಿ ಶಂಖಲಿಖಿತ ಗ್ರಂಥಗಳನ್ನು ಬರೆದಿದ್ದಾರೆ. ಅನೇಕ ಲೇಖನಗಳು, ಕಥೆಗಳು ದಿನಪತ್ರಿಕೆಗಳಲ್ಲಿ ಪ್ರಕಟವಾಗಿದೆ. ಆಸಕ್ತಿಯ ವಿಷಯ ಸಂಗೀತ, ನಾಟಕ, ಓದು, ಬರಹ, ಚಾರಣ, ಡಿಜಿಟಲ್ ವಿನ್ಯಾಸ. ಸದ್ಯ ಶಿಕ್ಷಕನಾಗಿ ಕಾರ್ಯ.

Read More