Ekadashi 2023: ಪ್ರಥಮ ಏಕಾದಶಿ ವೈಶಿಷ್ಟ್ಯ ಏನು? ಆಚರಣೆ ಕ್ರಮಗಳೇನು? ಇಲ್ಲಿದೆ ನೋಡಿ
ಯಾರು ಪ್ರಥಮ ಏಕಾದಶಿಯನ್ನು ಕ್ರಮಬದ್ಧವಾಗಿ, ಶಾಸ್ತ್ರದಲ್ಲಿನ ಪ್ರಮಾಣದಂತೆ ಮಾಡುತ್ತಾರೋ ಅಂಥವರ ಎಲ್ಲ ಪಾಪಗಳೂ ನಾಶವಾಗುತ್ತವೆ ಎಂಬ ನಂಬಿಕೆಯಿದೆ. ಈ ಪ್ರಥಮ ಏಕಾದಶಿಯನ್ನು ಶಯನೀ ಏಕಾದಶಿ ಅಂತಲೂ ಕರೆಯಲಾಗುತ್ತದೆ. ಆ ಮಹಾವಿಷ್ಣು ಈ ದಿನದಿಂದ ನಾಲ್ಕು ಮಾಸಗಳ ಪರ್ಯಂತ ನಿದ್ದೆಯಲ್ಲಿ ಇರುತ್ತಾನೆ.
ಈ ಬಾರಿ ಜೂನ್ 29, 2023ರ ಗುರುವಾರದಂದು ಪ್ರಥಮ ಏಕಾದಶಿ ಬಂದಿದೆ. ಆಷಾಢ ಮಾಸದ ಶುಕ್ಲ ಪಕ್ಷದ ಏಕಾದಶಿಯನ್ನು ಪ್ರಥಮ ಏಕಾದಶಿ, ಶಯನೀ ಏಕಾದಶಿ, ದೇವಶಯನೀ ಏಕಾದಶಿ, ಪದ್ಮ ಏಕಾದಶಿ ಇತ್ಯಾದಿ ಹೆಸರುಗಳಿಂದ ಕರೆಯಲಾಗುತ್ತದೆ. ಬಹಳ ಮಂದಿ ಪ್ರಥಮ ಏಕಾದಶಿಗೂ ವೈಕುಂಠ ಏಕಾದಶಿಗೂ ಗೊಂದಲ ಮಾಡಿಕೊಳ್ಳುತ್ತಾರೆ. ಆದರೆ ನೆನಪಿರಲಿ, ಪ್ರಥಮ ಏಕಾದಶಿ ಜೂನ್ ಅಥವಾ ಜುಲೈ ತಿಂಗಳಲ್ಲಿ ಆಷಾಢ ಮಾಸದ ಶುಕ್ಲ ಪಕ್ಷದಲ್ಲಿ ಬರುವಂಥದ್ದು. ಇನ್ನು ವೈಕುಂಠ ಏಕಾದಶಿ ಎಂಬುದು ಮಾರ್ಗಶೀರ್ಷ ಮಾಸದ ಶುಕ್ಲ ಪಕ್ಷದ ಏಕಾದಶಿ ಆಗಿರುತ್ತದೆ. ಎಂಥವರಿಂದಲೂ ಆಚರಿಸಬಹುದಾದ ಸರಳವಾದ ಹಾಗೂ ಶ್ರೇಷ್ಠವಾದ ವ್ರತ ಎಂದರೆ ಏಕಾದಶಿ ಎಂಬ ಅಭಿಪ್ರಾಯ ಇದೆ. ಆದ್ದರಿಂದ ‘ನಿರ್ಜಲ ಉಪವಾಸ’ ಮಾಡುವಂಥವರು ಇರುವಂತೆಯೇ ಅಲ್ಪಾಹಾರ, ಲಘು ಉಪಾಹಾರ (ಇದನ್ನು ಅಕ್ಕಿ ಹೊರತುಪಡಿಸಿ ಬೇರೆಯದ್ದರಿಂದ ಮಾಡಿರಬೇಕು), ಹಣ್ಣು- ಹಾಲು ತೆಗೆದುಕೊಳ್ಳುವವರಿದ್ದಾರೆ. ಒಟ್ಟಿನಲ್ಲಿ ಆ ದಿನ ಅನ್ನಾಹಾರ ಸೇವನೆ ಮಾಡುವಂತಿಲ್ಲ. ಈ ವ್ರತಾಚರಣೆಗೆ ಸಂಬಂಧಿಸಿದಂತೆ ಯಾವುದೇ ಜಾತಿಗೆ ಸೀಮಿತ ಆಗಿಲ್ಲ.
ಯಾರು ಪ್ರಥಮ ಏಕಾದಶಿಯನ್ನು ಕ್ರಮಬದ್ಧವಾಗಿ, ಶಾಸ್ತ್ರದಲ್ಲಿನ ಪ್ರಮಾಣದಂತೆ ಮಾಡುತ್ತಾರೋ ಅಂಥವರ ಎಲ್ಲ ಪಾಪಗಳೂ ನಾಶವಾಗುತ್ತವೆ ಎಂಬ ನಂಬಿಕೆಯಿದೆ. ಈ ಪ್ರಥಮ ಏಕಾದಶಿಯನ್ನು ಶಯನೀ ಏಕಾದಶಿ ಅಂತಲೂ ಕರೆಯಲಾಗುತ್ತದೆ. ಆ ಮಹಾವಿಷ್ಣು ಈ ದಿನದಿಂದ ನಾಲ್ಕು ಮಾಸಗಳ ಪರ್ಯಂತ ನಿದ್ದೆಯಲ್ಲಿ ಇರುತ್ತಾನೆ. ಈ ನಾಲ್ಕು ಮಾಸದ ಅವಧಿಯನ್ನು ಚಾತುರ್ಮಾಸ್ಯ ಎಂದು ಕರೆಯಲಾಗುತ್ತದೆ. ಯಾರು ಸನ್ಯಾಸಾಶ್ರಮ ಸ್ವೀಕರಿಸಿರುತ್ತಾರೋ ಅಂಥವರು ಇದನ್ನು ಅಧ್ಯಯನಕ್ಕಾಗಿ ಮೀಸಲಿಡುತ್ತಾರೆ. ಯಾವ ಸ್ಥಳದಲ್ಲಿ ಸನ್ಯಾಸಿಗಳು ನೆಲೆಸಿರುತ್ತಾರೋ ಅಲ್ಲಿಂದ ಬೇರೆಲ್ಲೂ ಹೋಗುವುದಿಲ್ಲ.
ಇನ್ನು ಈ ಚಾತುರ್ಮಾಸ್ಯದಲ್ಲಿ ಆಹಾರ ಕ್ರಮದ ಬಗ್ಗೆ ನಿಯಮಗಳನ್ನು ರೂಪಿಸಲಾಗಿದೆ. ಈ ನಾಲ್ಕು ಮಾಸದಲ್ಲಿ ಪ್ರತಿ ಮಾಸದಲ್ಲಿ ಕೆಲವು ಆಹಾರವನ್ನು ಸೇವಿಸಬಾರದು ಎಂಬ ನಿಬಂಧನೆ ವಿಧಿಸಲಾಗಿದೆ. ಪ್ರಥಮ ಏಕಾದಶಿಯಂದು ಬ್ರಾಹ್ಮಣರ ಉಪ ಪಂಗಡ ಮಾಧ್ವರಲ್ಲಿ ತಪ್ತ ಮುದ್ರಾಧಾರಣೆ ಎಂದು ಮಾಡಲಾಗುತ್ತದೆ. ಶಂಖ- ಚಕ್ರದ ಚಿಹ್ನೆ ಇರುವ ಮುದ್ರೆಯನ್ನು ಬೆಂಕಿಯಲ್ಲಿ ಕಾಯಿಸಿ, ಪುರುಷರಿಗೆ ಕೆಲವು ಮಠಗಳು ಭುಜದ ಎಡ-ಬಲ, ಹೊಟ್ಟೆ, ಎದೆಯ ಭಾಗದಲ್ಲಿ ಹಾಕಿದರೆ, ಕೆಲವು ಮಠಗಳಲ್ಲಿ ಪುರುಷರ ಭುಜಗಳಿಗೆ ಹಾಕಲಾಗುತ್ತದೆ. ಇನ್ನು ಮಹಿಳೆಯರಿಗೆ ಕೈಗಳಿಗೆ ಎರಡು ಕಡೆ ಹಾಕಲಾಗುತ್ತದೆ. ಅದರ ಮರು ದಿನ ದ್ವಾದಶಿ ಬೆಳಗ್ಗೆಯೇ ಪಾರಣೆ (ಊಟ ಮಾಡುವುದು) ಇರುತ್ತದೆ. ಅದಕ್ಕೂ ಮುನ್ನ ಪಂಚಗವ್ಯ (ಹಸುವಿನ ಹಾಲು, ಮೊಸರು, ತುಪ್ಪ, ಗೋಮೂತ್ರ ಹಾಗೂ ಗೋಮಯದಿಂದ ತಯಾರಾದದ್ದು) ಸ್ವೀಕರಿಸಿ, ದೇಹವನ್ನು ಶುದ್ಧಿ ಮಾಡಿಕೊಳ್ಳಲಾಗುತ್ತದೆ.
ಏಕಾದಶಿ ಉಪವಾಸ ವ್ರತಕ್ಕೆ ಹಿಂದಿನ ದಿನವಾದ ದಶಮಿ ತಿಥಿಯ ರಾತ್ರಿಯಿಂದಲೇ ಊಟ ಮಾಡುವುದಿಲ್ಲ. ಕೆಲವರು ಅಕ್ಕಿಯ ಹೊರತುಪಡಿಸಿದಂಥ ಲಘು ಉಪಾಹಾರ ಅಥವಾ ಹಣ್ಣು- ಹಾಲಿನಂಥದ್ದನ್ನು ಸೇವಿಸುತ್ತಾರೆ. ಈ ಏಕಾದಶಿ ಮಾಡುವುದರಿಂದ ಆರೋಗ್ಯ ರೀತಿಯಲ್ಲೂ ಸಹಕಾರಿ ಆಗುತ್ತದೆ ಎಂಬುದನ್ನು ಕೆಲವರು ವೈಜ್ಞಾನಿಕ- ವೈದ್ಯಕೀಯ ಕಾರಣಗಳ ಸಹಿತವಾಗಿ ವಿವರಿಸುತ್ತಾರೆ. ಅಧ್ಯಾತ್ಮದ ದೃಷ್ಟಿಯಿಂದಲೂ ಏಕಾದಶಿ ವ್ರತಾಚರಣೆಯಿಂದ ಪುಣ್ಯ ಸಂಚಯನ ಆಗುತ್ತದೆ ಎಂಬುದು ನಂಬಿಕೆಯಾಗಿದೆ.
ಇದನ್ನೂ ಓದಿ: Yogini Ekadashi 2023: ಯೋಗಿನಿ ಏಕಾದಶಿ ಯಾವಾಗ, ಅಂದು ಮಾಡುವ ಉಪವಾಸದ ಹಿಂದಿನ ಕಥೆ, ಅದರ ಮಹತ್ವ
ಏಕಾದಶಿ ಎಂಬುದು ಒಂದು ತಿಂಗಳಲ್ಲಿ ಎರಡು ದಿನ, ಅಪರೂಪದ ಸಂದರ್ಭದಲ್ಲಿ ಒಮ್ಮೆಲೇ ಎರಡು ಏಕಾದಶಿ ಬರುವುದುಂಟು. ಏಕಾದಶಿಯಂದು ವಿಷ್ಣುವಿಗೆ ಪ್ರಿಯವಾದ ದಿನ ಎನ್ನಲಾಗುತ್ತದೆ. ಈ ಪೈಕಿ ಪ್ರಥಮ ಏಕಾದಶಿ ಹಾಗೂ ವೈಕುಂಠ ಏಕಾದಶಿಗೆ ವಿಶೇಷ ಮಹತ್ವ ಇದೆ. ವರ್ಷದಲ್ಲಿ ಬರುವ ಇತರ ಏಕಾದಶಿಗಳಂದು ಉಪವಾಸ ಮಾಡಲು ಸಾಧ್ಯವಿಲ್ಲದವರು ಸಹ ಪ್ರಥಮ ಏಕಾದಶಿ ಹಾಗೂ ವೈಕುಂಠ ಏಕಾದಶಿಗಳಂದು ಕಡ್ಡಾಯವಾಗಿ ವ್ರತಾಚರಣೆ ಮಾಡುವುದುಂಟು. ಆದರೆ ವ್ರತ ಆಚರಣೆಗೆ ಮುಂಚೆ ಅದರ ಹಿನ್ನೆಲೆ ತಿಳಿದು ಮಾಡಿದರೆ ಹೆಚ್ಚು ಫಲ. ಆ ಕಾರಣಕ್ಕೆ ಇಲ್ಲಿ ಹಿನ್ನೆಲೆಯನ್ನು ತಿಳಿಸಲಾಗಿದೆ. ಆದರೆ ಯಾವುದೇ ವ್ರತಾಚರಣೆಯಿಂದ ಅಬಲರು, ವಯಸ್ಸಿನಲ್ಲಿ ಹಿರಿಯರು, ಅನಾರೋಗ್ಯ ಸಮಸ್ಯೆ ಇರುವವರು ಹಾಗೂ ಮಕ್ಕಳಿಗೆ ವಿನಾಯಿತಿ ನೀಡಲಾಗಿದೆ. ಏಕಾದಶಿಯನ್ನು ಆಚರಿಸಲು ಸಾಧ್ಯವಾಗುವುದೇ ಇಲ್ಲ ಎಂದ ಪಕ್ಷದಲ್ಲಿ ಆ ಭಗವಂತನ ಸ್ಮರಣೆ ಮಾಡಿದರೂ ಆಯಿತು. ಆದರೆ ಸಾಧ್ಯವಾದಷ್ಟೂ ಪ್ರಯತ್ನಿಸಿ; ಏಕೆಂದರೆ ನಮ್ಮ ಹಿರಿಯರು ಆಚರಣೆ ಮಾಡಿಕೊಂಡು ಬಂದಿರುವ ಏಕಾದಶಿಯ ಹಿನ್ನೆಲೆಯಲ್ಲಿ ಆರೋಗ್ಯದ ಕಾಳಜಿಯೂ ಇದೆ.