ವಿಶೇಷ ಟಿಕೆಟ್ ಕೋಟಾ, ತ್ವರಿತ ವೀಸಾ; ಭಾರತದ ಮನವೊಲಿಸಲು ಪಾಕಿಸ್ತಾನದ ಹೊಸ ತಂತ್ರ
Champions Trophy 2025: 2025ರಲ್ಲಿ ಪಾಕಿಸ್ತಾನದಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿಗೆ ಭಾರತ ತಂಡದ ಭಾಗವಹಿಸುವಿಕೆ ಅನಿಶ್ಚಿತವಾಗಿದೆ. ಇದರಿಂದ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಆರ್ಥಿಕ ನಷ್ಟದ ಅಪಾಯ ಎದುರಿಸುತ್ತಿದೆ. ಟೂರ್ನಿಗೆ ಹೆಚ್ಚಿನ ಹಣ ವ್ಯಯಿಸಿರುವ ಪಿಸಿಬಿ, ಭಾರತೀಯ ಅಭಿಮಾನಿಗಳನ್ನು ಆಕರ್ಷಿಸಲು ವೀಸಾ ಪ್ರಕ್ರಿಯೆಯನ್ನು ವೇಗಗೊಳಿಸುವುದಾಗಿ ಘೋಷಿಸಿದೆ. ಆದರೆ ಭಾರತದ ಭಾಗವಹಿಸುವಿಕೆ ಇಲ್ಲದೆ ಟೂರ್ನಿಯ ಯಶಸ್ಸು ಪ್ರಶ್ನಾರ್ಹವಾಗಿದೆ.
ತನ್ನಲ್ಲೇ ಸಾಕಷ್ಟು ಲೋಪ ಹಾಗೂ ಸಮಸ್ಯೆಗಳನ್ನು ಇಟ್ಟುಕೊಂಡಿದ್ದರೂ, 2025 ರಲ್ಲಿ ನಡೆಯಲ್ಲಿರುವ ಚಾಂಪಿಯನ್ಸ್ ಟ್ರೋಫಿಯನ್ನು ತನ್ನ ನೆಲದಲ್ಲೇ ನಡೆಸಬೇಕೆಂಬ ಹಟಕ್ಕೆ ಬಿದ್ದಿರುವ ಪಾಕಿಸ್ತಾನ ಕ್ರಿಕೆಟ್ ಮಂಡಳಿ, ಈ ಟೂರ್ನಿಯನ್ನು ಯಶಸ್ವಿಯಾಗಿ ನಡೆಸಲು ಸಾಕಷ್ಟು ಹಣ ಖರ್ಚು ಮಾಡುತ್ತಿದೆ. ಈ ಟೂರ್ನಿಗೆ ಆತಿಥ್ಯವಹಿಸುತ್ತಿರುವ ಮೂರು ಕ್ರೀಡಾಂಗಣಗಳನ್ನು ಮೇಲ್ದರ್ಜೆಗೇರಿಸುವ ಸಲುವಾಗಿ ಪಿಸಿಬಿ ಕೋಟ್ಯಾಂತರ ರೂಪಾಯಿಗಳನ್ನು ವ್ಯಯಿಸುತ್ತಿದೆ. ಆದರೆ ಈ ನಡುವೆ ಪಿಸಿಬಿಗೆ ಸಂಕಷ್ಟವೊಂದು ಎದುರಾಗಿದೆ. ಟೂರ್ನಿ ಆಯೋಜಿಸಲು ತಾನು ಹಾಕಿರುವ ಬಂಡವಾಳು ವಾಪಸ್ ಬರುತ್ತದೋ, ಇಲ್ಲವೋ ಎಂಬ ಚಿಂತೆಯಲ್ಲಿ ಪಿಸಿಬಿ ಇದೆ. ಇದಕ್ಕೆ ಕಾರಣ ಪಾಕಿಸ್ತಾನದಲ್ಲಿ ನಡೆಯಲ್ಲಿರುವ ಚಾಂಪಿಯನ್ಸ್ ಟ್ರೋಫಿಗೆ ಟೀ ಇಂಡಿಯಾವನ್ನು ಕಳುಹಿಸಲು ಬಿಸಿಸಿಐ ಇನ್ನೂ ಒಪ್ಪಿಗೆ ಸೂಚಿಸದಿರುವುದು.
ಪಿಸಿಬಿ ಇನ್ನಿಲ್ಲದ ಕಸರತ್ತು
ಯಾವುದೇ ಐಸಿಸಿ ಟೂರ್ನಿಯಾಗಿರಲಿ, ಅಲ್ಲಿ ಟೀಂ ಇಂಡಿಯಾ ಆಡುತ್ತಿದೆ ಎಂದರೆ ಆಯೋಜಕರಿಗೆ ಯಾವುದೇ ತಲೆಬಿಸಿ ಇರುವುದಿಲ್ಲ. ಇದಕ್ಕೆ ಪ್ರಮುಖ ಕಾರಣ ಟೀಂ ಇಂಡಿಯಾ ಟೂರ್ನಿಯಲ್ಲಿ ಆಡುವುದರಿಂದ ಆಯೋಜಕರಿಗಾಗುವ ಲಾಭ. ಆದರೆ ಬಹಳ ವರ್ಷಗಳ ಬಳಿಕ ಐಸಿಸಿ ಟೂರ್ನಿಗೆ ಆತಿಥ್ಯವಹಿಸುತ್ತಿರುವ ಪಾಕಿಸ್ತಾನಕ್ಕೆ ಇದೀಗ ನಷ್ಟದ ಭಯ ಎದುರಾಗಿದೆ. ಇದರ ಹೊರತಾಗಿಯೂ ಟೀಂ ಇಂಡಿಯಾ ಬರದಿದ್ದರೂ ನಾವು ಟೂರ್ನಿಯನ್ನು ಆಯೋಜಿಸಿಯೇ ತೀರುತ್ತೇವೆ ಎಂದು ಬಹಿರಂಗ ಹೇಳಿಕೆ ನೀಡುತ್ತಿರುವ ಪಿಸಿಬಿ, ಒಳಗೊಳಗೆ ಮಾತ್ರ ಟೀಂ ಇಂಡಿಯಾವನ್ನು ತನ್ನದೇಶಕ್ಕೆ ಕರೆಸಿಕೊಳ್ಳಲು ಇನ್ನಿಲ್ಲದ ಕಸರತ್ತು ಮಾಡುತ್ತಿದೆ.
ಈ ಹಿಂದೆ ಟೀಂ ಇಂಡಿಯಾ ಪಾಕಿಸ್ತಾನಕ್ಕೆ ಬಂದು ಪಂದ್ಯವನ್ನಾಡಿ ಆ ಬಳಿಕ ಭಾರತಕ್ಕೆ ವಾಪಸ್ಸಾಗಲಿ ಎಂದು ಪಿಸಿಬಿ ಹೇಳಿತ್ತು. ಇದೀಗ ಒಂದು ಹೆಜ್ಜೆ ಮುಂದೆ ಹೋಗಿರುವ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯನ್ನು ವೀಕ್ಷಿಸಲು ಪಾಕಿಸ್ತಾನಕ್ಕೆ ಬರುವ ಭಾರತದ ಪ್ರೇಕ್ಷಕರಿಗೆ ತ್ವರಿತವಾಗಿ ವೀಸಾ ನೀಡುವುದಾಗಿ ಹೇಳಿಕೊಂಡಿದೆ.
ತ್ವರಿತವಾಗಿ ವೀಸಾ ನೀಡ್ತಿವಿ
ಸುದ್ದಿ ಸಂಸ್ಥೆ ಪಿಟಿಐ ವರದಿಯ ಪ್ರಕಾರ, ಪಿಸಿಬಿ ಮುಖ್ಯಸ್ಥ ಮೊಹ್ಸಿನ್ ನಖ್ವಿ ಅವರು ಅಮೆರಿಕದ ಸಿಖ್ ಯಾತ್ರಿಕರ ಗುಂಪಿನೊಂದಿಗೆ ಭೇಟಿಯಾದ ಸಂದರ್ಭದಲ್ಲಿ ಈ ಭರವಸೆ ನೀಡಿದ್ದಾರೆ. ಚಾಂಪಿಯನ್ಸ್ ಟ್ರೋಫಿ ಪಂದ್ಯಗಳನ್ನು ವೀಕ್ಷಿಸಲು ಹೆಚ್ಚಿನ ಸಂಖ್ಯೆಯ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಪಾಕಿಸ್ತಾನಕ್ಕೆ ಭೇಟಿ ನೀಡುತ್ತಾರೆ ಎಂಬ ಭರವಸೆಯನ್ನು ಪಿಸಿಬಿ ಹೊಂದಿದೆ ಎಂದು ನಖ್ವಿ ಹೇಳಿದ್ದಾರೆ. ಭಾರತೀಯ ಅಭಿಮಾನಿಗಳು ಪಾಕಿಸ್ತಾನಕ್ಕೆ ಬಂದು ಲಾಹೋರ್‌ನಲ್ಲಿ ಈ ಎರಡು ದೇಶಗಳ ನಡುವಿನ ಪಂದ್ಯವನ್ನು ವೀಕ್ಷಿಸಬೇಕೆಂದು ನಖ್ವಿ ಮನವಿ ಮಾಡಿದ್ದಾರೆ. ‘ನಾವು ಭಾರತೀಯ ಅಭಿಮಾನಿಗಳಿಗೆ ಟಿಕೆಟ್‌ಗಳ ವಿಶೇಷ ಕೋಟಾವನ್ನು ಇಟ್ಟುಕೊಳ್ಳುತ್ತೇವೆ ಮತ್ತು ವೀಸಾಗಳನ್ನು ಶೀಘ್ರವಾಗಿ ನೀಡಲು ನಾವು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ’ ಎಂದು ನಖ್ವಿ ಹೇಳಿರುವುದಾಗಿ ಪತ್ರಿಕೆಯೊಂದು ವರದಿ ಮಾಡಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ