AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕ್ಯಾರೇ ವೈಸ್-ಕ್ಯಾಪ್ಟನ್?; ವೈಭವ್ ವಿಕೆಟ್ ಪಡೆಯಲು ಸ್ಲೆಡ್ಜಿಂಗ್ ಮೊರೆ ಹೋದ ತಿಲಕ್ ವರ್ಮಾ

ಚೆನ್ನೈನಲ್ಲಿ ನಡೆಯುತ್ತಿರುವ ದುಲೀಪ್ ಟ್ರೋಫಿ ಫೈನಲ್‌ನಲ್ಲಿ ಪೂರ್ವ ವಲಯದ ವೈಭವ್ ಸೂರ್ಯವಂಶಿ ಉತ್ತಮ ಬ್ಯಾಟಿಂಗ್ ಮಾಡುತ್ತಿದ್ದಾಗ, ದಕ್ಷಿಣ ವಲಯದ ನಾಯಕ ತಿಲಕ್ ವರ್ಮಾ ಸ್ಲೆಡ್ಜಿಂಗ್ ಮೊರೆ ಹೋದರು. ತಿಲಕ್ ಮಾತಿನಿಂದ ವಿಚಲಿತರಾದ ವೈಭವ್ ತಮ್ಮ ಏಕಾಗ್ರತೆ ಕಳೆದುಕೊಂಡು ವಿಕೆಟ್ ಒಪ್ಪಿಸಿದರು. ಈ ಮೂಲಕ ತಿಲಕ್ ವರ್ಮಾ ತಮ್ಮ ತಂತ್ರದಲ್ಲಿ ಯಶಸ್ವಿಯಾಗಿ, ದಕ್ಷಿಣ ವಲಯಕ್ಕೆ ನಿರ್ಣಾಯಕ ವಿಕೆಟ್ ಪಡೆದುಕೊಟ್ಟರು. ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಕ್ಯಾರೇ ವೈಸ್-ಕ್ಯಾಪ್ಟನ್?; ವೈಭವ್ ವಿಕೆಟ್ ಪಡೆಯಲು ಸ್ಲೆಡ್ಜಿಂಗ್ ಮೊರೆ ಹೋದ ತಿಲಕ್ ವರ್ಮಾ
Duleep Trophy
ಪೃಥ್ವಿಶಂಕರ
|

Updated on:Sep 06, 2026 | 5:28 PM

Share

ಚೆನ್ನೈನಲ್ಲಿ ನಡೆಯುತ್ತಿರುವ ದುಲೀಪ್ ಟ್ರೋಫಿ ಫೈನಲ್‌ನಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್‌ ಮಾಡುತ್ತಿರುವ ಪೂರ್ವ ವಲಯ ತಂಡ ಬೃಹತ್ ಮೊತ್ತದತ್ತ ದಾಪುಗಾಲಿಟ್ಟಿದೆ. ದಕ್ಷಿಣ ವಲಯ ತಂಡದ ಬೌಲಿಂಗ್ ವಿಭಾಗವನ್ನು ಸಮರ್ಥವಾಗಿ ಎದುರಿಸಿರುವ ಪೂರ್ವ ವಲಯ ತಂಡಕ್ಕೆ ಉತ್ತಮ ಆರಂಭ ಒದಗಿಸಿಕೊಡುವಲ್ಲಿ ಆರಂಭಿಕರು ಯಶಸ್ವಿಯಾದರು. ಆರಂಭಿಕರಾಗಿ ಕಣಕ್ಕಿಳಿದಿದ್ದ ವೈಭವ್ ಸೂರ್ಯವಂಶಿ ಹಾಗೂ ಅಭಿಮನ್ಯು ಈಶ್ವರನ್ 100 ರನ್​​ಗಳ ಜೊತೆಯಾಟ ನಡೆಸಿದರು. ಇದರಿಂದ ವಿಚಲಿತನಾದ ದಕ್ಷಿಣ ವಲಯ ತಂಡದ ನಾಯಕ ತಿಲಕ್ ವರ್ಮಾ ವಿಕೆಟ್ ಪಡೆಯುವ ಸಲಯವಾಗಿ ಸ್ಲೆಡ್ಜಿಂಗ್ ಮೊರೆ ಹೋದರು. ಇದರಲ್ಲಿ ತಿಲಕ್​​ ಯಶಸ್ವಿ ಕೂಡ ಆದರು.

ತಮ್ಮ ಹೊಡಿಬಡಿ ಆಟದಿಂದಲೇ ಸುದ್ದಿ ಮಾಡಿರುವ ವೈಭವ್, ಈ ಪಂದ್ಯದಲ್ಲಿ ತಾಳ್ಮೆಯ ಇನ್ನಿಂಗ್ಸ್ ಕಟ್ಟುತ್ತಿದ್ದರು. ಇದು ದಕ್ಷಿಣ ವಲಯ ತಂಡವನ್ನು ಸಂಕಷ್ಟಕ್ಕೀಡುಮಾಡಿತು. ಇತ್ತ ಅನುಭವಿ ಅಭಿಮನ್ಯು ಈಶ್ವರನ್ ವಿಕೆಟ್ ನೀಡುವ ಲಕ್ಷಣಗಳು ಕಾಣುತ್ತಿರಲಿಲ್ಲ. ಹೀಗಾಗಿ ವೈಭವ್ ವಿಕೆಟ್ ಪಡೆಯುವ ಸಲುವಾಗಿ ತಿಲಕ್ ವರ್ಮಾ ಸ್ಲೆಡ್ಜಿಂಗ್ ಮೊರೆ ಹೋದರು. ವೈಭವ್​ರನ್ನು ಮಾತಿನ ಮೂಲಕ ಕೆಣಕ್ಕಿಳಿದ ತಿಲಕ್ ಅವರ ಲಯಕ್ಕೆ ಭಂಗ ತರುವುದರ ಜೊತೆಗೆ ಅವರ ವಿಕೆಟ್ ಕೂಡ ಪಡೆದರು.. ಅಷ್ಟಕ್ಕೂ ತಿಲಕ್ ವರ್ಮಾ ಮೈದಾನದಲ್ಲಿ ಮಾಡಿದ್ದೇನು ಎಂಬುದನ್ನು ನೋಡುವುದಾದರೆ…

ಕ್ಯಾರೇ ವೈಸ್-ಕ್ಯಾಪ್ಟನ್?

ದುಲೀಪ್ ಟ್ರೋಫಿ ಫೈನಲ್ ಪಂದ್ಯದ ವೇಳೆ ತಿಲಕ್ ವರ್ಮಾ ಮತ್ತು ವೈಭವ್ ಸೂರ್ಯವಂಶಿ ಮುಖಾಮುಖಿ ನಿಂತಿರುವುದನ್ನು ತೋರಿಸುವ ದೃಶ್ಯಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಪಂದ್ಯದ ಸಮಯದಲ್ಲಿ ಏನಾಯಿತು ಎಂಬುದು ತಿಳಿದಿಲ್ಲ, ಆದರೆ ತಿಲಕ್ ವರ್ಮಾ, ವೈಭವ್​ರನ್ನ ಉದ್ದೇಶಿಸಿ ‘ಕ್ಯಾರೇ ವೈಸ್-ಕ್ಯಾಪ್ಟನ್?( ಏನೋ ಉಪನಾಯಕ) ಎಂದಿರುವುದು ಸ್ಟಂಪ್ ಮೈಕ್​ನಲ್ಲಿ ಸ್ಪಷ್ಟವಾಗಿ ಕೇಳಿಸುತ್ತಿದೆ. ಈ ಮೂಲಕ ತಿಲಕ್, ವೈಭವ್​ರನ್ನು ಕೆಣಕ್ಕುವ ಕೆಲಸ ಮಾಡಿದ್ದಾರೆ. ಈ ಘಟನೆ ನಡೆದ ಸ್ವಲ್ಪ ಸಮಯದಲ್ಲೇ ವೈಭವ್ ಅವರ ವಿಕೆಟ್ ಪತನವಾಗಿದೆ. ಅಂದರೆ ತಿಲಕ್ ಯಾವ ಉದ್ದೇಶದಿಂದ ವೈಭವ್​ ಜೊತೆ ಮಾತಿಗಿಳಿದಿದ್ದರೋ ಆ ಉದ್ದೇಶ ಫಲಕೊಟ್ಟಿದೆ.

ಅದುವರೆಗೂ ಉತ್ತಮವಾಗಿ ಬ್ಯಾಟಿಂಗ್‌ ಮಾಡುತ್ತಿದ್ದ ವೈಭವ್ ಸೂರ್ಯವಂಶಿ 36 ಎಸೆತಗಳಲ್ಲಿ 44 ರನ್ ಗಳಿಸಿ ಆಡುತ್ತಿದ್ದರು. ಇದರಲ್ಲಿ 5 ಬೌಂಡರಿ ಮತ್ತು 1 ಸಿಕ್ಸರ್ ಸೇರಿದ್ದವು. ಆದರೆ ತಿಲಕ್ ಜೊತೆಗೆ ಮಾತಿಗಿಳಿದು ತಮ್ಮ ಏಕಾಗ್ರತೆ ಕಳೆದುಕೊಂಡ ವೈಭವ್ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿಕೊಂಡರು. ಆದಾಗ್ಯೂ ವೈಭವ್ ಸೂರ್ಯವಂಶಿ, ಅಭಿಮನ್ಯು ಈಶ್ವರನ್ ಅವರೊಂದಿಗೆ ಮೊದಲ ವಿಕೆಟ್‌ಗೆ ಶತಕದ ಪಾಲುದಾರಿಕೆಯನ್ನು ಹಂಚಿಕೊಳ್ಳುವ ಮೂಲಕ ಪೂರ್ವ ವಲಯಕ್ಕೆ ಉತ್ತಮ ಆರಂಭವನ್ನು ನೀಡಿದರು.

‘ಯಾರೂ ಅವರಂತೆ ಬ್ಯಾಟಿಂಗ್ ಮಾಡಲು ಸಾಧ್ಯವಿಲ್ಲ’; ವೈಭವ್​ರನ್ನು ಹೊಗಳಿದ ಆರ್​ಸಿಬಿ ನಾಯಕ

ವೈಭವ್ ರೆಡ್ ಬಾಲ್ ವೃತ್ತಿಜೀವನ

ದುಲೀಪ್ ಟ್ರೋಫಿ ಫೈನಲ್ ವೈಭವ್ ಸೂರ್ಯವಂಶಿ ಅವರ ರೆಡ್-ಬಾಲ್ ವೃತ್ತಿಜೀವನದ 11 ನೇ ಪಂದ್ಯವಾಗಿದೆ. ಇದರಲ್ಲಿ ಅವರು ಎರಡು ಅರ್ಧಶತಕಗಳೊಂದಿಗೆ 381 ರನ್ ಬಾರಿಸಿದ್ದಾರೆ. ವೈಭವ್ ರಣಜಿ ಟ್ರೋಫಿಯಲ್ಲಿ ಒಂದು ಅರ್ಧಶತಕ ಬಾರಿಸಿದ್ದರೆ, ಇನ್ನೊಂದು ಅರ್ಧಶತಕವನ್ನು ಸೆಂಟ್ರಲ್ ಜೋನ್ ವಿರುದ್ಧದ ದುಲೀಪ್ ಟ್ರೋಫಿ ಸೆಮಿಫೈನಲ್‌ ಪಂದ್ಯದಲ್ಲಿ ಬಾರಿಸಿದ್ದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:58 pm, Sun, 6 September 26

Follow Us