Fact Check: ಎಂಎಸ್ ಧೋನಿ ಬಿಜೆಪಿ ಸೇರ್ಪಡೆ?: ವೈರಲ್ ಫೋಟೋದ ಅಸಲಿಯತ್ತು ಏನು?
MS Dhoni Joined BJP: ಮಹೇಂದ್ರ ಸಿಂಗ್ ಧೋನಿ ಅವರು ಪ್ರಧಾನಿ ನರೇಂದ್ರ ಮೋದಿ ಜೊತೆಗಿರುವ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಇದರಲ್ಲಿ ಧೋನಿ ಅವರು ಕಮಲದ ಚಿಹ್ನೆಯನ್ನು ಹೊಂದಿರುವ ಕೇಸರಿ ಸ್ಕಾರ್ಫ್ ಧರಿಸಿರುವುದು ಕಾಣಬಹುದು. ಎಂಎಸ್ ಧೋನಿ ಬಿಜೆಪಿ ಪಕ್ಷ ಸೇರಿದ್ದಾರೆ ಎಂದು ಅನೇಕ ಬಳಕೆದಾರರು ಈ ಫೋಟೋವನ್ನು ಹಂಚಿಕೊಳ್ಳುತ್ತಿದ್ದಾರೆ.

ಬೆಂಗಳೂರು (ಏ. 04): ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ (Mahendra Singh Dhoni) ಅಂತರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತರಾದ ಬಳಿಕ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದ್ದಾರೆ. ಸದ್ಯ ಐಪಿಎಲ್ 2025 ಟೂರ್ನಿ ನಡೆಯುತ್ತಿದ್ದು, ಚೆನ್ನೈ ಸೂಪರ್ ಕಿಂಗ್ಸ್ ಪರ ಆಡುತ್ತಿದ್ದಾರೆ. ಆದರೆ, ಸಿಎಸ್ಕೆ ಪರ ಧೋನಿ ಈ ಸೀಸನ್ನಲ್ಲಿ ಉತ್ತಮ ಆರಂಭ ಪಡೆದಿಲ್ಲ. ಆರಂಭದಲ್ಲಿ 9ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಬಂದು ಟೀಕೆಗೆ ಗುರಿಯಾದರು. ನಂತರ ಅಂತಿಮ ಹಂತದಲ್ಲಿ ಬಂದರೂ ಪಂದ್ಯವನ್ನು ಫಿನಿಶ್ ಮಾಡಲು ಸಾಧ್ಯವಾಗಲಿಲ್ಲ. ಇದರ ಮಧ್ಯೆ ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ಒಂದು ವೈರಲ್ ಆಗುತ್ತಿದೆ.
ಮಹೇಂದ್ರ ಸಿಂಗ್ ಧೋನಿ ಅವರು ಪ್ರಧಾನಿ ನರೇಂದ್ರ ಮೋದಿ ಜೊತೆಗಿರುವ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಇದರಲ್ಲಿ ಧೋನಿ ಅವರು ಕಮಲದ ಚಿಹ್ನೆಯನ್ನು ಹೊಂದಿರುವ ಕೇಸರಿ ಸ್ಕಾರ್ಫ್ ಧರಿಸಿರುವುದು ಕಾಣಬಹುದು. ಫೋಟೋದ ಹಿನ್ನೆಲೆಯಲ್ಲಿ ಬಿಜೆಪಿ ಪಕ್ಷದ ಬ್ಯಾನರ್ ಕೂಡ ಇದೆ. ಎಂಎಸ್ ಧೋನಿ ಬಿಜೆಪಿ ಪಕ್ಷ ಸೇರಿದ್ದಾರೆ ಎಂದು ಅನೇಕ ಬಳಕೆದಾರರು ಈ ಫೋಟೋವನ್ನು ಹಂಚಿಕೊಳ್ಳುತ್ತಿದ್ದಾರೆ.
ಎಂ ಎಸ್ ಧೋನಿ ಬಿಜೆಪಿ ಸೇರಿದ್ದು ನಿಜವೇ?:
ಈ ಫೋಟೋದ ಸತ್ಯಾಸತ್ಯೆಯನ್ನು ಟಿವಿ9 ಕನ್ನಡ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಇದನ್ನು ಹಂಚಿಕೊಳ್ಳಲಾಗುತ್ತಿದೆ ಎಂಬುದು ಕಂಡುಬಂದಿದೆ. ಫೋಟೋದ ನಿಜಾಂಶವನ್ನು ಪರಿಶೀಲಿಸಲು, ನಾವು ಮೊದಲಿಗೆ ಸಂಬಂಧಿತ ಕೀವರ್ಡ್‌ಗಳನ್ನು ಬಳಸಿಕೊಂಡು ಗೂಗಲ್‌ನಲ್ಲಿ ಸರ್ಚ್ ಮಾಡಿದ್ದೇವೆ, ಆದರೆ ಧೋನಿ ಬಿಜೆಪಿ ಸೇರಿದ್ದಾರೆ ಅಥವಾ ಸೇರಲಿದ್ದಾರೆ ಎಂದು ದೃಢೀಕರಿಸುವ ಯಾವುದೇ ವಿಶ್ವಾಸಾರ್ಹ ಮಾಧ್ಯಮ ವರದಿಗಳು ನಮಗೆ ಕಂಡುಬಂದಿಲ್ಲ.
Fact Check: ಸಲ್ಮಾನ್ ಖಾನ್ ಮನೆಯ ಮೇಲೆ ಗುಂಡಿನ ದಾಳಿ ಎಂದು ವಿಡಿಯೋ ವೈರಲ್
ಇದಲ್ಲದೆ, ಪ್ರಧಾನಿ ಮೋದಿ ಇತ್ತೀಚೆಗೆ ಧೋನಿಯನ್ನು ಭೇಟಿಯಾಗಿದ್ದಾರೆ ಎಂದು ಸೂಚಿಸುವ ಯಾವುದೇ ವಿಶ್ವಾಸಾರ್ಹ ವರದಿಗಳು ನಮಗೆ ಕಂಡುಬಂದಿಲ್ಲ. ಧೋನಿಯಂತಹ ಸ್ಟಾರ್ ಕ್ರಿಕೆಟಿಗನೊಬ್ಬ ರಾಜಕೀಯಕ್ಕೆ ಕಾಲಿಡುತ್ತಿದ್ದಾರೆ ಎಂದರೆ ಅದು ದೊಡ್ಡ ಮಟ್ಟದಲ್ಲಿ ಬ್ರೇಕಿಂಗ್ ನ್ಯೂಸ್ ಆಗಿರುತ್ತಿತ್ತು. ಆದರೆ, ಅಂತಹ ಯಾವುದೇ ವರದಿ ಇದುವರೆಗೆ ಆಗಿಲ್ಲ. ಸದ್ಯ ಧೋನಿ ಐಪಿಎಲ್ 2025 ರಲ್ಲಿ ಬ್ಯುಸಿಯಾಗಿದ್ದಾರೆ.
ಬಳಿಕ, ವೈರಲ್ ಚಿತ್ರವನ್ನು ಸೂಕ್ಷ್ಮವಾಗಿ ಗಮನಿಸಿದಾಗ ಪ್ರಧಾನಿ ಮೋದಿಯವರ ಕನ್ನಡಕ ವಿರೂಪುಗೊಂಡಂತೆ ಕಾಣುತ್ತಿದೆ. ಇದಲ್ಲದೆ, ಕೇಸರಿ ಸ್ಕಾರ್ಫ್‌ನಲ್ಲಿ ಕಂಡುಬರುವಂತೆ ಕಮಲದ ಚಿಹ್ನೆಯ ಒಂದು ಭಾಗವನ್ನು ಪ್ರಧಾನಿಯವರ ಭುಜದ ಮೇಲೆ ಎಡಿಟ್ ಮಾಡಿದ ರೂಪದಲ್ಲಿ ಇರಿಸಲಾಗಿದೆ ಎಂದು ನಾವು ಗಮನಿಸಿದ್ದೇವೆ. ಹೀಗಾಗಿ ಈ ಚಿತ್ರವು AI-ರಚಿತವಾಗಿದೆ ಎಂಬ ಅನುಮಾನ ಮೂಡಿತು. ಎಐ ಫೋಟೋವನ್ನು ಪತ್ತೆ ಮಾಡುವ ಸಾಫ್ಟ್ವೇರ್ ಹೈವ್ ಮಾಡರೇಶನ್ ಮೂಲಕ ನಾವು ತನಿಖೆ ನಡೆಸಿದ್ದೇವೆ. ಇದು AI-ರಚಿತ ಅಥವಾ ಡೀಪ್‌ಫೇಕ್ ವಿಷಯವನ್ನು ಹೊಂದಿದೆ ಎಂದು ದೃಢಪಡಿಸಿದೆ.
ಹಾಗೆಯೆ AI Or NOt ನಂತಹ AI ಇಮೇಜ್ ಡಿಟೆಕ್ಷನ್ ಪರಿಕರಗಳಲ್ಲಿ ಫೋಟೋವನ್ನು ಪರೀಕ್ಷಿಸಿದ್ದೇವೆ. ಈ ಸಾಫ್ಟ್ವೇರ್ ಕೃತಕ ಬುದ್ಧಿಮತ್ತೆಯನ್ನು ಬಳಸಿಕೊಂಡು ಚಿತ್ರವನ್ನು ರಚಿಸಲಾಗಿದೆ ಎಂದು ದೃಢಪಡಿಸಿವೆ. ಹೀಗಾಗಿ ವೈರಲ್ ಆಗಿರುವ ಫೋಟೋ ಡಿಜಿಟಲ್ ರೂಪದಲ್ಲಿ ಮಾರ್ಪಡಿಸಲಾಗಿದೆ ಎಂದು ತನಿಖೆಯಿಂದ ದೃಢಪಟ್ಟಿದೆ. ಧೋನಿ ಬಿಜೆಪಿಗೆ ಸೇರಿಲ್ಲ ಅಥವಾ ಪ್ರಧಾನಿ ಮೋದಿಯನ್ನು ಭೇಟಿ ಕೂಡ ಮಾಡಿಲ್ಲ ಎಂದು ನಾವು ಖಚಿತವಾಗಿ ಹೇಳಬಹುದು.
ಇನ್ನಷ್ಟು ಫ್ಯಾಕ್ಟ್ ಚೆಕ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ