ಇಮ್ರಾನ್ ಖಾನ್ಗಾಗಿ ಮರುಗಿದ ಆಸೀಸ್ ದಿಗ್ಗಜ ಕ್ರಿಕೆಟಿಗರ ಮನಸು
ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಜೈಲಿನಲ್ಲಿ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರೂ ಸೂಕ್ತ ಚಿಕಿತ್ಸೆ ನೀಡುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ. ಈಗ, ಅಲನ್ ಬಾರ್ಡರ್, ಸ್ಟೀವ್ ವಾ ಸೇರಿದಂತೆ 7 ಆಸ್ಟ್ರೇಲಿಯಾ ಕ್ರಿಕೆಟ್ ದಿಗ್ಗಜರು ಆಸ್ಟ್ರೇಲಿಯಾ ವಿದೇಶಾಂಗ ಸಚಿವರಿಗೆ ಪತ್ರ ಬರೆದು, ಮಾನವೀಯ ಆಧಾರದ ಮೇಲೆ ಇಮ್ರಾನ್ ಖಾನ್‌ಗೆ ವೈದ್ಯಕೀಯ ನೆರವು ನೀಡಲು ಪಾಕ್ ಸರ್ಕಾರಕ್ಕೆ ಒತ್ತಡ ಹೇರುವಂತೆ ಮನವಿ ಮಾಡಿದ್ದಾರೆ.

ಪಾಕಿಸ್ತಾನದ ಮಾಜಿ ಪ್ರಧಾನಿ ಮತ್ತು ಮಾಜಿ ಕ್ರಿಕೆಟ್ ನಾಯಕ ಇಮ್ರಾನ್ ಖಾನ್ ಭ್ರಷ್ಟಾಚಾರ ಆರೋಪ ಹೊತ್ತು ಜೈಲಿನಲ್ಲಿದ್ದಾರೆ. ಅವರು ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರೂ ಪಾಕ್ ಸರ್ಕಾರ ಅವರಿಗೆ ಸೂಕ್ತ ಚಿಕಿತ್ಸೆ ಕೊಡಿಸುತ್ತಿಲ್ಲ ಎಂಬ ಆರೋಪವನ್ನು ಇಮ್ರಾನ್ ಮಕ್ಕಳು ಹಾಗೂ ಕುಟುಂಬದವರು ಮಾಡುತ್ತಲೇ ಬರುತ್ತಿದ್ದಾರೆ. ಆದರೆ ಪಾಕ್ ಸರ್ಕಾರ ಮಾತ್ರ ಇಮ್ರಾನ್ ಅವರ ಬಗ್ಗೆ ಹೊರ ಜಗತ್ತಿಗೆ ಯಾವುದೇ ಸುಳಿವನ್ನು ಬಿಟ್ಟುಕೊಡುತ್ತಿಲ್ಲ. ಹೀಗಾಗಿ ಕೆಲವು ದಿನಗಳ ಹಿಂದೆ ಅಂದರೆ ಆಗಸ್ಟ್ 23 ರಂದು, 22 ಮಾಜಿ ಅಂತಾರಾಷ್ಟ್ರೀಯ ನಾಯಕರು ಪಾಕಿಸ್ತಾನ ಪ್ರಧಾನಿ ಶಹಬಾಜ್ ಷರೀಫ್ ಅವರಿಗೆ ಪತ್ರ ಬರೆದು, ಇಮ್ರಾನ್ ಖಾನ್ ಅವರಿಗೆ ಉತ್ತಮ ಚಿಕಿತ್ಸೆ ನೀಡುವಂತೆ ಒತ್ತಾಯಿಸಿದ್ದರು. ಇದೀಗ ಅವರ ಪಟ್ಟಿಗೆ ಆಸ್ಟ್ರೇಲಿಯಾದ 7 ದಿಗ್ಗಜ ಕ್ರಿಕೆಟಿಗರು ಸೇರಿಕೊಂಡಿದ್ದಾರೆ. ಇಮ್ರಾನ್ ಖಾನ್ ಅವರ ಪ್ರಸ್ತುತ ಪರಿಸ್ಥಿತಿಯ ಬಗ್ಗೆ ಆಸ್ಟ್ರೇಲಿಯಾದ ಏಳು ಮಾಜಿ ನಾಯಕರು ಕಳವಳ ವ್ಯಕ್ತಪಡಿಸಿದ್ದಾರೆ.
ಈ 7 ಮಾಜಿ ಕ್ರಿಕೆಟಿಗರು ಆಸ್ಟ್ರೇಲಿಯಾದ ವಿದೇಶಾಂಗ ಸಚಿವೆ ಪೆನ್ನಿ ವಾಂಗ್ ಅವರನ್ನು ಸಂಪರ್ಕಿಸಿ ಖಾನ್ ಅವರ ಪರಿಸ್ಥಿತಿಯ ಬಗ್ಗೆ ಮಾಹಿತಿ ನೀಡಿದ್ದಾರೆ. ವಾಂಗ್ ಅವರಿಗೆ ಬರೆದ ಪತ್ರದಲ್ಲಿ ಅಲನ್ ಬಾರ್ಡರ್, ಗ್ರೆಗ್ ಚಾಪೆಲ್, ಇಯಾನ್ ಚಾಪೆಲ್, ಬೆಲಿಂಡಾ ಕ್ಲಾರ್ಕ್, ಕಿಮ್ ಹ್ಯೂಸ್, ಮಾರ್ಕ್ ಟೇಲರ್ ಮತ್ತು ಸ್ಟೀವ್ ವಾ ಸೇರಿದಂತೆ ಆಸ್ಟ್ರೇಲಿಯಾದ ಕ್ರಿಕೆಟ್ ಇತಿಹಾಸದ ಹಲವಾರು ಪ್ರಮುಖ ವ್ಯಕ್ತಿಗಳ ಸಹಿಗಳಿವೆ.
ನಾವು ಇಮ್ರಾನ್ ಅವರನ್ನು ಗೌರವಿಸುತ್ತೇವೆ
ತಮ್ಮ ಪತ್ರದಲ್ಲಿ ಆಸ್ಟ್ರೇಲಿಯಾದ ಮಾಜಿ ನಾಯಕರು, ಇಮ್ರಾನ್ ಖಾನ್ ವಿರುದ್ಧದ ಕಾನೂನು ಅಥವಾ ರಾಜಕೀಯ ಪ್ರಕರಣದ ಬಗ್ಗೆ ಯಾವುದೇ ನಿಲುವನ್ನು ತೆಗೆದುಕೊಳ್ಳಲು ನಿರಾಕರಿಸಿದ್ದಾರೆ. ಬದಲಿಗೆ ಬಂಧನದಲ್ಲಿರುವ ವ್ಯಕ್ತಿಗೆ ಸೂಕ್ತ ಚಿಕಿತ್ಸೆ ನೀಡುವ ಬಗ್ಗೆ ತಮ್ಮ ಕಳವಳ ವ್ಯಕ್ತಪಡಿಸಿದ್ದಾರೆ. ಅಲ್ಲದೆ ತಮ್ಮ ಪತ್ರದಲ್ಲಿ, ‘ಇಮ್ರಾನ್ ಖಾನ್ ಪಾಕಿಸ್ತಾನವನ್ನು ತನ್ನ ಏಕೈಕ ವಿಶ್ವಕಪ್ ಪ್ರಶಸ್ತಿಗೆ ಮುನ್ನಡೆಸಿದವರು. ಅಲ್ಲದೆ ಪ್ರಧಾನಿಯಾಗಿ ತಮ್ಮ ದೇಶವನ್ನು ಸಹ ಮುನ್ನಡೆಸಿದವರು. ಆಸ್ಟ್ರೇಲಿಯನ್ನರು ಅವರನ್ನು ಕ್ರಿಕೆಟಿಗರಾಗಿ ಗೌರವಿಸುತ್ತಾರೆ, ಅವರ ಪ್ರತಿಭೆ ಮತ್ತು ನಾಯಕತ್ವವು ಕ್ರೀಡೆಯ ಮೇಲೆ ಶಾಶ್ವತವಾದ ಗುರುತು ಬಿಟ್ಟಿದೆ. ಕ್ಯಾನ್ಸರ್ ಆಸ್ಪತ್ರೆಯನ್ನು ನಿರ್ಮಿಸುವ ಮೂಲಕ ಪಾಕಿಸ್ತಾನದ ಜನರ ಜೀವನವನ್ನು ಸುಧಾರಿಸಲು ಸಹಾಯ ಮಾಡಿದ ವ್ಯಕ್ತಿಯಾಗಿ ನಾವು ಇಮ್ರಾನ್ ಅವರನ್ನು ಗೌರವಿಸುತ್ತೇವೆ.
ಪಾಕಿಸ್ತಾನದ ಆಂತರಿಕ ವಿಷಯ
‘ವಿಶ್ವಾಸಾರ್ಹ ವರದಿಗಳ ಜೊತೆಗೆ, ಅವರ ಪುತ್ರರು ಮತ್ತು ಸಹೋದರಿಯರು ಹಲವಾರು ತಿಂಗಳುಗಳಿಂದ ಅವರ ಆರೋಗ್ಯ ಮತ್ತು ಅವರು ಕಸ್ಟಡಿಯಲ್ಲಿ ಪಡೆಯುತ್ತಿರುವ ಚಿಕಿತ್ಸೆಯ ಬಗ್ಗೆ ಸಾರ್ವಜನಿಕವಾಗಿ ಬೇಡಿಕೊಳ್ಳುತ್ತಿದ್ದಾರೆ. ಸೀಮಿತ ವೈದ್ಯಕೀಯ ಆರೈಕೆ, ಕುಟುಂಬ ಭೇಟಿಗಳ ಮೇಲಿನ ನಿರ್ಬಂಧಗಳು ಮತ್ತು ಕಾನೂನು ಸಲಹೆ ಪಡೆಯಲು ಅವರಿಗೆ ಅವಕಾಶಗಳನ್ನು ನೀಡುತ್ತಿಲ್ಲ. ನಾವುಗಳು ಇಮ್ರಾನ್ ಅವರ ವಿರುದ್ಧದ ಕಾನೂನು ಅಥವಾ ರಾಜಕೀಯ ಪ್ರಕರಣದ ಬಗ್ಗೆ ನಾವು ಯಾವುದೇ ನಿಲುವನ್ನು ತೆಗೆದುಕೊಳ್ಳುವುದಿಲ್ಲ. ಇದು ಪಾಕಿಸ್ತಾನದ ಆಂತರಿಕ ವಿಷಯ. ಆದಾಗ್ಯೂ, ಬಂಧನದಲ್ಲಿರುವ ಯಾವುದೇ ವ್ಯಕ್ತಿಯನ್ನು ನಡೆಸಿಕೊಳ್ಳುವುದು ಮೂಲಭೂತ ಮಾನವೀಯತೆಯ ವಿಷಯವಾಗಿದೆ. ಹೀಗಾಗಿ ಆಸ್ಟ್ರೇಲಿಯಾ ಸರ್ಕಾರವು ಈ ವಿಷಯವನ್ನು ಸಂಬಂಧಿಸಿದಂತೆ ಪಾಕಿಸ್ತಾನಿ ಅಧಿಕಾರಿಗಳೊಂದಿಗೆ ನೇರವಾಗಿ ಪ್ರಸ್ತಾಪಿಸಿದರೆ ನಾವು ಕೃತಜ್ಞರಾಗಿರುತ್ತೇವೆ’ ಎಂದು ತಮ್ಮ ಪತ್ರದಲ್ಲಿ ಬರೆದಿದ್ದಾರೆ.
ಇಮ್ರಾನ್ ಖಾನ್ ಅವರ ಆರೋಗ್ಯ ಮತ್ತು ಅವರು ಪಡೆಯುತ್ತಿರುವ ವೈದ್ಯಕೀಯ ಆರೈಕೆಯ ಬಗ್ಗೆ ಮಾಜಿ ಕ್ರಿಕೆಟ್ ನಾಯಕರು ಧ್ವನಿ ಎತ್ತಿರುವುದು ಇದೇ ಮೊದಲಲ್ಲ. ಇದಕ್ಕೂ ಮೊದಲು, ಆಗಸ್ಟ್ 23 ರಂದು, ಪ್ರಪಂಚದಾದ್ಯಂತದ 22 ಮಾಜಿ ಅಂತರರಾಷ್ಟ್ರೀಯ ನಾಯಕರು ಪಾಕಿಸ್ತಾನ ಪ್ರಧಾನಿ ಶಹಬಾಜ್ ಷರೀಫ್ ಅವರಿಗೆ ಪತ್ರ ಬರೆದು, ಇಮ್ರಾನ್ ಖಾನ್ ಅವರಿಗೆ ಉತ್ತಮ ವೈದ್ಯಕೀಯ ಆರೈಕೆಯನ್ನು ಕೋರಿದ್ದರು. ಜೈಲಿನಲ್ಲಿ ಇಮ್ರಾನ್ ಖಾನ್ ಪಡೆಯುತ್ತಿರುವ ಸೌಲಭ್ಯಗಳು ಸುಪ್ರೀಂ ಕೋರ್ಟ್ ನಿರ್ದೇಶನಕ್ಕೆ ಅನುಗುಣವಾಗಿಲ್ಲ ಎಂದು ಈ ನಾಯಕರು ಹೇಳಿಕೊಂಡಿದ್ದರು.




