AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಂದೆಯನ್ನು ಕೊಲ್ಲಲು ಪ್ರಯತ್ನಿಸುತ್ತಿದ್ದಾರೆ: ಇಮ್ರಾನ್ ಖಾನ್ ಮಕ್ಕಳ ಗಂಭೀರ ಆರೋಪ!

ಪಾಕಿಸ್ತಾನ್ ಕ್ರಿಕೆಟ್ ತಂಡದ ಮಾಜಿ ನಾಯಕ ಹಾಗೂ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಬಿಡುಗಡೆಗಾಗಿ ಅವರ ಮೊದಲ ಪತ್ನಿ, ಬ್ರಿಟಿಷ್ ಮೂಲದ ಲೇಖಕಿ ಜೆಮಿಮಾ ಗೋಲ್ಡ್ ಸ್ಮಿತ್ ಅವರ ಮಕ್ಕಳಾದ ಸುಲೈಮಾನ್ ಖಾನ್ ಮತ್ತು ಖಾಸಿಮ್ ಖಾನ್ ಇದೀಗ ಅಂತರರಾಷ್ಟ್ರೀಯ ಮಟ್ಟದಲ್ಲಿ ಧ್ವನಿ ಎತ್ತಿದ್ದಾರೆ. ಭ್ರಷ್ಟಾಚಾರ, ಟ್ರಸ್ಟ್ ಹಗರಣ ಹಾಗೂ ಸೈಫರ್ ಪ್ರಕರಣಗಳಿಗೆ ಸಂಬಂಧಿಸಿದಂತೆ ಕಳೆದ ಮೂರು ವರ್ಷಗಳಿಂದ ಇಮ್ರಾನ್ ಖಾನ್ ಅವರು ಪಾಕಿಸ್ತಾನದ ಜೈಲಿನಲ್ಲಿದ್ದಾರೆ. ಆದರೆ, ರಾಜಕೀಯ ದ್ವೇಷದ ಹಿನ್ನೆಲೆಯಲ್ಲಿ ಅವರ ವಿರುದ್ಧ ಸುಳ್ಳು ಮತ್ತು ಪ್ರೇರಿತ ಮೊಕದ್ದಮೆಗಳನ್ನು ದಾಖಲಿಸಿ ಜೈಲಿನಲ್ಲಿಡಲಾಗಿದೆ ಎಂದು ಅವರ ಪಕ್ಷವಾದ ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ (PTI) ಗಂಭೀರವಾಗಿ ಆರೋಪಿಸುತ್ತಿದೆ.

ತಂದೆಯನ್ನು ಕೊಲ್ಲಲು ಪ್ರಯತ್ನಿಸುತ್ತಿದ್ದಾರೆ: ಇಮ್ರಾನ್ ಖಾನ್ ಮಕ್ಕಳ ಗಂಭೀರ ಆರೋಪ!
Imran Khan Sons
ಝಾಹಿರ್ ಯೂಸುಫ್
|

Updated on: Aug 29, 2026 | 11:28 AM

Share

ಲಂಡನ್‌ನ ಐತಿಹಾಸಿಕ ಲಾರ್ಡ್ಸ್ ಕ್ರಿಕೆಟ್ ಮೈದಾನದಲ್ಲಿ ನಡೆದ ಇಂಗ್ಲೆಂಡ್ ಮತ್ತು ಪಾಕಿಸ್ತಾನ್ ನಡುವಿನ ಟೆಸ್ಟ್ ಪಂದ್ಯವು ಕೇವಲ ಆಟಕ್ಕಷ್ಟೇ ಅಲ್ಲದೆ, ಜಾಗತಿಕ ರಾಜಕೀಯ ಮತ್ತು ಹೈಡ್ರಾಮಾಗೆ ಸಾಕ್ಷಿಯಾಗಿದೆ. ಪಾಕಿಸ್ತಾನದ ಮಾಜಿ ಪ್ರಧಾನಿ ಹಾಗೂ ಕ್ರಿಕೆಟ್ ದಂತಕಥೆ ಇಮ್ರಾನ್ ಖಾನ್ ಅವರ ಪುತ್ರರಾದ ಸುಲೈಮಾನ್ ಖಾನ್ ಮತ್ತು ಖಾಸಿಮ್ ಖಾನ್ ಅವರು ಸ್ಕೈ ಸ್ಪೋರ್ಟ್ಸ್​ ವಾಹಿನಿಗೆ ನೀಡಿದ 18 ನಿಮಿಷಗಳ ಸ್ಫೋಟಕ ಸಂದರ್ಶನ ಇಡೀ ಪಾಕಿಸ್ತಾನ್ ಸರ್ಕಾರ ಮತ್ತು ಕ್ರಿಕೆಟ್ ಮಂಡಳಿಯನ್ನು ಬೆಚ್ಚಿಬೀಳಿಸಿದೆ. ಇಂಗ್ಲೆಂಡ್ ಮಾಜಿ ನಾಯಕ ಮೈಕಲ್ ಅಥರ್ಟನ್ ನಡೆಸಿದ ಈ ಸಂದರ್ಶನವು ಈಗ ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

ತಂದೆಯನ್ನು ಕೊಲ್ಲಲು ಪ್ರಯತ್ನಿಸುತ್ತಿದ್ದಾರೆ!

ಸ್ಕೈ ಸ್ಪೋರ್ಟ್ಸ್​​ಗೆ ನೀಡಿದ ಸಂದರ್ಶನದಲ್ಲಿ ತಂದೆಯ ಸ್ಥಿತಿಯ ಬಗ್ಗೆ ಕಣ್ಣೀರಿಟ್ಟ ಖಾಸಿಮ್ ಖಾನ್, “ಪಾಕಿಸ್ತಾನ್ ಸರ್ಕಾರವು ನನ್ನ ತಂದೆಯನ್ನು ನೇರವಾಗಿ ಜೈಲಿನಲ್ಲಿಯೇ ಕೊಲ್ಲಲು ತಂತ್ರ ರೂಪಿಸುತ್ತಿದೆ. ಅವರ ಧ್ವನಿಯನ್ನು ಸಂಪೂರ್ಣವಾಗಿ ಅಡಗಿಸುವುದು ಮತ್ತು ಸಾಧ್ಯವಾದಷ್ಟು ಕಾಲ ಜೈಲಿನಲ್ಲಿಡುವುದೇ ಈ ಸರ್ಕಾರದ ಏಕೈಕ ಉದ್ದೇಶವಾಗಿದೆ” ಎಂದು ಗಂಭೀರ ಆರೋಪ ಮಾಡಿದ್ದಾರೆ.

ಕತ್ತಲೆಯ ಕೋಣೆಯಲ್ಲಿ ಇಮ್ರಾನ್ ಖಾನ್!

ಇಮ್ರಾನ್ ಖಾನ್ ಅವರನ್ನು ದಿನಕ್ಕೆ 23 ಗಂಟೆಗಳ ಕಾಲ ಅತ್ಯಂತ ಚಿಕ್ಕದಾದ ಕತ್ತಲೆಯ ಕೋಣೆಯಲ್ಲಿ ಇಡಲಾಗುತ್ತಿದೆ. ಅಲ್ಲದೆ ಅವರನ್ನು ಜೈಲಿನಲ್ಲಿ ಏಕಾಂಗಿಯಾಗಿ ಇಡಲಾಗಿದೆ. ಇದರಿಂದಾಗಿ ಅವರ ಆರೋಗ್ಯ ಸ್ಥಿತಿ ದಿನದಿಂದ ದಿನಕ್ಕೆ ಹದಗೆಡುತ್ತಿದೆ ಎಂದು ಪುತ್ರರು ಕಳವಳ ವ್ಯಕ್ತಪಡಿಸಿದ್ದಾರೆ.

ವೈದ್ಯಕೀಯ ಚಿಕಿತ್ಸೆಗೆ ಮನವಿ:

ಸೂಕ್ತ ಗಾಳಿ, ಬೆಳಕು ಮತ್ತು ಸೌಕರ್ಯಗಳಿಲ್ಲದ ಕಾರಣ ಅವರ ಆರೋಗ್ಯ ಸ್ಥಿತಿ ದಿನದಿಂದ ದಿನಕ್ಕೆ ಗಂಭೀರವಾಗಿ ಹದಗೆಡುತ್ತಿದೆ. ತಕ್ಷಣವೇ ಅವರಿಗೆ ಅವರ ವೈಯಕ್ತಿಕ ವೈದ್ಯರಿಂದ ತುರ್ತು ತಪಾಸಣೆ ನಡೆಸಲು ಮತ್ತು ಸೂಕ್ತ ವೈದ್ಯಕೀಯ ಚಿಕಿತ್ಸೆ ಕೊಡಿಸಲು ಅನುಮತಿ ನೀಡಬೇಕು ಎಂದು ಇಬ್ಬರೂ ಮಕ್ಕಳು ಅಂತರರಾಷ್ಟ್ರೀಯ ಮಟ್ಟದಲ್ಲಿ ಮನವಿ ಮಾಡಿದ್ದಾರೆ.

ಪಂದ್ಯ ಬಹಿಷ್ಕಾರದ ಬೆದರಿಕೆ!

ಸ್ಕೈ ಸ್ಪೋರ್ಟ್ಸ್ ನಡೆಸಿದ ಈ ಸಂದರ್ಶನದಲ್ಲಿ ರಾಜಕೀಯ ವಿಷಯಗಳು ಹೆಚ್ಚಾಗಿದ್ದರಿಂದ, ಇದನ್ನು ಪ್ರಸಾರ ಮಾಡಬಾರದು ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB) ಲಾರ್ಡ್ಸ್ ಟೆಸ್ಟ್ ಪಂದ್ಯದ ವೇಳೆ ಚಾನೆಲ್​ಗೆತೀವ್ರ ಪ್ರತಿರೋಧ ಒಡ್ಡಿತು.

ಒಂದು ವೇಳೆ ಈ ಸಂದರ್ಶನವನ್ನು ಪ್ರಸಾರ ಮಾಡಿದರೆ, ಲಂಚ್ ಬ್ರೇಕ್ ಬಳಿಕ ಪಾಕಿಸ್ತಾನದ ಆಟಗಾರರು ಮೈದಾನಕ್ಕೆ ಇಳಿಯುವುದಿಲ್ಲ ಎಂದು ಪಿಸಿಬಿ ಬೆದರಿಕೆ ಹಾಕಿತ್ತು.

ಪಿಸಿಬಿಯ ತೀವ್ರ ಒತ್ತಡದ ಕಾರಣ Sky Sports ವಾಹಿನಿಯು ಸಂದರ್ಶನವನ್ನು ಸ್ವಲ್ಪ ಸಮಯ ವಿಳಂಬಗೊಳಿಸಿತಾದರೂ, ಅಂತಿಮವಾಗಿ ಮಧ್ಯಾಹ್ನದ ಭೋಜನದ ವಿರಾಮದ ಸಮಯದಲ್ಲಿ ಅದನ್ನು ಸಂಪೂರ್ಣವಾಗಿ ಪ್ರಸಾರ ಮಾಡಿತು.

ಇಮ್ರಾನ್ ಬೆಂಬಲಕ್ಕೆ ನಿಂತ ಮಾಜಿ ಕ್ರಿಕೆಟಿಗರು!

ಇಮ್ರಾನ್ ಖಾನ್ ಅವರ ಜೈಲುವಾಸದ ಪರಿಸ್ಥಿತಿಗೆ ಕೇವಲ ಅವರ ಪುತ್ರರಷ್ಟೇ ಅಲ್ಲದೆ, ಜಾಗತಿಕ ಕ್ರಿಕೆಟ್ ದಿಗ್ಗಜರೂ ಕಳವಳ ವ್ಯಕ್ತಪಡಿಸಿದ್ದಾರೆ. ಇಂಗ್ಲೆಂಡ್‌ನ ಮಾಜಿ ನಾಯಕರಾದ ಮೈಕಲ್ ಅಥರ್ಟನ್, ಮೈಕ್ ಗ್ಯಾಟಿಂಗ್ ಮತ್ತು ಸೌತ್ ಆಫ್ರಿಕಾದ ಕೆಪ್ಲರ್ ವೆಸೆಲ್ಸ್ ಸೇರಿದಂತೆ ವಿಶ್ವದ 22 ಪ್ರಸಿದ್ಧ ಮಾಜಿ ಅಂತರರಾಷ್ಟ್ರೀಯ ಕ್ರಿಕೆಟ್ ನಾಯಕರು ಜಂಟಿಯಾಗಿ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಅವರಿಗೆ ಪತ್ರ ಬರೆದಿದ್ದಾರೆ.

ಇಮ್ರಾನ್ ಖಾನ್ ಅವರಿಗೆ ತಕ್ಷಣವೇ ಮಾನವೀಯ ಹಕ್ಕುಗಳು ಹಾಗೂ ಸೂಕ್ತ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸಬೇಕು ಎಂದು ಈ ಪತ್ರದ ಮೂಲಕ ಕಟ್ಟುನಿಟ್ಟಿನ ಒತ್ತಾಯ ಹೇರಲಾಗಿದೆ.

ಇದನ್ನೂ ಓದಿ: Forbes India 2026: ಭಾರತದ ಟಾಪ್ 5 ‘ಶ್ರೀಮಂತ’ ಕ್ರಿಕೆಟಿಗರು ಇವರೇ!

ಒಟ್ಟಾರೆಯಾಗಿ ಹೇಳುವುದಾದರೆ, ಲಾರ್ಡ್ಸ್ ಮೈದಾನದಲ್ಲಿ ನಡೆದ ಈ ಘಟನೆ ಕೇವಲ ಕ್ರಿಕೆಟ್ ಇತಿಹಾಸದಲ್ಲಷ್ಟೇ ಅಲ್ಲ, ಜಾಗತಿಕ ರಾಜಕೀಯದಲ್ಲೂ ಒಂದು ಮಹತ್ವದ ತಿರುವು ಪಡೆದುಕೊಂಡಿದೆ. ಇಮ್ರಾನ್ ಖಾನ್ ಅವರ ಪುತ್ರರ ಸ್ಫೋಟಕ ಸಂದರ್ಶನವು ಪಾಕಿಸ್ತಾನ್ ಸರ್ಕಾರದ ಅಮಾನವೀಯ ಮುಖವನ್ನು ಜಾಗತಿಕ ವೇದಿಕೆಯಲ್ಲಿ ಅನಾವರಣಗೊಳಿಸಿದೆ.

Follow Us