40 ಕೋಟಿ ಕೊಟ್ಟರೆ ಮಾತ್ರ ತಂಡದಲ್ಲಿ ಉಳಿಯುತ್ತೇವೆ; ಸ್ಟಾರ್ ಆಟಗಾರರಿಂದ ಫ್ರಾಂಚೈಸಿಗಳಿಗೆ ಶಾಕ್
ಐಪಿಎಲ್ 2027ರ ಕೊನೆಯ ಮಿನಿ ಹರಾಜು ಸನ್ನಿಹಿತ. ಆದರೆ 2028ರ ಮೆಗಾ ಹರಾಜು ಸಾಕಷ್ಟು ಕುತೂಹಲ ಮೂಡಿಸಿದೆ. ಪ್ರಮುಖ ಆಟಗಾರರು 40 ಕೋಟಿ ರೂ. ರಿಟೆನ್ಷನ್‌ಗೆ ಬೇಡಿಕೆ ಇಟ್ಟಿದ್ದಾರೆ. ತಂಡಗಳ ಪರ್ಸ್ ಮೊತ್ತ 150 ಕೋಟಿಗೆ ಏರುವ ಸಾಧ್ಯತೆಯಿದೆ. ಆಟಗಾರರ ರಿಟೆನ್ಷನ್ ಪಟ್ಟಿ ಸಲ್ಲಿಸಲು ನವೆಂಬರ್ 17ರವರೆಗೆ ಗಡುವು ವಿಸ್ತರಿಸಲಾಗಿದೆ. ಇದು ಐಪಿಎಲ್ ಭವಿಷ್ಯದ ಹರಾಜು ನೀತಿಗಳ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಐಪಿಎಲ್ 2027ರ ಹರಾಜು ಪ್ರಕ್ರಿಯೆ ಮುಂಬರುವ ಮೆಗಾ ಹರಾಜಿಗೂ ಮುನ್ನ ನಡೆಯಲಿರುವ ಕೊನೆಯ ಮಿನಿ ಹರಾಜಾಗಿದೆ. ಮಿನಿ ಹರಾಜಿನಲ್ಲಿ ಬಹುತೇಕ ತಂಡಗಳು ಕೇವಲ ಐದರಿಂದ ಆರು ಆಟಗಾರರ ಸ್ಥಾನಗಳನ್ನು ಮಾತ್ರ ಭರ್ತಿ ಮಾಡಿಕೊಳ್ಳುವ ಅವಕಾಶ ಹೊಂದಿರುತ್ತವೆ. ಆದರೆ ಮೆಗಾ ಹರಾಜಿನಲ್ಲಿ ಎಲ್ಲಾ ತಂಡಗಳು ಹೊಸದಾಗಿ ಆಟಗಾರರ ಬಳಗವನ್ನು ಕಟ್ಟಿಕೊಳ್ಳಬೇಕಾಗುತ್ತದೆ. ಹೀಗಾಗಿ ಐಪಿಎಲ್ ಮೆಗಾ ಹರಾಜು ಯಾವಾಗಲೂ ಸಾಕಷ್ಟು ಕುತೂಹಲ ಮತ್ತು ನಿರೀಕ್ಷೆ ಮೂಡಿಸುತ್ತದೆ. ಮುಂದಿನ ಅಂದರೆ 2028ರ ಐಪಿಎಲ್ ಆವೃತ್ತಿಗೆ ಸಂಬಂಧಿಸಿದ ಮೆಗಾ ಹರಾಜು ನಡೆಯಲು ಇನ್ನೂ ಒಂದು ವರ್ಷಕ್ಕೂ ಹೆಚ್ಚು ಸಮಯವಿದೆ. ಬಹುತೇಕ 2027ರ ಡಿಸೆಂಬರ್‌ನಲ್ಲಿ ಈ ಹರಾಜು ನಡೆಯುವ ಸಾಧ್ಯತೆಯಿದೆ.
ಆಟಗಾರರ ರಿಟೆನ್ಷನ್‌ಗೆ 40 ಕೋಟಿ ಬೇಡಿಕೆ
ಕ್ರಿಕ್‌ಬಜ್ ವರದಿಯ ಪ್ರಕಾರ, ಐಪಿಎಲ್‌ನ ಕೆಲವು ಪ್ರಮುಖ ಆಟಗಾರರು ತಮ್ಮನ್ನು ತಂಡದಲ್ಲೇ ಉಳಿಸಿಕೊಳ್ಳಲು 40 ಕೋಟಿ ರೂ. ಸಂಭಾವನೆ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ. ಇಷ್ಟು ಮೊತ್ತ ನೀಡಿದರೆ ಮಾತ್ರ ತಮ್ಮ ಹಾಲಿ ತಂಡಗಳಲ್ಲೇ ಮುಂದುವರಿಯಲು ಸಿದ್ಧರಿರುವುದಾಗಿ ಫ್ರಾಂಚೈಸಿಗಳಿಗೆ ತಿಳಿಸಿದ್ದಾರೆ ಎನ್ನಲಾಗಿದೆ. ಇದಲ್ಲದೆ, ಹರಾಜಿನಲ್ಲಿ ಭಾರಿ ಮೊತ್ತಕ್ಕೆ ಖರೀದಿಯಾಗುವ ವಿಶ್ವಾಸ ಹೊಂದಿರುವ ಇನ್ನಷ್ಟು ಆಟಗಾರರು ಕೂಡ ಇದೇ ರೀತಿಯ ಬೇಡಿಕೆ ಮುಂದಿಡುವ ಸಾಧ್ಯತೆಯಿದೆ ಎಂದು ವರದಿ ತಿಳಿಸಿದೆ.
ಐಪಿಎಲ್ ಇತಿಹಾಸದಲ್ಲಿ 40 ಕೋಟಿ ರೂ. ಸಂಭಾವನೆ ಎಂಬುದು ಈವರೆಗೆ ಕೇಳಿಬರದ ದೊಡ್ಡ ಮೊತ್ತವಾಗಿದೆ. 2025ರ ಐಪಿಎಲ್ ಹರಾಜಿನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡ ರಿಷಭ್ ಪಂತ್ ಅವರನ್ನು 27 ಕೋಟಿಗೆ ಖರೀದಿಸಿತ್ತು. ಈವರೆಗೆ ಐಪಿಎಲ್ ಹರಾಜಿನಲ್ಲಿ ಆಟಗಾರನೊಬ್ಬನಿಗೆ ಫ್ರಾಂಚೈಸಿ ನೀಡಿದ ಅತ್ಯಧಿಕ ಮೊತ್ತ ಇದೇ ಆಗಿದೆ.
ತಂಡಗಳ ಪರ್ಸ್ ಮೊತ್ತ 150 ಕೋಟಿಗೆ ಏರಿಕೆ?
ಪ್ರಸ್ತುತ ಐಪಿಎಲ್‌ನಲ್ಲಿ ಪ್ರತಿ ತಂಡಕ್ಕೆ ಆಟಗಾರರನ್ನು ಖರೀದಿಸಲು 120 ಕೋಟಿ ರೂ. ಪರ್ಸ್ ಮೊತ್ತ ನಿಗದಿಪಡಿಸಲಾಗಿದೆ. ಆದರೆ 2028ರ ಮೆಗಾ ಹರಾಜಿನ ವೇಳೆಗೆ ಈ ಮೊತ್ತವನ್ನು ಸುಮಾರು 150 ಕೋಟಿಗೆ ಹೆಚ್ಚಿಸುವ ಸಾಧ್ಯತೆಯಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ನವೆಂಬರ್ 17ರವರೆಗೆ ಗಡುವು ವಿಸ್ತರಣೆ
ಐಪಿಎಲ್ 2027ರ ಮಿನಿ ಹರಾಜಿಗೂ ಮುನ್ನ ತಮ್ಮ ತಂಡದಲ್ಲಿ ಉಳಿಸಿಕೊಳ್ಳುವ ಮತ್ತು ಬಿಡುಗಡೆ ಮಾಡುವ ಆಟಗಾರರ ಪಟ್ಟಿಯನ್ನು ಅಂತಿಮಗೊಳಿಸಲು ಎಲ್ಲಾ 10 ಫ್ರಾಂಚೈಸಿಗಳಿಗೆ ನೀಡಲಾಗಿದ್ದ ಗಡುವನ್ನು ಬಿಸಿಸಿಐ ಎರಡು ದಿನಗಳ ಕಾಲ ವಿಸ್ತರಿಸಿದೆ. ಇದೀಗ ನವೆಂಬರ್ 17ರೊಳಗೆ ತಂಡಗಳು ತಮ್ಮ ಅಂತಿಮ ಪಟ್ಟಿಯನ್ನು ಸಲ್ಲಿಸಬೇಕಿದೆ. ಈ ಮೊದಲು ನವೆಂಬರ್ 15 ಕೊನೆಯ ದಿನವಾಗಿತ್ತು. ಅಂದು ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಐದನೇ ಏಕದಿನ ಪಂದ್ಯವೂ ನಡೆಯಲಿದೆ ಹೀಗಾಗಿ ದಿನಾಂಕವನ್ನು ಬದಲಿಸಲಾಗಿದೆ.
ಹರಾಜಿಗೂ ಮುನ್ನ ಹೈದರಾಬಾದ್-ಚೆನ್ನೈ ನಡುವೆ ಮೆಗಾ ಡೀಲ್; ನಾಲ್ವರು ಆಟಗಾರರ ವಿನಿಮಯ
ಎಲ್ಲಾ ತಂಡಗಳು ತಮ್ಮ ರಿಟೆನ್ಷನ್ ಮತ್ತು ಬಿಡುಗಡೆ ಪಟ್ಟಿಯನ್ನು ಸಲ್ಲಿಸಿದ ಬಳಿಕ, ನೋಂದಣಿ ಮಾಡಿಕೊಂಡಿರುವ ಆಟಗಾರರ ಪಟ್ಟಿಯನ್ನು ಐಪಿಎಲ್ ಆಡಳಿತ ಮಂಡಳಿ ಫ್ರಾಂಚೈಸಿಗಳಿಗೆ ನೀಡಲಿದೆ. ಬಳಿಕ ತಂಡಗಳು ತಮಗೆ ಬೇಕಾದ ಆಟಗಾರರನ್ನು ಆಯ್ಕೆ ಮಾಡಿಕೊಂಡು ಅಂತಿಮ ಹರಾಜು ಪಟ್ಟಿಯನ್ನು ಸಿದ್ಧಪಡಿಸಲಿವೆ. ಹರಾಜಿಗೆ ಒಂದು ವಾರ ಬಾಕಿ ಇರುವಾಗ ಆಟಗಾರರ ಅಂತಿಮ ಪಟ್ಟಿ ಮತ್ತು ಹರಾಜಿನ ಸೆಟ್‌ಗಳ ಕ್ರಮವನ್ನು ಪ್ರಕಟಿಸಲಾಗುತ್ತದೆ.




