AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs AFG: ಈತನಿಗೆ 3ನೇ ಕ್ರಮಾಂಕ, ಸ್ಪಿನ್ನರ್​ ಪಾದಾರ್ಪಣೆ; ಪ್ಲೇಯಿಂಗ್ 11 ಬಗ್ಗೆ ಗಂಭೀರ್ ಮಾತು

India vs Afghanistan Test: ಜೂನ್ 6 ರಿಂದ ಆರಂಭವಾಗಲಿರುವ ಭಾರತ-ಅಫ್ಘಾನಿಸ್ತಾನ ಟೆಸ್ಟ್ ಪಂದ್ಯಕ್ಕೆ ಶುಭ್‌ಮನ್ ಗಿಲ್ ನೇತೃತ್ವದ ಭಾರತ ತಂಡ ಸಿದ್ಧವಾಗಿದೆ. ಕೋಚ್ ಗೌತಮ್ ಗಂಭೀರ್ ಪ್ರಮುಖ ಮಾಹಿತಿಯನ್ನು ಹಂಚಿಕೊಂಡಿದ್ದು, ಸಾಯಿ ಸುದರ್ಶನ್‌ಗೆ 3ನೇ ಕ್ರಮಾಂಕ ಖಚಿತಪಡಿಸಿದ್ದಾರೆ. ಅಲ್ಲದೆ, ಹರ್ಷ್ ದುಬೆ ಅಥವಾ ಮಾನವ್ ಸುತಾರ್‌ರಲ್ಲಿ ಒಬ್ಬ ಹೊಸ ಸ್ಪಿನ್ನರ್ ಈ ಪಂದ್ಯದಲ್ಲಿ ಪಾದಾರ್ಪಣೆ ಮಾಡಲಿದ್ದಾರೆ ಎಂದು ಗಂಭೀರ್ ತಿಳಿಸಿದ್ದಾರೆ.

IND vs AFG: ಈತನಿಗೆ 3ನೇ ಕ್ರಮಾಂಕ, ಸ್ಪಿನ್ನರ್​ ಪಾದಾರ್ಪಣೆ; ಪ್ಲೇಯಿಂಗ್ 11 ಬಗ್ಗೆ ಗಂಭೀರ್ ಮಾತು
Gautam Gambhir
ಪೃಥ್ವಿಶಂಕರ
|

Updated on: Jun 05, 2026 | 8:00 PM

Share

ಭಾರತ ಹಾಗೂ ಅಫ್ಘಾನಿಸ್ತಾನ (India vs Afghanistan) ನಡುವಿನ ಏಕೈಕ ಟೆಸ್ಟ್ ಪಂದ್ಯ ಜೂನ್ 6 ರಿಂದ ಚಂಡೀಗಢದ ಮುಲ್ಲನ್‌ಪುರ ಕ್ರೀಡಾಂಗಣದಲ್ಲಿ ಆರಂಭವಾಗಲಿದೆ. ಯುವ ಅನುಭವಿ ಶುಭ್‌ಮನ್ ಗಿಲ್ (Shubman Gill) ನೇತೃತ್ವದ ಭಾರತ ತಂಡ ಬರೋಬ್ಬರಿ 193 ದಿನಗಳ ನಂತರ ಟೆಸ್ಟ್ ಪಂದ್ಯವನ್ನು ಆಡುತ್ತಿದೆ. ಹೀಗಾಗಿ ಈ ಪಂದ್ಯಕ್ಕೆ ಟೀಂ ಇಂಡಿಯಾದ ಪ್ಲೇಯಿಂಗ್ 11 ಹೇಗಿರಲಿದೆ ಎಂಬುದು ಪ್ರಶ್ನೆಯಾಗಿದೆ. ಇದೀಗ ಎಂದಿನಂತೆ ಟೆಸ್ಟ್ ಪಂದ್ಯಕ್ಕೂ ಮುನ್ನ, ಟೀಂ ಇಂಡಿಯಾ ಮುಖ್ಯ ಕೋಚ್ ಗೌತಮ್ ಗಂಭೀರ್ (Gautam Gambhir) ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿ ತಂಡದ ಆಡುವ ಹನ್ನೊಂದರ ಬಳಗಕ್ಕೆ ಸಂಬಂಧಿಸಿದ ಪ್ರಮುಖ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಸುದರ್ಶನ್​ಗೆ 3 ನೇ ಕ್ರಮಾಂಕ

ಈ ಮೊದಲಿನಂತೆ ಯಶಸ್ವಿ ಜೈಸ್ವಾಲ್ ಹಾಗೂ ಶುಭ್​ಮನ್ ಗಿಲ್ ಇನ್ನಿಂಗ್ಸ್ ಆರಂಭಿಸುವುದು ಖಚಿತ. ಆದರೆ 3ನೇ ಕ್ರಮಾಂಕ ಯಾರಿಗೆ ಸಿಗಲಿದೆ ಎಂಬುದು ಪ್ರಶ್ನೆಯಾಗಿತ್ತು. ಆ ಪ್ರಶ್ನೆಗೆ ಖಚಿತ ಉತ್ತರ ನೀಡಿರುವ ಗೌತಮ್ ಗಂಭೀರ್, ಸಾಯಿ ಸುದರ್ಶನ್​ಗೆ 3ನೇ ಕ್ರಮಾಂಕ ನೀಡುವುದಾಗಿ ಹೇಳಿದ್ದಾರೆ. ವಾಸ್ತವವಾಗಿ ಇಂಗ್ಲೆಂಡ್ ಸರಣಿಯಲ್ಲಿ ನಿರೀಕ್ಷೆಯಂತೆ ಪ್ರದರ್ಶನ ನೀಡದ ಸಾಯಿ ಸುದರ್ಶನ್ ಅವರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಟೀಕೆಗಳು ಕೇಳಿಬಂದಿದ್ದವು. ಆದಾಗ್ಯೂ, ಗಂಭೀರ್ ತಮ್ಮ ಪತ್ರಿಕಾಗೋಷ್ಠಿಯ ಮೂಲಕ ಅವೆಲ್ಲಕ್ಕೂ ಉತ್ತರಿಸಿ, ಕೇವಲ ನಾಲ್ಕು ಅಥವಾ ಐದು ಪಂದ್ಯಗಳಲ್ಲಿ ಅವರ ಪ್ರದರ್ಶನವನ್ನು ಆಧರಿಸಿ ನೀವು ಆಟಗಾರನನ್ನು ನಿರ್ಣಯಿಸಿದರೆ, ನೀವು ಬಲವಾದ ತಂಡವನ್ನು ನಿರ್ಮಿಸಲು ಸಾಧ್ಯವಿಲ್ಲ, ಅದಕ್ಕಾಗಿಯೇ ಸಾಯಿ ಸುದರ್ಶನ್ ಅವರಿಗೆ ಹೆಚ್ಚಿನ ಅವಕಾಶಗಳನ್ನು ನೀಡುವುದಾಗಿ ಹೇಳಿದರು.

ಟೆಸ್ಟ್​ನಲ್ಲಿ ಸುದರ್ಶನ್ ಪ್ರದರ್ಶನ

ಐಪಿಎಲ್ 2025 ರಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ 24 ವರ್ಷದ ಸಾಯಿ ಸುದರ್ಶನ್ ಅವರನ್ನು ಭಾರತೀಯ ಟೆಸ್ಟ್ ತಂಡಕ್ಕೆ ಆಯ್ಕೆ ಮಾಡಲಾಯಿತು. ಇಂಗ್ಲೆಂಡ್‌ನಲ್ಲಿ ನಡೆದ ಟೆಸ್ಟ್ ಸರಣಿಯಲ್ಲಿ ಪಾದಾರ್ಪಣೆ ಮಾಡಿದ ಸಾಯಿ ಕೇವಲ ನಾಲ್ಕು ಎಸೆತಗಳನ್ನು ಎದುರಿಸಿ ಮೊದಲ ಇನ್ನಿಂಗ್ಸ್‌ನಲ್ಲಿ ಶೂನ್ಯಕ್ಕೆ ಔಟಾದರು. ಆ ಸರಣಿಯ ಆಡಿದ 6 ಇನ್ನಿಂಗ್ಸ್‌ಗಳಲ್ಲಿ, ಅವರು 23.33 ರ ಸರಾಸರಿಯಲ್ಲಿ ಕೇವಲ 140 ರನ್ ಗಳಿಸಲಷ್ಟೇ ಶಕ್ತರಾಗಿದ್ದರು.

ಇದರಲ್ಲಿ ಎರಡು ಡಕ್ ಮತ್ತು ಕೇವಲ ಒಂದು ಅರ್ಧಶತಕ ಸೇರಿತ್ತು. ಸ್ಥಿರತೆಯ ಕೊರತೆಯಿಂದಾಗಿ ಅವರು ಆ ಸರಣಿಯಲ್ಲಿ ಕೆಲವು ಪಂದ್ಯಗಳನ್ನು ತಪ್ಪಿಸಿಕೊಂಡರು. ಅದರ ನಂತರ, ನಡೆದಿದ್ದ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಇನ್ನಿಂಗ್ಸ್‌ವೊಂದರಲ್ಲಿ 87 ರನ್ ಕಲೆಹಾಕಿದರು. ಆದರೆ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಮತ್ತೊಮ್ಮೆ ನಿರಾಸೆ ಮೂಡಿಸಿದ ಸುದರ್ಶನ್ ಆಡಿದ 2 ಇನ್ನಿಂಗ್ಸ್‌ಗಳಲ್ಲಿ ಕೇವಲ 29 ರನ್ ಕಲೆಹಾಕಿದರು. ಈ ಕಳಪೆ ದಾಖಲೆಯ ಹೊರತಾಗಿಯೂ ಗಂಭೀರ್, ಸುದರ್ಶನ್​ಗೆ ಮತ್ತೊಂದು ಅವಕಾಶವನ್ನು ನೀಡುತ್ತಿದ್ದಾರೆ.

ವಿಶ್ವ ಕ್ರಿಕೆಟ್​ನಲ್ಲಿ ಈಗ ವೈಭವ್​ದೇ ಮಾತು; ಟೆಸ್ಟ್​ಗೆ ಆಯ್ಕೆ ಮಾಡಿ ಎಂದ ದಿಗ್ಗಜ ಕ್ರಿಕೆಟಿಗರು

ಹೊಸ ಸ್ಪಿನ್ನರ್ ಪ್ರವೇಶ ಖಚಿತ

ಸಾಯಿ ಸುದರ್ಶನ್ ಜೊತೆಗೆ, ಸ್ಪಿನ್ ವಿಭಾಗದಲ್ಲಿ ಹೊಸ ಆಟಗಾರನ ಪ್ರವೇಶವನ್ನು ಗಂಭೀರ್ ಖಚಿತ ಪಡಿಸಿದ್ದಾರೆ. ಐಪಿಎಲ್ 2026 ರಲ್ಲಿ ಸ್ಪಿನ್ ಮ್ಯಾಜಿಕ್ ಮೂಲಕ ವಿಮರ್ಶಕರ ಮೆಚ್ಚುಗೆ ಪಡೆದ ಹರ್ಷ್ ದುಬೆ ಅಥವಾ ಮಾನವ್ ಸುತಾರ್ ಅವರಲ್ಲಿ ಒಬ್ಬರು ನಾಳೆ ಟೆಸ್ಟ್ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡುವುದು ಖಚಿತ ಎಂದು ಕೋಚ್ ಹೇಳಿದ್ದಾರೆ. ಇಬ್ಬರೂ ಒಂದೇ ರೀತಿಯ ಕೌಶಲ್ಯಗಳನ್ನು ಹೊಂದಿದ್ದು, ಮುಂಬರುವ ಶ್ರೀಲಂಕಾ ಸರಣಿಗೆ ಸ್ಪಿನ್ನರ್‌ಗಳ ಅಗತ್ಯತೆ ಹೆಚ್ಚಿದೆ. ಹೀಗಾಗಿ ಶ್ರೀಲಂಕಾ ಪ್ರವಾಸವನ್ನು ಗಮನದಲ್ಲಿಟ್ಟುಕೊಂಡು ಈ ಇಬ್ಬರಲ್ಲಿ ಒಬ್ಬರನ್ನು ಇಲ್ಲಿ ಪರೀಕ್ಷಿಸಲು ಬಯಸುತ್ತೇನೆ ಎಂದಿದ್ದಾರೆ.

ಸಂಭಾವ್ಯ ಪ್ಲೇಯಿಂಗ್ 11: ಯಶಸ್ವಿ ಜೈಸ್ವಾಲ್, ಶುಭ್​ಮನ್ ಗಿಲ್, ಸಾಯಿ ಸುದರ್ಶನ್, ದೇವದತ್ ಪಡಿಕ್ಕಲ್, ಕೆಎಲ್ ರಾಹುಲ್, ರಿಷಭ್ ಪಂತ್, ನಿತೀಶ್ ಕುಮಾರ್ ರೆಡ್ಡಿ, ವಾಷಿಂಗ್ಟನ್ ಸುಂದರ್, ಹರ್ಷ್ ದುಬೆ ಅಥವಾ ಮಾನವ್ ಸುತಾರ್, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
pruthvi Shankar
pruthvi Shankar

ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ, ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ನೆಲೆ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ನಾನು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ನನ್ನ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ನನ್ನ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More