AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

39 ವರ್ಷಗಳಲ್ಲೇ ಮಹಾ ಕುಸಿತ: ಪಾಕಿಸ್ತಾನ್ ಟೆಸ್ಟ್ ಕ್ರಿಕೆಟ್ ‘ಪತನ’!

ಪಾಕಿಸ್ತಾನ್ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಇಂತಹದೊಂದು ಹಿನ್ನಡೆ ಉಂಟಾಗುತ್ತದೆ ಎಂದು ಯಾರೂ ಊಹಿಸಿರಲಿಲ್ಲ. ಇಂಗ್ಲೆಂಡ್ ವಿರುದ್ಧ ಲಾರ್ಡ್ಸ್ ಮೈದಾನದಲ್ಲಿ ಅನುಭವಿಸಿದ ಭೀಕರ ಸೋಲು ಪಾಕ್ ತಂಡದ ಭವ್ಯ ಇತಿಹಾಸಕ್ಕೆ ದೊಡ್ಡ ಪೆಟ್ಟು ನೀಡಿದೆ. ಕಳೆದ 39 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಪಾಕಿಸ್ತಾನದ ಒಟ್ಟಾರೆ ಟೆಸ್ಟ್ ಇತಿಹಾಸದಲ್ಲಿ ಗೆಲುವಿಗಿಂತ ಸೋಲಿನ ಸಂಖ್ಯೆಯೇ ಹೆಚ್ಚಾಗಿದೆ. 

39 ವರ್ಷಗಳಲ್ಲೇ ಮಹಾ ಕುಸಿತ: ಪಾಕಿಸ್ತಾನ್ ಟೆಸ್ಟ್ ಕ್ರಿಕೆಟ್ 'ಪತನ'!
Pakistan Image Credit source: GettyImages
ಝಾಹಿರ್ ಯೂಸುಫ್
|

Updated on: Aug 31, 2026 | 2:04 PM

Share

ಅದು 1987ರ ಆಗಸ್ಟ್ ತಿಂಗಳು. ಅಂದು ಇಂಗ್ಲೆಂಡ್ ವಿರುದ್ಧದ ಪಂದ್ಯದ ಬಳಿಕ ಪಾಕಿಸ್ತಾನದ ಟೆಸ್ಟ್ ಇತಿಹಾಸದಲ್ಲಿ ಗೆಲುವಿಗಿಂತ ಸೋಲುಗಳೇ ಹೆಚ್ಚಾಗಿದ್ದವು. ಆ ಘಟನೆ ನಡೆದು 39 ವರ್ಷಗಳೇ ಕಳೆದಿವೆ. ಜಾವೇದ್ ಮಿಯಾಂದಾದ್ ಅವರಿಂದ ಹಿಡಿದು ಮಿಸ್ಬಾ-ಉಲ್-ಹಕ್ ಅವರವರೆಗೆ ಹಲವು ದಿಗ್ಗಜರು ಕಟ್ಟಿಬೆಳೆಸಿದ್ದ ಪಾಕ್ ಟೆಸ್ಟ್ ಸಾಮ್ರಾಜ್ಯ ಇದೀಗ ಮತ್ತೆ ಧೂಳೀಪಟವಾಗಿದೆ. 2026ರ ಆಗಸ್ಟ್ 31ರಂದು ಲಾರ್ಡ್ಸ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಎದುರಿಸಿದ ಸೋಲು, ಪಾಕಿಸ್ತಾನವನ್ನು ಮತ್ತೆ 39 ವರ್ಷಗಳ ಹಿಂದಿನ ಇತಿಹಾಸದ ಕಹಿ ಪುಟಗಳಿಗೆ ತಂದು ನಿಲ್ಲಿಸಿದೆ.

ಅಂದರೆ ಲಾರ್ಡ್ಸ್ ಮೈದಾನದಲ್ಲಿ ಇಂಗ್ಲೆಂಡ್ ವಿರುದ್ಧ ಎದುರಿಸಿದ 194 ರನ್‌ಗಳ ಹೀನಾಯ ಸೋಲು ಪಾಕಿಸ್ತಾನದ ಹೆಮ್ಮೆಯ ಟೆಸ್ಟ್ ಇತಿಹಾಸವನ್ನೇ ಬುಡಮೇಲು ಮಾಡಿದೆ. ಈ ಸೋಲಿನೊಂದಿಗೆ ಇಂಗ್ಲೆಂಡ್ ವಿರುದ್ಧದ 3 ಪಂದ್ಯಗಳ ಸರಣಿಯನ್ನು 0-2 ಅಂತರದಿಂದ ಕೈಚೆಲ್ಲಿರುವುದು ಮಾತ್ರವಲ್ಲದೆ, ಕಳೆದ 39 ವರ್ಷಗಳಲ್ಲಿ ಮೊದಲ ಬಾರಿಗೆ ಪಾಕಿಸ್ತಾನದ ಒಟ್ಟಾರೆ ಟೆಸ್ಟ್ ದಾಖಲೆಯಲ್ಲಿ ಗೆಲುವಿಗಿಂತ ಸೋಲಿನ ಸಂಖ್ಯೆಯೇ ಹೆಚ್ಚಾಗಿದೆ.

ಅಂಕಿ-ಅಂಶಗಳ ಇತಿಹಾಸ!

ಲಾರ್ಡ್ಸ್ ಟೆಸ್ಟ್ ಮುಕ್ತಾಯದ ಬಳಿಕ ಪಾಕಿಸ್ತಾನದ ಸಾರ್ವಕಾಲಿಕ ಟೆಸ್ಟ್ ಕ್ರಿಕೆಟ್ ಮೈಲಿಗಲ್ಲು ಈ ಕೆಳಗಿನಂತೆ ಕುಸಿದಿದೆ:

  • ಒಟ್ಟು ಆಡಿದ ಪಂದ್ಯಗಳು: 473
  • ಗೆಲುವು: 153
  • ಸೋಲು: 154
  • ಡ್ರಾ: 166

ಪಾಕಿಸ್ತಾನ ತಂಡದ ಒಟ್ಟಾರೆ ಟೆಸ್ಟ್ ಇತಿಹಾಸದಲ್ಲಿ ಗೆಲುವಿನ ಅನುಪಾತವು 1:1 ಕ್ಕಿಂತ ಕೆಳಗೆ ಕುಸಿದಿರುವುದು ಇತ್ತೀಚಿನ ದಶಕಗಳಲ್ಲಿ ಇದೇ ಮೊದಲು.

ಮರುಕಳಿಸಿದ ಇತಿಹಾಸ!

ಇದಕ್ಕೂ ಮುನ್ನ 1987ರ ಆಗಸ್ಟ್‌ನಲ್ಲಿ ಇಂಗ್ಲೆಂಡ್ ವಿರುದ್ಧದ ಓವಲ್ ಟೆಸ್ಟ್ ಪಂದ್ಯದ ವೇಳೆ ಪಾಕಿಸ್ತಾನದ ಟೆಸ್ಟ್ ಇತಿಹಾಸದಲ್ಲಿ ಗೆಲುವಿಗಿಂತ ಸೋಲು ಹೆಚ್ಚಾಗಿತ್ತು (ಅಂದು 39 ಗೆಲುವು, 40 ಸೋಲು). ಆ ಬಳಿಕ ಜಾವೇದ್ ಮಿಯಾಂದಾದ್, ಇಮ್ರಾನ್ ಖಾನ್, ವಾಸಿಂ ಅಕ್ರಮ್, ಇಂಜಮಾಮ್-ಉಲ್-ಹಕ್ ಮತ್ತು ಮಿಸ್ಬಾ-ಉಲ್-ಹಕ್ ಅವರಂತಹ ದಿಗ್ಗಜರ ನಾಯಕತ್ವದಲ್ಲಿ ಪಾಕಿಸ್ತಾನದ ಟೆಸ್ಟ್ ಕ್ರಿಕೆಟ್ ಸುವರ್ಣ ಯುಗವನ್ನು ಕಂಡಿತ್ತು ಮತ್ತು ಗೆಲುವಿನ ಸಂಖ್ಯೆಯನ್ನು ಸದಾ ಮುಂಚೂಣಿಯಲ್ಲಿ ಕಾಯ್ದುಕೊಂಡಿತ್ತು. ಆದರೆ ಈಗ ಬರೋಬ್ಬರಿ 39 ವರ್ಷಗಳ ನಂತರ ಇತಿಹಾಸ ಮತ್ತೆ ಮರುಕಳಿಸಿದೆ.

ಸತತ 6 ಟೆಸ್ಟ್ ಸೋಲುಗಳ ಆಘಾತ!

ಪ್ರಸ್ತುತ ಬಾಬರ್ ಆಝಂ ನಾಯಕತ್ವದ ಪಾಕಿಸ್ತಾನ ತಂಡವು ಅತ್ಯಂತ ಕಳಪೆ ಫಾರ್ಮ್‌ನಲ್ಲಿದೆ. ತಂಡವು ಈಗ ಸತತ 6 ಟೆಸ್ಟ್ ಪಂದ್ಯಗಳಲ್ಲಿ ಸೋಲನ್ನು ಅನುಭವಿಸಿದೆ. ಜೊತೆಗೆ, SENA (ಸೌತ್ ಆಫ್ರಿಕಾ, ಇಂಗ್ಲೆಂಡ್, ನ್ಯೂಝಿಲೆಂಡ್, ಆಸ್ಟ್ರೇಲಿಯಾ) ರಾಷ್ಟ್ರಗಳ ಮಣ್ಣಿನಲ್ಲಿ 2018ರ ನಂತರ ಪಾಕಿಸ್ತಾನ್ ತಂಡ ಒಂದೂ ಟೆಸ್ಟ್ ಪಂದ್ಯವನ್ನು ಗೆದ್ದಿಲ್ಲ ಎಂಬ ಕಹಿ ಸತ್ಯವೂ ಈ ಅಂಕಿ-ಅಂಶಗಳ ಕುಸಿತಕ್ಕೆ ಪ್ರಮುಖ ಕಾರಣವಾಗಿದೆ.

ಇದನ್ನೂ ಓದಿ: ನರ್ವಸ್ ನೈಂಟೀಸ್: ವೈಭವ್ ತಪ್ಪಿಸಿಕೊಂಡ ಶತಕಗಳು ಎಷ್ಟು ಗೊತ್ತಾ?

ಕ್ರಿಕೆಟ್ ಜಗತ್ತಿನಲ್ಲಿ ಸದಾ ‘ಅನಿರೀಕ್ಷಿತ ತಂಡ’ ಎಂದೇ ಹೆಸರಾಗಿದ್ದ ಪಾಕಿಸ್ತಾನ್, ಇದೀಗ ತನ್ನ ಟೆಸ್ಟ್ ಅಸ್ತಿತ್ವವನ್ನು ಉಳಿಸಿಕೊಳ್ಳಲು ಮತ್ತು ಕಳೆದುಹೋದ ಗೌರವವನ್ನು ಮರಳಿ ಪಡೆಯಲು ಭಾರಿ ಬದಲಾವಣೆಗಳನ್ನು ಮಾಡಬೇಕಾದ ಅನಿವಾರ್ಯತೆಗೆ ಸಿಲುಕಿದೆ. ಕಳೆದ 39 ವರ್ಷಗಳಿಂದ ದಿಗ್ಗಜ ಆಟಗಾರರು ಕಷ್ಟಪಟ್ಟು ಕಟ್ಟಿದ್ದ ಕ್ರಿಕೆಟ್ ಸಾಮ್ರಾಜ್ಯ ಈಗ ಕಣ್ಣೆದುರೇ ಧೂಳೀಪಟವಾಗುತ್ತಿರುವುದು ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಚಿಂತೆಯನ್ನು ಮತ್ತಷ್ಟು ಹೆಚ್ಚಿಸಿದೆ.

Follow Us