AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಶಿಷ್ಟ ನಾಯಕತ್ವದ ಸೀಕ್ರೆಟ್ ಬಿಚ್ಚಿಟ್ಟ ಶ್ರೇಯಸ್ ಅಯ್ಯರ್!

ಭಾರತ ಮತ್ತು ಅಫ್ಘಾನಿಸ್ತಾನ್ ನಡುವಿನ ಮೂರು ಪಂದ್ಯಗಳ ಟಿ20 ಸರಣಿಯು ಸೆಪ್ಟೆಂಬರ್ 13, 2026 ರಿಂದ ಆರಂಭವಾಗಲಿದೆ. ಈ ಸರಣಿಯ ದ್ವಿತೀಯ ಪಂದ್ಯ ಸೆಪ್ಟೆಂಬರ್ 15 ರಂದು ಹಾಗೂ ತೃತೀಯ ಪಂದ್ಯ ಸೆಪ್ಟೆಂಬರ್ 17 ರಂದು ಜರುಗಲಿದೆ. ಇನ್ನು ಈ ಸರಣಿಯ ಎಲ್ಲಾ ಪಂದ್ಯಗಳಿಗೂ ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂ ಆತಿಥ್ಯ ವಹಿಸಲಿದೆ.

ವಿಶಿಷ್ಟ ನಾಯಕತ್ವದ ಸೀಕ್ರೆಟ್ ಬಿಚ್ಚಿಟ್ಟ ಶ್ರೇಯಸ್ ಅಯ್ಯರ್!
ಶ್ರೇಯಸ್ ಅಯ್ಯರ್Image Credit source: BCCI
ಝಾಹಿರ್ ಯೂಸುಫ್
|

Updated on: Sep 13, 2026 | 7:09 AM

Share

ಅಫ್ಘಾನಿಸ್ತಾನ್ ವಿರುದ್ಧದ ಟಿ20 ಸರಣಿಗೂ ಮುನ್ನ ನಡೆದ ಪತ್ರಿಕಾಗೋಷ್ಠಿಯಲ್ಲಿ ಭಾರತ ಟಿ20 ತಂಡದ ನಾಯಕ ಶ್ರೇಯಸ್ ಅಯ್ಯರ್ ಹಲವು ಪ್ರಮುಖ ವಿಷಯಗಳನ್ನು ಹಂಚಿಕೊಂಡಿದ್ದಾರೆ. ಮುಖ್ಯ ತರಬೇತುದಾರ ಗೌತಮ್ ಗಂಭೀರ್ ಅವರೊಂದಿಗಿನ ಒಡನಾಟ, ಜಸ್​ಪ್ರೀತ್ ಬುಮ್ರಾ ಅವರ ಫಿಟ್‌ನೆಸ್ ಮತ್ತು ತಮ್ಮ ವಿಭಿನ್ನ ನಾಯಕತ್ವದ ಶೈಲಿಯ ಬಗ್ಗೆ ಅಯ್ಯರ್ ಮುಕ್ತವಾಗಿ ಮಾತನಾಡಿದ್ದಾರೆ. ಈ ಪತ್ರಿಕಾಗೋಷ್ಠಿಯ ಪ್ರಮುಖ ಮುಖ್ಯಾಂಶಗಳು ಇಲ್ಲಿವೆ.

ಗಂಭೀರ್ ಅದ್ಭುತ:

‘ಕೋಲ್ಕತಾ ನೈಟ್ ರೈಡರ್ಸ್ (KKR) ತಂಡದಲ್ಲಿ ಗೌತಮ್ ಗಂಭೀರ್ ಅವರೊಂದಿಗೆ ಯಶಸ್ವಿಯಾಗಿ ಕಾರ್ಯ ನಿರ್ವಹಿಸಿದ್ದ ಜಂಟಿ  ಶ್ರೇಯಸ್ ಅಯ್ಯರ್, ಗಂಭೀರ್ ಅವರ ತರಬೇತಿ ಶೈಲಿಯನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

ಗಂಭೀರ್ ಮೈದಾನಕ್ಕಿಳಿದರೆ ಕೇವಲ ಗೆಲುವಿಗಾಗಿ ಮಾತ್ರ ಆಡುತ್ತಾರೆ ಮತ್ತು ಅದೇ ಆಕ್ರಮಣಕಾರಿ ಮನೋಭಾವವನ್ನು ತಂಡದಲ್ಲೂ ತುಂಬುತ್ತಾರೆ ಎಂದು ಅಯ್ಯರ್ ತಿಳಿಸಿದ್ದಾರೆ.

ಹಾಗೆಯೇ ಅವರು ವೈಯಕ್ತಿಕ ಮ್ಯಾನ್-ಮ್ಯಾನೇಜ್‌ಮೆಂಟ್ ಅದ್ಭುತವಾಗಿದೆ. ಪ್ರತಿ ಆಟಗಾರನಿಗೆ ತಂಡದಲ್ಲಿ ಅವರ ಜವಾಬ್ದಾರಿಯ ಬಗ್ಗೆ ಸಂಪೂರ್ಣ ಸ್ಪಷ್ಟತೆ ನೀಡುವ ಮೂಲಕ ಅವರಲ್ಲಿ ಆತ್ಮವಿಶ್ವಾಸವನ್ನು ತುಂಬುತ್ತಾರೆ ಎಂದು ಅಯ್ಯರ್ ಹೇಳಿದರು.

ಬುಮ್ರಾ ಕಂಬ್ಯಾಕ್​ಗೆ ವಿಶೇಷ ಯೋಜನೆ:

ಮೊಣಕಾಲಿನ ಗಾಯದಿಂದ ಚೇತರಿಸಿಕೊಂಡು ತಂಡಕ್ಕೆ ಮರಳಿರುವ ಪ್ರಮುಖ ವೇಗಿ ಜಸ್​ಪ್ರೀತ್ ಬುಮ್ರಾ ಅವರ ಮ್ಯಾಚ್ ಫಿಟ್‌ನೆಸ್‌ಗೆ ತಂಡ ಮೊದಲ ಆದ್ಯತೆ ನೀಡಿದೆ.

ಮುಂಬರುವ ಏಷ್ಯನ್ ಗೇಮ್ಸ್ ಮತ್ತು ಮುಂದಿನ ಏಕದಿನ ವಿಶ್ವಕಪ್‌ಗೆ ಬುಮ್ರಾ ಅವರನ್ನು ಸಜ್ಜುಗೊಳಿಸಲು, ಈ ಸರಣಿಯಲ್ಲಿ ಅವರಿಗೆ ಗರಿಷ್ಠ ಪಂದ್ಯಗಳನ್ನು ಆಡಲು ಅವಕಾಶ ನೀಡಲಾಗುವುದು ಎಂದು ಅಯ್ಯರ್ ತಿಳಿಸಿದ್ದಾರೆ.

ಹಾಗೆಯೇ ಬುಮ್ರಾ ಅವರೊಂದಿಗೆ ಮಾತನಾಡಿದಾಗ, ಅವರು ಸಂಪೂರ್ಣವಾಗಿ ಫಿಟ್ ಆಗಿದ್ದು, ತಂಡಕ್ಕೆ ಚಾಂಪಿಯನ್‌ಶಿಪ್‌ಗಳನ್ನು ಗೆದ್ದುಕೊಡಲು ಉತ್ಸುಕರಾಗಿದ್ದಾರೆ ಎಂದು ಇದೇ ವೇಳೆ ಶ್ರೇಯಸ್ ಅಯ್ಯರ್ ಸ್ಪಷ್ಟಪಡಿಸಿದ್ದಾರೆ.

ನಾಯಕತ್ವದ ಫಿಲಾಸಫಿ:

ಆಟಗಾರರ ಪ್ರದರ್ಶನ ಮತ್ತು ತಂಡದ ಸಂಯೋಜನೆಯನ್ನು ನಿಭಾಯಿಸುವ ಬಗ್ಗೆ ಮಾತನಾಡಿದ ಶ್ರೇಯಸ್ ಅಯ್ಯರ್, ತಮ್ಮದೇ ಆದ ವಿಶಿಷ್ಟ ನಾಯಕತ್ವದ ಶೈಲಿಯನ್ನು ವಿವರಿಸಿದರು.

ಆಟಗಾರರಿಗೆ ನಿರ್ದಿಷ್ಟ ‘ಪಾತ್ರ’ ಎಂದು ಹಣೆಪಟ್ಟಿ ಕಟ್ಟಿದರೆ ಅವರ ಮೇಲೆ ಒತ್ತಡ ಹೆಚ್ಚಾಗುತ್ತದೆ. ಆದ್ದರಿಂದ ನಾನು ಅದನ್ನು ‘ತಂಡದ ಅವಶ್ಯಕತೆ’ ಎಂದು ಕರೆಯಲು ಬಯಸುತ್ತೇನೆ. ಈ ಮೂಲಕ ತಂಡವನ್ನು ಮುನ್ನಡೆಸುತ್ತಿದ್ದೇನೆ ಎಂದು ತಿಳಿಸಿದರು.

ಹಾಗೆಯೇ ನಿರಂತರವಾಗಿ ಕ್ರಿಕೆಟ್ ಆಡುತ್ತಿರುವುದರಿಂದ ಆಟಗಾರರು ಗಾಯಗೊಳ್ಳುತ್ತಾರೆಯೇ ವಿನಃ ಅವರ ಬದ್ಧತೆಯಲ್ಲಿ ಯಾವುದೇ ಕೊರತೆಯಿಲ್ಲ. ಇಶಾನ್ ಕಿಶನ್ ಅವರ ಸಣ್ಣ ಗಾಯದ ಸಮಸ್ಯೆ ಈಗ ನಿವಾರಣೆಯಾಗಿದ್ದು, ಅವರು ವಿಶ್ರಾಂತಿ ಪಡೆಯುತ್ತಿದ್ದಾರೆ ಎಂದು ಅಯ್ಯರ್ ತಿಳಿಸಿದರು.

ಏಷ್ಯನ್ ಗೇಮ್ಸ್ ಬಗ್ಗೆ ಅತೀವ ಉತ್ಸಾಹ:

ಜಪಾನ್‌ನ ಐಚಿ-ನಗೋಯಾದಲ್ಲಿ ನಡೆಯಲಿರುವ 2026ರ ಏಷ್ಯನ್ ಗೇಮ್ಸ್ ತಮಗೆ ಮೊದಲ ಮಲ್ಟಿ-ಸ್ಪೋರ್ಟ್ಸ್ ಕ್ರೀಡಾಕೂಟದ ಅನುಭವ. ಹೀಗಾಗಿಯೇ ಈ ಕ್ರೀಡಾಕೂಟವನ್ನು ಎದುರು ನೋಡುತ್ತಿದ್ದೇನೆ. ಹಾಗೆಯೇ ಇತರ ಕ್ರೀಡೆಗಳ ಒಲಿಂಪಿಕ್ಸ್‌ ಹಾಗೂ ದಿಗ್ಗಜ ಅಥ್ಲೀಟ್‌ಗಳನ್ನು ಭೇಟಿಯಾಗಲು ಮತ್ತು ಮೈದಾನಕ್ಕೆ ತೆರಳಿ ಅವರನ್ನು ಪ್ರೋತ್ಸಾಹಿಸಲು ತಾವು ಕಾತರರಾಗಿರುವುದಾಗಿ ಇದೇ ವೇಳೆ ಶ್ರೇಯಸ್ ಅಯ್ಯರ್ ತಿಳಿಸಿದ್ದಾರೆ.

ಇದನ್ನೂ ಓದಿ: ಅಫ್ಘಾನ್ ಸವಾಲಿಗೆ ಟೀಮ್ ಇಂಡಿಯಾ ರೆಡಿ: ಹೀಗಿರಲಿದೆ ಪ್ಲೇಯಿಂಗ್ ಇಲೆವೆನ್

ಒಟ್ಟಾರೆಯಾಗಿ ಹೇಳುವುದಾದರೆ, ನಾಯಕ ಶ್ರೇಯಸ್ ಅಯ್ಯರ್ ಅವರ ಈ ಮಾತುಗಳು ಭಾರತೀಯ ಕ್ರಿಕೆಟ್ ತಂಡದಲ್ಲಿ ಸದ್ಯ ನೆಲೆಸಿರುವ ಸಕಾರಾತ್ಮಕ ವಾತಾವರಣ ಮತ್ತು ದೂರದೃಷ್ಟಿಯ ಯೋಜನೆಗಳನ್ನು ಸ್ಪಷ್ಟಪಡಿಸುತ್ತವೆ. ಗೌತಮ್ ಗಂಭೀರ್ ಅವರ ಮಾರ್ಗದರ್ಶನದಲ್ಲಿ ಆಕ್ರಮಣಕಾರಿ ಮನೋಭಾವ ಹೊಂದಿರುವ ಈ ಯುವ ಪಡೆ, ಜಸ್​ಪ್ರೀತ್  ಬುಮ್ರಾ ಅವರಂತಹ ಅನುಭವಿ ಆಟಗಾರರ ಬಲದೊಂದಿಗೆ ಮುಂಬರುವ ಸರಣಿ ಹಾಗೂ ಏಷ್ಯನ್ ಗೇಮ್ಸ್‌ನಲ್ಲಿ ಐತಿಹಾಸಿಕ ಸಾಧನೆ ಮಾಡಲು ಸಜ್ಜಾಗಿರುವುದಂತು ಸ್ಪಷ್ಟ.

Follow Us
ಝಾಹಿರ್ ಯೂಸುಫ್
ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More