AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭುವಿ ರಿ-ಎಂಟ್ರಿ… ಮುಂದಿನ ಸರದಿ ಶಮಿಯದ್ದು: ಅಶ್ವಿನ್ ಭವಿಷ್ಯ!

ಟೀಮ್ ಇಂಡಿಯಾದಲ್ಲಿ ಮುಗಿಯಿತೇ ಯುವ ಪರ್ವ? ಹಿರಿಯ ಆಟಗಾರರ ಕಂಬ್ಯಾಕ್ ಬೆನ್ನಲ್ಲೇ ಮೊಹಮ್ಮದ್ ಶಮಿ ಭವಿಷ್ಯದ ಬಗ್ಗೆ ಆರ್. ಅಶ್ವಿನ್ ಆಡಿದ ಆ ಮಾತುಗಳು ಈಗ ಕ್ರಿಕೆಟ್ ಲೋಕದಲ್ಲಿ ಹೊಸ ಸಂಚಲನ ಸೃಷ್ಟಿಸಿವೆ. ಬಿಸಿಸಿಐ ಆಯ್ಕೆ ಸಮಿತಿಯಲ್ಲಾದ ಪ್ರಮುಖ ಬದಲಾವಣೆ ಹಾಗೂ ಸ್ವಿಂಗ್ ಮಾಸ್ಟರ್ ಭುವನೇಶ್ವರ್ ಕುಮಾರ್ ಅವರ ಅನಿರೀಕ್ಷಿತ ಪುನರಾಗಮನವು ಭಾರತೀಯ ಕ್ರಿಕೆಟ್‌ನಲ್ಲಿ ಹೊಸ ಚರ್ಚೆಗೆ ನಾಂದಿ ಹಾಡಿದೆ.

ಭುವಿ ರಿ-ಎಂಟ್ರಿ... ಮುಂದಿನ ಸರದಿ ಶಮಿಯದ್ದು: ಅಶ್ವಿನ್ ಭವಿಷ್ಯ!
Team India Image Credit source: x.com
ಝಾಹಿರ್ ಯೂಸುಫ್
|

Updated on:Oct 08, 2026 | 2:19 PM

Share

ಟೀಮ್ ಇಂಡಿಯಾದಲ್ಲಿ ಮೊಹಮ್ಮದ್ ಶಮಿ ಯುಗಾಂತ್ಯವಾಯಿತೇ? ಈ ಪ್ರಶ್ನೆಗೆ ಸದ್ಯ ಸಿಗುತ್ತಿರುವ ಸ್ಪಷ್ಟ ಉತ್ತರ ಇಲ್ಲ. ಈ ಉತ್ತರಕ್ಕೆ ಮುಖ್ಯ ಕಾರಣ ಭಾರತ ತಂಡಕ್ಕೆ ಭುವನೇಶ್ವರ್ ಕುಮಾರ್ ಅವರ ಕಂಬ್ಯಾಕ್. ಮುಖ್ಯ ಆಯ್ಕೆಗಾರರಾಗಿದ್ದ ಅಜಿತ್ ಅಗರ್ಕರ್ ಅವರ ಅಧಿಕಾರಾವಧಿ ಮುಕ್ತಾಯಗೊಂಡ ಬೆನ್ನಲ್ಲೇ ಭಾರತ ತಂಡದ ಆಯ್ಕೆ ಪ್ರಕ್ರಿಯೆಯಲ್ಲಿ ದೊಡ್ಡ ಬದಲಾವಣೆಗಳು ಕಂಡುಬರುತ್ತಿವೆ. 4 ವರ್ಷಗಳ ನಂತರ ಸ್ವಿಂಗ್ ಮಾಂತ್ರಿಕ ಭುವನೇಶ್ವರ್ ಕುಮಾರ್ ನ್ಯೂಝಿಲೆಂಡ್ ವಿರುದ್ಧದ ಟಿ20 ಸರಣಿಗೆ ಆಯ್ಕೆಯಾಗಿದ್ದಾರೆ. ಇದೇ ಮಾದರಿಯಲ್ಲಿ ಸ್ಟಾರ್ ವೇಗಿ ಮೊಹಮ್ಮದ್ ಶಮಿ ಅವರಿಗೂ ಟೀಮ್ ಇಂಡಿಯಾದ ಬಾಗಿಲು ಇನ್ನೂ ಮುಚ್ಚಿಲ್ಲ ಎಂದು ಅಶ್ವಿನ್ ಅಭಿಪ್ರಾಯಪಟ್ಟಿದ್ದಾರೆ.

ಅಶ್ವಿನ್ ಅವರ ವಿಶ್ಲೇಷಣೆಯ ಪ್ರಕಾರ, ಈ ಹಿಂದಿನ ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ಅವರು ಕೇವಲ ಯುವ ಆಟಗಾರರು ಮತ್ತು ಹೊಸಬರಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದರು. ಆದರೆ, ಜಸ್​ಪ್ರೀತ್  ಬುಮ್ರಾ ಅವರ ಅನುಪಸ್ಥಿತಿಯಲ್ಲಿ ಭಾರತದ ವೇಗದ ಬೌಲಿಂಗ್ ವಿಭಾಗವು ಕೆಲವೊಮ್ಮೆ ದುರ್ಬಲವಾಗಿ ಕಾಣಿಸುತ್ತದೆ. ಹೀಗಾಗಿ, ಬಿಸಿಸಿಐ ಮತ್ತು ಹೊಸ ಆಯ್ಕೆ ಸಮಿತಿಯು ಈಗ ಮರಳಿ ಅನುಭವಕ್ಕೆ ಹೆಚ್ಚಿನ ಮನ್ನಣೆ ನೀಡಲು ಮುಂದಾಗಿದೆ.

ಭುವಿ ಹಾದಿಯಲ್ಲೇ ಶಮಿ ಕಂಬ್ಯಾಕ್?

ಭುವನೇಶ್ವರ್ ಕುಮಾರ್ ದೇಶಿ ಕ್ರಿಕೆಟ್ ಮತ್ತು ಐಪಿಎಲ್‌ನಲ್ಲಿ ಸತತ ಪ್ರದರ್ಶನ ನೀಡುವ ಮೂಲಕ ರಾಷ್ಟ್ರೀಯ ತಂಡದ ಬಾಗಿಲು ತಟ್ಟಿದ್ದಾರೆ. ಇದನ್ನು ಉಲ್ಲೇಖಿಸಿದ ಅಶ್ವಿನ್, “ಭುವನೇಶ್ವರ್ ಅವರನ್ನು ಆಯ್ಕೆ ಮಾಡಿರುವುದನ್ನು ನೋಡಿದರೆ, ಮೊಹಮ್ಮದ್ ಶಮಿ ಅವರ ಅಂತಾರಾಷ್ಟ್ರೀಯ ವೃತ್ತಿಜೀವನ ಮುಗಿದಿದೆ ಎಂದು ಹೇಳಲು ಸಾಧ್ಯವಿಲ್ಲ” ಎಂದಿದ್ದಾರೆ.

“ನ್ಯೂಝಿಲೆಂಡ್ ಸರಣಿಯಲ್ಲಿ ಭುವಿ ಉತ್ತಮ ಪ್ರದರ್ಶನ ನೀಡಿದರೆ, ಅವರನ್ನು ಏಕದಿನ ತಂಡಕ್ಕೂ ಪರಿಗಣಿಸುವ ಸಾಧ್ಯತೆ ದಟ್ಟವಾಗಿದೆ. ಅದೇ ರೀತಿ ಮೊಹಮ್ಮದ್ ಶಮಿ ಕೂಡ ಫಿಟ್‌ನೆಸ್ ಸಾಬೀತುಪಡಿಸಿದರೆ ಶೀಘ್ರದಲ್ಲೇ ಮರಳಬಹುದು” ಎಂಬುದು ಅಶ್ವಿನ್ ಅವರ ನಂಬಿಕೆ.

ಒಂದು ವರ್ಷದಿಂದ ಹೊರಗೆ!

ಮೊಹಮ್ಮದ್ ಶಮಿ ಅವರು ಮಾರ್ಚ್ 2025 ರ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದ ನಂತರ ಭಾರತದ ಪರ ಯಾವುದೇ ಮಾದರಿಯ ಕ್ರಿಕೆಟ್ ಆಡಿಲ್ಲ. ಗಾಯದ ಸಮಸ್ಯೆಗಳ ಜೊತೆಗೆ, ಈ ಹಿಂದೆ ಅಗರ್ಕರ್ ನೇತೃತ್ವದ ಸಮಿತಿಯು ಶಮಿ ಅವರ ಫಿಟ್‌ನೆಸ್ ಬಗ್ಗೆ ಸಾರ್ವಜನಿಕವಾಗಿ ಪ್ರಶ್ನಿಸಿತ್ತು ಮತ್ತು ಅವರನ್ನು ಆಯ್ಕೆಗೆ ಪರಿಗಣಿಸುತ್ತಿಲ್ಲ ಎಂಬ ಸುಳಿವು ನೀಡಿತ್ತು. ಇದು ಇಬ್ಬರ ನಡುವೆ ಮಾಧ್ಯಮಗಳ ಮೂಲಕ ವಾಗ್ಯುದ್ಧಕ್ಕೂ ಕಾರಣವಾಗಿತ್ತು.

ಆದರೆ, ಈಗ ಪರಿಸ್ಥಿತಿ ಬದಲಾಗಿದೆ. 36 ವರ್ಷದ ಮೊಹಮ್ಮದ್ ಶಮಿ ದೇಶಿ ಕ್ರಿಕೆಟ್‌ನಲ್ಲಿ ಸ್ಥಿರ ಪ್ರದರ್ಶನ ಕಾಯ್ದುಕೊಂಡಿದ್ದು, 2027 ರ ಐಸಿಸಿ ಏಕದಿನ ವಿಶ್ವಕಪ್ ದೃಷ್ಟಿಯಿಂದ ಶಮಿ ಮತ್ತು ಭುವನೇಶ್ವರ್ ಅವರಂತಹ ಅನುಭವಿಗಳ ಮರಳಿ ಸೇರ್ಪಡೆಗೆ ಮ್ಯಾನೇಜ್‌ಮೆಂಟ್ ಆಲೋಚಿಸುತ್ತಿದೆ ಎಂಬ ವರದಿಗಳು ಕೇಳಿಬರುತ್ತಿವೆ.

ಜಸ್​ಪ್ರೀತ್ ಬುಮ್ರಾ ಲಭ್ಯವಿಲ್ಲದ ಪಂದ್ಯಗಳಲ್ಲಿ ಭಾರತದ ವೇಗದ ಬೌಲಿಂಗ್ ದಾಳಿ ತೀರಾ ಸಾಧಾರಣವಾಗಿ ಕಾಣಿಸುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಕೇವಲ ಯುವ ಆಟಗಾರರನ್ನು ನೆಚ್ಚಿಕೊಳ್ಳಲು ಸಾಧ್ಯವಿಲ್ಲ. ಆದ್ದರಿಂದ ಮೊಹಮ್ಮದ್ ಶಮಿಯಂತಹ ಅನುಭವಿ ಬೌಲರ್ ತಂಡಕ್ಕೆ ಕಮ್ಯುನಿಕೇಷನ್ ಮತ್ತು ರಣತಂತ್ರದ ದೃಷ್ಟಿಯಿಂದ ಅತ್ಯಂತ ಅಗತ್ಯ ಎಂದು ಅಶ್ವಿನ್ ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ನಿಗೂಢ ಪೋಸ್ಟ್​… ಅಗರ್ಕರ್​ಗೆ ಟಾಂಗ್ ನೀಡಿದ್ರಾ  ರವೀಂದ್ರ ಜಡೇಜಾ?

ಒಟ್ಟಾರೆಯಾಗಿ, ಟೀಮ್ ಇಂಡಿಯಾದಲ್ಲಿ ಮತ್ತೆ ‘ಅನುಭವವೇ ಮಾನದಂಡ’ ಎಂಬ ಸೂತ್ರ ಜಾರಿಗೆ ಬರುತ್ತಿರುವುದರಿಂದ, ಮೊಹಮ್ಮದ್ ಶಮಿ ಅಭಿಮಾನಿಗಳಲ್ಲಿ ಹೊಸ ಭರವಸೆ ಮೂಡಿದೆ. ಶೀಘ್ರದಲ್ಲೇ ಬುಮ್ರಾ, ಭುವಿ, ಶಮಿ ಮತ್ತು ಸಿರಾಜ್ ಅವರ ಘಾತಕ ವೇಗದ ಬೌಲಿಂಗ್ ಜೋಡಿಯನ್ನು ಮರಳಿ ಮೈದಾನದಲ್ಲಿ ಒಟ್ಟಿಗೆ ನೋಡುವ ಅವಕಾಶ ಸಿಕ್ಕರೂ ಅಚ್ಚರಿಯಿಲ್ಲ.

Published On - 2:14 pm, Thu, 8 October 26

Follow Us
ಝಾಹಿರ್ ಯೂಸುಫ್
ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More