2019ರ ವಿಶ್ವಕಪ್ನಲ್ಲಿ ಧೋನಿ ಭಾರತವನ್ನು ಉದ್ದೇಶಪೂರ್ವಕವಾಗಿ ಸೋಲಿಸಿದ್ರಾ? ಈ ಬಗ್ಗೆ ಅಂಪೈರ್ ಹೇಳಿದ್ದೇನು?
2019ರ ಏಕದಿನ ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡವಾಗಿ ಗುರುತಿಸಿಕೊಂಡಿದ್ದ ಟೀಮ್ ಇಂಡಿಯಾ ಸೆಮಿಫೈನಲ್ನಲ್ಲಿ ಎಡವಿತು. ಫೈನಲ್ಗೇರಲು ನಿರ್ಣಾಯಕವಾಗಿದ್ದ ಈ ಮ್ಯಾಚ್ನಲ್ಲಿ ಟೀಮ್ ಇಂಡಿಯಾ ಪರ ಮಹೇಂದ್ರ ಸಿಂಗ್ ಧೋನಿ ನಿಧಾನಗತಿಯ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಈ ಬ್ಯಾಟಿಂಗ್ ಪರಿಣಾಮ ಭಾರತ ತಂಡವು 18 ರನ್ಗಳಿಂದ ಸೋಲಬೇಕಾಯಿತು ಎಂದು ವಾದಿಸುವವರಿದ್ದಾರೆ.
![2019ರ ವಿಶ್ವಕಪ್ನಲ್ಲಿ ಧೋನಿ ಭಾರತವನ್ನು ಉದ್ದೇಶಪೂರ್ವಕವಾಗಿ ಸೋಲಿಸಿದ್ರಾ? ಈ ಬಗ್ಗೆ ಅಂಪೈರ್ ಹೇಳಿದ್ದೇನು?](https://images.tv9kannada.com/wp-content/uploads/2025/01/ms-dhoni-1.jpg?w=1280)
2019ರ ಏಕದಿನ ವಿಶ್ವಕಪ್ನ ಸೆಮಿಫೈನಲ್ ಪಂದ್ಯ. ಮ್ಯಾಂಚೆಸ್ಟರ್ನ ಓಲ್ಡ್ ಟ್ರಾಫೋರ್ಡ್ ಸ್ಟೇಡಿಯಂನಲ್ಲಿ ಭಾರತ ಮತ್ತು ನ್ಯೂಝಿಲೆಂಡ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ನ್ಯೂಝಿಲೆಂಡ್ ತಂಡದ ಪರ ನಾಯಕ ಕೇನ್ ವಿಲಿಯಮ್ಸನ್ (67) ಹಾಗೂ ರಾಸ್ ಟೇಲರ್ (74) ಅರ್ಧಶತಕ ಬಾರಿಸಿದರು. ಈ ಹಾಫ್ ಸೆಂಚುರಿಗಳ ನೆರವಿನಿಂದ ನ್ಯೂಝಿಲೆಂಡ್ ತಂಡ 50 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 239 ರನ್ ಕಲೆಹಾಕಿತು.
240 ರನ್ಗಳ ಗುರಿ ಪಡೆದ ಟೀಮ್ ಇಂಡಿಯಾ ಉತ್ತಮ ಆರಂಭ ಪಡೆದಿರಲಿಲ್ಲ. ಆರಂಭಿಕರಾದ ರೋಹಿತ್ ಶರ್ಮಾ ಹಾಗೂ ಕೆಎಲ್ ರಾಹುಲ್ 1 ರನ್ಗಳಿಸಿ ಔಟಾದರೆ, ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ವಿರಾಟ್ ಕೊಹ್ಲಿ 1 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಇನ್ನು ದಿನೇಶ್ ಕಾರ್ತಿಕ್ (6), ರಿಷಭ್ ಪಂತ್ (32) ಹಾಗೂ ಹಾರ್ದಿಕ್ ಪಾಂಡ್ಯ 32 ರನ್ ಬಾರಿಸಿ ಔಟಾದರು.
ಈ ಹಂತದಲ್ಲಿ 7ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಮಹೇಂದ್ರ ಸಿಂಗ್ ಧೋನಿ ನಿಧಾನಗತಿಯ ಇನಿಂಗ್ಸ್ ಆಡಿದ್ದರು. ಒಂದೆಡೆ ರವೀಂದ್ರ ಜಡೇಜಾ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ್ದರೆ, ಇತ್ತ ಧೋನಿ 72 ಎಸೆತಗಳಲ್ಲಿ 1 ಫೋರ್ ಹಾಗೂ 1 ಸಿಕ್ಸ್ಗಳೊಂದಿಗೆ 50 ರನ್ಗಳಿಸಿ ರನೌಟ್ ಆದರು. ಇದೇ ವೇಳೆ ರವೀಂದ್ರ ಜಡೇಜಾ 59 ಎಸೆತಗಳಲ್ಲಿ 77 ರನ್ ಚಚ್ಚಿದ್ದರು.
ನಿರ್ಣಾಯಕ ಹಂತದಲ್ಲಿ ಧೋನಿ ನಿಧಾನಗತಿಯ ಬ್ಯಾಟಿಂಗ್ ಪ್ರದರ್ಶಿಸಿದ ಧೋನಿ ಆ ಬಳಿಕ ಭಾರೀ ಟೀಕೆಗೆ ಒಳಗಾದರು. ಅದರಲ್ಲೂ ಕೊನೆಯ ಓವರ್ಗಳ ವೇಳೆ ಧೋನಿ ರಕ್ಷಣಾತ್ಮಕ ಆಟಕ್ಕೆ ಒತ್ತು ನೀಡಿದ್ದು ಹಲವು ಅನುಮಾನಗಳಿಗೆ ಎಡೆಮಾಡಿ ಕೊಟ್ಟಿತ್ತು. ಅಲ್ಲದೆ ಈ ಪಂದ್ಯದಲ್ಲಿ ಧೋನಿ ರನೌಟ್ ಆಗುವ ಮೂಲಕ ಕೊನೆಯ ಕ್ಷಣದಲ್ಲಿ ವಿಕೆಟ್ ಕೈಚೆಲ್ಲಿದರು.
ಪರಿಣಾಮ ಟೀಮ್ ಇಂಡಿಯಾ ಈ ಪಂದ್ಯದಲ್ಲಿ 18 ರನ್ಗಳ ಸೋಲನುಭವಿಸಿತು. ಈ ಸೋಲಿಗೆ ಪ್ರಮುಖ ಕಾರಣ ಮಹೇಂದ್ರ ಸಿಂಗ್ ಧೋನಿ ಅವರ ನಿಧಾನಗತಿಯ ಇನಿಂಗ್ಸ್ ಎಂದು ವಾದಿಸುವವರು ಇದ್ದಾರೆ. ಅಲ್ಲದೆ 2019ರ ಸೆಮಿಫೈನಲ್ನಲ್ಲಿ ಭಾರತವನ್ನು ಧೋನಿ ಉದ್ದೇಶಪೂರ್ವಕವಾಗಿ ಸೋಲಿಸಿದ್ದರು ಎಂಬ ಆರೋಪ ಹೊರಿಸುವವರು ಸೋಷಿಯಲ್ ಮೀಡಿಯಾದಲ್ಲಿ ಕಾಣ ಸಿಗುತ್ತಾರೆ.
ಈ ಆರೋಪಗಳ ಬಗ್ಗೆ ಭಾರತದ ಹಿರಿಯ ಅಂಪೈರ್‌ಗಳಲ್ಲಿ ಒಬ್ಬರಾಗಿರುವ ಅನಿಲ್ ಚೌಧರಿ ಅವರನ್ನು ಕೇಳಲಾಗಿದೆ. ಪೋಡ್ಕಾಸ್ಟ್ ಸಂದರ್ಶನವೊಂದರಲ್ಲಿ ಕಾಣಿಸಿಕೊಂಡ ಅನಿಲ್ ಚೌಧರಿಗೆ, ಅಂದು ಧೋನಿಯ ನಿಧಾನಗತಿಯ ಬ್ಯಾಟಿಂಗ್ನಿಂದಾಗಿ ಭಾರತ ತಂಡ ಸೋಲನುಭವಿಸಿತೇ? ಧೋನಿ ಉದ್ದೇಶಕಪೂರ್ವಕವಾಗಿಯೇ ಸ್ಲೋ ಇನಿಂಗ್ಸ್ ಆಡಿದ್ರಾ? ಎಂದು ಪ್ರಶ್ನಿಸಲಾಯಿತು.
ಇದಕ್ಕೆ ಉತ್ತರಿಸಿದ ಅನಿಲ್ ಚೌಧರಿ, ಅವತ್ತು ಮಹೇಂದ್ರ ಸಿಂಗ್ ಧೋನಿ 50 ರನ್ ಬಾರಿಸಿದ್ದರಿಂದ ಟೀಮ್ ಇಂಡಿಯಾ ಅಂತಿಮ ಹಂತದವರೆಗೆ ತಲುಪಿದೆ. ಒಂದು ವೇಳೆ ಅವರು ಅರ್ಧಶತಕ ಬಾರಿಸದೇ ಇದ್ದಿದ್ದರೆ, ಭಾರತ ತಂಡವು 50 ರನ್ಗಳಿಂದ ಸೋಲುತ್ತಿತ್ತು.
ಇದನ್ನೂ ಓದಿ: RCB ಸೇರಿದ ಬಳಿಕ ಸಪ್ಪೆಯಾದ ಸಾಲ್ಟ್
ಇಂತಹ ಚರ್ಚೆಗಳನ್ನು ಹುಟ್ಟುಹಾಕುವವರು ಕ್ರಿಕೆಟ್ ಬಗ್ಗೆ ಸಂಪೂರ್ಣ ಜ್ಞಾನ ಇಲ್ಲದವರು. ಪೂರ್ಣ ಪ್ರಮಾಣದಲ್ಲಿ ಕ್ರಿಕೆಟ್ ಆಡಿದವರು ಇಂತಹ ವಾದ ಮಾಡಲ್ಲ. ಇನ್ನು ಆಡದೇ ಇರುವವರು ಸಹ ಇಂತಹ ವಿತಂಡ ವಾದಕ್ಕೆ ಇಳಿಯಲ್ಲ. ಈ ಅರ್ಧಂಬರ್ಧ ಆಡಿರುತ್ತಾರಲ್ವಾ? ಅವರೇ ಇಂತಹ ಚರ್ಚೆಗಳನ್ನು ಹುಟ್ಟುಹಾಕುವುದು ಎಂದಿದ್ದಾರೆ. ಈ ಮೂಲಕ ಮಹೇಂದ್ರ ಸಿಂಗ್ ಧೋನಿ ಭಾರತ ತಂಡವನ್ನು ಉದ್ದೇಶಪೂರ್ವಕವಾಗಿ ಸೋಲಿಸಿದ್ದರು ಎಂಬ ಆರೋಪವನ್ನು ಅನಿಲ್ ಚೌಧರಿ ಅಲ್ಲೆಗೆಳೆದಿದ್ದಾರೆ.