AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Vaibhav Sooryavanshi: ನಾ ಕಾರ್ಟೂನ್ ನೋಡಿಯೇ ಬ್ಯಾಟಿಂಗ್​ಗೆ ಬರೋದು..!

Vaibhav Sooryavanshi: ವೈಭವ್ ಸೂರ್ಯವಂಶಿ ಕಳೆದ ಸೀಸನ್​ನಲ್ಲಿ 7 ಪಂದ್ಯಗಳಿಂದ 252 ರನ್​ ಕಲೆಹಾಕಿದ್ದರು. ಇದೀಗ ಮತ್ತೆ 7 ಪಂದ್ಯಗಳಲ್ಲಿ ಬ್ಯಾಟ್ ಬೀಸಿರುವ ವೈಭವ್ 2 ಅರ್ಧಶತಕಗಳೊಂದಿಗೆ ಒಟ್ಟು 254 ರನ್ ಕಲೆಹಾಕಿದ್ದಾರೆ. ಈ ಮೂಲಕ ಐಪಿಎಲ್​ನಲ್ಲಿ ಕೇವಲ 14 ಇನಿಂಗ್ಸ್​ಗಳಲ್ಲಿ 500 ರನ್ ಪೂರೈಸಿದ್ದಾರೆ.

Vaibhav Sooryavanshi: ನಾ ಕಾರ್ಟೂನ್ ನೋಡಿಯೇ ಬ್ಯಾಟಿಂಗ್​ಗೆ ಬರೋದು..!
Vaibhav Sooryavanshi
ಝಾಹಿರ್ ಯೂಸುಫ್
|

Updated on:Apr 23, 2026 | 9:59 AM

Share

ಕೇವಲ 15 ವರ್ಷ ವಯಸ್ಸಿನಲ್ಲೇ  ಕ್ರಿಕೆಟ್ ಮೈದಾನದಲ್ಲಿ ಧೂಳೆಬ್ಬಿಸುತ್ತಿರುವ ರಾಜಸ್ಥಾನ ರಾಯಲ್ಸ್ ತಂಡದ ಆರಂಭಿಕ ಆಟಗಾರ ವೈಭವ್ ಸೂರ್ಯವಂಶಿ, ತಮ್ಮ ವಿಶಿಷ್ಟ ಹವ್ಯಾಸದಿಂದ ಸುದ್ದಿಯಲ್ಲಿದ್ದಾರೆ. ಸಾಮಾನ್ಯವಾಗಿ ಅಂತಾರಾಷ್ಟ್ರೀಯ ಮಟ್ಟದ ಪಂದ್ಯಗಳಿಗೂ ಮುನ್ನ ಆಟಗಾರರು ಅತಿಯಾದ ಒತ್ತಡದಲ್ಲಿರುತ್ತಾರೆ. ಆದರೆ ವೈಭವ್ ಮಾತ್ರ ಇದಕ್ಕೆ ವ್ಯತಿರಿಕ್ತ. ಇದಕ್ಕೆ ಸಾಕ್ಷಿ ಅವರು ನೀಡಿರುವ ಕಾರ್ಟೂನ್ ಹೇಳಿಕೆ..!

ಸ್ಟಾರ್ ಸ್ಪೋರ್ಟ್ಸ್‌ನೊಂದಿಗೆ ನಡೆದ ಪೋಸ್ಟ್ ಮ್ಯಾಚ್ ಸಂದರ್ಶನವೊಂದರಲ್ಲಿ ವೈಭವ್ ಅವರಿಗೆ “ಈ ವಯಸ್ಸಿನ ಮಕ್ಕಳು ಕಾರ್ಟೂನ್ ನೋಡುವಾಗ ನೀನು ಬೌಲರ್‌ಗಳ ಬೆವರಿಳಿಸುತ್ತಿದ್ದೀಯಾ, ನಿನ್ನ ಮನಸ್ಸಿನಲ್ಲಿ ಏನು ನಡೆಯುತ್ತಿರುತ್ತದೆ?” ಎಂದು ಕೇಳಲಾಗಿತ್ತು. ಅದಕ್ಕೆ ವೈಭವ್ ನೀಡಿದ ಮುಗ್ಧ ಉತ್ತರ ಇಲ್ಲಿದೆ:

“ಪಂದ್ಯಕ್ಕೂ ಮೊದಲು ನನ್ನ ತಲೆಯಲ್ಲಿ ಹೆಚ್ಚೇನೂ ಓಡುವುದಿಲ್ಲ. ನನಗೆ ಕಾರ್ಟೂನ್ ನೋಡುವ ಹವ್ಯಾಸವಿದೆ. ಹಾಗಾಗಿ ಇಂದಿಗೂ ನಾನು ಪಂದ್ಯ ಆರಂಭವಾಗುವ ಮೊದಲು ಕಾರ್ಟೂನ್ ನೋಡುತ್ತೇನೆ. ಇದರಿಂದ ಮನಸ್ಸು ಶಾಂತವಾಗಿರುತ್ತದೆ, ಆದರೆ ಪಂದ್ಯದ ಮೇಲೆ ನನ್ನ ಗಮನ ಪೂರ್ತಿ ಇರುತ್ತದೆ.” ಎಂದಿದ್ದಾರೆ. ಈ ಉತ್ತರವು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.

ಇತ್ತ ಕಾರ್ಟೂನ್ ನೋಡುತ್ತಲೇ ಬೌಲರ್​ಗಳಿಗೆ ಬೆವರಿಳಿಸುತ್ತಿರುವ ವೈಭವ್ ಸೂರ್ಯವಂಶಿ ಇದೀಗ ಐಪಿಎಲ್ ಇತಿಹಾಸದಲ್ಲೇ ಅತೀ ವೇಗವಾಗಿ 500 ರನ್ ಕಲೆಹಾಕಿದ ದಾಖಲೆ ನಿರ್ಮಿಸಿದ್ದಾರೆ. ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ 8 ರನ್ ಬಾರಿಸುವುದರೊಂದಿಗೆ ವೈಭವ್ ಈ ದಾಖಲೆ ಬರೆದಿದ್ದಾರೆ.

ಇದಕ್ಕೂ ಮುನ್ನ ಈ ದಾಖಲೆ ಆಸ್ಟ್ರೇಲಿಯಾದ ಗ್ಲೆನ್ ಮ್ಯಾಕ್ಸ್​ವೆಲ್ ಹೆಸರಿನಲ್ಲಿತ್ತು. ಮ್ಯಾಕ್ಸ್​ವೆಲ್ 260 ಎಸೆತಗಳ ಮೂಲಕ ಐಪಿಎಲ್​ನಲ್ಲಿ 500 ರನ್ ಪೂರೈಸಿದ್ದರು. ಇದೀಗ ಬಾಸ್ ಬೇಬಿ ಖ್ಯಾತಿಯ ವೈಭವ್ ಸೂರ್ಯವಂಶಿ ಕೇವಲ 227 ಎಸೆತಗಳಲ್ಲಿ 500 ರನ್ ಪೂರೈಸಿ ಹೊಸ ಇತಿಹಾಸ ನಿರ್ಮಿಸಿದ್ದಾರೆ.

ಇದಲ್ಲದೆ ಐಪಿಎಲ್​ನಲ್ಲಿ ಶತಕ ಬಾರಿಸಿದ ಅತ್ಯಂತ ಕಿರಿಯ ಆಟಗಾರ ಎಂಬ ದಾಖಲೆ ಕೂಡ ವೈಭವ್ ಸೂರ್ಯವಂಶಿ ಹೆಸರಿನಲ್ಲಿದೆ. ಈ ಎಲ್ಲಾ ದಾಖಲೆಗಳ ಹಿಂದೆ ಕಾರ್ಟೂನ್ ನೋಡುವ ಹವ್ಯಾಸ ಇರುವುದು ಇದೀಗ ಬಹಿರಂಗವಾಗಿದೆ.

ಇದನ್ನೂ ಓದಿ: ಈಗಲೇ RCB ಆಟಗಾರನ ಆಯ್ಕೆ ಮಾಡಿ: CSKಗೆ ಐಡಿಯಾ ನೀಡಿದ ಅಶ್ವಿನ್

ಒಟ್ಟಿನಲ್ಲಿ 15ನೇ ವಯಸ್ಸಿನಲ್ಲೇ ಕ್ರಿಕೆಟ್ ಅಂಗಳದಲ್ಲಿ ದಾಖಲೆಗಳ ಮೇಲೆ ದಾಖಲೆ ಬರೆಯುತ್ತಾ ಸಾಗಿರುವ ವೈಭವ್ ಸೂರ್ಯವಂಶಿ ಶೀಘ್ರದಲ್ಲೇ ಟೀಮ್ ಇಂಡಿಯಾಗೆ ಆಯ್ಕೆಯಾಗುವ ಸಾಧ್ಯತೆಯಿದೆ. ಈ ಮೂಲಕ ಭಾರತದ ಪರ 15ನೇ ವಯಸ್ಸಿನಲ್ಲಿ ಅಂತಾರಾಷ್ಟ್ರೀಯ ಪಂದ್ಯವಾಡಿದ ಹಿರಿಮೆಗೆ ಪಾತ್ರರಾಗಲಿದ್ದಾರಾ ಕಾದು ನೋಡಬೇಕಿದೆ.

Published On - 9:59 am, Thu, 23 April 26

Follow Us