ಕೊಹ್ಲಿ ಹಾಗೂ ರೋಹಿತ್ ಜೊತೆ ಕಾಣಿಸಿಕೊಂಡ ಈ ಲೆಜೆಂಡ್ ಯಾರು ಗೊತ್ತಾ?
ಭಾರತ ಮತ್ತು ನ್ಯೂಝಿಲೆಂಡ್ ನಡುವಿನ ಏಕದಿನ ಸರಣಿ ಶುರುವಾದ ಬೆನ್ನಲ್ಲೇ, ಸೋಷಿಯಲ್ ಮೀಡಿಯಾದಲ್ಲಿ ಫೋಟೋವೊಂದು ಭಾರಿ ಚರ್ಚೆಗೆ ಗ್ರಾಸವಾಗಿದೆ. ಭಾರತೀಯ ಕ್ರಿಕೆಟ್ ತಾರೆಗಳಾದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮತ್ತು ಶುಭ್‌ಮನ್ ಗಿಲ್ ಅವರು ವಿಶೇಷ ವ್ಯಕ್ತಿಯೊಬ್ಬರಿಂದ ಬ್ಲ್ಯಾಕ್ ಜೆರ್ಸಿ ಪಡೆಯುತ್ತಿರುವ ಚಿತ್ರ ಕ್ರೀಡಾಭಿಮಾನಿಗಳಲ್ಲಿ ಹೊಸ ಕುತೂಹಲ ಮೂಡಿಸಿದೆ.

ಭಾರತ ಮತ್ತು ನ್ಯೂಝಿಲೆಂಡ್ ನಡುವಣ ಏಕದಿನ ಸರಣಿ ಆರಂಭಕ್ಕೂ ಮುನ್ನವೇ ಸಾಮಾಜಿಕ ಜಾಲತಾಣಗಳಲ್ಲಿ ಟೀಮ್ ಇಂಡಿಯಾದ ಸ್ಟಾರ್ ಆಟಗಾರರಾದ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಅವರ ಫೋಟೋವೊಂದು ಭಾರಿ ವೈರಲ್ ಆಗಿದೆ. ಈ ಫೋಟೋ ಇಷ್ಟೊಂದು ಸದ್ದು ಮಾಡಲು ಮುಖ್ಯ ಕಾರಣ, ಕ್ರಿಕೆಟ್ ಜಗತ್ತಿನ ‘ಕಿಂಗ್’ ಕೊಹ್ಲಿ ಮತ್ತು ‘ಹಿಟ್‌ಮ್ಯಾನ್’ ರೋಹಿತ್ ಜೊತೆಗೆ ಕಾಣಿಸಿಕೊಂಡಿರುವ ಆ ಮೂರನೇ ವ್ಯಕ್ತಿ! ಅಷ್ಟಕ್ಕೂ ಈ ವ್ಯಕ್ತಿ ಯಾರೆಂಬ ಪ್ರಶ್ನೆ ಮೂಡುವುದು ಸಹಜ. ಈ ಪ್ರಶ್ನೆಗೆ ಉತ್ತರ ಕೆವಿನ್ ಮೀಲಮು.
ಯಾರು ಈ ಕೆವಿನ್ ಮೀಲಮು?
ಕೆವಿನ್ ಮೀಲಮು ನ್ಯೂಝಿಲೆಂಡ್‌ನ ಸಾರ್ವಕಾಲಿಕ ಶ್ರೇಷ್ಠ ಹಾಗೂ ಐತಿಹಾಸಿಕ ರಗ್ಬಿ ತಂಡವಾದ ‘ಆಲ್ ಬ್ಲಾಕ್ಸ್’ ಪರ ಆಡಿದ ಮಾಜಿ ಸ್ಟಾರ್ ಆಟಗಾರ. ಆಲ್ ಬ್ಲಾಕ್ಸ್ (ನ್ಯೂಝಿಲೆಂಡ್ ಟೀಮ್) ತಂಡದ ಪರ ಹುಕರ್ ಸ್ಥಾನದಲ್ಲಿ ಕಣಕ್ಕಿಳಿಯುತ್ತಿದ್ದ ಮೀಲಮು, ನ್ಯೂಝಿಲೆಂಡ್ ತಂಡವು ಎರಡು ಬಾರಿ ರಗ್ಬಿ ವಿಶ್ವಕಪ್ ಜಯಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಕಿವೀಸ್ ರಗ್ಬಿ ಅಂಗಳದ ಲೆಜೆಂಡ್ ಎಂದೇ ಖ್ಯಾತರಾಗಿರುವ ಕೆವಿನ್ ಮೀಲಮು ಆಲ್ ಬ್ಲಾಕ್ಸ್ ಪರ ಬರೋಬ್ಬರಿ 132 ಪಂದ್ಯಗಳನ್ನು ಆಡಿದ ಅಪರೂಪದ ಸಾಧನೆ ಮಾಡಿದ್ದಾರೆ.
ವಿಶೇಷ ಉಡುಗೊರೆ:
ಭಾರತ ಮತ್ತು ನ್ಯೂಝಿಲೆಂಡ್ ನಡುವಿನ ಮೊದಲ ಏಕದಿನ ಪಂದ್ಯದ ಮುನ್ನಾದಿನದಂದು ಟೀಮ್ ಇಂಡಿಯಾ ಲೆಜೆಂಡ್ಗಳಾದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಹಾಗೂ ಶುಭ್‌ಮನ್ ಗಿಲ್, ಕೆವಿನ್ ಮೀಲಮು ಅವರನ್ನು ಭೇಟಿಯಾಗಿದ್ದಾರೆ.
ಇದೇ ವೇಳೆ ಟೀಮ್ ಇಂಡಿಯಾ ಆಟಗಾರರನ್ನು ಆತ್ಮೀಯವಾಗಿ ಸ್ವಾಗತಿಸಿದ ಮೀಲಮು, ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಹಾಗೂ ಗಿಲ್ಗೆ ವಿಶೇಷವಾಗಿ ವಿನ್ಯಾಸಗೊಳಿಸಲಾದ ಆಲ್ ಬ್ಲಾಕ್ಸ್ ರಗ್ಬಿ ಕಸ್ಟಮ್ ಜೆರ್ಸಿಗಳನ್ನು ಉಡುಗೊರೆಯಾಗಿ ನೀಡಿದ್ದಾರೆ. ಈ ವಿಶೇಷ ಉಡುಗೊರೆಯ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ: 17 ವರ್ಷಗಳ ದಾಖಲೆ ಪತನ… ಟೀಮ್ ಇಂಡಿಯಾಗೆ ಮುಖಭಂಗ!
ಒಟ್ಟಾರೆಯಾಗಿ ಹೇಳುವುದಾದರೆ, ಕ್ರಿಕೆಟ್‌ನ ರನ್ ಸರದಾರರು ಮತ್ತು ರಗ್ಬಿ ಸಾಮ್ರಾಜ್ಯದ ದೈತ್ಯ ಆಟಗಾರ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿರುವುದು ಜಾಗತಿಕ ಕ್ರೀಡಾ ಪ್ರೇಮಿಗಳ ಕಣ್ಣಿಗೆ ಹಬ್ಬವನ್ನುಂಟು ಮಾಡಿದೆ. ಕ್ರೀಡೆ ಎಂಬುದು ಕೇವಲ ಗೆಲುವು-ಸೋಲಿಗೆ ಸೀಮಿತವಾಗಿರದೆ, ಗಡಿ ಮತ್ತು ಭಾಷೆಗಳನ್ನು ಮೀರಿ ಜಗತ್ತಿನ ವಿಭಿನ್ನ ಕ್ರೀಡಾ ಸಂಸ್ಕೃತಿಗಳನ್ನು ಹೇಗೆ ಒಂದುಗೂಡಿಸುತ್ತದೆ ಎಂಬುದಕ್ಕೆ ಈ ‘ವಿರಾಟ್-ರೋಹಿತ್-ಕೆವಿನ್’ ಭೇಟಿಯೇ ಅತ್ಯುತ್ತಮ ಉದಾಹರಣೆ.




