IND vs AUS: ‘ಹೌದು ನನ್ನದೇ ತಪ್ಪು’; ಬುಮ್ರಾ ಜೊತೆಗಿನ ಜಗಳದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್

India vs Australia Test Series: ಸಿಡ್ನಿ ಟೆಸ್ಟ್ ಪಂದ್ಯದವೇಳೆ ಜಸ್ಪ್ರೀತ್ ಬುಮ್ರಾ ಅವರೊಂದಿಗೆ ವಾಗ್ವಾದ ನಡೆಸಿದ ಘಟನೆಯ ಬಗ್ಗೆ ಸ್ಯಾಮ್ ಕೊನ್​ಸ್ಟಾಸ್ ವಿವರಣೆ ನೀಡಿದ್ದಾರೆ. ಇದರಲ್ಲಿ ನನ್ನದೇ ತಪ್ಪು. ಖವಾಜಾ ಸ್ಟ್ರೈಕ್ ತೆಗೆದುಕೊಳ್ಳಲು ತಡ ಮಾಡಿದಾಗ ಬುಮ್ರಾ ಅವರ ಅಸಮಾಧಾನಕ್ಕೆ ಪ್ರತಿಕ್ರಿಯಿಸಿ ನಾನು ಮಾತಿಗಿಳಿದೆ ಎಂದು ಕೊನ್​ಸ್ಟಾಸ್ ಹೇಳಿದ್ದಾರೆ. ಆದರೆ ಬುಮ್ರಾ ಅವರ ಬೌಲಿಂಗ್ ಕೌಶಲ್ಯವನ್ನು ಹೊಗಳಿರುವ ಕೊನ್​ಸ್ಟಾಸ್, ಬುಮ್ರಾ ವಿಶ್ವ ದರ್ಜೆಯ ಆಟಗಾರ ಎಂದು ಬಣ್ಣಿಸಿದ್ದಾರೆ.

IND vs AUS: ‘ಹೌದು ನನ್ನದೇ ತಪ್ಪು’; ಬುಮ್ರಾ ಜೊತೆಗಿನ ಜಗಳದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
ಸ್ಯಾಮ್ ಕೊನ್​ಸ್ಟಾಸ್, ಜಸ್ಪ್ರೀತ್ ಬುಮ್ರಾ
Follow us
ಪೃಥ್ವಿಶಂಕರ
|

Updated on:Jan 08, 2025 | 6:05 PM

ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಐದು ಪಂದ್ಯಗಳ ಬಾರ್ಡರ್- ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿ ಅಂತ್ಯಗೊಂಡಿದೆ. ಸರಣಿಯ ಫಲಿತಾಂಶ ಭಾರತದ ಪರವಾಗಿಲ್ಲದಿದ್ದರೂ, ಈ ಸರಣಿ ಸೋಲಿನಿಂದ ತಂಡದಲ್ಲಿ ಸಾಕಷ್ಟು ಬದಲಾವಣೆಗಳಾಗುವ ಸಾಧ್ಯತೆಗಳಿವೆ. ಭಾರತ ಸರಣಿ ಸೋತಿತ್ತಾದರೂ, ಪಂದ್ಯದ ವೇಳೆ ಬೇಕಂತಲೇ ಆಟಗಾರರನ್ನು ಕೆಣಕುತ್ತಿದ್ದ ಆಸೀಸ್ ಆಟಗಾರರಿಗೆ ಹಾಗೂ ಆಸೀಸ್ ಅಭಿಮಾನಿಗಳಿಗೆ ಸರಿಯಾಗಿ ತಿರುಗೇಟು ನೀಡಿತ್ತು. ಈ ಸರಣಿಯಲ್ಲಿ ಉಭಯ ತಂಡಗಳ ಆಟಗಾರರ ನಡುವೆ ಸಾಕಷ್ಟು ಬಾರಿ ಮಾತಿನ ಚಕಮಕಿಯೂ ನಡೆದಿತ್ತು. ಅದರಲ್ಲಿ ಪ್ರಮುಖವಾದದ್ದು, ಜಸ್ಪ್ರೀತ್ ಬುಮ್ರಾ ಜೊತೆಗೆ ಆಸೀಸ್ ಯುವ ಆಟಗಾರ ಸ್ಯಾಮ್ ಕೊನ್​ಸ್ಟಾಸ್ ಕಾರಣವಿಲ್ಲದೆ ಕಾಲ್ಕೆರದು ಜಗಳ ಮಾಡಿದ್ದರು. ಇದೀಗ ಸರಣಿ ಮುಗಿದ ಬಳಿಕ ಕೊನ್​ಸ್ಟಾಸ್ ತಾನು ಹಾಗೆ ಮಾಡಲು ಕಾರಣ ಏನು ಎಂಬುದನ್ನು ವಿವರಿಸಿದ್ದಾರೆ.

ಘಟನೆಯ ವಿವರ ಹೀಗಿದೆ

ವಾಸ್ತವವಾಗಿ ಸಿಡ್ನಿ ಟೆಸ್ಟ್​ನ ಮೊದಲನೇ ದಿನದಾಟದ ಕೊನೆಯ ಸೆಷನ್​ನಲ್ಲಿ ಆಸ್ಟ್ರೇಲಿಯಾ ತಂಡ ಟೀಂ ಇಂಡಿಯಾವನ್ನು ಆಲೌಟ್ ಮಾಡಿ ತನ್ನ ಮೊದಲ ಇನ್ನಿಂಗ್ಸ್ ಶುರು ಮಾಡಿತ್ತು. ದಿನದಾಟ ಮುಗಿಯಲು ಕೆಲವೇ ನಿಮಿಷಗಳು ಬಾಕಿ ಇರುವಾಗ ಆಸೀಸ್ ಪರ ಖವಾಜಾ ಹಾಗೂ ಕೊನ್​ಸ್ಟಾಸ್ ಇನ್ನಿಂಗ್ಸ್ ಆರಂಭಿಸಿದ್ದರು. ಈ ವೇಳೆ ಸ್ಟ್ರೈಕ್​ನಲ್ಲಿದ್ದ ಖವಾಜಾಗೆ ಬೌಲಿಂಗ್ ಮಾಡುವ ಜವಬ್ದಾರಿಯನ್ನು ಬುಮ್ರಾ ಹೊತ್ತಿದ್ದರು. ಆದರೆ ಸ್ಟ್ರೈಕ್ ತೆಗೆದುಕೊಳ್ಳಲು ಖವಾಜಾ ತಡ ಮಾಡಿದಕ್ಕೆ ಸಿಡಿಮಿಡಿಗೊಂಡ ಬುಮ್ರಾ, ಬೇಗ ಸ್ಟ್ರೈಕ್ ತೆಗೆದುಕೊಳ್ಳುವಂತೆ ಖವಾಜಾ ವಿರುದ್ಧ ಅಸಮಾಧಾನ ಹೊರಹಾಕಿದ್ದರು.

ಈ ವೇಳೆ ನಾನ್​ ಸ್ಟ್ರೈಕ್​ನಲ್ಲಿದ್ದ ಕೊನ್​ಸ್ಟಾಸ್ ಸುಮ್ಮನಿರದೆ ಬುಮ್ರಾ ಜೊತೆ ಮಾತಿನ ಚಕಮಕಿಗೆ ಮುಂದಾದರು. ಇದನ್ನು ನೋಡಿದ ಬುಮ್ರಾ ಕೂಡ ಕೊನ್​ಸ್ಟಾಸ್ ವಿರುದ್ಧ ಗರಂ ಆದರು. ಈ ವೇಳೆಗೆ ಮಧ್ಯ ಪ್ರವೇಶಿಸಿದ ಅಂಪೈರ್​ಗಳು ವಾತಾವರಣನ್ನು ತಿಳಿಗೊಳಿಸಿ ಮತ್ತೆ ಆಟವನ್ನು ಆರಂಭಿಸಿದರು. ಆದರೆ ಅದೇ ಓವರ್​ನಲ್ಲಿ ಖವಾಜಾ ಅವರ ವಿಕೆಟ್ ಉರುಳಿಸುವ ಮೂಲಕ ಬುಮ್ರಾ, ಕೊನ್​ಸ್ಟಾಸ್​ಗೆ ತಿರುಗೇಟು ನೀಡಿದ್ದರು. ಈ ಘಟನೆಯ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿದ್ದವು. ಎಲ್ಲರೂ ಕೊನ್​ಸ್ಟಾಸ್ ನಡೆಯನ್ನು ವಿರೋಧಿಸಿದ್ದರು. ಯುವ ಕ್ರಿಕೆಟಿಗ ಈ ರೀತಿ ವರ್ತಿಸುವುದು ಸರಿ ಇಲ್ಲ ಎಂದಿದ್ದರು.

ಕೊನ್​ಸ್ಟಾಸ್ ನೀಡಿದ ಕಾರಣವಿದು

ಇದೀಗ ತಾನು ಹಾಗೆ ಮಾಡಲು ಕಾರಣ ಏನು ಎಂಬುದನ್ನು ಕೊನ್​ಸ್ಟಾಸ್ ವಿವರಿಸಿದ್ದಾರೆ. ‘ದಿ ಡೈಲಿ ಟೆಲಿಗ್ರಾಫ್’ ಜೊತೆ ಮಾತನಾಡಿದ ಸ್ಯಾಮ್ ಕೊನ್​ಸ್ಟಾಸ್, ‘ ಖವಾಜಾ ಸ್ಟ್ರೈಕ್ ತೆಗೆದುಕೊಳ್ಳಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತಿದ್ದರು. ಈ ವೇಳೆ ಬುಮ್ರಾ ಅವರು ಸಿಡಿಮಿಡಿಗೊಂಡ ಕಾರಣ ನಾನು ಖವಾಜಾ ಪರ ನಿಂತು ಬುಮ್ರಾ ಬಳಿ ಮಾತಿನ ಚಕಮಕಿ ನಡೆಸಿದೆ. ಹೌದು ಆ ಇಡೀ ಘಟನೆಯಲ್ಲಿ ನನ್ನದೇ ತಪ್ಪು ಎಂದು ಕೊನ್​ಸ್ಟಾಸ್ ಹೇಳಿದ್ದಾರೆ. ಇದರ ಜೊತೆಗೆ ಬುಮ್ರಾ ಪ್ರದರ್ಶನವನ್ನು ಹೊಗಳಿದ ಕೊನ್​ಸ್ಟಾಸ್,  ಇದೆಲ್ಲದರ ಹೊರತಾಗಿ ಓವರ್​ನ ಕೊನೆಯಲ್ಲಿ ಖವಾಜಾ ಅವರ ವಿಕೆಟ್ ಉರುಳಿಸುವ ಮೂಲಕ ಬುಮ್ರಾ ಮೇಲುಗೈ ಸಾಧಿಸಿದರು. ನಿಸ್ಸಂಶಯವಾಗಿ ಬುಮ್ರಾ ವಿಶ್ವ ದರ್ಜೆಯ ಆಟಗಾರ. ಹೀಗಾಗಿ ಅವರು ಸರಣಿಯಲ್ಲಿ 32 ವಿಕೆಟ್​ಗಳನ್ನು ಪಡೆದರು. ಅಂತಿಮವಾಗಿ ಕ್ರಿಕೆಟ್​ನಲ್ಲಿ ಈ ರೀತಿಯ ಘಟನೆಗಳು ನಡೆಯುವುದು ಸಾಮಾನ್ಯ ಎಂದು ಹೇಳುವ ಮೂಲಕ ವಿವಾದಕ್ಕೆ ತೆರೆ ಎಳೆಯುವ ಕೆಲಸವನ್ನು ಕೊನ್​ಸ್ಟಾಸ್ ಮಾಡಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:01 pm, Wed, 8 January 25