Indian hockey team: ಟೀಕಾಗಾರರಿಗೆ ಉತ್ತರ ನೀಡಿದ ಕೊನೆಯ 5 ಗೋಲುಗಳು: ಕುಟುಂಬದ ಸಂಭ್ರಮ

Indian hockey team: ಟೀಕಾಗಾರರಿಗೆ ಉತ್ತರ ನೀಡಿದ ಕೊನೆಯ 5 ಗೋಲುಗಳು: ಕುಟುಂಬದ ಸಂಭ್ರಮ
india men hockey team

Tokyo Olympics: ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ದ 3-2 ಅಂತರದ ಮಣಿಸುವ ಮೂಲ ಶುಭಾರಂಭ ಮಾಡಿತು. ಆದರೆ 2ನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ದ 7-1 ಅಂತರದಿಂದ ಹೀನಾಯ ಸೋಲನುಭವಿತು.

TV9kannada Web Team

| Edited By: Zahir PY

Aug 05, 2021 | 10:03 PM

ಟೋಕಿಯೋ ಒಲಿಂಪಿಕ್ಸ್​ಗಾಗಿ ಏಪ್ರಿಲ್-ಮೇ ವೇಳೆಗೆ ಎಲ್ಲಾ ರಾಷ್ಟ್ರಗಳ ಹಾಕಿ ತಂಡಗಳು ಸಿದ್ಧವಾಗಿತ್ತು. ಆದರೆ ಇತ್ತ ಭಾರತದಲ್ಲಿ ಈ ಬಾರಿ ಯಾರು ಆಡಲಿದ್ದಾರೆ ಎಂಬುದೇ ಗೊತ್ತಿರಲಿಲ್ಲ. ಏಕೆಂದರೆ ಏಪ್ರಿಲ್-ಮೇ ಕಳೆದರೂ ಭಾರತೀಯ ಹಾಕಿ ಮಂಡಳಿ ಒಲಿಂಪಿಕ್ಸ್​ನಲ್ಲಿ ಭಾಗವಹಿಸಲಿರುವ ಆಟಗಾರರ ಪಟ್ಟಿಯನ್ನು ಬಿಡುಗಡೆ ಮಾಡಿರಲಿಲ್ಲ. ಇನ್ನೇನು ಒಂದು ತಿಂಗಳು ಮಾತ್ರ ಉಳಿದಿದೆ ಅನ್ನುವಾಗ, ಅಂದರೆ ಜೂ.18 ರಂದು 16 ಸದಸ್ಯರ ಬಳಗವನ್ನು ಹಾಕಿ ಇಂಡಿಯಾ ಪ್ರಕಟಿಸಿತು. ಈ ತಂಡವನ್ನು ನೋಡಿ ಅಚ್ಚರಿಗೊಂಡವರೇ ಹೆಚ್ಚು. ಏಕೆಂದರೆ ತಂಡದಲ್ಲಿ 10 ಮಂದಿ ಹೊಸಬರಿಗೆ ಸ್ಥಾನ ನೀಡಲಾಗಿತ್ತು. 2016 ರ ರಿಯೋ ಒಲಿಂಪಿಕ್ಸ್​ನಲ್ಲಿ ಭಾಗವಹಿಸಿದ್ದ ಅನುಭವಿಗಳಿಗೆ ಕೋಕ್ ನೀಡಲಾಗಿತ್ತು. ಹೀಗೆ ಘೋಷಣೆಯಾದ ತಂಡದಲ್ಲಿ 6 ಮಂದಿ ಮಾತ್ರ ಒಲಿಂಪಿಕ್ಸ್​ ಆಡಿದ ಅನುಭವ ಹೊಂದಿದ್ದರು. ಇಲ್ಲಿ ಮತ್ತೊಂದು ಅಚ್ಚರಿ ಎಂದರೆ ಜೂ.18 ರಂದು ತಂಡವನ್ನು ಘೋಷಿಸಿದರೂ, ಯಾರು ಮುನ್ನಡೆಸಲಿದ್ದಾರೆ ಎಂಬುದರ ಬಗ್ಗೆ ಕೂಡ ಸ್ಪಷ್ಟತೆ ಇರಲಿಲ್ಲ. ಹೀಗಾಗಿಯೇ ಐದು ದಿನಗಳ ಬಳಿಕ ಈ ಬಾರಿ ಮನ್​ಪ್ರೀತ್ ಸಿಂಗ್ ಟೀಮ್ ಇಂಡಿಯಾವನ್ನು ಮುನ್ನಡೆಸಲಿದ್ದಾರೆ ಎಂದು ತಿಳಿಸಲಾಯಿತು.

ಅದಾಗಲೇ 10 ಮಂದಿ ಹೊಸಮುಖಗಳಿಗೆ ಸ್ಥಾನ ನೀಡಿದ ಪರಿಣಾಮವೊ ಅಥವಾ ಮಾಜಿ ನಾಯಕನಿಗೆ ಮತ್ತೆ ಸಾರಥ್ಯವಹಿಸಿದ್ದ ಕಾರಣವೊ ಆರಂಭದಲ್ಲೇ ಟೀಮ್ ಇಂಡಿಯಾ ಬಗ್ಗೆ ಅಪಸ್ವರಗಳು ಕೇಳಿ ಬಂದಿದ್ದವು. ಈ ಬಾರಿ ಕೂಡ ಭಾರತದ ಹಾಕಿ ತಂಡ ಬರಿಗೈಯಲ್ಲಿ ಮರಳಲಿದೆ ಎಂದೇ ಕೆಲವರು ಭವಿಷ್ಯ ನುಡಿದಿದ್ದರು. ಆದರೆ ಈ ಯುವ ಪಡೆಯ ಮೇಲೆ ಕೋಚ್ ಗ್ರಾಹಂ ರೀಡ್ ಅಪಾರ ವಿಶ್ವಾಸ ಹೊಂದಿದ್ದರು. ಹೀಗಾಗಿಯೇ ಅನುಭವಿಗಳನ್ನು ಹೊರಗಿಟ್ಟು ಬಿಸಿರಕ್ತದ ಯುವಕರನ್ನು ಟೋಕಿಯೋಗೆ ಕರೆದುಕೊಂಡು ಹೋಗಿದ್ದರು.

ಅವರ ನಂಬಿಕೆ ಹುಸಿಯಾಗಿರಲಿಲ್ಲ. ಏಕೆಂದರೆ ರಿಯೋ ಒಲಿಂಪಿಕ್ಸ್​ನಲ್ಲಿ 12ನೇ ಸ್ಥಾನ ಪಡೆದು ಭಾರೀ ಅವಮಾನಕ್ಕೊಳಗಾಗಿದ್ದ ತಂಡವು ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ದ 3-2 ಅಂತರದ ಗೆಲುವು ಸಾಧಿಸಿ ಶುಭಾರಂಭ ಮಾಡಿತು. ಆದರೆ 2ನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ದ 7-1 ಅಂತರದಿಂದ ಹೀನಾಯ ಸೋಲನುಭವಿತು. ಇತ್ತ ಮತ್ತೊಮ್ಮೆ ತಂಡದ ಆಯ್ಕೆ ಬಗ್ಗೆ ಭಾರೀ ಟೀಕೆಗಳು ವ್ಯಕ್ತವಾಗಿದ್ದವು. ಅದರಲ್ಲೂ ನಾಯಕ ಮನ್​ಪ್ರೀತ್ ಸಿಂಗ್ ತಂಡವನ್ನು ಮುನ್ನಡೆಸಲು ಅಸಮರ್ಥ ಎಂಬಿತ್ಯಾದಿ ಮಾತುಗಳು ಕೇಳಿ ಬಂದವು. ಏಕೆಂದರೆ ಎದುರಾಳಿಗಳಿಂದ 7 ಗೋಲು ಹೊಡೆಸಿಕೊಂಡ ಅನಾನುಭವಿಗಳ ತಂಡ ಆ ಬಳಿಕ ಕಂಬ್ಯಾಕ್ ಮಾಡಿದ ಇತಿಹಾಸವೇ ಕಳೆದ 4 ದಶಕಗಳಲ್ಲಿ ಭಾರತೀಯರು ನೋಡಿರಲಿಲ್ಲ.

ಆದರೆ ಇದೆಲ್ಲವನ್ನೂ ಮನ್​ಪ್ರೀತ್ ಪಡೆ ಸುಳ್ಳಾಗಿಸಿದರು. ಕೋಚ್ ರೀಡ್ ಅವರ ಮಾರ್ಗದರ್ಶನದಲ್ಲಿ ಪರಿಪೂರ್ಣವಾಗಿ ಬೇಟೆಗಿಳಿದರು. ಒಂದು ಹೀನಾಯ ಸೋಲಿನ ಬಳಿಕ ಹೇಗೆ ಕಂಬ್ಯಾಕ್ ಮಾಡಬೇಕೆಂದು ಇಡೀ ವಿಶ್ವಕ್ಕೆ ತೋರಿಸಿಕೊಟ್ಟರು. ಅದರ ಫಲಿತಾಂಶವೇ ಮೂರನೇ ಪಂದ್ಯದಲ್ಲಿ ಬಲಿಷ್ಠ ಸ್ಪೇನ್ ಪಡೆಗೆ ಟೀಮ್ ಇಂಡಿಯಾ 3-0 ಅಂತರದಿಂದ ಸೋಲುಣಿಸಿದ್ದು, ನಾಲ್ಕನೇ ಪಂದ್ಯದಲ್ಲಿ 3-1 ಅಂತರದಿಂದ ಅರ್ಜೆಂಟೀನಾವನ್ನು ಬಗ್ಗು ಬಡಿದಿರುವುದು, ಐದನೇ ಪಂದ್ಯದಲ್ಲಿ ಆತಿಥೇಯ ಜಪಾನ್ ವಿರುದ್ದ 5 ಗೋಲು ಬಾರಿಸಿ ಕ್ವಾರ್ಟರ್​ ಫೈನಲ್​ಗೆ ಲಗ್ಗೆಯಿಟ್ಟಿರುವುದು.

ಇನ್ನು 8ರ ಘಟ್ಟದಲ್ಲಿ ಬಲಿಷ್ಠ ಗ್ರೇಟ್ ಬ್ರಿಟನ್​ (ಇಂಗ್ಲೆಂಡ್​) ಅನ್ನು 3-1 ಅಂತರದಿಂದ ಮಣಿಸಿ ಸೆಮಿ ಫೈನಲ್ ಪ್ರವೇಶಿಸುವುದರೊಂದಿಗೆ ಟೀಮ್ ಇಂಡಿಯಾ ಟೀಕಾಗಾರರ ಬಾಯಿ ಮುಚ್ಚಿಸಿದರು. ಹೌದು, ಸತತ ಸೋಲಿನಿಂದ ಕಂಗೆಡುತ್ತಿದ್ದ ಭಾರತ ತಂಡವು 41 ವರ್ಷಗಳ ಬಳಿಕ ಸೆಮಿ ಫೈನಲ್ ಪ್ರವೇಶಿಸಿತ್ತು. ಈ ಒಂದು ಗೆಲುವು ಹಾಕಿ ಆಟಗಾರರ ಕುಟುಂಬದ ಆತ್ಮ ವಿಶ್ವಾಸವನ್ನೂ ಕೂಡ ಹೆಚ್ಚಿಸಿತು ಎಂದೇ ಹೇಳಬಹುದು. ಏಕೆಂದರೆ ಪ್ರತಿ ಬಾರಿಯ ಸೋಲಿನ ಬೆನ್ನಲ್ಲೇ ಟೀಕೆಗಳಿಗೆ ಮತ್ತು ಅಪಹಾಸ್ಯಗಳಿಗೆ ಆಟಗಾರರು ಮಾತ್ರವಲ್ಲ, ಅವರ ಕುಟುಂಬ ಕೂಡ ಗುರಿಯಾಗುತ್ತಿತ್ತು.

ಆ ಎಲ್ಲಾ ನೋವನ್ನು ಮರೆಸುವಂತಹ ಗೆಲುವೊಂದು ಆಟಗಾರರಿಗೂ ಅವರ ಕುಟುಂಬಕ್ಕೂ ಅನಿವಾರ್ಯವಾಗಿತ್ತು. ಆದರೆ ಸೆಮಿಫೈನಲ್​ನಲ್ಲಿ ಬಲಿಷ್ಠ ಬೆಲ್ಜಿಯಂನ ಆಕ್ರಮಣಕಾರಿ ಆಟದ ಮುಂದೆ ಭಾರತ ಎಡವಿತು. ಆದರೆ ಆ ಪಂದ್ಯದಲ್ಲಿ ಭಾರತ ನಿಜಕ್ಕೂ ಭರ್ಜರಿ ಪೈಪೋಟಿ ನೀಡಿದರೂ, ಬೆಸ್ಟ್ ಎನಿಸಿಕೊಂಡ ತಂಡ ಗೆದ್ದಿತ್ತು. ಇನ್ನು ಉಳಿದಿದ್ದು ಕಂಚಿನ ಪದಕ ಮಾತ್ರ. ಜರ್ಮನಿ ವಿರುದ್ದದ ಅಂತಿಮ ಪಂದ್ಯದಲ್ಲಿ ಸೋತರೆ ಮತ್ತದೇ ಅಪಮಾನ, ಟೀಕೆ, ಅಪಹಾಸ್ಯ…ಇದು ಭಾರತೀಯ ತಂಡದ ಪ್ರತಿಯೊಬ್ಬ ಆಟಗಾರಿಗೂ ಚೆನ್ನಾಗಿಯೇ ತಿಳಿದಿತ್ತು. ಏಕೆಂದರೆ ಸೆಮಿ ಫೈನಲ್ ಪ್ರವೇಶಿಸಿದಾಗ ಹಾಡಿ ಹೊಗಳಿದವರು, ಸೋತಾಗ ಸೈಲೆಂಟ್ ಆಗಿದ್ದರು.

ಹೀಗಾಗಿ ಅಂತಿಮ ಹೋರಾಟದಲ್ಲಿ ಗೆಲುವನ್ನು ಹೊರತುಪಡಿಸಿ ಭಾರತಕ್ಕೆ ಮರಳಲ್ಲ ಎಂದು ದೃಢ ನಿರ್ಧಾರದೊಂದಿಗೆ ಟೀಮ್ ಇಂಡಿಯಾ ಆಟಗಾರರು ಕಣಕ್ಕಿಳಿದಿದ್ದರು. ಆದರೆ ಅತ್ತ ಬಲಿಷ್ಠ ಜರ್ಮನಿ ತಂಡ ಆಕ್ರಮಣಕಾರಿ ಆಟದ ರೂಪುರೇಷೆಯೊಂದಿಗೆ ಮೈದಾನಕ್ಕಿಳಿದಿತ್ತು. ಪರಿಣಾಮ ಮೊದಲ ಗೋಲು ದಾಖಲಿಸಿ ಜರ್ಮನಿ ಉತ್ತಮ ಆರಂಭ ಪಡೆಯಿತು. ಇದಾಗಿ ಭಾರತ ಒಂದು ಗೋಲುಗಳಿಸುವಷ್ಟರಲ್ಲಿ ಜರ್ಮನಿ ಮತ್ತೆರಡು ಗೋಲು ಬಾರಿಸಿ ಅಂತರವನ್ನು 1-3 ಕ್ಕೇರಿಸಿದರು. ಈ ಫಲಿತಾಂಶವನ್ನು ನೋಡಿದವರೂ ಈ ಸಲ ಕೂಡ ಭಾರತ ತಂಡ ಬರಗೈಯ್ಯಲ್ಲಿ ಮರಳಿದೆ ಎಂದೇ ಅಂದುಕೊಂಡಿದ್ದರು.

ಆದರೆ ಅದಾಗಲೇ ಗೆಲುವಿನೊಂದಿಗೆ ಮಾತ್ರ ಹಿಂತಿರುಗುವೆ ಎಂಬ ದೃಢ ನಿಶ್ಚಯದೊಂದಿಗೆ ಕಣಕ್ಕಿಳಿದಿದ್ದ ಭಾರತದ ತರುಣರ ಪಡೆ ಆಕ್ರಮಣಕಾರಿ ಆಟಕ್ಕೆ ಒತ್ತು ನೀಡಿದರು. ಬೆವರಿಸುತ್ತಾ ಸತತವಾಗಿ ಜರ್ಮನಿಯ ಗೋಲು ಬಲೆಯತ್ತ ದಾಳಿ ನಡೆಸಿದರು. ಸತತ ಪ್ರಯತ್ನ ಮತ್ತು ಪರಿಶ್ರಮದ ಫಲವಾಗಿ ಭಾರತಕ್ಕೆ 2 ಗೋಲು ಒಲಿದು ಬಂತು. ಫಲಿತಾಂಶ 3-3 ಸಮಬಲಗೊಳ್ಳುತ್ತಿದ್ದಂತೆ ಭಾರತೀಯ ಫಾರ್ವಡ್ ಆಟಗಾರರು ಮತ್ತಷ್ಟು ಉತ್ಸಾಹಿತರಾದರು. ಮಿಡ್ ಫೀಲ್ಡರ್​ಗಳು ಕೂಡ ಫಾರ್ವರ್ಡ್ ಆಟಗಾರಿಗೆ ಉತ್ತಮ ಸಾಥ್ ನೀಡಿದರು. ಆಕ್ರಮಣಕಾರಿ ಆಟಕ್ಕೆ ಅದುವೇ ಉತ್ತರ ಎಂಬಂತೆ ಸಿಮ್ರಂಜಿತ್ ಸಿಂಗ್ (2 ಗೋಲು), ಹಾರ್ದಿಕ್ ಸಿಂಗ್ (2 ಗೋಲು), ರುಪಿಂದರ್ ಪಾಲ್ ಸಿಂಗ್ ಗೋಲು ಬಾರಿಸಿ ಜರ್ಮನಿ ವಿರುದ್ದ 4-5 ಅಂತರದಿಂದ ಗೆದ್ದುಕೊಂಡಿತು.

ಅತ್ತ ಟೋಕಿಯೋದಲ್ಲಿ ರೆಫರಿ ವಿಸಲ್ ಊದುತ್ತಿದ್ದಂತೆ ಇತ್ತ ಪಂಜಾಬ್​ನ ಮನ್​ಪ್ರೀತ್ ಮನೆಯಲ್ಲಿ ಸಡಗರ ಮನೆ ಮಾಡಿತ್ತು. ಇಂಪಾಲ್ ಮೂಲದ ಆಟಗಾರ ನೀಲಕಂಠ ಶರ್ಮಾ ಕುಟುಂಬದ ಸದಸ್ಯರು ಹಾಗೂ ನೆರೆಹೊರೆಯರು ಬ್ಯಾಂಡ್ ಬಜಾಯಿಸುತ್ತಾ ರಸ್ತೆಯಲ್ಲಿ ಕುಣಿದು ಕುಪ್ಪಳಿಸಿದರು. ಇವೆಲ್ಲಕ್ಕಿಂತ ಹೆಚ್ಚಾಗಿ ಹಾಕಿ ಆಟಗಾರರ ಕುಟುಂಬಗಳು 41 ವರ್ಷಗಳ ಬಳಿಕ ಪಂದ್ಯದ ಬಳಿಕ ಹೆಮ್ಮೆಯಿಂದ ಮನೆಯಿಂದ ಹೊರಬಂದರು. ಒಟ್ಟಿನಲ್ಲಿ ಒಂದು ಪದಕ ಇಂದು ಇಡೀ ಭಾರತವನ್ನು ವಿಶ್ವದಲ್ಲಿ ಹೆಮ್ಮೆ ಪಡುವಂತೆ ಮಾಡಿದೆ. ಅದು ಕೂಡ ಕಳೆದ ಬಾರಿಯ ಒಲಿಂಪಿಕ್ಸ್​ನಲ್ಲಿ 12ನೇ ಸ್ಥಾನ ಪಡೆದ ತಂಡ ಇಂದು 3ನೇ ಸ್ಥಾನಗಳಿಸುವ ಮೂಲಕ ಭಾರತದಲ್ಲಿ ಹಾಕಿ ಕ್ರೇಜ್​ ಅನ್ನು ಮತ್ತೊಮ್ಮೆ ಹುಟ್ಟುಹಾಕಿದೆ.

ಇದನ್ನೂ ಓದಿ:-

Tokyo Olympics: ಒಲಿಂಪಿಕ್ಸ್​ನಲ್ಲಿ ವಿಶ್ವ ದಾಖಲೆ ಬರೆದ ಭಾರತ..!

Tokyo Olympics: ಪದಕ ಗೆಲ್ಲುತ್ತಿದ್ದಂತೆ ಟೀಮ್ ಇಂಡಿಯಾಗೆ ಕಾದಿತ್ತು ಸರ್​ಪ್ರೈಸ್..!

(‘A new dawn’: Families of Indian men’s hockey team players break out in dance)

Follow us on

Related Stories

Most Read Stories

Click on your DTH Provider to Add TV9 Kannada