Sri Lanka New PM: ಶ್ರೀಲಂಕಾದ ನೂತನ ಪ್ರಧಾನಿ ಹರಿಣಿ ಅಮರಸೂರ್ಯ ಯಾರು?
Harini Amarasuriya:ಹರಿಣಿ ಅವರು 1994 ರಲ್ಲಿ ದಿವಂಗತ ಸಿರಿಮಾವೋ ಬಂಡಾರನಾಯಕೆ ಅಧಿಕಾರ ವಹಿಸಿಕೊಂಡ ನಂತರ ಶ್ರೀಲಂಕಾದ ಮೊದಲ ಮಹಿಳಾ ಪ್ರಧಾನ ಮಂತ್ರಿ ಮತ್ತು ಶ್ರೀಲಂಕಾದ ಇತಿಹಾಸದಲ್ಲಿ ಮೂರನೇ ಮಹಿಳಾ ಪ್ರಧಾನ ಮಂತ್ರಿಯಾಗಿದ್ದಾರೆ. ಇವರು ಹೆಚ್ಚುವರಿಯಾಗಿ ನ್ಯಾಯ, ಶಿಕ್ಷಣ, ಕಾರ್ಮಿಕರು, ಕೈಗಾರಿಕೆಗಳು, ವಿಜ್ಞಾನ ಮತ್ತು ತಂತ್ರಜ್ಞಾನ, ಆರೋಗ್ಯ ಮತ್ತು ಹೂಡಿಕೆ ಖಾತೆ ಹೊಂದಿದ್ದಾರೆ.
ಕೊಲಂಬೋ ಸೆಪ್ಟೆಂಬರ್ 25: ಶ್ರೀಲಂಕಾದ (Sri Lanka) 16ನೇ ಪ್ರಧಾನಿಯಾಗಿ ಹರಿಣಿ ಅಮರಸೂರ್ಯ (Harini Amarasuriya) ಮಂಗಳವಾರ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಶ್ರೀಲಂಕಾದ ಪ್ರಧಾನ ಮಂತ್ರಿ ಹುದ್ದೆಯನ್ನು ಅಲಂಕರಿಸಿದ ಮೂರನೇ ಮಹಿಳಾ ರಾಜಕಾರಣಿಯಾಗಿರುವ ಇವರು ಹೆಚ್ಚುವರಿಯಾಗಿ ನ್ಯಾಯ, ಶಿಕ್ಷಣ, ಕಾರ್ಮಿಕರು, ಕೈಗಾರಿಕೆಗಳು, ವಿಜ್ಞಾನ ಮತ್ತು ತಂತ್ರಜ್ಞಾನ, ಆರೋಗ್ಯ ಮತ್ತು ಹೂಡಿಕೆ ಖಾತೆ ಹೊಂದಿದ್ದಾರೆ. 54 ವರ್ಷ ವಯಸ್ಸಿನ ಹಕ್ಕುಗಳ ಹೋರಾಟಗಾರ್ತಿಯನ್ನು ದೇಶದ ಪ್ರಧಾನಿಯಾಗಿ ಅಧ್ಯಕ್ಷ ಅನುರ ಕುಮಾರ ದಿಸ್ಸಾನಾಯಕೆ ಅವರು ಆಯ್ಕೆ ಮಾಡಿದ್ದಾರೆ. ಏಕೆಂದರೆ ಅವರು ಜೆವಿಪಿ-ಎನ್‌ಪಿಪಿ ಸಂಯೋಜನೆಯಲ್ಲಿ ಪ್ರಮುಖ ಮುಖಗಳಲ್ಲಿ ಒಬ್ಬರಾಗಿದ್ದಾರೆ. ಹರಿಣಿ ಅವರು 1994 ರಲ್ಲಿ ದಿವಂಗತ ಸಿರಿಮಾವೋ ಬಂಡಾರನಾಯಕೆ ಅಧಿಕಾರ ವಹಿಸಿಕೊಂಡ ನಂತರ ಶ್ರೀಲಂಕಾದ ಮೊದಲ ಮಹಿಳಾ ಪ್ರಧಾನ ಮಂತ್ರಿ ಮತ್ತು ಶ್ರೀಲಂಕಾದ ಇತಿಹಾಸದಲ್ಲಿ ಮೂರನೇ ಮಹಿಳಾ ಪ್ರಧಾನ ಮಂತ್ರಿಯಾಗಿದ್ದಾರೆ.
ವಿಶ್ವವಿದ್ಯಾನಿಲಯದ ಉಪನ್ಯಾಸಕಿಯಾಗಿರುವ ಹರಿಣಿ ಅಮರಸೂರ್ಯ ಅವರು ಎಡಿನ್‌ಬರ್ಗ್ ವಿಶ್ವವಿದ್ಯಾಲಯದಿಂದ ಸಾಮಾಜಿಕ ಮಾನವಶಾಸ್ತ್ರದಲ್ಲಿ ಪಿಎಚ್‌ಡಿ ಪಡೆದರು. ಅವರ ಸಂಶೋಧನಾ ಆಸಕ್ತಿಗಳು ರಾಜ್ಯ-ಸಮಾಜ ಸಂಬಂಧಗಳು, ರಾಜಕೀಯ ಚಳುವಳಿಗಳು, ಭಿನ್ನಾಭಿಪ್ರಾಯ ಮತ್ತು ಕ್ರಿಯಾವಾದವನ್ನು ಒಳಗೊಂಡಿವೆ.
ತೋಟಗಾರನ ಕಿರಿಯ ಮಗಳು, ಹರಿಣಿ ಶ್ರೀಲಂಕಾದ ದಕ್ಷಿಣ ಭಾಗದಲ್ಲಿ ಬೆಳೆದಿದ್ದು ನಂತರ ಸರ್ಕಾರವು ಚಹಾ ತೋಟಗಳನ್ನು ಸ್ವಾಧೀನಪಡಿಸಿಕೊಂಡಾಗ ಕೊಲಂಬೊಗೆ ತೆರಳಿದರು. ನಂತರ ಅವರು ಕೊಲಂಬೊದಲ್ಲಿನ ಖಾಸಗಿ ಶಾಲೆಯಲ್ಲಿ ಶಿಕ್ಷಣ ಮುಂದುವರಿಸಿದರು. ಹರಿಣಿ ಸ್ತ್ರೀವಾದದತ್ತ ವಾಲಿದ್ದರು.ಶ್ರೀಲಂಕಾದಲ್ಲಿ ಇದು ಸವಾಲಿನ ಸಮಯವಾಗಿತ್ತು, ಉತ್ತರದಲ್ಲಿ ಅಂತರ್ಯುದ್ಧವು ಜೋರಾಗಿಯೇ ಇತ್ತು.
ದಕ್ಷಿಣದಲ್ಲಿ ಸಶಸ್ತ್ರ ದಂಗೆಗಳು ಉಲ್ಬಣಗೊಂಡಿದ್ದವು. ಆದ್ದರಿಂದ ಆಕೆ ಒಂದು ವರ್ಷದವರೆಗೆ ವಿನಿಮಯ ಕಾರ್ಯಕ್ರಮದಲ್ಲಿ ಅಧ್ಯಯನ ಮಾಡಲು ಅಮೆರಿಕಕ್ಕೆ ಹೋದರು. ನಂತರ ಅವರು ದೆಹಲಿಯ ಹಿಂದೂ ಕಾಲೇಜ್ ಆಫ್ ಯೂನಿವರ್ಸಿಟಿಯಲ್ಲಿ ಪದವಿ ಪಡೆದರು. ಅವರು ಆಸ್ಟ್ರೇಲಿಯಾದಲ್ಲಿ ಅಪ್ಲೈಡ್ ಮಾನವಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದು ಅಂತರರಾಷ್ಟ್ರೀಯ ಮಾನವೀಯ ಮತ್ತು ಅಭಿವೃದ್ಧಿ ವಲಯದಲ್ಲಿ ಕೆಲಸ ಮಾಡಲು ಶ್ರೀಲಂಕಾಕ್ಕೆ ಮರಳಿದರು. ವಿರಾಮದ ನಂತರ, ಅವರು ತಮ್ಮ ಪಿಎಚ್‌ಡಿ ಪೂರ್ಣಗೊಳಿಸಿದರು.
ಅವರು ಮಾನವೀಯ ವಲಯದಲ್ಲಿ ಕೆಲಸ ಮಾಡುತಿದ್ದಾಗ, ಅವರು ಮುಖ್ಯವಾಹಿನಿಯ ರಾಜಕೀಯಕ್ಕೆ ಬಂದರು. 2011ರಲ್ಲಿ ರಾಜಪಕ್ಸೆ ಸರ್ಕಾರ ಅಧಿಕಾರದಲ್ಲಿದ್ದಾಗ ಹರಿಣಿ ತನ್ನ ಸಹೋದ್ಯೋಗಿಗಳೊಂದಿಗೆ ಸರ್ಕಾರದ ವಿರುದ್ಧ ಪ್ರತಿಭಟನಾ ಮೆರವಣಿಗೆ ನಡೆಸಿದ್ದರು. ತದನಂತರ 2015 ರಲ್ಲಿ ಮೈತ್ರಿಪಾಲ ಸಿರಿಸೇನಾ ಸರ್ಕಾರ ಅಧಿಕಾರಕ್ಕೆ ಬಂದಾಗ ಅವರು ಜೆವಿಪಿ ಕಡೆಗೆ ತಿರುಗಿದರು.
ಇದನ್ನೂ ಓದಿ: ಶ್ರೀಲಂಕಾದ ಸಂಸತ್ತು ವಿಸರ್ಜಿಸಿದ ನೂತನ ಅಧ್ಯಕ್ಷ ಅನುರಾ ಕುಮಾರ ದಿಸ್ಸಾನಾಯಕೆ
ಹರಿಣಿ ಜೊತೆಗೆ ಎನ್‌ಪಿಪಿ ಸಂಸದರಾದ ವಿಜಿತಾ ಹೆರಾತ್ ಮತ್ತು ಲಕ್ಷ್ಮಣ್ ನಿಪುಣರಾಚಿ ಕೂಡ ಸಂಪುಟ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಹರಿಣಿ, ವಿಜಿತಾ ಮತ್ತು ಲಕ್ಷ್ಮಣ್ ಅವರು ಸಂಸತ್ತಿನ ಸನ್ನಿಹಿತ ವಿಸರ್ಜನೆಯೊಂದಿಗೆ ಉಸ್ತುವಾರಿ ಸಚಿವ ಸಂಪುಟದಲ್ಲಿ ಸಚಿವರಾಗಿ ಕಾರ್ಯನಿರ್ವಹಿಸಲಿದ್ದಾರೆ. ಸಂಸತ್ತಿಗೆ ಶೀಘ್ರ ಚುನಾವಣೆ ನಡೆಯಲಿದ್ದು, ನಂತರ ಪೂರ್ಣ ಪ್ರಮಾಣದ ಸಚಿವ ಸಂಪುಟ ಅಧಿಕಾರ ವಹಿಸಿಕೊಳ್ಳಲಿದೆ. ನವೆಂಬರ್ ಅಂತ್ಯದೊಳಗೆ ಸಂಸತ್ ಚುನಾವಣೆ ನಡೆಯುವ ಸಾಧ್ಯತೆ ಇದೆ.
ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ