AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು ಉಪನಗರ ರೈಲು ಯೋಜನೆಯ ಮಲ್ಲಿಗೆ ಕಾರಿಡಾರ್: ಅದಾನಿ ಗ್ರೂಪ್ ಸಂಸ್ಥೆ ಎಲ್‌1 ಬಿಡ್ಡರ್

Adani group set to get Rs 666 crore Bengaluru suburban rail project: ಬೆಂಗಳೂರು ಸಬರ್ಬನ್ ರೈಲು ಯೋಜನೆಯ ಮಲ್ಲಿಗೆ ಕಾರಿಡಾರ್​ನಲ್ಲಿನ ಕೆಲ ಕಾಮಗಾರಿಗಳಿಗೆ ಕರೆಯಲಾಗಿದ್ದ ಟೆಂಡರ್​ನಲ್ಲಿ ಅದಾನಿ ಸಂಸ್ಥೆ ನಂಬರ್ ಒನ್ ಬಿಡ್​ದಾರ ಎನಿಸಿದೆ. ಬೆನ್ನಿಗಾನಹಳ್ಳಿಯಿಂದ ಚಿಕ್ಕಬಾಣಾವರ ನಡುವಿನ ಈ ಕಾರಿಡಾರ್​ನಲ್ಲಿ 7.8 ಕಿಮೀ ಉದ್ದದ ಎಲಿವೇಟೆಡ್ ಫ್ಲೈಓವರ್ ಇತ್ಯಾದಿ ಕಾಮಗಾರಿಗಳಿಗೆ ಟೆಂಡರ್ ಕರೆಯಲಾಗಿತ್ತು.

ಬೆಂಗಳೂರು ಉಪನಗರ ರೈಲು ಯೋಜನೆಯ ಮಲ್ಲಿಗೆ ಕಾರಿಡಾರ್: ಅದಾನಿ ಗ್ರೂಪ್ ಸಂಸ್ಥೆ ಎಲ್‌1 ಬಿಡ್ಡರ್
ಸಬರ್ಬನ್ ರೈಲುಗಳುImage Credit source: Getty Images
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Aug 31, 2026 | 6:25 PM

Share

ಬೆಂಗಳೂರು, ಆಗಸ್ಟ್ 31: ಉದ್ಯಾನನಗರಿಯ ಮಹತ್ವಾಕಾಂಕ್ಷೆಯ ಉಪನಗರ ರೈಲು ಯೋಜನೆಯ (BSRP) ಮಲ್ಲಿಗೆ ಕಾರಿಡಾರ್​ನಲ್ಲಿ ಒಂದು ಕಾಮಗಾರಿಯ ಟೆಂಡರ್​ನಲ್ಲಿ ಸೆಮಿಂಡಿಯಾ ಪ್ರಾಜೆಕ್ಟ್ಸ್ ಲಿ ಸಂಸ್ಥೆ ಎಲ್1 ಬಿಡ್​ದಾರ ಎನಿಸಿದೆ. ಅದಾನಿ ಗ್ರೂಪ್​ಗೆ ಸೇರಿದ ಸೆಮಿಂಡಿಯಾ (Cemindia Projects Ltd) ₹665.61 ಕೋಟಿಗೆ ಬಿಡ್ ಮಾಡಿದೆ. ಇದು ಈ ಟೆಂಡರ್​ಗೆ ದಾಖಲಾದ ಕನಿಷ್ಠ ಬಿಡ್ ಎನಿಸಿದೆ. ಕರ್ನಾಟಕ ಸರ್ಕಾರ ಹಾಗೂ ಕೇಂದ್ರ ರೈಲ್ವೆ ಸಚಿವಾಲಯದಿಂದ ಜಂಟಿಯಾಗಿ ನಡೆಸಲಾಗುತ್ತಿರುವ ಕೆ-ರೈಡ್ (K-RIDE – ರೈಲ್ ಇನ್​ಫ್ರಾಸ್ಟ್ರಕ್ಚರ್ ಡೆವಲಪ್ಮೆಂಟ್ ಎಂಟರ್​ಪ್ರೈಸಸ್) ಸಂಸ್ಥೆ ಈ ಟೆಂಡರ್ ಆಹ್ವಾನಿಸಿತ್ತು. ಇದರ ಅಂದಾಜು ವೆಚ್ಚ ₹671.65 ಎಂದು ಕೆ-ರೈಡ್ ಪ್ರಸ್ತಾಪಿಸಿತ್ತು. ಅದಾನಿ ಸಂಸ್ಥೆ ಅದಕ್ಕಿಂತಲೂ ಕಡಿಮೆ ಮೊತ್ತಕ್ಕೆ ಬಿಡ್ ಸಲ್ಲಿಸಿದೆ.

ಬೆಂಗಳೂರಿನ ಅಭಿವೃದ್ಧಿ ಯೋಜನೆಗಳಲ್ಲಿ ಅದಾನಿ ಗ್ರೂಪ್ ಸಕ್ರಿಯವಾಗಿ ತೊಡಗಿಸಿಕೊಂಡಿದೆ. ಇತ್ತೀಚೆಗಷ್ಟೇ ಅದಾನಿ ಎಂಟರ್ಪ್ರೈಸಸ್ ಸಂಸ್ಥೆಯು ಬೆಂಗಳೂರಿನ ಸುರಂಗ ರಸ್ತೆಯ ಟೆಂಡರ್​ನಲ್ಲಿ ಪಾಲ್ಗೊಂಡು ಎಲ್​1 ಬಿಡ್​ದಾರನಾಗಿ ಹೊರಹೊಮ್ಮಿದೆ. ಆದರೆ, ಅದರ ಗುತ್ತಿಗೆ ಇನ್ನೂ ಹಂಚಿಕೆಯಾಗಿಲ್ಲ. ಇದೀಗ ಸಬರ್ಬನ್ ರೈಲ್ವೆ ಪ್ರಾಜೆಕ್ಟ್​ನಲ್ಲೂ ತೊಡಗಿಸಿಕೊಳ್ಳಲು ಅದಾನಿ ಗ್ರೂಪ್ ಯಶಸ್ವಿ ಹೆಜ್ಜೆ ಇಟ್ಟಿದೆ.

ಮತ್ತಿಕೆರೆಯಲ್ಲಿ ಡಬಲ್-ಡೇಕರ್ ಫ್ಲೈಓವರ್

ಕೇಂದ್ರ ಮತ್ತು ರಾಜ್ಯ ಸರ್ಕಾರದ ಜಂಟಿ ಸಹಯೋಗದ ಈ ಉಪನಗರ ರೈಲು ಯೋಜನೆಯಡಿ ಮಲ್ಲಿಗೆ ಕಾರಿಡಾರ್-2 (ಬೆನ್ನಿಗಾನಹಳ್ಳಿ – ಚಿಕ್ಕಬಾಣಾವರ) ವ್ಯಾಪ್ತಿಯಲ್ಲಿ ವಿವಿಧ ಕಾಮಗಾರಿಗಳಿಗೆ ಕೆ-ರೈಡ್ ಟೆಂಡರ್ ಕರೆದಿತ್ತು. ಈ ಕಾಮಗಾರಿಗಳ ಪೈಕಿ ಯಶವಂತಪುರ ಮತ್ತು ಮತ್ತಿಕೆರೆ ನಡುವೆ 1.2 ಕಿ.ಮೀ ಉದ್ದದ ಡಬಲ್-ಡೇಕರ್ (ಎರಡು ಹಂತದ) ಮೇಲ್ಸೇತುವೆ ನಿರ್ಮಿಸುವುದೂ ಒಂದು. ಈ ಡೆಬಲ್ ಡೆಕರ್ ಮೇಲ್ಸೇತುವೆಯಲ್ಲಿ ಕೆಳಗಿನ ಹಂತದಲ್ಲಿ ರಸ್ತೆ ವಾಹನಗಳ ಸಂಚಾರಕ್ಕಾಗಿ ರಸ್ತೆ ಮೇಲ್ಸೇತುವೆ ನಿರ್ಮಿಸಬೇಕು. ಮೇಲಿನ ಫ್ಲೈಓವರ್​ನಲ್ಲಿ ಸಬರ್ಬನ್ ರೈಲು ಮಾರ್ಗ ಮತ್ತು ಎಲಿವೇಟೆಡ್ ರೈಲ್ವೆ ನಿಲ್ದಾಣ ನಿರ್ಮಿಸಬೇಕು.

ಇದನ್ನೂ ಓದಿ: ಮೊದಲ ಕ್ವಾರ್ಟರ್​ನಲ್ಲಿ ಭಾರತದ ಜಿಡಿಪಿ ಭರ್ಜರಿ ಶೇ. 7.8 ಏರಿಕೆ; ಅದ್ಭುತ ಸಾಧನೆ ಎಂದ ಪ್ರಧಾನಿ ಮೋದಿ

ಸಂಚಾರ ದಟ್ಟಣೆಗೆ ಪರಿಹಾರ: ನಮ್ಮ ಮೆಟ್ರೋ ಮಾದರಿಯಲ್ಲೇ ರಸ್ತೆ ಮತ್ತು ರೈಲು ಮಾರ್ಗವನ್ನು ಒಂದರ ಮೇಲೊಂದರಂತೆ ನಿರ್ಮಿಸುವುದರಿಂದ ಜಾಗದ ಕೊರತೆಯನ್ನು ನಿವಾರಿಸಿ, ಯಶವಂತಪುರ – ಮತ್ತಿಕೆರೆ ಭಾಗದ ಭಾರಿ ರಸ್ತೆ ಟ್ರಾಫಿಕ್ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗುವ ಆಶಯ ಇದೆ.

ಸಮಯ ಮಿತಿ: ಟೆಂಡರ್ ಪ್ರಕ್ರಿಯೆ ಕಂಪ್ಲೀಟ್ ಆಗಿ ಕಾರ್ಯಾದೇಶ (Work Order) ನೀಡಿದ ನಂತರ ಈ ಸಿವಿಲ್ ಕಾಮಗಾರಿಗಳನ್ನು 24 ತಿಂಗಳ ಅವಧಿಯಲ್ಲಿ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ.

ಈ ಯೋಜನೆಯಿಂದಾಗಿ ಬೆಂಗಳೂರು ಉಪನಗರ ರೈಲು ಯೋಜನೆಗೆ ಮರುಜೀವ ಸಿಕ್ಕಂತಾಗಿದ್ದು, ಶೀಘ್ರದಲ್ಲೇ ಕಾಮಗಾರಿಗಳು ವೇಗ ಪಡೆದುಕೊಳ್ಳಲಿವೆ.

ಬೆಂಗಳೂರು ಉಪನಗರ ರೈಲು ಯೋಜನೆಯಲ್ಲಿ ನಾಲ್ಕು ಕಾರಿಡಾರ್​ಗಳು

ಬೆಂಗಳೂರು ಸಬರ್ಬನ್ ರೈಲು ಪ್ರಾಜೆಕ್ಟ್​ನಲ್ಲಿ ನಾಲ್ಕು ಕಾರಿಡಾರ್​ಗಳಿವೆ. ಮಲ್ಲಿಗೆ, ಕನಕ, ಸಂಪಿಗೆ ಮತ್ತು ಪಾರಿಜಾತ ಕಾರಿಡಾರ್​ಗಳಿವೆ. ಮಲ್ಲಿಗೆ ಕಾರಿಡಾರ್ ಬೆನ್ನಿಗಾನಹಳ್ಳಿಯಿಂದ ಚಿಕ್ಕಬಾಣಾವರವರೆಗೆ 25 ಕಿಮೀ ಉದ್ದ, ಹಾಗು 14 ನಿಲ್ದಾಣಗಳು ಇರುತ್ತವೆ.

ಕನಕ ಮಾರ್ಗವು 46 ಕಿಮೀ ಉದ್ದವಿದ್ದು, ಹೀಲಳಿಗೆ ಮತ್ತು ರಾಜಾನುಕುಂಟೆ ನಡುವೆ ಇದೆ. ಸಂಪಿಗೆ ಕಾರಿಡಾರ್ ಮೆಜೆಸ್ಟಿಕ್​ನಿಂದ ದೇವನಹಳ್ಳಿವರೆಗೆ 41 ಕಿಮೀ ಉದ್ದದ ಮಾರ್ಗವಾಗಿದೆ. ಕೊನೆಯದಾಗಿ ಪಾರಿಜಾತ ಕಾರಿಡಾರ್ ಕೆಂಗೇರಿಯಿಂದ ವೈಟ್​ಫೀಲ್ಡ್​ವರೆಗೆ 35 ಕಿಮೀ ಉದ್ದದ ಮಾರ್ಗವಾಗಿದೆ.

ಇದನ್ನೂ ಓದಿ: ಯುರೇಕಾ ಸೀಪ್ಲೇನ್: ವಿಮಾನಕ್ಕಿಂತ ಕಡಿಮೆ ದರ, ಹಡಗಿಗಿಂತ ವೇಗ… 1 ಟನ್ ಸರಕನ್ನು 1 ಕಿಮೀ ಸಾಗಿಸುವ ವೆಚ್ಚ 1 ಡಾಲರ್​ಗಿಂತ ಕಮ್ಮಿ

ಕನಕ ಮಾರ್ಗದಲ್ಲಿ ಆರ್​ಎನ್​ಎಸ್-ಜಿಪಿಎಲ್ ಜೆವಿ ಬಿಡ್ಡಿಂಗ್

ನಾಲ್ಕನೇ ಕಾರಿಡಾರ್ ಆದ ಹೀಲಲಿಗೆ ಮತ್ತು ರಾಜಾನುಕುಂಟೆ ನಡುವಿನ ಕನಕ ಮಾರ್ಗದಲ್ಲಿ ಕಾಮಗಾರಿಯೊಂದಕ್ಕೆ ಕರೆಯಲಾದ ಟೆಂಡರ್​ನಲ್ಲಿ ಆರ್​ಎನ್​ಎಸ್-ಜಿಪಿಎಲ್ ಜೆವಿ ಸಂಸ್ಥೆ 342 ಕೋಟಿ ರೂ ಬಿಡ್ ಸಲ್ಲಿಸಿದೆ. ಅದು ಟೆಂಡರ್​ನ ಏಕೈಕ ಬಿಡ್​ದಾರನಾಗಿದೆ. ಆ ಗುತ್ತಿಗೆ ಆ ಸಂಸ್ಥೆಗೆ ಸಿಗುವ ಸಾಧ್ಯತೆ ಇದೆ.

ಇದೇ ಕನಕ ಕಾರಿಡಾರ್​ನಲ್ಲಿ ಮತ್ತೊಂದು ಕಾಮಗಾರಿಗೆ ಕೆ ರೈಡ್ ಟೆಂಡರ್ ಕರೆಯುವ ನಿರೀಕ್ಷೆ ಇದೆ.

ಪಿಜೆಬಿ ಎಂಜಿನಿಯರ್ಸ್ ಪ್ರೈ ಲಿ, ಸಿವಿಸಿಸಿ, ಎನ್​ಸಿಸಿ, ಐಟಿಡಿ ಸಿಮೆಂಟೇಶನ್ ಇಂಡಿಯಾ ಸಂಸ್ಥೆಗಳಿಗೆ ಇತರ ಕೆಲ ಕಾಮಗಾರಿಗಳ ಗುತ್ತಿದೆ ಸಿಕ್ಕಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಸುಗ್ಗನಹಳ್ಳಿ ವಿಜಯಸಾರಥಿ
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More