Godrej Group: ಗೋದ್ರೆಜ್ ಸಮೂಹದ 30,664 ಕೋಟಿ ರೂಪಾಯಿ ಆಸ್ತಿ ಕುಟುಂಬದ ಮಧ್ಯೆ ವಿಭಜನೆಗೆ ಚಾಲನೆ
410 ಕೋಟಿ ಅಮೆರಿಕನ್ ಡಾಲರ್ ಮೌಲ್ಯದ ಗೋದ್ರೆಜ್ ಸಮೂಹದ ಕಂಪೆನಿಯನ್ನು ಗೋದ್ರೆಜ್ ಕುಟುಂಬದ ಮಧ್ಯೆ ವಿಭಜನೆ ಮಾಡುವ ಪ್ರಕ್ರಿಯೆ ಆರಂಭವಾಗಿದೆ ಎಂದು ಮೂಲಗಳು ತಿಳಿಸಿವೆ.
410 ಕೋಟಿ ಅಮೆರಿಕನ್ ಡಾಲರ್, ಅಂದರೆ ಇವತ್ತಿನ ಲೆಕ್ಕಕ್ಕೆ (ಅಕ್ಟೋಬರ್ 29, 2021) ಭಾರತೀಯ ರೂಪಾಯಿಗಳಲ್ಲಿ 30,664.11 ಕೋಟಿ ಆಗುತ್ತದೆ. ಇಷ್ಟು ಮೊತ್ತದ ಗೋದ್ರೆಜ್ ಸಮೂಹದ ವಿಭಜನೆ ಪ್ರಕ್ರಿಯೆಗೆ ಅಧಿಕೃತವಾಗಿ ಚಾಲನೆ ಸಿಕ್ಕಿದೆ. ಉದ್ಯಮವು ಎರಡು ಭಾಗವಾಗಿ ವಿಭಜನೆ ಆಗಲಿದೆ. ಅದರಲ್ಲಿ ಒಂದನ್ನು ಆದಿ ಗೋದ್ರೆಜ್ ಮತ್ತು ಅವರ ಸೋದರ ನಾದಿರ್ ಮುನ್ನಡೆಸಿದರೆ, ಮತ್ತೊಂದನ್ನು ಸೋದರ ಸಂಬಂಧಿಗಳಾದ ಜಮ್ಷಿದ್ ಗೋದ್ರೆಜ್ ಮತ್ತು ಸ್ಮಿತಾ ಗೋದ್ರೆಜ್ ಕ್ರಿಷ್ಣ ಮುನ್ನಡೆಸುತ್ತಾರೆ ಎಂದು ಈ ಬೆಳವಣಿಗೆ ಬಗ್ಗೆ ಮಾಹಿತಿ ಇರುವವರು ತಿಳಿಸಿರುವುದಾಗಿ ಎಕನಾಮಿಕ್ ಟೈಮ್ಸ್ ವರದಿ ಮಾಡಿದೆ. ಗ್ರಾಹಕ ವಸ್ತುಗಳಿಂದ ರಿಯಲ್ ಎಸ್ಟೇಟ್ ತನಕ ಮತ್ತು ಎಂಜಿನಿಯರಿಂಗ್ ಸಾಮ್ರಾಜ್ಯವನ್ನು ಹೊಂದಿರುವ ಗೋದ್ರೆಜ್ ಪುನರ್ ಸಂಘಟನೆಗೆ ತಿಂಗಳುಗಳಿಂದ ಚರ್ಚೆ ನಡೆಯುತ್ತಿದೆ. ಮತ್ತು ಈಗ ಆದಿ ಗೋದ್ರೆಜ್ ಮಗ ಪಿರೋಜ್ಶಾ ಗೋದ್ರೆಜ್ ಕುಟುಂಬವನ್ನು ಪ್ರತಿನಿಧಿಸುವುದರೊಂದಿಗೆ ಪ್ರಕ್ರಿಯೆಗೆ ಚಲನೆ ಸಿಕ್ಕಿದೆ. ಜಮ್ಷಿದ್ ಮತ್ತೊಂದು ಕಡೆ ನೇತೃತ್ವ ವಹಿಸಿದ್ದಾರೆ. ಅವರ ಜತೆಗೆ ಗೋದ್ರೆಜ್ ಅಂಡ್ ಬೋಯ್ಸ್ನ ಮುಖ್ಯ ಹಣಕಾಸು ಅಧಿಕಾರಿ ಪೂರ್ವೆಜ್ ಕೇಸರಿ ಗಾಂಧಿ ಇದ್ದಾರೆ. ಹೊರಗಿನ ಸಲಹೆಗಾರರಾಗಿ ಕುಟುಂಬಕ್ಕೆ ಆಪ್ತ ಬ್ಯಾಂಕರ್ಗಳಾದ ನಿಮೇಶ್ ಕಾಮ್ಪನಿ, ಉದಯ್ ಕೊಟಕ್, ಕಾನೂನು ತಜ್ಞರಾದ ಝಿಯಾ ಮೊಡಿ, ಸೈರಿಲ್ ಶ್ರಾಫ್ ಮತ್ತಿತರರು ಇದ್ದಾರೆ.
“ತನ್ನ ಷೇರುದಾರರಿಗೆ ಅತ್ಯುತ್ತಮ ಮೌಲ್ಯ ಖಾತ್ರಿಪಡಿಸಲು ಕಳೆದ ಕೆಲವು ವರ್ಷಗಳಿಂದ ದೀರ್ಘಾವಧಿ ಕಾರ್ಯತಂತ್ರ ಯೋಜನೆ ಬಗ್ಗೆ ಗೋದ್ರೆಜ್ ಕುಟುಂಬವು ಕೆಲಸ ಮಾಡುತ್ತಿದೆ,” ಎಂದು ಗೋದ್ರೆಜ್ ಇಂಡಸ್ಟ್ರೀಸ್ ಲಿಮಿಟೆಡ್ (GIL) ಮತ್ತು ಗೋದ್ರೆಜ್ ಅಂಡ್ ಬೋಯ್ಸ್ ಜಂಟಿ ಹೇಳಿಕೆಯಲ್ಲಿ ತಿಳಿಸಿವೆ. ಮುಂದಿನ ಆರು ತಿಂಗಳಲ್ಲಿ ಈ ಪ್ರಕ್ರಿಯೆಗೆ ಪರಿಷ್ಕಾರ ಸಿಗಲಿದೆ ಎನ್ನಲಾಗಿದೆ. 124 ವರ್ಷದಷ್ಟು ಹಳೆಯದಾದ ಈ ಉದ್ಯಮ ಸಮೂಹವು ಆರಂಭಗೊಂಡಿದ್ದು ಬೀಗದ ಕಂಪೆನಿಯಾಗಿ. ಆ ನಂತರ ವಿಶ್ವದ ಮೊದಲ ವೆಜಿಟೆಬಲ್ ಆಯಿಲ್ ಸಾಬೂನು ತಯಾರಿಸಿದ ಅಗ್ಗಳಿಕೆ ಗೋದ್ರೆಜ್‌ಗೆ ಸಲ್ಲುತ್ತದೆ. ಭಾರತದಲ್ಲಿ ಈ ಸಮೂಹಕ್ಕೆ ಬಹಳ ದೊಡ್ಡ ಹೆಸರಿದ್ದು, ಸದ್ಯಕ್ಕೆ ಉದ್ಯಮವನ್ನು ನಡೆಸುತ್ತಿರುವುದು ಕುಟುಂಬದ ನಾಲ್ಕನೇ ತಲೆಮಾರು.
ಮಾಲೀಕತ್ವದ ಬಗ್ಗೆ ಸ್ಪಷ್ಟತೆ ಬಯಸಿದೆ ಹೊಸ ತಲೆಮಾರು ಇನ್ನು ಆದಿ ಗೋದ್ರೆಜ್ ತಮ್ಮ ಆಪ್ತರಲ್ಲಿ ಹೇಳಿಕೊಂಡಿರುವಂತೆ ಈಗಿರುವಂತೆಯೇ ಉದ್ಯಮ ನಡೆದುಕೊಂಡು ಹೋಗಲಿ ಎಂಬುದು ಅವರ ಬಯಕೆ. ಆದರೆ ಹೊಸ ತಲೆಮಾರಿನವರಿಗೆ ಮಾಲೀಕತ್ವದ ಬಗ್ಗೆ ಸ್ಪಷ್ಟತೆ ಬೇಕಿದೆ. ಖಾಸಗಿಯಾಗಿ ಹೊಂದಿರುವ ಗೋದ್ರೆಜ್ ಬೋಯ್ಸ್ ಹೊರತುಪಡಿಸಿ, GIL, GCPL, ಗೋದ್ರೆಜ್ ಪ್ರಾಪರ್ಟೀಸ್ ಮತ್ತು ಗೋದ್ರೆಜ್ ಅಗ್ರೋವೆಟ್ ಹೀಗೆ ಲಿಸ್ಟ್ ಆಗಿರುವಂತಹ ಕಂಪೆನಿಗಳಿವೆ. ಅವುಗಳ ನಿಯಂತ್ರಣ ಮತ್ತು ನಡೆಸಿಕೊಂಡು ಹೋಗುತ್ತಿರುವುದು ಆದಿ ಮತ್ತು ನಾದಿರ್ ಕಡೆಯ ಕುಟುಂಬ. ಕುಟುಂಬದ ಎಲ್ಲ ಸದಸ್ಯರಿಗೂ ಒಬ್ಬರಿಗೆ ಮತ್ತೊಬ್ಬರ ಕಂಪೆನಿಯಲ್ಲಿ ಷೇರಿದೆ ಮತ್ತು ಆಡಳಿತ ಮಂಡಳಿಯನ್ನು ಪ್ರತಿನಿಧಿಸುತ್ತಾರೆ.
ಇತ್ತೀಚಿನ ಬೆಳವಣಿಗೆಯಾಗಿ ಗೋದ್ರೇಜ್ ಸಮೂಹದ ಅಧ್ಯಕ್ಷರಾಗಿದ್ದ ಆದಿ ಗೋದ್ರೇಜ್ ಆ ಸ್ಥಾನದಿಂದ ಕೆಳಗಿಳಿದ ನಂತರ ಮತ್ತು GIL ಗೌರವಾಧ್ಯಕ್ಷರಾಗಿ ಸೇವೆ ಸಲ್ಲಿಸುವುದು ಮುಂದುವರಿಸಿದ್ದಾರೆ. ವ್ಯವಸ್ಥಾಪಕ ನಿರ್ದೇಶಕರಾಗಿದ್ದ ನಾದಿರ್ ಗೋದ್ರೇಜ್ ಈ ತಿಂಗಳು ಅವರಿಂದ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಅಲ್ಲದೆ ಹಲವಾರು ವರ್ಷಗಳಿಂದ ಆದಿ ಗೋದ್ರೇಜ್ ತನ್ನ ಮೂವರು ಮಕ್ಕಳಿಗೆ ವಿವಿಧ ಗುಂಪು ವ್ಯವಹಾರಗಳನ್ನು ನಡೆಸಲು ಬಿಟ್ಟುಕೊಟ್ಟಿದ್ದಾರೆ. ಮಗ ಪಿರೋಜ್ಶಾ ಅವರು ಸಮೂಹದ ರಿಯಲ್ ಎಸ್ಟೇಟ್ ವಿಭಾಗವಾದ ಗೋದ್ರೆಜ್ ಪ್ರಾಪರ್ಟೀಸ್‌ನ ಅಧ್ಯಕ್ಷರಾಗಿದ್ದಾರೆ. ಹಿರಿಯ ಮಗಳು ತಾನ್ಯಾ ದುಬಾಶ್ ಕಾರ್ಯನಿರ್ವಾಹಕ ನಿರ್ದೇಶಕಿ ಮತ್ತು ಮುಖ್ಯ ಬ್ರ್ಯಾಂಡ್ ಅಧಿಕಾರಿ ಆಗಿದ್ದಾರೆ. ಕಿರಿಯ ಮಗಳು ನಿಸಾಬ ಗೋದ್ರೆಜ್ ಕನ್ಸ್ಯೂಮರ್ ಪ್ರಾಡಕ್ಟ್ಸ್ ಲಿಮಿಟೆಡ್ (GCPL) (ಸಮೂಹದ ಅತಿ ದೊಡ್ಡ ಕಂಪೆನಿಯ) ಅಧ್ಯಕ್ಷರಾಗಿ 2017ರಿಂದ ಇದ್ದಾರೆ.
1.5 ಲಕ್ಷ ಕೋಟಿ ರೂಪಾಯಿಗೆ ನಿಗದಿ ಆದಿ ಗೋದ್ರೇಜ್ ಅವರ ಸೋದರಸಂಬಂಧಿ ಜಮ್ಷಿದ್ ಗೋದ್ರೇಜ್ ಅಷ್ಟಾಗಿ ಸುದ್ದಿಯಲ್ಲಿ ಕಾಣಿಸಿಕೊಳ್ಳದಂಥ ವ್ಯಕ್ತಿ. ಅವರು ಗೋದ್ರೇಜ್ ಮತ್ತು ಬಾಯ್ಸ್ ಮ್ಯಾನುಫ್ಯಾಕ್ಚರಿಂಗ್ ಕಂ. ಅಧ್ಯಕ್ಷರಾಗಿದ್ದಾರೆ. ಇದು ಕೂಡ ಸಮೂಹದ ಕಂಪೆನಿಯಾಗಿದೆ. ಮತ್ತು ಅವರು ಎಲ್ಲ ಇತರ ಪ್ರಮುಖ ಸಮೂಹದ ಕಂಪೆನಿಗಳ ಮಂಡಳಿಯಲ್ಲಿ ಇದ್ದಾರೆ. ಆದಿ ಗೋದ್ರೆಜ್ ಅವರ ಕಡೆಯಿಂದ ಆಂತರಿಕ ಮೌಲ್ಯಮಾಪನದ ಪ್ರಕಾರ, GIL-ಕನ್ಸ್ಯೂಮರ್ ಅಡಿಯಲ್ಲಿನ ವ್ಯವಹಾರಗಳು, ಆಸ್ತಿಗಳು, ಅಗ್ರೋವೆಟ್, ಕೈಗಾರಿಕೆಗಳ ಜೊತೆಗೆ ಲೈಫ್‌ಸೈನ್ಸ್‌ಗಳು – ರೂ. 1.5 ಲಕ್ಷ ಕೋಟಿಗೆ ನಿಗದಿಪಡಿಸಲಾಗಿದೆ, ಇದು ಗೋದ್ರೆಜ್ ಮತ್ತು ಬೋಯ್ಸ್‌ಗಿಂತ ಹೆಚ್ಚು, ಮೌಲ್ಯವನ್ನು ಅನ್‌ಲಾಕ್ ಮಾಡಲು ಸಾಕಷ್ಟು ಸ್ಥಳವನ್ನು ನೀಡುತ್ತದೆ.
ಆದರೂ ಜಮ್ಶಿದ್ ಗೋದ್ರೆಜ್‌ಗೆ ನಿಕಟವಾಗಿರುವ ಮೂಲಗಳು ಹೇಳುವಂತೆ, ಗೋದ್ರೆಜ್ ಮತ್ತು ಬೋಯ್ಸ್ ಅಡಿಯಲ್ಲಿನ ಭೂಮಿ ಪ್ರಮಾಣ ಮಾತ್ರ ಗಮನಾರ್ಹವಾದ ಮೇಲುಗೈ ನೀಡುತ್ತವೆ. 2020ರ ಮಾರ್ಚ್ ಹೊತ್ತಿಗೆ ಆದಿ ಗೋದ್ರೆಜ್, ನಾದಿರ್ ಗೋದ್ರೇಜ್, ಜಮ್ಷಿದ್ ಗೋದ್ರೆಜ್, ಸ್ಮಿತಾ ವಿಜಯ್ ಕ್ರಿಷ್ಣ ಮತ್ತು ರಿಷದ್ ಗೋದ್ರೆಜ್ (ಆರ್‌ಕೆಎನ್ ಎಂಟರ್‌ಪ್ರೈಸಸ್) ಅವರ ಕುಟುಂಬಗಳು ಗೋದ್ರೆಜ್ ಮತ್ತು ಬೋಯ್ಸ್‌ನಲ್ಲಿ ತಲಾ ಶೇ 15.33ರಷ್ಟು ಪಾಲನ್ನು ಹೊಂದಿದ್ದರೆ, ಪಿರೋಜ್ಶಾ ಗೋದ್ರೆಜ್ ಫೌಂಡೇಷನ್ ಶೇ 23 ಕ್ಕಿಂತ ಸ್ವಲ್ಪ ಹೆಚ್ಚು ಪಾಲನ್ನು ಹೊಂದಿದೆ.
1,000 ಎಕರೆ ಅವಿಭಜಿತ ಭೂಮಿ ಗೋದ್ರೆಜ್ ಮತ್ತು ಬೋಯ್ಸ್ ವಿಭಾಗವು ಭಿನ್ನಾಭಿಪ್ರಾಯಗಳನ್ನು ಪರಿಹರಿಸುವ ಗುರಿಯನ್ನು ಹೊಂದಿದೆ. ಮುಂಬೈ ಉಪನಗರವಾದ ವಿಕ್ರೋಲಿಯಲ್ಲಿ 1,000 ಎಕರೆ ಅವಿಭಜಿತ ಭೂಮಿ ಬಳಕೆಯ ಮೇಲಿನ ಬಿರುಕುಗಳ ಕುರಿತು 2019ರಲ್ಲಿ ಮಾಧ್ಯಮವೊಂದು ವರದಿ ಮಾಡಿದಾಗ ಅದರ ಚರ್ಚೆಯು ಮೊದಲ ಬಾರಿಗೆ ಹೊರಬಂದಿತು. ಈ ವ್ಯತ್ಯಾಸಗಳನ್ನು ಬಗೆಹರಿಸಿಕೊಳ್ಳುವ ವ್ಯವಹಾರದ ತಂತ್ರವಾಗಿ ಮುಂದಿನ ಪೀಳಿಗೆಯ ಒಳಗೊಳ್ಳುವಿಕೆ ಮತ್ತು ಅವುಗಳಲ್ಲಿ ಪ್ರತಿಯೊಂದೂ ಗುಂಪನ್ನು ಮುಂದಕ್ಕೆ ನಡೆಸಲು ಬಯಸುವ ವಿಧಾನಕ್ಕೂ ಈಗಿನ ಬೆಳವಣಿಗೆಗಳು ಸಂಬಂಧಿಸಿವೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: 1500 ಕೋಟಿ ರೂ. ಆಸ್ತಿ…ಕತ್ತಲೆಯಲ್ಲಿ ಅಣ್ಣ ಸಹಿ ಹಾಕಿಸಿದ ಎಂದ ತಂಗಿ