Russia- Ukraine Crisis: ರಷ್ಯಾದಿಂದ ಕೈಕೊಡವಿ ಎದ್ದು ಬರೋದು ಈ ಬ್ರ್ಯಾಂಡ್ಗಳಿಗೆ ಸಲೀಸಿಲ್ಲ ಏಕೆ ಗೊತ್ತಾ?
ಬಹುರಾಷ್ಟ್ರೀಯ ಬ್ರ್ಯಾಂಡ್ಗಳು ರಷ್ಯಾದಿಂದ ಕೈ ಕೊಡವಿ ಎದ್ದು ಬರುವುದು ಅಷ್ಟು ಸಲೀಸಿಲ್ಲ ಏಕೆ ಎಂಬುದನ್ನು ಈ ಲೇಖನದಲ್ಲಿ ವಿವರವಾಗಿ ತಿಳಿಸಲಾಗಿದೆ.
ರಷ್ಯಾದಿಂದ ಒಂದೊಂದೇ ಮಲ್ಟಿನ್ಯಾಷನಲ್ ಬ್ರ್ಯಾಂಡ್ಗಳು ಹೊರಬರುತ್ತಿವೆ. ಉಕ್ರೇನ್ ಮೇಲೆ ರಷ್ಯಾ ಸಾರಿರುವ ಯುದ್ಧಕ್ಕೆ (Russia War Against Ukraine) ಪ್ರತೀಕಾರದ ಕ್ರಮ ಇದು ಎಂಬುದು ಎಲ್ಲ ಕಡೆ ಕೇಳಿಬರುತ್ತಿರುವ ಮಾತು. ಆದರೆ ಮಾರ್ಕ್ಸ್ ಅಂಡ್ ಸ್ಪೆನ್ಸರ್, ಬರ್ಗರ್ ಕಿಂಗ್, ಹೋಟೆಲ್ ಸಮೂಹಗಳಾದ ಮೇರಿಯಟ್ ಮತ್ತು ಅಕ್ಕೊರ್ ಇವುಗಳಿಗೆ ವಿಥ್ಡ್ರಾ ಮಾಡಿಕೊಳ್ಳುವುದು ಸಲೀಸಾಗಿಲ್ಲ. ಅದಕ್ಕೆ ಕಾರಣ ಏನೆಂದರೆ, ತುಂಬ ಸಂಕೀರ್ಣವಾದ ಫ್ರಾಂಚೈಸ್ ಒಪ್ಪಂದ. ಈ ಸಂಸ್ಥೆಗಳು ತಮ್ಮ ರಷ್ಯನ್ ವ್ಯವಹಾರವನ್ನು ಮೂರನೇ ವ್ಯಕ್ತಿಗಳಿಗೆ ಹೊರಗುತ್ತಿಗೆ ನೀಡಿದ್ದು, ಕಾರ್ಯಾಚರಣೆಗಳನ್ನು ತಮ್ಮದೇ ಹೆಸರಿನಲ್ಲೇನೂ ನಡೆಸುತ್ತಿಲ್ಲ. ಇವೆಲ್ಲವೂ ಸೇರಿ ರಷ್ಯಾದಲ್ಲಿ ಈಗಲೂ ಹತ್ತಿರಹತ್ತಿರ ಸಾವಿರ ಔಟ್ಲೆಟ್ಗಳನ್ನು ತೆರೆದಿವೆ. ಮಾರ್ಕ್ಸ್ ಅಂಡ್ ಸ್ಪೆನ್ಸರ್ 48 ಮಳಿಗೆ, ಬರ್ಗರ್ ಕಿಂಗ್ 800 ರೆಸ್ಟೋರೆಂಟ್ಸ್, ಹೋಟೆಲ್ ಸಮೂಹಗಳಾದ ಮೇರಿಯಟ್ 28 ಮತ್ತು ಅಕ್ಕೊರ್ 57 ಹೋಟೆಲ್ಗಳನ್ನು ತೆರೆದಿವೆ.
ಈ ಬಹುರಾಷ್ಟ್ರೀಯ ಬ್ರ್ಯಾಂಡ್ಗಳು ಅಷ್ಟು ಸಲೀಸಾಗಿ ಕಾರ್ಯಾಚರಣೆ ನಿಲ್ಲಿಸಲು ಯಾಕೆ ಸಾಧ್ಯವಿಲ್ಲ ಎಂದು ಬಿಬಿಸಿ ಸುದ್ದಿ ಸಂಸ್ಥೆ ತನ್ನ ವರದಿಯಲ್ಲಿ ಕಾರಣಗಳನ್ನು ತೆರೆದಿಟ್ಟಿದೆ. ಫ್ರಾಂಚೈಸ್ ವ್ಯವಹಾರವಾದ್ದರಿಂದ ಕಾನೂನುಬದ್ಧವಾದ ಒಪ್ಪಂದವೊಂದಕ್ಕೆ ಈ ಸಂಸ್ಥೆಗಳು ಬಂದಿದ್ದು, ರಷ್ಯಾದ ಪ್ರಮುಖ ಬಡಾವಣೆಗಳು ಮತ್ತು ಶಾಪ್ಗಳಿಂದ ತಮ್ಮ ಹೆಸರನ್ನು ತೆಗೆಯುವುದಕ್ಕೆ ಕಷ್ಟವಾಗುತ್ತಿದೆ. ಪಾಶ್ಚಾತ್ಯ ದೇಶಗಳು ಹಲವು ಬ್ರ್ಯಾಂಡ್ಗಳು ದಶಕಗಳಿಂದ ಇಂಥದ್ದೊಂದು ಒಪ್ಪಂದ ಮಾಡಿಕೊಂಡಿವೆ. ಉದಾಹರಣೆಗೆ, ಮಾರ್ಕ್ಸ್ ಅಂಡ್ ಸ್ಪೆನ್ಸರ್. ಅದನ್ನು ಟರ್ಕಿಶ್ ಕಂಪೆನಿ FiBA ನಡೆಸುತ್ತಿದೆ. 1999ರಿಂದಲೇ ಪೂರ್ವ ಯುರೋಪ್ನಾದ್ಯಂತ ಈ ರೀಟೇಲರ್ನ ಉತ್ಪನ್ನಗಳ ಮಾರಾಟ ಹಕ್ಕುಗಳನ್ನು ಹೊಂದಿದೆ. ಉಕ್ರೇನ್ ಮೇಲೆ ರಷ್ಯಾ ಯುದ್ಧ ಸಾರಿದ ಮೇಲೆ FiBA ಕಂಪೆನಿಗೆ ಪೂರೈಕೆ ಅಮಾನತು ಮಾಡಿರುವುದಾಗಿ ಮಾರ್ಕ್ಸ್ ಅಂಡ್ ಸ್ಪೆನ್ಸರ್ ಹೇಳಿದೆ.
ಬರ್ಗರ್ ಕಿಂಗ್ ಕೂಡ ಬಿಬಿಸಿ ಸುದ್ದಿ ಸಂಸ್ಥೆ ಜತೆ ಮಾತನಾಡಿ, ರಷ್ಯಾದಲ್ಲಿನ ರೆಸ್ಟೋರೆಂಟ್ಗಳನ್ನು ನಡೆಸುತ್ತಿರುವುದು ಫ್ರಾಂಚೈಸ್ ಮೂಲಕ ಎಂದು ಹೇಳಿಕೊಂಡಿದೆ. ತಕ್ಷಣದ ಭವಿಷ್ಯದಲ್ಲಿ ಈ ದೀರ್ಘಾವಧಿ ಒಪ್ಪಂದಗಳನ್ನು ಬದಲಾಯಿಸುವುದು ಸುಲಭವಲ್ಲ ಎಂದು ಅದು ಹೇಳಿಕೊಂಡಿದೆ. ಹೋಟೆಲ್ ಸಮೂಹವಾದ ಮೇರಿಯಟ್, ಐಎಚ್ಜಿ, ಫ್ರೆಂಚ್ ಮೂಲ ಅಕೊರ್- ಇದು ಐಬಿಸ್ ಮತ್ತು ನೊವೊಟೆಲ್ ಹೆಸರಿನ ಬ್ರ್ಯಾಂಡ್ಗಳಲ್ಲಿ ರಷ್ಯಾದಲ್ಲಿ ಹೋಟೆಲ್ ನಡೆಸುತ್ತಿದ್ದು, ಅವುಗಳದೂ ಇದೇ ರೀತಿಯಾದ ಫ್ರಾಂಚೈಸ್ ವ್ಯವಹಾರ ಆಗಿದೆ.
ಫ್ರಾಂಚೈಸ್ ಅನ್ನೋದು ಒಂದು ವ್ಯವಹಾರ ಪದ್ಧತಿ. ಉತ್ಪನ್ನಗಳ ಸೇವೆ ಮತ್ತು ವಿತರಣೆ ಇದರಲ್ಲಿ ಒಳಗೊಂಡಿರುತ್ತದೆ. ಅದಾಗಲೇ ಒಂದು ಬ್ರ್ಯಾಂಡ್ನ ಹೆಸರನ್ನು ಖ್ಯಾತಗೊಳಿಸಿ, ಬೇಡಿಕೆ ತಂದಿರುವ ಕಂಪೆನಿಗೆ ಫ್ರಾಂಚೈಸರ್ ಎನ್ನಲಾಗುತ್ತದೆ. ಆ ಕಂಪೆನಿಯ ಹೆಸರನ್ನು ಬಳಕೆ ಮಾಡಿಕೊಂಡು, ಉತ್ಪನ್ನಗಳನ್ನು- ಸೇವೆಗಳನ್ನು ಮಾರಾಟ ಮಾಡುವುದಕ್ಕೆ ಒಂದಿಷ್ಟು ಹಣವನ್ನು ಶುಲ್ಕವಾಗಿ ಪಾವತಿಸುವ ಕಂಪೆನಿಗೆ ಫ್ರಾಂಚೈಸಿ ಎನ್ನಲಾಗುತ್ತದೆ. ಪಾಶ್ಚಾತ್ಯ ಬ್ರ್ಯಾಂಡ್ಗಳಾಗಿದ್ದು, ವಿವಿಧ ದೇಶಗಳ ಮಾರುಕಟ್ಟೆ ಪ್ರವೇಶಿಸುವುದಕ್ಕೆ ಅವು ಬಯಸುತ್ತಿದ್ದು, ಸ್ಥಳೀಯ ಜ್ಞಾನ, ಹಣ ಅಥವಾ ಸಾಮರ್ಥ್ಯ ಇಲ್ಲದಿದ್ದಾಗ ಈ ರೀತಿ ಫ್ರಾಂಚೈಸ್ ಮಾರ್ಗವನ್ನು ಬಳಸಬಹುದು.
ಸಾಮಾನ್ಯವಾಗಿ ಇಂಥ ಒಪ್ಪಂದವನ್ನು 10 ವರ್ಷ ಹಾಗೂ ಅದಕ್ಕಿಂತ ದೀರ್ಘಾವಧಿಗೆ ಮಾಡಿಕೊಂಡಿರಲಾಗುತ್ತದೆ. ಒಂದು ವೇಳೆ ಸೂಕ್ತವಾದ ಹಾಗೂ ಮಾನ್ಯವಾಗುವಂಥ ಕಾರಣಗಳಿಲ್ಲದೆ ಏಕಾಏಕಿ ಒಪ್ಪಂದವನ್ನು ರದ್ದು ಮಾಡಿದರೆ ಫ್ರಾಂಚೈಸಿ ಕಡೆಯಿಂದ ಫ್ರಾಂಚೈಸರ್ಗಳ ಮೇಲೆ ಕಾನೂನು ಮೊಕದ್ದಮೆ ಹೂಡಬಹುದು. ಉದಾಹರಣೆಗೆ ಹೇಳುವುದಾದರೆ, ಯುನೈಟೆಡ್ ಕಿಂಗ್ಡಮ್ನ ನ್ಯಾಯಾಲಯವು ಅಲ್ಲಿನ ಸರ್ಕಾರದ ಆದೇಶದಂತೆ ರಷ್ಯಾದಲ್ಲಿನ ಒಂದು ಕಂಪೆನಿಯ ಫ್ರಾಂಚೈಸಿಗಳನ್ನು ರದ್ದು ಮಾಡಬಹುದು. ಆದರೆ ರಷ್ಯಾ ನ್ಯಾಯಾಲಯವು ಅದನ್ನು ಲಾಗೂ ಮಾಡುವುದಿಲ್ಲ. ಈ ಮಧ್ಯೆಯೂ ಆಯಾ ಬ್ರ್ಯಾಂಡ್ಗಳು ಉಕ್ರೇನ್ ವಿರುದ್ಧದ ರಷ್ಯಾ ದಾಳಿಗೆ ತಮ್ಮ ವ್ಯಾಪ್ತಿಯೊಳಗೆ ಪ್ರತಿಭಟನೆಯನ್ನು ದಾಖಲಿಸುತ್ತಲೇ ಇವೆ.
ಇನ್ನು ಕೆಎಫ್ಸಿ ಹಾಗೂ ಪಿಜ್ಜಾ ಹಟ್ನಂಥವು ತಮ್ಮ ಫ್ರಾಂಚೈಸ್ಗಳ ಜತೆಗೆ ಮಾತುಕತೆ ನಡೆಸುತ್ತಿದ್ದು, ತಾತ್ಕಾಲಿಕವಾಗಿ ಕಾರ್ಯಾಚರಣೆ ನಿಲ್ಲಿಸುವ ಸಂಬಂಧ ಅಂತಿಮ ಹಂತದ ಒಪ್ಪಂದ ಆಗಬೇಕಿದೆ ಎಂದು ತಿಳಿಸಲಾಗಿದೆ. ಒಂದು ವೇಳೆ ರಷ್ಯಾದಲ್ಲಿ ತಮ್ಮ ಕಾರ್ಯಾಚರಣೆಯನ್ನು ಮುಂದುವರಿಸಿದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಗಬಹುದಾದ ವರ್ಚಸ್ಸಿನ ಹಾನಿ ಬಗ್ಗೆ ಈ ಬ್ರ್ಯಾಂಡ್ಗಳಿಗೆ ಆತಂಕ ಇದ್ದೇ ಇದೆ.
ಇದನ್ನೂ ಓದಿ: Ukraine Crisis: 20 ದಿನದಲ್ಲಿ 7,000 ರಷ್ಯನ್ ಸೈನಿಕರ ಸಾವು; ರಷ್ಯಾ- ಉಕ್ರೇನ್ ಬಿಕ್ಕಟ್ಟಿನ 10 ಮುಖ್ಯಾಂಶಗಳು ಇಲ್ಲಿವೆ