Tv9 Exclusive: ತೈವಾನ್ ಮೇಲಿನ ದಾಳಿ ಚೀನಾ ಆರ್ಥಿಕತೆಗೆ ಆತ್ಮಹತ್ಯೆಯಂಥ ನಿರ್ಧಾರವಾದೀತು; ನಿಲೇಶ್ ಶಾ
Nilesh Shah: ಈ ಹಂತದಲ್ಲಿ ಚೀನಾ ಏನಾದರೂ ತೈವಾನ್ ಮೇಲೆ ದಾಳಿ ಮಾಡಿದರೆ ಅದು ಚೀನಾದ ಆರ್ಥಿಕತೆಯ ಪಾಲಿಗೆ ಆತ್ಮಹತ್ಯೆಗೆ ಸಮನಾದ ನಿರ್ಧಾರವಾಗುತ್ತದೆ. ಚೀನಾದ ಅಭಿವೃದ್ಧಿ ಓಟದ ಅಂತ್ಯಕ್ಕೆ ಈ ದಾಳಿ ಮುನ್ನುಡಿ ಬರೆದೀತು ಎಂದು ನಿಲೇಶ್ ಶಾ ಎಚ್ಚರಿಸಿದರು.
ಬೆಂಗಳೂರು: ತೈವಾನ್ ದೇಶವನ್ನು ಅಸಹಾಯಕ ಪುಟ್ಟ ರಾಷ್ಟ್ರ ಎಂದುಕೊಂಡು ಚೀನಾ (China Taiwan tension) ಏನಾದರೂ ದಾಳಿ ನಡೆಸಲು ಮುಂದಾದರೆ ಅದು ಚೀನಾದ ಪಾಲಿಗೆ ಆತ್ಮಾಘಾತುಕ ನಿರ್ಧಾರವಾಗಲಿದೆ. ಹೂಡಿಕೆದಾರರು (Investors) ಚೀನಾದಿಂದ ಹೊರನಡೆಯುವ ಸಾಧ್ಯತೆಯಿದ್ದು, ಅಲ್ಲಿನ ಆರ್ಥಿಕ ವ್ಯವಸ್ಥೆ (China Economy) ಸಂಪೂರ್ಣ ಕುಸಿಯುವ ಸಾಧ್ಯತೆಯಿದೆ. ವಿಶ್ವಮಟ್ಟದಲ್ಲಿ ಚೀನಾದ ಆರ್ಥಿಕ ಪ್ರಾಬಲ್ಯಕ್ಕೂ ಈ ಬೆಳವಣಿಗೆಯಿಂದ ಧಕ್ಕೆಯಾಗಬಹುದು ಎಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರ ಆರ್ಥಿಕ ಸಲಹಾ ಮಂಡಳಿ ಸದಸ್ಯ (Economic Advisory Council) ಹಾಗೂ ಕೋಟಕ್ ಅಸೆಟ್ ಮ್ಯಾನೇಜ್ಮೆಂಟ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ನಿಲೇಶ್ ಶಾ (Nilesh Shah) ಹೇಳಿದರು.
ಬೆಂಗಳೂರಿನಲ್ಲಿ ಶನಿವಾರ (ಆಗಸ್ಟ್ 6) ‘ಎನ್ಜೆ ವೆಲ್ತ್’ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‘2030ರಲ್ಲಿ ಭಾರತ, ಅಭಿವೃದ್ಧಿಯ ದೀರ್ಘಾವಧಿ ಮುನ್ನೋಟ’ (India@2030: India’s Long Term Growth Story) ವಿಷಯ ಕುರಿತು ಸುದೀರ್ಘ ಉಪನ್ಯಾಸ ಮಾಡಿದ ಅವರು, ಚೀನಾ-ತೈವಾನ್ ಸಂಘರ್ಷದ ಸಂಭಾವ್ಯ ಆರ್ಥಿಕ ಪರಿಣಾಮಗಳನ್ನು ವಿಶ್ಲೇಷಿಸಿದರು.
ಪಾಕಿಸ್ತಾನ, ಶ್ರೀಲಂಕಾ ಮತ್ತು ನೇಪಾಳಗಳಿಗೆ ಹೋಲಿಸಿಕೊಂಡು ಉಳಿದ ದೇಶಗಳು ತಾವು ಸಬಲವಾಗಿರುವುದಾಗಿ ಬೀಗುತ್ತಿವೆ. ಇದೊಂದು ರೀತಿ ಹೆಚ್ಚು ಮಾಸಿದ ಬಟ್ಟೆ ತೊಟ್ಟವರ ಪಕ್ಕದಲ್ಲಿ ಕಡಿಮೆ ಮಾಸಿದವರು ಖುಷಿ ಪಡುವ ಮನಸ್ಥಿತಿ. ಆದರೆ ಈಗ ಯಾವುದೇ ದೇಶದಲ್ಲಿ ಆಗುವ ಬೆಳವಣಿಗೆಯ ಪರಿಣಾಮ ಮತ್ತೊಂದು ದೇಶವನ್ನು ಬಾಧಿಸುವುದಿಲ್ಲ ಎಂದು ಹೇಳಲು ಆಗದ ಪರಿಸ್ಥಿತಿಯಲ್ಲಿದ್ದೇವೆ. ಬೆಳವಣಿಗೆಯ ಭರವಸೆ ನೀಡಿದ್ದ ಟರ್ಕಿ, ಬ್ರೆಜಿಲ್, ದಕ್ಷಿಣ ಆಫ್ರಿಕಾಗಳಲ್ಲಿಯೂ ಆರ್ಥಿಕ ಪರಿಸ್ಥಿತಿ ವಿಷಮಿಸಿದೆ. ಈಗಾಗಲೇ ಅವು ಕುಸಿತದತ್ತ ಸಾಗುತ್ತಿವೆ. ಚೀನಾ ಸಹ ಇದಕ್ಕೆ ಹೊರತಾಗಿಲ್ಲ. ಈ ಹಂತದಲ್ಲಿ ಚೀನಾ ಏನಾದರೂ ತೈವಾನ್ ಮೇಲೆ ದಾಳಿ ಮಾಡಿದರೆ ಅದು ಚೀನಾದ ಆರ್ಥಿಕತೆಯ ಪಾಲಿಗೆ ಆತ್ಮಹತ್ಯೆಗೆ ಸಮನಾದ ನಿರ್ಧಾರವಾಗುತ್ತದೆ. ಚೀನಾದ ಅಭಿವೃದ್ಧಿ ಓಟದ ಅಂತ್ಯಕ್ಕೆ ಈ ದಾಳಿ ಮುನ್ನುಡಿ ಬರೆದೀತು ಎಂದು ಎಚ್ಚರಿಸಿದರು.
ಭಾರತದ ಷೇರುಪೇಟೆಯ ಏರಿಳಿತ ಮತ್ತು ಜಾಗತಿಕ ವಿದ್ಯಮಾನಗಳನ್ನು ವಿಭಿನ್ನ ರೀತಿಯಲ್ಲಿ ಹೋಲಿಸಿದ ಅವರು, ಮೆಕ್ಸಿಕೊದಂಥ ಪ್ರಗತಿಯ ಭರವಸೆ ಮೂಡಿಸಿದ್ದ ದೇಶಗಳಲ್ಲಿ ಆರ್ಥಿಕ ಕುಸಿತದ ವಾತಾವರಣ ರೂಪುಗೊಂಡ ನಂತರ ತೃತೀಯ ಜಗತ್ತಿನ ಅಭಿವೃದ್ಧಿಶೀಲ ದೇಶಗಳಲ್ಲಿ ಹೂಡಿಕೆ ಹಿಂದಕ್ಕೆ ಪಡೆದುಕೊಳ್ಳಲೂ ಅವಕಾಶವಿಲ್ಲದಂತಾಯಿತು. ಅಲ್ಲಿನ ಬೆಳವಣಿಗೆಗಳನ್ನು ಗಮನಿಸಿದ ಹೆದರಿದ ಕೆಲ ವಿದೇಶಿ ಸಾಂಸ್ಥಿಕ ಹೂಡಿದಾರರು ಭಾರತದಿಂದ ಹೂಡಿಕೆ ಹಿಂಪಡೆಯಲು ಮುಗಿಬಿದ್ದರು. ಆದರೆ ಇಲ್ಲಿ ಮಾತ್ರ ಬೇರೆಯದ್ದೇ ಆದ, ಮಹತ್ವದ ವಿದ್ಯಮಾನವೊಂದಕ್ಕೆ ಈ ಬೆಳವಣಿಗೆ ಕಾರಣವಾಯಿತು ಎಂದು ಹೇಳಿದರು.
ಭಾರತದಲ್ಲಿ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಷೇರುಗಳನ್ನು ತರಾತುರಿಯಲ್ಲಿ ಮಾರಿ ಹಣ ಹಿಂಪಡೆಯಲು ಆರಂಭಿಸಿದರೆ ದೇಶೀಯ ಸಾಂಸ್ಥಿಕ ಹೂಡಿಕೆದಾರರು ಹಾಗೂ ಸಾಮಾನ್ಯ ಹೂಡಿಕೆದಾರರು ಇದನ್ನೊಂದು ಅವಕಾಶವಾಗಿ ಪರಿಗಣಿಸಿ, ಷೇರು ಖರೀದಿಗೆ ಮುಂದಾದರು. ಹೀಗಾಗಿ ಷೇರುಪೇಟೆ ಆರಂಭದಲ್ಲಿ ಕುಸಿತ ಕಂಡರೂ, ಆ ಕುಸಿತ ಹೆಚ್ಚು ದಿನ ಮುಂದುವರಿಯಲಿಲ್ಲ. ಮುಂದೆಯೂ ಕೆಲ ದಿನಗಳ ಕಾಲ ಷೇರುಪೇಟೆಯಲ್ಲಿ ಹೊಯ್ದಾಟ ಇರಬಹುದು. ಆದರೆ ನಮ್ಮ ಷೇರುಪೇಟೆಗಳು ಅಥವಾ ಒಟ್ಟಾರೆ ದೇಶ ಆರ್ಥಿಕ ಹಿಂಜರಿತ ಅಥವಾ ಆರ್ಥಿಕ ಕುಸಿತ ಕಾಣುವ ಅಪಾಯದಲ್ಲಿ ಇಲ್ಲ ಎಂದು ಸ್ಪಷ್ಟಪಡಿಸಿದರು.
ಅಮೆರಿಕದಲ್ಲಿ ಆರ್ಥಿಕ ಹಿಂಜರಿತದ ಆತಂಕ
ಭಾರತದ ವಿದ್ಯಮಾನಗಳನ್ನು ಅಮೆರಿಕ ಮತ್ತು ಯೂರೋಪ್ನ ಮಾನಸಿಕತೆಯಿಂದ ಅಳೆಯುವುದು ತಪ್ಪು. ಅಮೆರಿಕಕ್ಕೆ ಆಗುವ ಕಷ್ಟವನ್ನು ಆ ದೇಶ ಇಡೀ ಜಗತ್ತಿನ ಕಷ್ಟ ಎಂದು ಬಿಂಬಿಸುತ್ತದೆ. ಇತರ ದೇಶಗಳ ಕಷ್ಟ ಅಥವಾ ಸಾಧನೆಯನ್ನು ಪ್ರಾದೇಶಿಕ ಎಂದು ಸೀಮಿತಗೊಳಿಸಿ ವ್ಯಾಖ್ಯಾನಿಸುತ್ತದೆ ಎಂದು ಹೇಳಿದ ಅವರು, ತಮ್ಮ ಹೇಳಿಕೆಯನ್ನು ಮತ್ತಷ್ಟು ವಿಸ್ತರಿಸಿ ವಿವರಿಸಿದರು.
ಅಮೆರಿಕದಲ್ಲಿ ಸತತ 2ನೇ ವರ್ಷ ಜಿಡಿಪಿ ಪ್ರಗತಿ ಕಡಿಮೆಯಾಗಿದೆ. ತಾಂತ್ರಿಕವಾಗಿ ಅಮೆರಿಕ ಈಗಾಗಲೇ ಆರ್ಥಿಕ ಹಿಂಜರಿತವನ್ನು (ರಿಸೆಷನ್) ಅನುಭವಿಸುತ್ತಿದೆ. ಈಗ ಅದು ವಿಶ್ವದ ಅತಿದೊಡ್ಡ ಸಾಲದಾರ ದೇಶವಾಗಿ ಬದಲಾಗಿದೆ. ಮುಂದೊಂದು ದಿನ ಅಮೆರಿಕ ದಿವಾಳಿ (ಡಿಫಾಲ್ಟ್) ಎಂದು ಘೋಷಿಸಿಕೊಂಡು, ಸಾಲ ಮರುಪಾವತಿಯಲ್ಲಿ ವಿಫಲವಾದರೂ ಆಶ್ಚರ್ಯವಿಲ್ಲ. ಬ್ರಿಟನ್ ಮತ್ತು ಐರೋಪ್ಯ ಒಕ್ಕೂಟದಲ್ಲಿ ಇಂಧನ ಬೆಲೆಏರಿಕೆ ಹತ್ತಾರು ಬಗೆಯ ಸಂಕಷ್ಟ ತಂದೊಡ್ಡಿದೆ. ಬ್ರಿಟನ್ನ ಕೇಂದ್ರೀಯ ಬ್ಯಾಂಕ್ ಆಗಿರುವ ಬ್ಯಾಂಕ್ ಆಫ್ ಇಂಗ್ಲೆಂಡ್ನ ಗವರ್ನರ್ ಅವರ ಮಾಧ್ಯಮಗೋಷ್ಠಿ ಗಮನಿಸಿದರೆ ಬ್ರಿಟನ್ನ ಆರ್ಥಿಕ ಪರಿಸ್ಥಿತಿ ಹದಗೆಟ್ಟಿರುವುದು, ಹಣದುಬ್ಬರ ನಿಯಂತ್ರಣಕ್ಕೆ ಸಿಗದಿರುವುದು ಸ್ಪಷ್ಟವಾಗುತ್ತದೆ. ರಷ್ಯಾ-ಉಕ್ರೇನ್ ಸಂಘರ್ಷ ಈ ದೇಶಗಳಿಗೆ ನುಂಗಲಾರದ ಬಿಸಿತುಪ್ಪವಾಗಿದೆ ಎಂದು ಹೇಳಿದರು.
ಸರ್ಕಾರಿ ಅಧಿಕಾರಿಗಳ ಕಿರುಕುಳ
ಭಾರತ ಎದುರಿಸುತ್ತಿರುವ ಪ್ರತಿಭಾ ಪಲಾಯನ ಸಮಸ್ಯೆ ಬಗ್ಗೆ ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಮೂರು ರೀತಿಯ ಮನಃಸ್ಥಿತಿಯ ಜನರು ದೇಶದಿಂದ ಹೊರಗೆ ಹೋಗಲು ಬಯಸುತ್ತಾರೆ ಎಂದರು. ಇಲ್ಲಿ ಮಾಡಬಾರದ್ದು ಮಾಡಿ, ಜೈಲುಪಾಲಾಗುವ ಸಂದರ್ಭ ತಂದುಕೊಳ್ಳುವ ಕೆಲವರು ತರಾತುರಿಯಲ್ಲಿ ಮತ್ತೊಂದು ದೇಶದ ಪೌರತ್ವ ಪಡೆದುಕೊಳ್ಳುತ್ತಾರೆ. ಇಂಥವರು ದೇಶ ಬಿಟ್ಟು ಹೋಗುವುದರಿಂದ ಭಾರತಕ್ಕೇನು ನಷ್ಟವಿಲ್ಲ. ಅವರ ಸಂಪಾದಿಸಿದ ದುಡ್ಡು ಇಲ್ಲಿಯೇ ಉಳಿದರೆ ಸಾಕು. ಇನ್ನು ಕೆಲವರು ವಿದೇಶಗಳಿಗೆ ಕೆಲಸಗಳಿಗೆಂದು ತೆರಳಿ, ಅಲ್ಲಿನ ಪೌರತ್ವ ಸಿಕ್ಕಾಗ ಭಾರತದ ಪೌರತ್ವ ತ್ಯಜಿಸುತ್ತಾರೆ. ಇದು ಅನುಕೂಲ ಸಿಂಧುತ್ವ. ಮಾನಸಿಕವಾಗಿ ಅವರು ಭಾರತೀಯರೇ ಆಗಿರುತ್ತಾರೆ. ಆದರೆ ಪ್ರಾಮಾಣಿಕವಾಗಿ ದುಡಿಯುವ, ಬುದ್ಧಿವಂತ ಉದ್ಯಮಿಗಳು ಇಲ್ಲಿನ ಸರ್ಕಾರಿ ಅಧಿಕಾರಿಗಳ (ಸರ್ಕಾರಿ ಬಾಬು) ಕಿರುಕುಳಕ್ಕೆ ಹೆದರಿ ವಿದೇಶಗಳಲ್ಲಿ ನೆಲೆಸಲು ನಿರ್ಧರಿಸುತ್ತಾರೆ. ಇದು ದೇಶದ ಭವಿಷ್ಯಕ್ಕೆ ಒಳ್ಳೆಯದಲ್ಲ ಎಂದು ವಿಷಾದಿಸಿದರು.
ಮೋಸ ಮಾಡುವವರಿಗಿಂತಲೂ ಪ್ರಾಮಾಣಿಕವಾಗಿ ವ್ಯವಹಾರ ಮಾಡುವವರೇ ಕಾನೂನಿಗೆ ಹೆಚ್ಚು ಹೆದರಬೇಕಾದ ಮತ್ತು ವ್ಯವಹಾರ ನಡೆಸಲು ಕಷ್ಟಪಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರಾಮಾಣಿಕರು ತಲೆನೋವು ಅನುಭವಿಸುತ್ತಿದ್ದರೆ, ಭ್ರಷ್ಟರು ಆರಾಮಾಗಿದ್ದಾರೆ. ಇದು ಶೀಘ್ರ ಬದಲಾಗಬೇಕು. ಇದಕ್ಕಾಗಿಯೇ ಕೇಂದ್ರ ಸರ್ಕಾರವು ಹಲವು ಕಾನೂನುಗಳನ್ನು ರದ್ದುಪಡಿಸಿದೆ, ‘ಸರ್ಕಾರಿ ಬಾಬು’ಗಳ ವಿವೇಚನಾಧಿಕಾರಕ್ಕೆ ಕಡಿವಾಣ ಹಾಕುವ ಮೂಲಕ ಸರಿಯಾದ ಕ್ರಮದಲ್ಲಿ ಉದ್ಯಮ ನಡೆಸುವವರಿಗೆ ಅನುಕೂಲ ಕಲ್ಪಿಸಿದೆ. ಜಿಎಸ್ಟಿ ಮತ್ತು ಆದಾಯ ತೆರಿಗೆ ಪಾವತಿಯಲ್ಲಿದ್ದ ಎಷ್ಟೋ ಸಮಸ್ಯೆಗಳು ಪರಿಹಾರವಾಗಿವೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಸುಧಾರಣೆಗೆ ನಾವೆಲ್ಲರೂ ಸಾಕ್ಷಿಯಾಗಲಿದ್ದೇವೆ ಎಂದು ಹೇಳಿದರು.
ಜನಸಂಖ್ಯೆ ಮತ್ತು ಅವಕಾಶ
ಚೀನಾದಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಿರುವ ಹಲವು ಕಂಪನಿಗಳು ಮುಂದಿನ ದಿನಗಳಲ್ಲಿ ಭಾರತಕ್ಕೆ ಉತ್ಪಾದನಾ ಕೇಂದ್ರಗಳನ್ನು ಸ್ಥಳಾಂತರ ಮಾಡುವ ಸಾಧ್ಯತೆಯಿದೆ. ಇದಕ್ಕೆ ಪೂರಕ ವಾತಾವರಣ ರೂಪಿಸಲು ಭಾರತ ಸರ್ಕಾರ ಶ್ರಮಿಸುತ್ತಿದೆ. ಭಾರತದ ಜನಸಂಖ್ಯೆಯೇ ಭವಿಷ್ಯದಲ್ಲಿ ವರವಾಗಬಹುದು. ವೃತ್ತಿಕೌಶಲ ಬೆಳೆಸಿಕೊಂಡ ಜನಸಂಖ್ಯೆಯಿದ್ದರೆ ಆರ್ಥಿಕ ಪ್ರಗತಿ ತನ್ನಿಂತಾನೆ ವೇಗ ಪಡೆದುಕೊಳ್ಳುತ್ತದೆ ಎಂದು ವಿಶ್ಲೇಷಿಸಿದರು.
ಕಂಪ್ಯೂಟರ್ ಎಂಜಿನಿಯರ್ರಿಂದ ಕಾರ್ಪೆಂಟರ್ವರೆಗೆ ಬಹುತೇಕ ವೃತ್ತಿಗಳಲ್ಲಿ ಕುಶಲ ಕಾರ್ಮಿಕರ ಕೊರತೆ ಎದುರಾಗಿದೆ. ಭಾರತದಲ್ಲಿ ಜನಸಂಖ್ಯೆ ಹೆಚ್ಚಾಗುತ್ತಿದೆ ಎಂದು ಆತಂಕ ಪಡುವುದಕ್ಕಿಂತಲೂ ಜನರಲ್ಲಿ ಕೌಶಲ ಹೆಚ್ಚಿಸುವುದು ಹೇಗೆಂದು ಚಿಂತಿಸಿದರೆ ಅದು ದೊಡ್ಡ ಅವಕಾಶವಾಗಿ ಮಾರ್ಪಡುತ್ತದೆ ಎಂದು ವಿವರಿಸಿದರು. ಪ್ರಧಾನಿ ನರೇಂದ್ರ ಮೋದಿ ಅವರು 5 ಲಕ್ಷ ಡಾಲರ್ ಗಾತ್ರದ ಆರ್ಥಿಕತೆಯ ಕನಸು ಬಿತ್ತಿದ್ದಾರೆ, ಶ್ರಮಿಸುತ್ತಿದ್ದಾರೆ. ಅದರ ಸಾಕಾರಕ್ಕೆ ನಾವೆಲ್ಲರೂ ಸಹಕರಿಸಿದರೆ ಇದು ಸಾಧ್ಯವಾಗುತ್ತದೆ. ನಕ್ಕು ಲೇವಡಿ ಮಾಡಿದರೆ ವೈಯಕ್ತಿಕವಾಗಿ ಮೋದಿಯವರಿಗೇನೂ ನಷ್ಟವಿಲ್ಲ. ಆದರೆ ಮಕ್ಕಳನ್ನು ಬೆಳೆಸುತ್ತಿರುವ ನನಗೆ-ನಿಮಗೆ ಹೆಚ್ಚು ನಷ್ಟ ಎಂದು ನುಡಿದರು.
ಭಾರತದ ಆರ್ಥಿಕತೆ, ಉದ್ಯಮಕ್ಕೆ ಸಂಬಂಧಿಸಿದ ಮತ್ತಷ್ಟು ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ
Published On - 2:33 pm, Sun, 7 August 22