ಬಿಗ್ ಬಾಸ್ ಕನ್ನಡ ಸೀಸನ್ 8ರಲ್ಲಿ ಸ್ಪರ್ಧಿಸುತ್ತಿರುವ ಅತಿ ಕಿರಿಯ ಸ್ಪರ್ಧಿ ಎಂಬ ಖ್ಯಾತಿಗೆ ವಿಶ್ವನಾಥ್ ಪಾತ್ರರಾಗಿದ್ದರು. ಆದರೆ ಅವರಿಗೆ ಈಗ ಅದೃಷ್ಟ ಕೈಕೊಟ್ಟಿದೆ. ಏಳನೇ ವಾರದ ಎಲಿಮಿನೇಷನ್ನಲ್ಲಿ ಅವರು ಮನೆಯಿಂದ ಹೊರಬರಬೇಕಾಗಿದೆ. ಕ್ಯಾಪ್ಟನ್ ಆಗಿದ್ದ ಒಂದು ವಾರ ಹೊರತುಪಡಿಸಿ ಮತ್ತೆಲ್ಲ ವಾರದಲ್ಲೂ ವಿಶ್ವನಾಥ್ ನಾಮಿನೇಟ್ ಆಗಿದ್ದರು. ಆದರೂ ಏಳು ವಾರಗಳ ಕಾಲ ಎಲ್ಲರಿಗೂ ಪೈಪೋಟಿ ನೀಡಿದ ಅವರು ಈಗ ದೊಡ್ಮನೆಯಿಂದ ಹೊರಬಂದಿದ್ದಾರೆ ಎಂಬ ಮಾಹಿತಿ ಕೇಳಿಬಂದಿದೆ.
ಈ ವಾರ ಶಮಂತ್ ಬ್ರೊ ಗೌಡ ಕೂಡ ಮನೆಯಿಂದ ಹೊರಗೆ ಹೋಗಬಹುದು ಎಂದು ಊಹಿಸಲಾಗಿತ್ತು. ಯಾಕೆಂದರೆ, ಅವರು ಪ್ರತಿ ವಾರವೂ ಕಡಿಮೆ ಓಟ್ ಪಡೆದುಕೊಳ್ಳುತ್ತಿದ್ದರು. ಕಳೆದ ವಾರ ಅದೃಷ್ಟದ ಬಲದಿಂದ ಬಚಾವ್ ಆಗಿದ್ದರು. ಹಾಗಾಗಿ ಅವರು ಈ ವಾರ ಔಟ್ ಆಗುವ ಸಾಧ್ಯತೆ ದಟ್ಟವಾಗಿತ್ತು. ಆದರೆ ಅಂತಿಮವಾಗಿ ಧಾರವಾಡದ ಗಾಯಕ ವಿಶ್ವನಾಥ್ ಅವರ ಬಿಗ್ ಬಾಸ್ ಜರ್ನಿ ಅಂತ್ಯವಾಗಿದೆ.
ಇಷ್ಟು ದಿನಗಳ ಕಾಲ ಬಿಗ್ ಬಾಸ್ ಮನೆಯಲ್ಲಿ ಇದ್ದ ವಿಶ್ವ ಅವರು ಯಾರ ವಿರೋಧವನ್ನೂ ಕಟ್ಟಿಕೊಂಡಿರಲಿಲ್ಲ. ಎಲ್ಲರ ಜೊತೆಗೂ ಚೆನ್ನಾಗಿ ಬೆರೆಯುತ್ತಿದ್ದರು. ಅಣ್ಣ-ಅಕ್ಕ ಎಂದು ಮನೆಯ ಸದಸ್ಯರ ವಿಶ್ವಾಸ ಗಳಿಸಿಕೊಂಡಿದ್ದರು. ಟಾಸ್ಕ್ನಲ್ಲಿಯೂ ಚೆನ್ನಾಗಿ ಪರ್ಫಾಮ್ ಮಾಡುವ ಮೂಲಕ ಒಂದು ವಾರ ಕ್ಯಾಪ್ಟನ್ ಕೂಡ ಆಗಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಅವರು ಕೊಂಚ ಡಲ್ ಆದಂತೆ ಕಂಡರು. ಹೆಚ್ಚು ಉತ್ಸಾಹ ಅವರಲ್ಲಿ ಕಾಣಿಸಲಿಲ್ಲ. ಅದೇ ಅವರಿಗೆ ಮುಳುವಾಯಿತೇನೋ ಎಂಬ ಮಾತುಗಳು ಕೇಳಿಬರುತ್ತಿವೆ.
ವಿಶ್ವನಾಥ್ ಒರ್ವ ಒಳ್ಳೆಯ ಸಿಂಗರ್. ಆದರೆ ಬಿಗ್ ಬಾಸ್ ಮನೆಯಲ್ಲಿ ಅವರು ತಮ್ಮ ಪ್ರತಿಭೆಯನ್ನು ಸರಿಯಾಗಿ ಬಳಸಿಕೊಂಡಿಲ್ಲ ಎನ್ನಬಹುದು. ಹಾಡುಗಾರಿಕೆಯ ಸಾಮರ್ಥ್ಯವನ್ನು ಅವರು ಇನ್ನಷ್ಟು ಚೆನ್ನಾಗಿ ಬಳಸಿಕೊಳ್ಳಬಹುದಿತ್ತು. ಆ ಮೂಲಕ ಮನೆಯ ಸದಸ್ಯರಿಗೆ ಮತ್ತು ಪ್ರೇಕ್ಷಕರಿಗೆ ಮನರಂಜನೆ ನೀಡಿದ್ದಿದ್ದರೆ ಹೆಚ್ಚಿನ ವೋಟ್ ಪಡೆಯಬಹುದಿತ್ತು. ಆದರೆ ಆ ಅವಕಾಶವನ್ನು ವಿಶ್ವನಾಥ್ ಕೈ ಚೆಲ್ಲಿದ್ದಾರೆ.
ಧನುಶ್ರೀ, ನಿರ್ಮಲಾ ಚೆನ್ನಪ್ಪ, ಗೀತಾ ಭಾರತಿ ಭಟ್, ಚಂದ್ರಕಲಾ ಮೋಹನ್, ಶಂಕರ್ ಅಶ್ವತ್ಥ್ ಮತ್ತು ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ನೀಡಿದ್ದ ವೈಜಯಂತಿ ಅಡಿಗ ಬಳಿಕ 7ನೇ ಸ್ಪರ್ಧಿಯಾಗಿ ವಿಶ್ವನಾಥ್ ಎಲಿಮಿನೇಟ್ ಆಗಿದ್ದಾರೆ. ಇನ್ನುಳಿದ ಸದಸ್ಯರ ನಡುವೆ ಪೈಪೋಟಿ ಮುಂದುವರಿದಿದೆ.
ಇದನ್ನೂ ಓದಿ: Bigg Boss Kannada: ಶುಭಾ ಪೂಂಜಾ ಬಾಯ್ಫ್ರೆಂಡ್ ಧ್ವನಿ ಕೇಳಿ ಗಳಗಳನೆ ಅತ್ತ ವಿಶ್ವನಾಥ್! ಇದೆಂಥಾ ಕನೆಕ್ಷನ್?