Bigg Boss Kannada Season 9: ಅರ್ಹತೆ ಏನು? ಬಿಗ್ ಬಾಸ್ಗೆ ನವಾಜ್ ಆಯ್ಕೆ ಬಗ್ಗೆ ಅಪಸ್ವರ..!
Bigg Boss Kannada Season 9 Contestants: ಸೋಷಿಯಲ್ ಮೀಡಿಯಾ ಮೂಲಕ ಹಲವು ರೀತಿಯಲ್ಲಿ ಮನರಂಜನೆ ನೀಡುವ ಅನೇಕ ಸ್ಪರ್ಧಿಗಳಿದ್ದಾರೆ. ಅಷ್ಟೇ ಯಾಕೆ ಸಮಾಜಮುಖಿ ಕೆಲಸಗಳ ಮೂಲಕ ಗುರುತಿಸಿಕೊಂಡಿರುವ ಹಲವು ಜನರು ಕರ್ನಾಟಕದಲ್ಲಿದ್ದಾರೆ.

ಕನ್ನಡ ಕಿರುತೆರೆಯ ಬಿಗ್ಗೆಸ್ಟ್ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 9 (Bigg Boss Kannada Season 9) ಗೆ ಚಾಲನೆ ದೊರೆತಿದೆ. ಶನಿವಾರ ನಡೆದ ಗ್ರ್ಯಾಂಡ್ ಪ್ರೀಮಿಯರ್ ಕಾರ್ಯಕ್ರಮದ ಮೂಲಕ ಕಿಚ್ಚ ಸುದೀಪ್ ಒಟ್ಟು 18 ಸ್ಪರ್ಧಿಗಳನ್ನು ಸ್ವಾಗತಿಸಿದರು. ಹೊಸ ಸೀಸನ್ಗೆ ಹಳೆಯ ಸ್ಪರ್ಧಿ ಎಂಬಂತೆ ಬಿಗ್ ಬಾಸ್-9 ಗೆ ಮೊದಲು ಎಂಟ್ರಿ ಕೊಟ್ಟಿದ್ದು ಖ್ಯಾತ ಬಹುಮುಖ ಪ್ರತಿಭೆ ಅರುಣ್ ಸಾಗರ್. ಇದರ ಬೆನ್ನಲ್ಲೇ ನಟಿ ಮಯೂರಿ ಕೂಡ ದೊಡ್ಮನೆ ಪ್ರವೇಶಿಸಿದರು. ಇನ್ನು ಮೂರನೇ ಸ್ಪರ್ಧಿಯಾಗಿ ಬಿಗ್ ಬಾಸ್ ಸೀಸನ್ 7 ರ ಸ್ಪರ್ಧಿ ದೀಪಿಕಾ ದಾಸ್ ಕಾಣಿಸಿಕೊಂಡರು. ಆದರೆ ನಾಲ್ಕನೇ ಸ್ಪರ್ಧಿಯಾಗಿ ಕಿಚ್ಚ ಸುದೀಪ್ ನವಾಜ್ರನ್ನು ಸ್ವಾಗತಿಸುತ್ತಿದ್ದಂತೆ ಎಲ್ಲರೂ ಅಚ್ಚರಿಗೊಂಡರು. ಏಕೆಂದರೆ ಸೋಷಿಯಲ್ ಮೀಡಿಯಾದಲ್ಲಿ ಒಂದಷ್ಟು ಸಿನಿಮಾಗಳ ರಿವ್ಯೂ ನೀಡುತ್ತದ್ದ 19ರ ಹುಡುಗ ಕಿಚ್ಚ ಸುದೀಪ್ ಜೊತೆ ವೇದಿಕೆ ಹಂಚಿಕೊಂಡಿದ್ದರು. ಇದರ ಬೆನ್ನಲ್ಲೇ ಬಿಗ್ ಬಾಸ್ನಲ್ಲಿ ಸ್ಥಾನ ಪಡೆಯಲು ಅರ್ಹತೆಗಳೇನು ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ.
ಏಕೆಂದರೆ ಸೋಷಿಯಲ್ ಮೀಡಿಯಾ ಮೂಲಕ ಹಲವು ರೀತಿಯಲ್ಲಿ ಮನರಂಜನೆ ನೀಡುವ ಅನೇಕ ಸ್ಪರ್ಧಿಗಳಿದ್ದಾರೆ. ಅಷ್ಟೇ ಯಾಕೆ ಸಮಾಜಮುಖಿ ಕೆಲಸಗಳ ಮೂಲಕ ಗುರುತಿಸಿಕೊಂಡಿರುವ ಹಲವು ಜನರು ಕರ್ನಾಟಕದಲ್ಲಿದ್ದಾರೆ. ಆದರೆ ಇವರೆಲ್ಲರನ್ನು ಬಿಟ್ಟು ಕೇವಲ ಚಿತ್ರಗಳ ಪ್ರಚಾರಕ್ಕಾಗಿ ರಿವ್ಯೂ ನೀಡುವವರಿಗೆ ಅವಕಾಶ ನೀಡಿರುವುದು ಏಕೆ ಎಂಬುದೇ ಈಗ ಪ್ರಶ್ನೆಯಾಗಿದೆ.
ಇದಕ್ಕೂ ಮುನ್ನ ಬಿಗ್ ಬಾಸ್ ಒಟಿಟಿಗೆ ಸೋನು ಗೌಡರ ಆಯ್ಕೆಯ ವೇಳೆಯೂ ಅಂತಹದೊಂದು ಪ್ರಶ್ನೆ ಉದ್ಭವಿಸಿತ್ತು. ಇದೀಗ ಟೆಲಿವಿಷನ್ ರಿಯಾಲಿಟಿ ಶೋನಲ್ಲಿ ನವಾಜ್ ಆಯ್ಕೆಯು ಹೊಸ ಚರ್ಚೆಗೆ ಕಾರಣವಾಗಿದೆ. ಕೇವಲ ಪ್ರಾಸ ಪದಗಳ ಪಂಚಿಂಗ್ ಡೈಲಾಗ್ ಒಂದೇ ಬಿಗ್ಗೆಸ್ಟ್ ರಿಯಾಲಿಟಿ ಶೋನಲ್ಲಿ ಭಾಗವಹಿಸಲು ಅರ್ಹತೆಯಾಯಿತೇ ಎಂದು ಅನೇಕರು ಸೋಷಿಯಲ್ ಮೀಡಿಯಾದಲ್ಲಿ ಪ್ರಶ್ನಿಸಿದ್ದಾರೆ.
ಇದಾಗ್ಯೂ ಕೆಲವರು ನವಾಜ್ ಅವರಿಗೆ ಬೆಂಬಲವನ್ನೂ ಸೂಚಿಸಿದ್ದಾರೆ. ಅಲ್ಲದೆ ತಮ್ಮ ಪ್ರತಿಭೆ ತೋರಿಸಲು ಬಿಗ್ ಬಾಸ್ ಉತ್ತಮ ವೇದಿಕೆಯಾಗಿದ್ದು, ಟೀಕಾಗಾರರಿಗೆ ಅಲ್ಲಿಂದಲೇ ಉತ್ತರಿಸಿ ಎಂದು ಹಾರೈಸಿದ್ದಾರೆ. ಒಟ್ಟಿನಲ್ಲಿ ಪಂಚಿಂಗ್ ಡೈಲಾಗ್ಗಳ ಮೂಲಕವೇ ಬಿಗ್ ಬಾಸ್ನಲ್ಲಿ ಸ್ಥಾನ ಪಡೆದಿರುವ ನವಾಜ್, ದೊಡ್ಮನೆಯ ಇತರೆ ಸ್ಪರ್ಧಿಗಳ ಮುಂದೆ ಯಾವ ರೀತಿಯಲ್ಲಿ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಲಿದ್ದಾರೆ ಕಾದು ನೋಡಬೇಕಿದೆ.








