Ban Thank God: ‘ಥ್ಯಾಂಕ್ ಗಾಡ್’ ಸಿನಿಮಾ ಬ್ಯಾನ್ ಮಾಡಿ ಎಂದು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದ ಶಿಕ್ಷಣ ಸಚಿವ
Boycott Thank God: ‘ಥ್ಯಾಂಕ್ ಗಾಡ್’ ಸಿನಿಮಾದ ಟ್ರೇಲರ್ ರಿಲೀಸ್ ಆಗಿದೆ. ಅಜಯ್ ದೇವಗನ್ ಮತ್ತು ಸಿದ್ದಾರ್ಥ್ ಮಲ್ಹೋತ್ರಾ ಅವರು ಈ ಚಿತ್ರದಲ್ಲಿ ನಟಿಸಿದ್ದಾರೆ.
ಬಾಲಿವುಡ್ ಸಿನಿಮಾಗಳಿಗೆ ಬ್ಯಾಕ್ ಟು ಬ್ಯಾಕ್ ವಿಘ್ನಗಳು ಎದುರಾಗುತ್ತಿವೆ. ಹಿಂದಿ ಚಿತ್ರರಂಗದ ಸೆಲೆಬ್ರಿಟಿಗಳು ಸ್ವಲ್ಪವೇ ಕಿರಿಕ್ ಮಾಡಿಕೊಂಡರೂ ಸಾಕು ಬಹಿಷ್ಕಾರದ (Boycott) ಕೂಗು ಕೇಳಿಬರುತ್ತಿವೆ. ಇತ್ತೀಚಿನ ದಿನಗಳಲ್ಲಿ ಹಲವು ಸಿನಿಮಾಗಳು ಬ್ಯಾನ್ ಬಿಸಿಗೆ ಬಸವಳಿದಿವೆ. ಹಳೇ ನೆಪಗಳನ್ನೇ ಮುಂದಿಟ್ಟುಕೊಂಡು ಹೊಸ ಸಿನಿಮಾಗಳನ್ನು ಬಾಯ್ಕಾಟ್ ಮಾಡಿದ ಉದಾಹರಣೆಯೂ ಇದೆ. ಇನ್ನು, ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತಹ ಅಂಶಗಳು ಸಿನಿಮಾದಲ್ಲಿ ಇದ್ದರೆ ಬಹಿಷ್ಕಾರದ ಟ್ರೆಂಡ್ ಇನ್ನಷ್ಟು ಜೋರಾಗುತ್ತದೆ. ಈಗ ಅಜಯ್ ದೇವಗನ್ (Ajay Devgn) ನಟನೆಯ ‘ಥ್ಯಾಂಕ್ ಗಾಡ್’ (Thank God) ಸಿನಿಮಾಗೆ ಬಾಯ್ಕಾಟ್ ಬಿಸಿ ತಟ್ಟುವ ಸಾಧ್ಯತೆ ದಟ್ಟವಾಗಿದೆ. ಈ ಚಿತ್ರವನ್ನು ಬ್ಯಾನ್ ಮಾಡಬೇಕು ಎಂದು ಮಧ್ಯಪ್ರದೇಶದ ಶಿಕ್ಷಣ ಸಚಿವ ವಿಶ್ವಾಸ್ ಸಾರಂಗ್ ಅವರು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.
ಇತ್ತೀಚೆಗಷ್ಟೇ ‘ಥ್ಯಾಂಕ್ ಗಾಡ್’ ಸಿನಿಮಾದ ಟ್ರೇಲರ್ ರಿಲೀಸ್ ಆಗಿದೆ. ಈ ಚಿತ್ರದಲ್ಲಿ ಅಜಯ್ ದೇವಗನ್ ಮತ್ತು ಸಿದ್ದಾರ್ಥ್ ಮಲ್ಹೋತ್ರಾ ನಟಿಸಿದ್ದಾರೆ. ರಾಕುಲ್ ಪ್ರೀತ್ ಸಿಂಗ್ ಕೂಡ ಅಭಿನಯಿಸಿದ್ದಾರೆ. ಈ ಸಿನಿಮಾದಲ್ಲಿ ಹಿಂದೂಗಳ ಭಾವನೆಗೆ ಧಕ್ಕೆ ತರುವಂತಹ ಅಂಶಗಳು ಇವೆ ಹಾಗೂ ಹಿಂದೂ ದೇವರನ್ನು ಆಕ್ಷೇಪಾರ್ಹ ರೀತಿಯಲ್ಲಿ ತೋರಿಸಲಾಗುತ್ತಿದೆ ಎಂದು ಸಚಿವ ವಿಶ್ವಾಸ್ ಸಾರಂಗ್ ಆರೋಪಿಸಿದ್ದಾರೆ.
‘ಥ್ಯಾಂಕ್ ಗಾಡ್’ ಸಿನಿಮಾದಿಂದ ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ಆಗಲಿದೆ ಎಂದು ಹೇಳಿರುವ ವಿಶ್ವಾಸ್ ಸಾರಂಗ್ ಅವರು ಕೇಂದ್ರ ಸರ್ಕಾರದ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ಅವರಿಗೆ ಪತ್ರ ಬರೆದಿದ್ದಾರೆ. ಈ ಸಿನಿಮಾವನ್ನು ಬ್ಯಾನ್ ಮಾಡಬೇಕು ಎಂದು ಅವರು ಮನವಿ ಸಲ್ಲಿಸಿದ್ದಾರೆ. ಸರ್ಕಾರದಿಂದ ಯಾವ ಪ್ರತಿಕ್ರಿಯೆ ಬರಬಹುದು ಎಂಬ ಕೌತುಕ ನಿರ್ಮಾಣ ಆಗಿದೆ.
ಒಂದು ಫ್ಯಾಂಟಿಸಿ ಕಥೆಯನ್ನು ‘ಥ್ಯಾಂಕ್ ಗಾಡ್’ ಸಿನಿಮಾ ಒಳಗೊಂಡಿದೆ ಎಂಬುದಕ್ಕೆ ಟ್ರೇಲರ್ನಲ್ಲಿ ಸಾಕ್ಷಿ ಸಿಕ್ಕಿದೆ. ರಸ್ತೆ ಅಪಘಾತಕ್ಕೆ ಸಿಲುಕಿ ಸಾವು ಮತ್ತು ಬದುಕಿನ ಮಧ್ಯೆ ಸಿಕ್ಕಿಕೊಳ್ಳುವ ವ್ಯಕ್ತಿಯ ಪಾತ್ರದಲ್ಲಿ ಸಿದ್ದಾರ್ಥ್ ಮಲ್ಹೋತ್ರಾ ನಟಿಸಿದ್ದಾರೆ. ಯಮಲೋಕದಲ್ಲಿ ಪಾಪ-ಪುಣ್ಯದ ಲೆಕ್ಕ ಬರೆಯುವ ಚಿತ್ರಗುಪ್ತನ ಪಾತ್ರವನ್ನು ಅಜಯ್ ದೇವಗನ್ ನಿಭಾಯಿಸಿದ್ದಾರೆ. ಇಡೀ ಸಿನಿಮಾ ಕಾಮಿಡಿ ಶೈಲಿಯಲ್ಲಿ ಮೂಡಿಬಂದಿದೆ ಎಂಬುದು ಟ್ರೇಲರ್ ಮೂಲಕ ಗೊತ್ತಾಗಿದೆ.
ಟ್ರೇಲರ್ ನೋಡಿದ ಎಲ್ಲರೂ ಪಾಸಿಟಿವ್ ಆಗಿ ಕಮೆಂಟ್ ಮಾಡುತ್ತಿದ್ದಾರೆ. ಜನಪ್ರಿಯ ‘ಮನಿಕೆ ಮಗೆ ಹಿತೆ..’ ಹಾಡನ್ನು ಈ ಚಿತ್ರದಲ್ಲಿ ರೀ-ಕ್ರಿಯೇಟ್ ಮಾಡಲಾಗಿದೆ. ಈ ವಿಶೇಷ ಹಾಡಿನಲ್ಲಿ ನೋರಾ ಫತೇಹಿ ನಟಿಸಿದ್ದಾರೆ. ಯೂಟ್ಯೂಬ್ನಲ್ಲಿ ಈ ಗೀತೆ ಕೋಟ್ಯಂತರ ವೀವ್ಸ್ ಪಡೆದುಕೊಳ್ಳುತ್ತಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 12:57 pm, Wed, 21 September 22