ಆಶಾ ಭೋಸ್ಲೆ ಹಾಡು ಪ್ರಸಾರ ಮಾಡಿದ ಪಾಕ್ ಟಿವಿಗೆ ನೊಟೀಸ್, ಆದರೆ…
Asha Bhosle: ಭಾರತದ ಹಲವು ವಾಹಿನಿಗಳು, ರೆಡಿಯೋ ಚಾನೆಲ್ಗಳು ಆಶಾ ಭೋಸ್ಲೆ ನೆನಪಲ್ಲಿ ಅವರ ಹಲವಾರು ಹಾಡುಗಳನ್ನು ಪ್ರಸಾರ ಮಾಡಿ ಗೌರವ ಸೂಚಿಸಿದವು. ನೆರೆಯ ಪಾಕಿಸ್ತಾನದಲ್ಲಿ ಸಹ ಆಶಾ ಭೊಸ್ಲೆ ಅವರ ಗೌರವಾರ್ಥ ಅವರ ಹಾಡುಗಳನ್ನು ಚಾನೆಲ್ ಒಂದು ಪ್ರಸಾರ ಮಾಡಿತ್ತು. ಆದರೆ ಈಗ ಪಾಕ್ ಸರ್ಕಾರ ಆ ಚಾನೆಲ್ಗೆ ನೊಟೀಸ್ ನೀಡಿದೆ.

ಕಲೆಗೆ, ಕಲಾವಿದರಿಗೆ ಗಡಿ ಇಲ್ಲ ಎನ್ನಲಾಗುತ್ತದೆ. ಆದರೆ ಸರ್ಕಾರಗಳು ಈ ಗಡಿ ಹೇರುವ ಪ್ರಯತ್ನ ಮಾಡಿದರೂ ಸಹ ಅವು ಕಲೆಯ ಪ್ರಸರಣಕ್ಕೆ ತಡೆ ಒಡ್ಡಿಲ್ಲ. ಇತ್ತೀಚೆಗಷ್ಟೆ ಭಾರತದ ಖ್ಯಾತ ಗಾಯಕಿ ಆಶಾ ಭೊಸ್ಲೆ (Asha Bhosle) ನಿಧನ ಹೊಂದಿದರು. ಭಾರತದ ಹಲವು ವಾಹಿನಿಗಳು, ರೆಡಿಯೋ ಚಾನೆಲ್ಗಳು ಆಶಾ ಭೋಸ್ಲೆ ನೆನಪಲ್ಲಿ ಅವರ ಹಲವಾರು ಹಾಡುಗಳನ್ನು ಪ್ರಸಾರ ಮಾಡಿ ಗೌರವ ಸೂಚಿಸಿದವು. ನೆರೆಯ ಪಾಕಿಸ್ತಾನದಲ್ಲಿ ಸಹ ಆಶಾ ಭೊಸ್ಲೆ ಅವರ ಗೌರವಾರ್ಥ ಅವರ ಹಾಡುಗಳನ್ನು ಚಾನೆಲ್ ಒಂದು ಪ್ರಸಾರ ಮಾಡಿತ್ತು. ಆದರೆ ಈಗ ಪಾಕ್ ಸರ್ಕಾರ ಆ ಚಾನೆಲ್ಗೆ ನೊಟೀಸ್ ನೀಡಿದೆ.
ಭಾರತದ ಖ್ಯಾತ ಗಾಯಕಿ ಆಶಾ ಭೋಂಸ್ಲೆ ಅವರು ಕಳೆದ ಭಾನುವಾರ ನಿಧನರಾದಾಗ, ಅವರಿಗೆ ಗೌರವ ನಮನ ಸಲ್ಲಿಸಿ ಆಶಾ ಭೋಸ್ಲೆ ಅವರ ಜನಪ್ರಿಯ ಹಾಡುಗಳನ್ನು ಪಾಕಿಸ್ತಾನದ ‘ಜಿಯೋ ನ್ಯೂಸ್’ (Geo News) ಚಾನೆಲ್ ಪ್ರಸಾರ ಮಾಡಿತ್ತು, ಆಶಾ ಭೊಸ್ಲೆ ಅವರಿಗೆ ಗೌರವ ಸಹ ಸಲ್ಲಿಸಲಾಗಿತ್ತು. ಇದೀಗ ಪಾಕಿಸ್ತಾನದ ಎಲೆಕ್ಟ್ರಾನಿಕ್ ಮೀಡಿಯಾ ರೆಗ್ಯುಲೇಟರಿ ಅಥಾರಿಟಿ (PEMRA) ಜಿಯೋ ನ್ಯೂಸ್ಗೆ ನೋಟಿಸ್ ನೀಡಿದೆ. ಆಶಾ ಭೋಂಸ್ಲೆ ಅವರ ನಿಧನದ ಸುದ್ದಿಯೊಂದಿಗೆ ‘ಭಾರತೀಯ ಕಂಟೆಂಟ್’ ಪ್ರಸಾರ ಮಾಡಿದ್ದಕ್ಕಾಗಿ ಈ ನೋಟಿಸ್ ನೀಡಲಾಗಿದ್ದು, ವಿವರಣೆ ಕೇಳಲಾಗಿದೆ.
ಜಿಯೋ ನ್ಯೂಸ್‌ನ ಎಂಡಿ ಅಜರ್ ಅಬ್ಬಾಸ್ ಅವರು ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದು, ‘ದಿಗ್ಗಜ ಕಲಾವಿದರು ನಿಧನರಾದಾಗ ಅವರ ಸಾಧನೆಯನ್ನು ಸ್ಮರಿಸುವುದು ಸಂಪ್ರದಾಯ. ಆಶಾ ಭೋಸ್ಲೆ ಅವರಂತಹ ಮಹಾನ್ ಗಾಯಕಿ ಪಾಕಿಸ್ತಾನದ ಖ್ಯಾತ ಗಾಯಕಿ ನೂರ್ ಜಹಾನ್ ಅವರನ್ನು ‘ಅಕ್ಕ’ ಎಂದು ಕರೆಯುತ್ತಿದ್ದರು ಮತ್ತು ನುಸ್ರತ್ ಫತೇ ಅಲಿ ಖಾನ್ ಅವರೊಂದಿಗೆ ಕೆಲಸ ಮಾಡಿದ್ದರು. ಯುದ್ಧದ ಸಮಯದಲ್ಲಿ ಕಲೆ ಮತ್ತು ಕಲಾವಿದರು ಬಲಿಯಾಗಬಾರದು’ ಎಂದು ಅವರು ಟ್ವಿಟ್ಟರ್ನಲ್ಲಿ ನಲ್ಲಿ ಬರೆದುಕೊಂಡಿದ್ದಾರೆ. ಅಜರ್ ಅಬ್ಬಾಸ್ ಅವರ ಟ್ವೀಟ್ಗೆ ಸಾಕಷ್ಟು ಬೆಂಬಲ ಸಹ ವ್ಯಕ್ತವಾಗಿದೆ.
ಇದನ್ನೂ ಓದಿ:ಆಶಾ ಭೋಸ್ಲೆ ಬಗ್ಗೆ ಹಲವರಿಗೆ ತಿಳಿಯದ ವಿಷಯಗಳು ಇಲ್ಲಿವೆ
ಭಾರತೀಯ ಮಾಧ್ಯಮಗಳ ಮೇಲೆ ಪಾಕಿಸ್ತಾನವು 2018 ರಿಂದಲೇ ನಿಷೇಧ ಹೇರಿದೆ. ಆದಾಗ್ಯೂ, ಅಲ್ಲಿ ಭಾರತೀಯ ಚಲನಚಿತ್ರಗಳು ಮತ್ತು ಹಾಡುಗಳು ಟ್ರೆಂಡ್ ಆಗುತ್ತಲೇ ಇರುತ್ತವೆ. ಇತ್ತೀಚೆಗೆ ತೆರೆಕಂಡ ‘ಧುರಂಧರ್’ ಮತ್ತು ‘ಧುರಂಧರ್ 2’ ಸಿನಿಮಾಗಳು ಪಾಕಿಸ್ತಾನದಲ್ಲಿ ದೊಡ್ಡ ಅಲೆ ಎಬ್ಬಿಸಿವೆ. ಜನ ಪೈರಸಿ ಸಿಡಿಗಳನ್ನು ಖರೀದಿಸಿ ಸಿನಿಮಾ ನೋಡಿದ್ದಾರೆ. ಪಾಕ್ ನೆಟ್ಫ್ಲಿಕ್ಸ್ನಲ್ಲಿಯೂ ಸಹ ‘ಧುರಂಧರ್’ ಸಿನಿಮಾ ಟಾಪ್ ಟ್ರೆಂಡಿಂಗ್ನಲ್ಲಿತ್ತು. ಪಾಕಿಸ್ತಾನದ ಸ್ಪಾಟಿಫೈ (ಆನ್ಲೈನ್ ಹಾಡುಗಳ ಆಪ್) ಇತರೆ ಆನ್ಲೈನ್ ವೇದಿಕೆಗಳಲ್ಲಿ ‘ಧುರಂಧರ್’ ಮತ್ತು ‘ಧುರಂಧರ್ 2’ ಸಿನಿಮಾದ ಹಾಡುಗಳೇ ಟ್ರೆಂಡಿಂಗ್ನಲ್ಲಿವೆ.
‘ಧುರಂಧರ್: ದಿ ರಿವೆಂಜ್’ ಸಿನಿಮಾದ ‘ಜೈಯೇ ಸಜನ’ ಹಾಡು 6 ಲಕ್ಷಕ್ಕೂ ಹೆಚ್ಚು ಬಾರಿ ಪ್ಲೇ ಆಗುವ ಮೂಲಕ 3ನೇ ಸ್ಥಾನದಲ್ಲಿದೆ. ಭಾರತದ ಕರಣ್ ಔಜ್ಲಾ ಅವರ ‘ಬಾಯ್‌ಫ್ರೆಂಡ್’ ಹಾಡು 6ನೇ ಸ್ಥಾನದಲ್ಲಿದೆ. ಪಾಕಿಸ್ತಾನ ನೆಟ್‌ಫ್ಲಿಕ್ಸ್ ನಲ್ಲಿ ‘ಧುರಂಧರ್’ ಮೊದಲ ಭಾಗವು 3ನೇ ಸ್ಥಾನದಲ್ಲಿದ್ದರೆ, ರಾಣಿ ಮುಖರ್ಜಿ ನಟಿಸಿರುವ ‘ಮರ್ದಾನಿ 3’ ಮತ್ತು ‘ವಧ್ 2’ ಮೊದಲ ಎರಡು ಸ್ಥಾನಗಳಲ್ಲಿವೆ. ಪಾಕಿಸ್ತಾನ ಸರ್ಕಾರವು ಟಿವಿ ಮತ್ತು ಚಿತ್ರಮಂದಿರಗಳಲ್ಲಿ ಭಾರತೀಯ ಕಂಟೆಂಟ್ ಮೇಲೆ ನಿಯಂತ್ರಣ ಹೇರಿದ್ದರೂ, ಡಿಜಿಟಲ್ ಜಗತ್ತಿನಲ್ಲಿ ಜನರು ಭಾರತೀಯ ಸಂಗೀತ ಮತ್ತು ಸಿನಿಮಾಗಳನ್ನು ಅತಿಯಾಗಿ ಇಷ್ಟಪಡುತ್ತಿದ್ದಾರೆ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:24 pm, Wed, 15 April 26




