ಪತ್ರಕರ್ತನ ಮೊಬೈಲ್ ಕಿತ್ತುಕೊಂಡು ಎಸೆದ ಹಾಸ್ಯ ನಟ ರಾಜ್​ಪಾಲ್ ಯಾದವ್

ಬಾಲಿವುಡ್ ನಟ ರಾಜ್​ಪಾಲ್ ಯಾದವ್ ಅವರು ತಾಳ್ಮೆ ಕಳೆದುಕೊಂಡಿದ್ದಾರೆ. ತಮ್ಮದೇ ಹೇಳಿಕೆಯ ಬಗ್ಗೆ ಪ್ರಶ್ನೆ ಕೇಳಿದ್ದಕ್ಕೆ ಅವರು ಕೋಪ ಮಾಡಿಕೊಂಡಿದ್ದಾರೆ. ಪ್ರಶ್ನೆ ಕೇಳಿದ ಪತ್ರಕರ್ತನ ಮೊಬೈಲ್ ಫೋನ್​ ಕಿತ್ತುಕೊಂಡು ಅವರು ಎಸೆದಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಹಾಸ್ಯ ನಟನ ವರ್ತನೆಗೆ ಹಲವರು ಖಂಡನೆ ವ್ಯಕ್ತಪಡಿಸಿದ್ದಾರೆ.

ಪತ್ರಕರ್ತನ ಮೊಬೈಲ್ ಕಿತ್ತುಕೊಂಡು ಎಸೆದ ಹಾಸ್ಯ ನಟ ರಾಜ್​ಪಾಲ್ ಯಾದವ್
ರಾಜ್​ಪಾಲ್ ಯಾದವ್
Follow us
ಮದನ್​ ಕುಮಾರ್​
|

Updated on: Nov 04, 2024 | 12:29 PM

ಹಾಸ್ಯ ನಟ ರಾಜ್​ಪಾಲ್ ಯಾದವ್​ ಅವರಿಗೆ ಸಖತ್ ಬೇಡಿಕೆ ಇದೆ. ಹಲವು ಸಿನಿಮಾಗಳಲ್ಲಿ ಅವರು ನಟಿಸುತ್ತಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ ‘ಭೂಲ್ ಭುಲಯ್ಯ 3’ ಸಿನಿಮಾದಲ್ಲಿ ಅವರಿಗೆ ಒಂದು ಪಾತ್ರವಿದೆ. ಇತ್ತೀಚೆಗೆ ಅವರು ಒಂದು ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿದ್ದರು. ತಮ್ಮ ಸಿನಿಮಾ ಜರ್ನಿ ಬಗ್ಗೆ ಹೇಳಿದ್ದಕ್ಕೆ ಬಹಳ ಕೂಲ್ ಆಗಿಯೇ ರಾಜ್​ಪಾಲ್ ಉತ್ತರ ನೀಡಿದರು. ಆದರೆ ದೀಪಾವಳಿ ಹಬ್ಬದ ಕುರಿತು ಅವರು ಈ ಮೊದಲು ನೀಡಿದ್ದ ಒಂದು ಹೇಳಿಕೆಯ ಬಗ್ಗೆ ಪ್ರಶ್ನೆ ಮಾಡಿದ್ದಕ್ಕೆ ರಾಜ್​ಪಾಲ್ ಯಾವದ್ ಅವರಿಗೆ ಸಖತ್ ಕೋಪ ಬಂದಿದೆ. ಪ್ರಶ್ನೆ ಕೇಳಿದ ಪತ್ರಕರ್ತನ ಮೊಬೈಲ್​ ಫೋನ್​ ಕಿತ್ತುಕೊಂಡು ಎಸೆದಿದ್ದಾರೆ!

ಈ ಮೊದಲು ಸೋಶಿಯಲ್ ಮೀಡಿಯಾದಲ್ಲಿ ರಾಜ್​ಪಾಲ್​ ಯಾವದ್ ಅವರು ಒಂದು ಪೋಸ್ಟ್ ಮಾಡಿದ್ದರು. ‘ಹೆಚ್ಚು ಪಟಾಕಿ ಹೊಡೆಯಬೇಡಿ. ಅದರಿಂದ ವಾಯು ಮಾಲಿನ್ಯ ಆಗುತ್ತದೆ’ ಎಂದು ಅವರು ಹೇಳಿದ್ದರು. ಆದರೆ ಕೆಲವರು ಈ ವಿಡಿಯೋಗೆ ವಿರೋಧ ವ್ಯಕ್ತಪಡಿಸಿದ್ದರು. ಪರಿಣಾಮವಾಗಿ ಆ ವಿಡಿಯೋವನ್ನು ರಾಜ್​ಪಾಲ್​ ಯಾದವ್ ಡಿಲೀಟ್ ಮಾಡಿ ಕ್ಷಮೆ ಕೇಳಿದ್ದರು. ಅದೇ ವಿಚಾರವಾಗಿ ಇತ್ತೀಚಿನ ಸುದ್ದಿಗೋಷ್ಠಿಯಲ್ಲಿ ಪ್ರಶ್ನೆ ಎದುರಾಯಿತು.

ಇದನ್ನೂ ಓದಿ: ಪಟಾಕಿ ಹೊಡೆದು ದೀಪಾವಳಿ ಸಂಭ್ರಮದಲ್ಲಿ ಮುಳುಗಿದ ಕೀರ್ತಿ ಸುರೇಶ್

‘ಪ್ರೇಕ್ಷಕರು ಪ್ರತಿ ಒಂದೂವರೆ ತಿಂಗಳಿಗೆ ನನ್ನ ಒಂದು ಹೊಸ ಸಿನಿಮಾ ನೋಡಬಹುದು’ ಎಂದು ರಾಜ್​ಪಾಲ್ ಯಾದವ್ ಹೇಳಿದರು. ಬಳಿಕ ದೀಪಾವಳಿ ಬಗ್ಗೆ ಅವರಿಗೆ ಪ್ರಶ್ನೆ ಬಂತು. ‘ದೀಪಾವಳಿ ಹಬ್ಬಕ್ಕೂ ಮೊದಲು ನಿಮ್ಮ ಒಂದು ಹೇಳಿಕೆ ಬಂದಿತ್ತು. ಅದರಲ್ಲಿ…’ ಎಂದು ಪತ್ರಕರ್ತರು ಪ್ರಶ್ನೆ ಪೂರ್ಣಗೊಳಿಸುವುದಕ್ಕೂ ಮುನ್ನವೇ ರಾಜ್​ಪಾಲ್ ಯಾದವ್​ ಅವರು ಮೊಬೈಲ್ ಫೋನ್​ ಕಿತ್ತುಕೊಂಡರು.

ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ವೈರಲ್ ಆಗಿದೆ. ರಾಜ್​ಪಾಲ್ ಯಾದವ್​ ಅವರು ತಾಳ್ಮೆ ಕಳೆದುಕೊಳ್ಳಬಾರದಿತ್ತು ಎಂದು ಅನೇಕರು ಕಮೆಂಟ್ ಮಾಡಿದ್ದಾರೆ. ಇದೇ ವಿಡಿಯೋವನ್ನು ಇಟ್ಟುಕೊಂಡು ಒಂದಷ್ಟು ಮಂದಿ ಟ್ರೋಲ್ ಮಾಡುತ್ತಿದ್ದಾರೆ. ‘ಪಟಾಕಿ ಹೊಡೆಯಬೇಡಿ ಅಂತ ರಾಜ್​ಪಾಲ್​ ಯಾದವ್​ ಹೇಳಿದ್ದು ಸರಿ’ ಎಂದು ಅನೇಕರು ಬೆಂಬಲ ನೀಡಿದ್ದಾರೆ. ಒಟ್ಟಿನಲ್ಲಿ ಈ ವಿಷಯದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.