‘RRR’, ‘ಬಾಹುಬಲಿ’ ಕ್ಯಾಮೆರಾಮ್ಯಾನ್ ಸೆಂಥಿಲ್ ಕುಮಾರ್ ಪತ್ನಿ ನಿಧನ
Senthil Kumar: ‘ಬಾಹುಬಲಿ’, ‘ಆರ್ಆರ್ಆರ್’, ‘ಈಗ’ ಇನ್ನೂ ಹಲವು ಜನಪ್ರಿಯ ಸಿನಿಮಾಗಳ ಸಿನಿಮಾಟೊಗ್ರಾಫರ್ ಸೆಂಥಿಲ್ ಕುಮಾರ್ ಅವರ ಪತ್ನಿ ನಿಧನ ಹೊಂದಿದ್ದಾರೆ.

ಭಾರತದ ಖ್ಯಾತ ನಿರ್ದೇಶಕ ಎಸ್ಎಸ್ ರಾಜಮೌಳಿ (Rajamouli) ಅವರ ಅಚ್ಚು-ಮೆಚ್ಚಿನ ಸಿನಿಮಾಟೊಗ್ರಾಫರ್ ಕೆಕೆ ಸೆಂಥಿಲ್ ಕುಮಾರ್ ಅವರ ಪತ್ನಿ ರೂಹಿ ನಿಧನ ಹೊಂದಿದ್ದಾರೆ. ರೂಹಿ ಅವರು ಕಳೆದ ಕೆಲವು ದಿನಗಳಿಂದ ತೀವ್ರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು, ಅವರನ್ನು ಸಿಖಂದರಾಬಾದ್ನ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಚಿಕಿತ್ಸೆಗೆ ಸ್ಪಂದಿಸದೆ ಅವರು ಇಂದು (ಫೆಬ್ರವರಿ 15) ಮಧ್ಯಾಹ್ನ ಕೊನೆ ಉಸಿರೆಳೆದಿದ್ದಾರೆ.
ಸೆಂಥಿಲ್ ಕುಮಾರ್ ಹಾಗೂ ರೂಹಿ 2009 ರಲ್ಲಿ ವಿವಾಹವಾಗಿದ್ದರು. ರೂಹಿಗೂ ಸಹ ಚಿತ್ರರಂಗದೊಟ್ಟಿಗೆ ನಂಟಿತ್ತು. ಯೋಗ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದ ರೂಹಿ, ಕೆಲವು ಟಾಲಿವುಡ್ ನಟಿಯರಿಗೂ ಯೋಗ ತರಬೇತಿ ನೀಡುತ್ತಿದ್ದರು. ಟಾಲಿವುಡ್ನ ಖ್ಯಾತ ನಟಿ ಅನುಷ್ಕಾ ಶೆಟ್ಟಿ ಜೊತೆಗೆ ಹಲವು ವರ್ಷಗಳ ಕಾಲ ರೂಹಿ ಕೆಲಸ ಮಾಡಿದ್ದರು.
ರೂಹಿ ಅವರಿಗೆ 2019ರಲ್ಲಿ ಕೋವಿಡ್ ಆಗಿತ್ತು, ಆಗಿನಿಂದಲೂ ಅವರ ಆರೋಗ್ಯ ಸರಿಯಿರಲಿಲ್ಲ. ಪದೇ ಪದೇ ಅನಾರೋಗ್ಯಕ್ಕೆ ಒಳಗಾಗುತ್ತಲೇ ಇದ್ದರು. ಇತ್ತೀಚೆಗೆ ಮತ್ತೆ ಆರೋಗ್ಯ ಸಮಸ್ಯೆ ಉಲ್ಬಣವಾದಾಗ ಅವರನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿಯೇ ಅವರು ಕೊನೆ ಉಸಿರೆಳೆದಿದ್ದಾರೆ.
ಇದನ್ನೂ ಓದಿ:‘ಸಲಾರ್’ ಕತೆಯ ಬಗ್ಗೆ ರಾಜಮೌಳಿಗೆ ಹಲವು ಅನುಮಾನ, ಪ್ರಶಾಂತ್ ನೀಲ್ ಕ್ಷಮೆ ಕೇಳಿದ್ದೇಕೆ?
ಸೆಂಥಿಲ್ ಕುಮಾರ್, ಭಾರತದ ಅತ್ಯುತ್ತಮ ಸಿನಿಮಾಟೊಗ್ರಫರ್ಗಳಲ್ಲಿ ಒಬ್ಬರು. ರಾಜಮೌಳಿ ನಿರ್ದೇಶಿಸಿರುವ ಬಹುತೇಕ ಸಿನಿಮಾಗಳಿಗೆ ಕ್ಯಾಮೆರಾ ಕೆಲಸ ಮಾಡಿರುವುದು ಸೆಂಥಿಲ್ ಕುಮಾರ್. 2003 ರಲ್ಲಿ ಬಿಡುಗಡೆ ಆದ ‘ಐತೆ’ ಸಿನಿಮಾ ಮೂಲಕ ಸಿನಿಮಾಟೊಗ್ರಾಫರ್ ಆಗಿ ಚಿತ್ರರಂಗಕ್ಕೆ ಕಾಲಿಟ್ಟ ಸೆಂಥಿಲ್ರ ಪ್ರತಿಭೆಯನ್ನು ಆರಂಭದಲ್ಲಿಯೇ ಅಳೆದಿದ್ದ ರಾಜಮೌಳಿ 2004ರಲ್ಲಿ ಬಿಡುಗಡೆ ಆದ ತಮ್ಮ ‘ಸೈ’ ಸಿನಿಮಾ ತಂಡಕ್ಕೆ ಸೇರಿಕೊಂಡರು. ‘ಸೈ’ ಸೆಂಥಿಲ್ ಸಿನಿಮಾಟೊಗ್ರಫಿ ಮಾಡಿದ ಮೊದಲ ರಾಜಮೌಳಿ ಸಿನಿಮಾ. ಅದಾದ ಬಳಿಕ ಈವರೆಗಿನ ಎಲ್ಲ ರಾಜಮೌಳಿ ಸಿನಿಮಾಗಳಿಗೂ ಸೆಂಥಿಲ್ ಕ್ಯಾಮೆರಾಮ್ಯಾನ್ ಆಗಿ ಕೆಲಸ ಮಾಡಿದ್ದಾರೆ. ‘ಬಾಹುಬಲಿ 1 ಮತ್ತು 2’, ‘ಆರ್ಆರ್ಆರ್’ ಸಿನಿಮಾಕ್ಕೂ ಅವರೇ ಕ್ಯಾಮೆರಾಮ್ಯಾನ್. ಇದೀಗ ರಾಜಮೌಳಿ ನಿರ್ದೇಶಿಸಲಿರುವ ಮುಂದಿನ ಸಿನಿಮಾಕ್ಕೂ ಅವರೇ ಕ್ಯಾಮೆರಾಮ್ಯಾನ್ ಆಗಿರಲಿದ್ದಾರೆ ಎನ್ನಲಾಗುತ್ತಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




