ಅಣ್ಣಾವ್ರ ಮೇಲೆ ಕೈ ಇಟ್ಟಾಗಲೇ ವೀರಪ್ಪನ್ ಜೀವನ ಮುಗಿಯಿತು: ಅಳಿಯ ಗೋವಿಂದರಾಜು
ಮೇರುನಟ ಡಾ. ರಾಜ್ಕುಮಾರ್ ಜೊತೆ ಅಳಿಯ ಗೋವಿಂದರಾಜು ಅವರನ್ನು ಕೂಡ ವೀರಪ್ಪನ್ ಅಪಹರಣ ಮಾಡಿದ್ದ. ಆ ಘಟನೆ ನಡೆದು ಈಗ 25 ವರ್ಷಗಳು ಕಳೆದಿವೆ. ಅಂದಿನ ದಿನಗಳನ್ನು ಗೋವಿಂದರಾಜು ನೆನಪಿಸಿಕೊಂಡಿದ್ದಾರೆ. ಕಾಡಿನಲ್ಲಿ ಕಾಲ ಕಳೆದಿದ್ದು ತುಂಬ ಕಷ್ಟಕರವಾಗಿತ್ತು ಎಂದು ಅವರು ಹೇಳಿದ್ದಾರೆ.

2000ನೇ ಇಸವಿಯ ಭೀಮನ ಅಮಾವಾಸ್ಯೆ ದಿನ ಡಾ. ರಾಜ್ಕುಮಾರ್ (Dr Rajkumar) ಅವರ ಅಪಹರಣ ಆಗಿತ್ತು. ಅಣ್ಣಾವ್ರನ್ನು ಕಾಡುಗಳ್ಳ ವೀರಪ್ಪನ್ (Veerappan) ಅಪಹರಣ ಮಾಡಿದಾಗ ಇಡೀ ರಾಜ್ಯಕ್ಕೆ ದುಃಖ ಆಗಿತ್ತು. 25 ವರ್ಷಗಳು ಕಳೆದ ಬಳಿಕ ಅಣ್ಣಾವ್ರ ಅಳಿಯ ಗೋವಿಂದರಾಜು (Govindaraju) ಅವರು ಆ ಘಟನೆ ಬಗ್ಗೆ ಮಾತನಾಡಿದ್ದಾರೆ. ‘ಅಣ್ಣಾವ್ರ ಮೇಲೆ ಕೈ ಇಟ್ಟಾಗಲೇ ವೀರಪ್ಪನ್ ಜೀವನ ಮುಗಿಯಿತು. ಅವನ ಸಂಹಾರಕ್ಕೆ ಅಣ್ಣಾವ್ರೇ ಆ ಅವತಾರದಲ್ಲಿ ಬಂದು ಕಾರಣಕರ್ತರಾದರು. ವೀರಪ್ಪನ್ ಹತ್ಯೆಯಾದ ದಿನ ರಾಜ್ಕುಮಾರ್ ಅವರು ಮೌನವಾಗಿ ಇದ್ದರು. ಜಾಸ್ತಿ ಮಾತನಾಡಲಿಲ್ಲ. ಮಾಡಬಾರದ್ದು ಮಾಡಿದವನ ಜೀವನ ಈ ರೀತಿ ಅಂತ್ಯ ಆಯ್ತು ಅಂತ ಹೇಳಿದರು’ ಎಂದಿದ್ದಾರೆ ಗೋವಿಂದರಾಜು.
‘ಅಪಹರಣ ಆದಾಗ ನಾವು ನಾಲ್ಕು ಜನ ಅಲ್ಲಿ ಇದ್ದೆವು. ಆದರೆ ಇಲ್ಲಿ ಕೋಟ್ಯಂತರ ಅಭಿಮಾನಿಗಳು ಕಷ್ಟಪಡುತ್ತಿದ್ದರು. ಆದ್ದರಿಂದ ರಾಜ್ಕುಮಾರ್ ಅವರು ಬೇಸರ ಮಾಡಿಕೊಂಡಿದ್ದರು. ಸಂಜೆ ವೀರಪ್ಪನ್ ರೇಡಿಯೋ ಹಾಕುತ್ತಿದ್ದ. ಅದರಲ್ಲಿ ನಮಗೆ ಎಲ್ಲದೂ ಗೊತ್ತಾಗುತ್ತಿತ್ತು. ಕಾಡಿನಲ್ಲಿ ಕೂಡ ನ್ಯೂಸ್ ಬರುತ್ತಿತ್ತು. ಆತ ಬಹಳ ಕಿಲಾಡಿ ಆಗಿದ್ದ. ಹುಡುಕೋಕೆ ಬರಬೇಡಿ ಎಂದು ಅಪ್ಪಾಜಿ ಅವರಿಂದ ರೆಕಾರ್ಡ್ ಮಾಡಿ ಕಳಿಸುತ್ತಿದ್ದ’ ಎಂದಿದ್ದಾರೆ ಗೋವಿಂದರಾಜು.
‘ರಾಜ್ಕುಮಾರ್ ಅವರಿಗೆ ವೀರಪ್ಪನ್ ತುಂಬ ಗೌರವ ನೀಡುತ್ತಿದ್ದ. ಕಳಿಸಿಕೊಡುವಾಗ ಕೊನೇ ದಿನ ನಾನು ಇರಲಿಲ್ಲ. ಆದರೆ ಪಂಚೆ, ಶರ್ಟ್ ಕೊಟ್ಟು, ಶುಭ ಹಾರೈಸಿ ಒಳ್ಳೆಯ ರೀತಿಯಲ್ಲಿ ಕಳಿಸಿಕೊಟ್ಟಿದ್ದು ನಿಜ’ ಎಂದು ಗೋವಿಂದರಾಜು ಹೇಳಿದ್ದಾರೆ. ಕಾಡಿನಲ್ಲಿ ಇದ್ದಾಗ ರಾಜ್ಕುಮಾರ್ ಅವರು ತುಂಬಾ ಕಷ್ಟಪಟ್ಟಿದ್ದರು. ಆ ವಿವರಗಳನ್ನು ಮುಂದಿನ ದಿನಗಳಲ್ಲಿ ನೀಡುವುದಾಗಿ ಗೋವಿಂದರಾಜು ಹೇಳಿದ್ದಾರೆ.
‘ಯಾರೂ ಬಾರದ ಜಾಗದಲ್ಲಿ ನಮ್ಮನ್ನು ಇರಿಸಿದ್ದ. ನಮಗೆ ವಿಧಿ ಇರಲಿಲ್ಲ. ವೀರಪ್ಪನ್ ಹೇಳಿದ ಹಾಗೆ ನಾವು ಕೇಳಬೇಕಿತ್ತು. ವೀರಪ್ಪನ್ ಕೇಳಿದ್ದಕ್ಕೆಲ್ಲ ನಾವು ಉತ್ತರ ನೀಡಬೇಕಿತ್ತು. ಅಪ್ಪಾಜಿ ಬಹಳ ಧೈರ್ಯವಾಗಿ ಇದ್ದರು. ಅದು ಅಸಾಧ್ಯ ಧೈರ್ಯ. ಅವರನ್ನು ವೀರಪ್ಪನ್ ಫೇಸ್ ಮಾಡುತ್ತಿರಲಿಲ್ಲ. ಅವರ ಬಗ್ಗೆ ಅವನಿಗೆ ಭಯ ಇತ್ತು’ ಎಂದು ಆ ದಿನಗಳನ್ನು ಗೋವಿಂದರಾಜು ನೆನಪಿಸಿಕೊಂಡಿದ್ದಾರೆ.
ಇದನ್ನೂ ಓದಿ: ‘ನಡೀರಿ ಹೋಗೋಣ ಎಂದರು’; ವೀರಪ್ಪನ್ ಕಂಡಾಗ ರಾಜ್ಕುಮಾರ್ ಪ್ರತಿಕ್ರಿಯೆ ಹೀಗಿತ್ತು
25 ವರ್ಷಗಳ ಹಿಂದೆ ಭೀಮನ ಅಮಾವಾಸ್ಯೆ ದಿನವೇ ರಾಜ್ಕುಮಾರ್ ಅವರ ಅಪಹರಣ ಆಗಿತ್ತು. ಹಾಗಾಗಿ ಈ ದಿನ ಮನೆಯಿಂದ ಗೋವಿಂದರಾಜು ಅವರು ಮನೆಯಿಂದ ಹೊರಗೆ ಕಾಲಿಡಲ್ಲ. ‘ಅಂದು ನಡೆದ ಘಟನೆಯ ನೆನಪು ನನಗೆ ಹಾಗೆಯೇ ಇದೆ. ಹಾಗಾಗಿ ದೇವಸ್ಥಾನದ ಹೊರತು ಬೇರೆ ಎಲ್ಲಿಗೂ ನಾನು ಹೋಗಲ್ಲ. ಕುಟುಂಬದ ಜೊತೆಗೆ ಇರುತ್ತೇನೆ. ಪಾರ್ವತಮ್ಮ ಕೂಡ ಇದನ್ನು ಒಂದು ಕರಾಳ ದಿನ ಎಂದು ಭಾವಿಸುತ್ತಿದ್ದರು’ ಎಂದಿದ್ದಾರೆ ಗೋವಿಂದರಾಜು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.