ವಿಳಂಬವಾಯಿತು ‘ಅವತಾರ್’ ಸೀಕ್ವೆಲ್ ಬಿಡುಗಡೆ; 2031ಕ್ಕೆ ರಿಲೀಸ್ ಆಗಲಿದೆ ಕೊನೆಯ ಸಿನಿಮಾ
ಈ ಮೊದಲು ‘ಅವತಾರ್’ ಸರಣಿಯ ಸಿನಿಮಾಗಳ ರಿಲೀಸ್ ದಿನಾಂಕ ಘೋಷಣೆ ಆಗಿತ್ತು. ಆದರೆ, ಇದರಲ್ಲಿ ಕೆಲ ಬದಲಾವಣೆ ಮಾಡಿಕೊಳ್ಳಲಾಗಿದೆ.
ನಿರ್ದೇಶಕ ಜೇಮ್ಸ್ ಕ್ಯಾಮೆರಾನ್ (James Cameron) ಅವರು ಮಾಡುವ ಪ್ರತಿ ಸಿನಿಮಾಗಳು ದಾಖಲೆ ಬರೆಯುತ್ತವೆ. ಗ್ರಾಫಿಕ್ಸ್ ತಂತ್ರಜ್ಞಾನವನ್ನು ಸಮರ್ಥವಾಗಿ ಬಳಕೆ ಮಾಡಿಕೊಳ್ಳುವಲ್ಲಿ ಅವರಿಗೆ ಬೇರಾರೂ ಸಾಟಿ ಇಲ್ಲ. ಹಾಲಿವುಡ್ನಲ್ಲಿ ಸಾವಿರಾರು ಕೋಟಿ ರೂಪಾಯಿ ಬಜೆಟ್ನಲ್ಲಿ ಸಿನಿಮಾ ಮಾಡಿ ಗೆಲ್ಲುತ್ತಾರೆ. ಕಳೆದ ವರ್ಷ ರಿಲೀಸ್ ಆದ ‘ಅವತಾರ್: ದಿ ವೇ ಆಫ್ ವಾಟರ್’ ಸಿನಿಮಾ ಮೂಲಕ ಅವರು ಗೆದ್ದು ಬೀಗಿದ್ದಾರೆ. ಈ ಬೆನ್ನಲ್ಲೇ ‘ಅವತಾರ್’ ಸಿನಿಮಾದ 3, 4 ಮತ್ತು 5ನೇ ಸೀಕ್ವೆಲ್ಗಳನ್ನು ಮಾಡಲು ಜೇಮ್ಸ್ ಕ್ಯಾಮೆರಾನ್ ಮುಂದೆಬಂದಿದ್ದರು. ಈಗ ಈ ಬಗ್ಗೆ ಹೊಸ ಅಪ್ಡೇಟ್ ಸಿಕ್ಕಿದೆ. ಸಿನಿಮಾ ಅಂದುಕೊಂಡ ಸಮಯಕ್ಕೆ ರಿಲೀಸ್ ಆಗುತ್ತಿಲ್ಲ. ಈ ಬಗ್ಗೆ ಡಿಸ್ನಿ ಕಡೆಯಿಂದ ಘೋಷಣೆ ಆಗಿದೆ.
‘ಅವತಾರ್ 2’ ಸಿನಿಮಾ ಕಳೆದ ವರ್ಷ ಡಿಸೆಂಬರ್ 16ರಂದು ತೆರೆಕಂಡಿತು. ಈ ಸಿನಿಮಾದ ರಿಲೀಸ್ಗೂ ಮುನ್ನ ಜೇಮ್ಸ್ ಕ್ಯಾಮೆರಾನ್ ಒಂದು ಮಾತು ಹೇಳಿದ್ದರು. ಒಂದು ವೇಳೆ ‘ಅವತಾರ್ 2’ ಸೋತರೆ ಇನ್ನುಳಿದ ಸೀಕ್ವೆಲ್ಗಳನ್ನು ಮಾಡುವುದಿಲ್ಲ ಎಂದು ಅವರು ಹೇಳಿದ್ದರು. ‘ಅವತಾರ್ 2’ ಚಿತ್ರ ಗೆದ್ದಿರುವುದರಿಂದ ‘ಅವತಾರ್ 3’ ಸಿನಿಮಾ ಮಾಡುತ್ತಿದ್ದಾರೆ ಜೇಮ್ಸ್ ಕ್ಯಾಮೆರಾನ್. ಈ ಮೊದಲು ಇವುಗಳ ರಿಲೀಸ್ ದಿನಾಂಕ ಘೋಷಣೆ ಆಗಿತ್ತು. ಆದರೆ, ಇದರಲ್ಲಿ ಕೆಲ ಬದಲಾವಣೆ ಮಾಡಿಕೊಳ್ಳಲಾಗಿದೆ.
ಎಲ್ಲವೂ ಅಂದುಕೊಂಡಂತೆ ನಡೆದರೆ ‘ಅವತಾರ್ 3’ 2024ರ ಆರಂಭದಲ್ಲಿ ಬಿಡುಗಡೆ ಆಗಬೇಕಿತ್ತು. ಆದರೆ, ಈ ಸಿನಿಮಾ ಡಿಸೆಂಬರ್ 19, 2025ರಂದು ಬಿಡುಗಡೆಯಾಗಲಿದೆ. ‘ಅವತಾರ್ 5’ ಡಿಸೆಂಬರ್ 19, 2031ರಂದು ಬಿಡುಗಡೆಯಾಗಲಿದೆ. ಅಂದರೆ ಮೊದಲ ಚಿತ್ರ ಹೊರಬಂದ 22 ವರ್ಷಗಳ ನಂತರ ಈ ಸರಣಿಯ ಕೊನೆಯ ಸಿನಿಮಾ ರಿಲೀಸ್ ಆಗಲಿದೆ.
ಇದನ್ನೂ ಓದಿ: ಹಸಿಬಿಸಿ ದೃಶ್ಯಗಳಲ್ಲಿ ಮಿಂಚಿದ ನಟಿ ತಮನ್ನಾ; ಅಮೇಜಾನ್ ಸೀರಿಸ್ಗಾಗಿ ಬೋಲ್ಡ್ ಅವತಾರ
ಅಂದಹಾಗೆ, ‘ಅವತಾರ್ 3’ ಸಿನಿಮಾದ ಬಹುತೇಕ ದೃಶ್ಯಗಳನ್ನು ನಿರ್ದೇಶಕರು ಈಗಾಗಲೇ ಚಿತ್ರಿಸಿಕೊಂಡಿದ್ದಾರೆ. ಇನ್ನೇನಿದ್ದರೂ ಪೋಸ್ಟ್ ಪ್ರೊಡಕ್ಷನ್ ಕೆಲಸಗಳತ್ತ ಗಮನ ಹರಿಸಬೇಕಷ್ಟೇ. ಗ್ರಾಫಿಕ್ಸ್ ಕೆಲಸಗಳು ಹೆಚ್ಚಿರುವುದರಿಂದ ಅದಕ್ಕೆ ಜಾಸ್ತಿ ಸಮಯ ಹಿಡಿಯಲಿದೆ. ಇನ್ನುಳಿದಂತೆ ‘ಅವತಾರ್ 4’ ಮತ್ತು ‘ಅವತಾರ್ 5’ ಚಿತ್ರಗಳಿಗೆ ಈಗಾಗಲೇ ಸ್ಕ್ರಿಪ್ಟ್ ಸಿದ್ಧಗೊಂಡಿದೆ.
ರಿಲೀಸ್ ದಿನಾಂಕದ ಬಗ್ಗೆ ವಿವರ
ಅವತಾರ್: ಡಿಸೆಂಬರ್ 18, 2009
ಅವತಾರ್ 2: ಡಿಸೆಂಬರ್ 16, 2022
ಅವತಾರ್ 3: ಡಿಸೆಂಬರ್ 19, 2025
ಅವತಾರ್ 4: ಡಿಸೆಂಬರ್ 21, 2029
ಅವತಾರ್ 5: ಡಿಸೆಂಬರ್ 19, 2031
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:39 am, Thu, 15 June 23