ತ್ರೇತಾಯುಗದಲ್ಲಿ ಕನ್ನಡಕ; ‘ರಾಮಾಯಣ’ ಪೋಸ್ಟರ್ ನೋಡಿ ನೆಟ್ಟಿಗರ ಟ್ರೋಲ್
'ಮಹಾಕಾವ್ಯ ಶ್ರೀ ರಾಮಾಯಣ ಕಥಾ' ಸಿನಿಮಾದ ಪೋಸ್ಟರ್ ಒಂದರಲ್ಲಿ ವಾನರ ಸೈನಿಕನೊಬ್ಬ ಆಧುನಿಕ ಕಣ್ಣಿನ ಕನ್ನಡಕ ಧರಿಸಿರುವುದು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಟ್ರೋಲ್‌ಗೆ ಗುರಿಯಾಗಿದೆ. ತ್ರೇತಾಯುಗದ ಕಥಾಹಂದರ ಹೊಂದಿರುವ ಈ ಚಿತ್ರದ ಕಳಪೆ ವಿಎಫ್‌ಎಕ್ಸ್ ಹಾಗೂ ಇಂತಹ ಎಡವಟ್ಟುಗಳನ್ನು ನೆಟ್ಟಿಗರು ಟೈಮ್ ಟ್ರಾವೆಲ್ ಎಂದು ಲೇವಡಿ ಮಾಡುತ್ತಿದ್ದಾರೆ.

ರಾಮಾಯಣ ಹಾಗೂ ಮಹಾಭಾರತ ಭಾರತೀಯರ ಪಾಲಿಗೆ ಎಂದಿಗೂ ವಿಶೇಷ. ಈಗಾಗಲೇ ಹತ್ತಾರು ಸಿನಿಮಾ, ಧಾರಾವಾಹಿಗಳ ರೂಪದಲ್ಲಿ ರಾಮಾಯಣ-ಮಹಾಭಾರತ ಬಂದಿದೆ. ಇದೀಗ ನಿತೀಶ್ ತಿವಾರಿ ನಿರ್ದೇಶನದ ‘ರಾಮಾಯಣ’ ಸಿನಿಮಾ ರಿಲೀಸ್‌ಗೆ ಸಜ್ಜಾಗುತ್ತಿದ್ದರೆ, ಇನ್ನೊಂದೆಡೆ ‘ಮಹಾಕಾವ್ಯ ಶ್ರೀ ರಾಮಾಯಣ ಕಥಾ’ ಎಂಬ ಮತ್ತೊಂದು ಚಿತ್ರ ಚಿತ್ರಮಂದಿರಗಳಿಗೆ ಲಗ್ಗೆ ಇಟ್ಟಿದೆ. ಆದರೆ, ಈ ಸಿನಿಮಾ ತನ್ನ ಕಥೆಗಿಂತಲೂ ಹೆಚ್ಚಾಗಿ ಕಳಪೆ ವಿಎಫ್‌ಎಕ್ಸ್, ಪಾತ್ರವರ್ಗ ಹಾಗೂ ಎಡವಟ್ಟುಗಳ ಕಾರಣಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಸಕತ್ ಸದ್ದು ಮಾಡುತ್ತಿದೆ.
ಪೋಸ್ಟರ್‌ನಲ್ಲಿ ಕನ್ನಡಕ ಧರಿಸಿದ ವಾನರ
ಸೆಪ್ಟೆಂಬರ್ 25ರಂದು ‘ಮಹಾಕಾವ್ಯ ಶ್ರೀ ರಾಮಾಯಣ ಕಥಾ’ ತೆರೆಗೆ ಬಂದಿದೆ. ಇತ್ತೀಚೆಗೆ ರಿಲೀಸ್ ಆದ ಈ ಚಿತ್ರದ ಪೋಸ್ಟರ್ ಒಂದನ್ನು ನೋಡಿ ನೆಟ್ಟಿಗರು ಅಚ್ಚರಿಗೊಂಡಿದ್ದಾರೆ. ಸುಗ್ರೀವನ ಪಾತ್ರವಿರುವ ಪೋಸ್ಟರ್‌ನಲ್ಲಿ, ಮಾನವ ರೂಪದಲ್ಲಿರುವ ವಾನರ ಸೈನಿಕನೊಬ್ಬ ಕಣ್ಣಿಗೆ ಕನ್ನಡಕ ಧರಿಸಿರುವುದು ಸ್ಪಷ್ಟವಾಗಿ ಕಾಣಿಸುತ್ತಿದೆ. ತ್ರೇತಾಯುಗದಲ್ಲೂ ಸ್ಪೆಕ್ಸ್ ಇತ್ತಾ ಎಂದು ಸೋಶಿಯಲ್ ಮೀಡಿಯಾದಲ್ಲಿ ಜನ ಎದ್ನೋ ಬಿದ್ನೋ ಅಂತ ಟ್ರೋಲ್ ಮಾಡುತ್ತಿದ್ದಾರೆ.
‘ತ್ರೇತಾಯುಗದಲ್ಲೂ ಕಣ್ಣಿಗೆ ಕನ್ನಡಕ ಹಾಕ್ತಿದ್ರಾ? ಇವನ್ಯಾರೋ ಟೈಮ್ ಟ್ರಾವೆಲರ್ ಇರಬೇಕು. ವಾನರ ಸೇನೆಗೆಲ್ಲಾ ಕನ್ನಡಕ ಹಾಕಿ ಎಂಥಾ ಸಿನಿಮಾ ಮಾಡಿದ್ದೀರಪ್ಪ’ ಎಂದೆಲ್ಲಾ ನೆಟ್ಟಿಗರು ಕಾಲೆಳೆಯುತ್ತಿದ್ದಾರೆ.
Treta yug me bhi chashma lagate the 😭 pic.twitter.com/vWsX0L9QJA
— dk (@thefilmyyguyy) September 24, 2026
ಏನಿದು ‘ಮಹಾಕಾವ್ಯ ಶ್ರೀ ರಾಮಾಯಣ ಕಥಾ’?
ಈ ಚಿತ್ರದ ಕಥೆ ಕೊಂಚ ಭಿನ್ನವಾಗಿದೆ. ಶಾಶ್ವತ್ ಎಂಬ ಸಣ್ಣ ಮಗುವಿಗೆ ಹನುಮಂತನು ಮುನಿಯ ರೂಪದಲ್ಲಿ ಬಂದು ಶ್ರೀರಾಮನ ಇಡೀ ಜೀವನ ಮತ್ತು ಪ್ರಯಾಣದ ಕಥೆಯನ್ನು ವಿವರಿಸುವ ರೀತಿಯಲ್ಲಿ ಸಿನಿಮಾವನ್ನು ನಿರ್ಮಿಸಲಾಗಿದೆ. ಇಂದಿನ ಯುವ ಪೀಳಿಗೆಗೆ ರಾಮಾಯಣದ ಭಕ್ತಿ ಮತ್ತು ಸಾಂಸ್ಕೃತಿಕ ಮಹತ್ವವನ್ನು ತಲುಪಿಸುವುದು ಚಿತ್ರತಂಡದ ಉದ್ದೇಶ. ಚಿತ್ರದಲ್ಲಿ ದೇವ್ ಶರ್ಮಾ (ಶ್ರೀರಾಮ), ಅಂಜಲಿ ಅರೋರಾ (ಸೀತೆ), ಶೀಲ್ ವರ್ಮಾ (ಲಕ್ಷ್ಮಣ), ನಿರ್ಭಯ್ ವಾಧ್ವಾ (ಹನುಮಂತ) ಹಾಗೂ ರಜನೀಶ್ ದುಗ್ಗಲ್ (ರಾವಣ) ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಎತ್ತರವೇ ಮುಳುವಾಯ್ತು
ಚಿತ್ರದ ಟ್ರೇಲರ್ ಲಾಂಚ್ ವೇಳೆ ಮಾತನಾಡಿದ ನಾಯಕ ನಟ ದೇವ್ ಶರ್ಮಾ, ತಮಗೆ ಈ ಹಿಂದೆ ಪ್ರಭಾಸ್ ಅಭಿನಯದ ‘ಆದಿಪುರುಷ್’ ಹಾಗೂ ರಣಬೀರ್ ಕಪೂರ್ ಅಭಿನಯದ ‘ರಾಮಾಯಣ’ ಸಿನಿಮಾಗಳಲ್ಲೂ ಲಕ್ಷ್ಮಣನ ಪಾತ್ರಕ್ಕೆ ಆಫರ್ ಬಂದಿತ್ತೆಂದು ಬಹಿರಂಗಪಡಿಸಿದ್ದಾರೆ.
ಇದನ್ನೂ ಓದಿ: ‘ರಾಮಾಯಣ’ಕ್ಕೂ ಮೊದಲು ಮಹಾಕಾವ್ಯ ಶ್ರೀ ರಾಮಾಯಣ ಕಥಾ ಟ್ರೇಲರ್ ಬಿಡುಗಡೆ
‘ಎರಡೂ ದೊಡ್ಡ ಸಿನಿಮಾಗಳಲ್ಲಿ ಲುಕ್ ಟೆಸ್ಟ್ ಮುಗಿದು ಫೈನಲ್ ಹಂತಕ್ಕೆ ಬಂದಿತ್ತು. ಆದರೆ ‘ರಾಮಾಯಣ’ದಲ್ಲಿ ಶ್ರೀರಾಮನ ಪಾತ್ರ ಮಾಡುತ್ತಿರುವ ರಣಬೀರ್ ಕಪೂರ್‌ಗಿಂತ ನಾನು 2 ಇಂಚು ಹೆಚ್ಚು ಎತ್ತರವಾಗಿದ್ದೆ. ಇತ್ತ ‘ಆದಿಪುರುಷ್’ ಚಿತ್ರದಲ್ಲೂ ಪ್ರಭಾಸ್‌ಗೆ ಸರಿಸಮನಾಗಿ ಆಳುದ್ದ ಇದ್ದೆ. ಹಾಗಾಗಿ ನಾಯಕ ನಟನಿಗಿಂತ ಎತ್ತರ ಕಾಣಿಸುತ್ತೇನೆಂಬ ಕಾರಣಕ್ಕೆ ನನ್ನನ್ನು ರಿಜೆಕ್ಟ್ ಮಾಡಿದರು. ರಾಮಾಯಣಕ್ಕೂ ನನಗೂ ಅದೃಷ್ಟವೇ ಇಲ್ಲವೇನೋ ಎಂದು ಬೇಸರವಾಗಿತ್ತು’ ಎಂದು ದೇವ್ ಶರ್ಮಾ ಹೇಳಿಕೊಂಡಿದ್ದರು. ಈಗ ಅವರಿಗೆ ರಾಮನ ಪಾತ್ರ ಮಾಡುವ ಅವಕಾಶವೇ ಸಿಕ್ಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




