ಹಲವು ಆತಂಕಗಳ ನಡುವೆಯೇ ಬಾಕ್ಸಾಫೀಸ್ನಲ್ಲಿ ಭರಪೂರ ಬೆಳೆ ತೆಗೆದ ‘ಬಂಗಾರ್ರಾಜು’; ಕಲೆಕ್ಷನ್ ಎಷ್ಟು ಗೊತ್ತಾ?
Nagarjuna | Naga Chaitanya: ನಾಗಾರ್ಜುನ ಹಾಗೂ ನಾಗ ಚೈತನ್ಯ ನಟಿಸಿರುವ ‘ಬಂಗಾರ್ರಾಜು’ ಚಿತ್ರ ಜನವರಿ 14ರಂದು ತೆರೆಕಂಡಿತ್ತು. ಇದೀಗ ನಾಗಾರ್ಜುನ ಅವರ ವೃತ್ತಿ ಜೀವನದಲ್ಲಿಯೇ ಅತ್ಯಂತ ಹೆಚ್ಚು ಗಳಿಸಿದ ಚಿತ್ರ ಎಂಬ ದಾಖಲೆಯನ್ನು ‘ಬಂಗಾರ್ರಾಜು’ ಬರೆದಿದೆ. ಚಿತ್ರದ ಕಲೆಕ್ಷನ್ ರಿಪೋರ್ಟ್ ಇಲ್ಲಿದೆ.
Bangarraju Box Office Collection | ‘ಬಂಗಾರ್ರಾಜು’ (Bangarraju) ಚಿತ್ರ ರಿಲೀಸ್ಗೂ ಮುನ್ನವೇ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದ್ದ ಚಿತ್ರ. ಆದರೆ ನಾಯಕ ನಟ ನಾಗಾರ್ಜುನ (Nagarjuna) ಈ ಚಿತ್ರವನ್ನು ಕೊರೊನಾ ನಡುವೆಯೂ ಸಂಕ್ರಾಂತಿಯ ಸಂಭ್ರಮದಲ್ಲಿ ರಿಲೀಸ್ ಮಾಡುವುದಾಗಿ ತಿಳಿಸಿದ್ದರು. ಬಿಗ್ ಬಜೆಟ್ ಹಾಗೂ ಸ್ಟಾರ್ ನಟರ ಚಿತ್ರಗಳೆಲ್ಲವೂ ರಿಲೀಸ್ನಿಂದ ಹಿಂದೆ ಸರಿಯುತ್ತಿದ್ದ ವೇಳೆ ಅವರ ನಿರ್ಧಾರ ಹಲವರಿಗೆ ಅಚ್ಚರಿ ಮೂಡಿಸಿತ್ತು. ಆದರೆ ಬಾಕ್ಸಾಫೀಸ್ನಲ್ಲೂ ಭರಪೂರ ಬೆಳೆ ತೆಗೆಯುವ ಮೂಲಕ ಎಲ್ಲಾ ಅಡ್ಡಿ ಆತಂಕಗಳನ್ನು ಮೀರಿ ಚಿತ್ರ ಯಶಸ್ವಿಯಾಗಿದೆ ಎಂಬುದು ಸಾಬೀತಾಗಿದೆ. ಬಂಗಾರ್ರಾಜು ಚಿತ್ರದಲ್ಲಿ ‘ಮನಂ’ ಚಿತ್ರದ ನಂತರ ನಾಗಾರ್ಜುನ ತಮ್ಮ ಪುತ್ರ ನಾಗ ಚೈತನ್ಯ ಅವರೊಂದಿಗೆ ಜತೆಯಾಗಿ ನಟಿಸಿದ್ದರು. ಈ ಕಾರಣದಿಂದಲೂ ಚಿತ್ರ ಕುತೂಹಲ ಸೃಷ್ಟಿಸಿತ್ತು. ಇದೀಗ ನಾಗಾರ್ಜುನ ಅವರ ವೃತ್ತಿ ಜೀವನದಲ್ಲಿಯೇ ಉತ್ತಮವಾಗಿ ಗಳಿಸಿರುವ ಚಿತ್ರ ಎಂಬ ಖ್ಯಾತಿ ಪಡೆದಿರುವ ‘ಬಂಗಾರ್ರಾಜು’ವಿನ ಕಲೆಕ್ಷನ್ ರಿಪೋರ್ಟ್ ಇಲ್ಲಿದೆ.
ಬಂಗಾರ್ರಾಜು ಗಳಿಸಿದ್ದೆಷ್ಟು?
ಕಲ್ಯಾಣ್ ಕೃಷ್ಣ ಕುರಸಲ ನಿರ್ದೇಶನದ ‘ಬಂಗಾರ್ರಾಜು’ ವಿಶಿಷ್ಟ ಕಥಾಹಂದರ ಹೊಂದಿದೆ. ಇದು ಪಕ್ಕಾ ಸಂಕ್ರಾಂತಿ ಸಂದರ್ಭದಲ್ಲಿ ತೆರೆಕಾಣಬೇಕಿರುವ ಚಿತ್ರ ಎಂದಿದ್ದ ನಾಗಾರ್ಜುನ ಅವರ ಮಾತು ನಿಜವಾಗಿದೆ. ಕಾರಣ, ಟಾಲಿವುಡ್ ಪ್ರೇಕ್ಷಕರು ಚಿತ್ರವನ್ನು ಸಂಭ್ರಮದಿಂದ ಸ್ವಾಗತಿಸಿದ್ದಾರೆ. ಇದರ ಪರಿಣಾಮವಾಗಿ ತೆರೆಕಂಡ ಮೂರು ವಾರಗಳ ಒಳಗೆ ‘ಬಂಗಾರ್ರಾಜು’ ಬರೋಬ್ಬರಿ ₹ 76 ಕೋಟಿ ಮೊತ್ತವನ್ನು ಬಾಚಿಕೊಂಡಿದೆ.
ನಾಗಾರ್ಜುನ ನಟನೆಯ ಚಿತ್ರವನ್ನು ಇಷ್ಟೊಂದು ಗಳಿಸಿರುವ ಇದೇ ಮೊದಲು. ಇದಕ್ಕೂ ಮುನ್ನ ನಾಗ ಚೈತನ್ಯ ಹಾಗೂ ನಾಗಾರ್ಜುನ, ಸಮಂತಾ ಮೊದಲಾದವರು ಜತೆಯಾಗಿ ನಟಿಸಿದ್ದ ‘ಮನಂ’ ಕೂಡ ಎಲ್ಲರ ಮನಗೆದ್ದಿತ್ತು. ಇದೀಗ ಅದರ ದಾಖಲೆಯನ್ನು ಈ ಚಿತ್ರ ಮೀರಿಸಿದೆ. ಅಚ್ಚರಿಯೆಂದರೆ ಈ ವಾರವೂ ಚಿತ್ರ ಉತ್ತಮವಾಗಿ ಗಳಿಕೆ ಮಾಡುತ್ತಿದೆ. ಆದ್ದರಿಂದ ಚಿತ್ರದ ಕಲೆಕ್ಷನ್ ಮತ್ತಷ್ಟು ಏರುವುದರಲ್ಲಿ ಯಾವುದೇ ಅನುಮಾನವಿಲ್ಲ.
ಕತೆಯನ್ನಲ್ಲ, ಪ್ರೇಕ್ಷಕರನ್ನು ನಂಬಿದ್ದೆ ಎಂದು ಹೇಳಿದ್ದ ನಾಗಾರ್ಜುನ:
ಇತ್ತೀಚೆಗೆ ಗೆಲುವಿನ ಸಂಭ್ರಮದಲ್ಲಿ ‘ಬಂಗಾರ್ರಾಜು’ ಚಿತ್ರತಂಡ ರಾಜಮಂಡ್ರಿಯಲ್ಲಿ ಸಕ್ಸಸ್ ಮೀಟ್ ಹಮ್ಮಿಕೊಂಡಿತ್ತು. ಅದರಲ್ಲಿ ಮಾತನಾಡಿದ್ದ ನಾಗಾರ್ಜುನ ಚಿತ್ರದ ಯಶಸ್ಸಿಗೆ ಏನು ಕಾರಣ ಎನ್ನುವುದನ್ನು ವಿವರಿಸಿದ್ದರು. ‘‘ಕೊರೊನಾ ಸಂದರ್ಭದಲ್ಲಿ ಚಿತ್ರರಂಗ ಕಷ್ಟದಲ್ಲಿತ್ತು. ಉತ್ತರ ಭಾರತದಲ್ಲಂತೂ ಚಿತ್ರಮಂದಿರಗಳು ಮುಚ್ಚಿದ್ದವು. ಹಲವೆಡೆ ಅರ್ಧ ಪ್ರತಿಶತ ಸಾಮರ್ಥ್ಯದೊಂದಿಗೆ ಚಿತ್ರಮಂದಿರ ನಡೆಯುತ್ತಿದ್ದವು. ಅದಾಗ್ಯೂ ‘ಬಂಗಾರ್ರಾಜು’ ಚಿತ್ರವನ್ನು ರಿಲೀಸ್ ಮಾಡಲು ಕಾರಣ, ಅದರ ಕತೆ ಬಹಳ ಚೆನ್ನಾಗಿದೆ ಎಂದು ಹಲವರು ನಂಬಿದ್ದರು’’
‘‘ಆದರೆ ವಾಸ್ತವವಾಗಿ ನಾನು ನಂಬಿದ್ದು ಕತೆಯನ್ನಲ್ಲ, ತೆಲುಗು ಪ್ರೇಕ್ಷಕರನ್ನು. ಸಂಕ್ರಾಂತಿ ಸಂದರ್ಭದಲ್ಲಿ ತೆಲುಗು ವೀಕ್ಷಕರು ಚಿತ್ರವನ್ನು ಬಯಸುತ್ತಾರೆ’’ ಎಂದು ಹೇಳಿದ್ದರು ನಾಗಾರ್ಜುನ. ಜನವರಿ 14ರಂದು ತೆರೆಕಂಡಿದ್ದ ‘ಬಂಗಾರ್ರಾಜು’ ಚಿತ್ರದಲ್ಲಿ ರಮ್ಯಾ ಕೃಷ್ಣ ಹಾಗೂ ಕೃತಿ ಶೆಟ್ಟಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ.
ಇದನ್ನೂ ಓದಿ:
Samantha: ಸಮಂತಾ ಶರ್ಟ್ ಮೇಲೆ ಎಫ್ ವರ್ಡ್; ಇದು ಯಾರಿಗೆ ಕೊಟ್ಟ ಉತ್ತರ?