ಡಿಸೆಂಬರ್​ನಲ್ಲಿ ಹೊಸ ಸಿನಿಮಾ ಶೂಟಿಂಗ್ ಪ್ರಾರಂಭಿಸಲಿರುವ ಪ್ರಭಾಸ್

Prabhas: ಪ್ರಭಾಸ್ ಪ್ರಸ್ತುತ ಎರಡು ಸಿನಿಮಾಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಇದರ ಜೊತೆಗೆ ಮುಂದಿನ ತಿಂಗಳು ಡಿಸೆಂಬರ್​ನಲ್ಲಿ ಹೊಸ ಸಿನಿಮಾ ಒಂದನ್ನು ಪ್ರಾರಂಭ ಮಾಡಲಿದ್ದಾರೆ ನಟ ಪ್ರಭಾಸ್.

ಡಿಸೆಂಬರ್​ನಲ್ಲಿ ಹೊಸ ಸಿನಿಮಾ ಶೂಟಿಂಗ್ ಪ್ರಾರಂಭಿಸಲಿರುವ ಪ್ರಭಾಸ್
Follow us
ಮಂಜುನಾಥ ಸಿ.
|

Updated on: Nov 14, 2024 | 10:48 AM

ಪ್ಯಾನ್ ಇಂಡಿಯಾ ಸೂಪರ್ ಸ್ಟಾರ್ ಪ್ರಭಾಸ್ ಕೈಯಲ್ಲಿ ಈಗ ಸಾಕಷ್ಟು ಸಿನಿಮಾಗಳಿವೆ. ಬಾಹುಬಲಿಗೆ ಮುಂಚೆ ಪ್ರಭಾಸ್​ ಅವರದ್ದು ಒಂದು ನಿಯಮವಿತ್ತು, ಒಂದು ವರ್ಷಕ್ಕೆ ಒಂದೇ ಸಿನಿಮಾ ಎಂದು. ಅವರ ಫಿಲ್ಮೋಗ್ರಫಿ ನೋಡಿದರೆ ಇದು ಗೊತ್ತಾಗುತ್ತದೆ. ಸಿನಿಮಾ ಬಿಡುಗಡೆಗೆ ಮಾತ್ರವಲ್ಲ, ಸಿನಿಮಾದಲ್ಲಿ ನಟಿಸಲು ಸಹ ಇದೇ ನಿಯಮ ಪಾಲಿಸುತ್ತಿದ್ದರು, ಒಂದು ವರ್ಷಕ್ಕೆ ಒಂದೇ ಸಿನಿಮಾದಲ್ಲಿ ಪ್ರಭಾಸ್ ನಟಿಸುತ್ತಿದ್ದರು. ಆದರೆ ಈಗ ಬೇಡಿಕೆ ಹೆಚ್ಚಾದಂತೆ ಆ ನಿಯಮ ಮುರಿದಿರುವ ಪ್ರಭಾಸ್, ವರ್ಷಕ್ಕೆ ಎರಡು-ಮೂರು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಕಳೆದ ವರ್ಷ ಪ್ರಭಾಸ್ ನಟನೆಯ ಎರಡು ಸಿನಿಮಾಗಳು ಬಿಡುಗಡೆ ಆಗಿವೆ. ಮುಂದಿನ ವರ್ಷ ಮೂರು ಸಿನಿಮಾಗಳು ಬಿಡುಗಡೆ ಆಗಲಿವೆ. ಇದೀಗ ಡಿಸೆಂಬರ್​ನಲ್ಲಿ ಹೊಸದೊಂದು ಸಿನಿಮಾ ಪ್ರಾರಂಭಿಸುತ್ತಿದ್ದಾರೆ ಪ್ರಭಾಸ್.

ಪ್ರಭಾಸ್ ಪ್ರಸ್ತುತ ‘ರಾಜಾ ಸಾಬ್’ ಸಿನಿಮಾದ ಶೂಟಿಂಗ್ ಬಹುತೇಕ ಮುಗಿಸಿದ್ದಾರೆ. ಅದರ ಪೋಸ್ಟ್ ಪ್ರೊಡಕ್ಷನ್ ಕಾರ್ಯ ಚಾಲ್ತಿಯಲ್ಲಿದೆ. ‘ಸೀತಾ ರಾಮಂ’ ಸಿನಿಮಾ ಖ್ಯಾತಿಯ ರಘು ಹನುಪುಡಿ ನಿರ್ದೇಶನದ ಹೊಸ ಸಿನಿಮಾದ ಮುಹೂರ್ತ ಕಳೆದ ತಿಂಗಳು ನಡೆದಿದ್ದು, ಚಿತ್ರೀಕರಣ ಸಹ ಪ್ರಾರಂಭವಾಗಿದೆ. ಆ ಸಿನಿಮಾದ ಚಿತ್ರೀಕರಣ ಮುಗಿಯುವ ಮುನ್ನವೇ ಪ್ರಭಾಸ್, ಮತ್ತೊಂದು ಹೊಸ ಸಿನಿಮಾ ಪ್ರಾರಂಭ ಮಾಡುತ್ತಿದ್ದಾರೆ.

‘ಅರ್ಜುನ್ ರೆಡ್ಡಿ’, ‘ಅನಿಮಲ್’ ಸಿನಿಮಾ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ನಿರ್ದೇಶನ ಮಾಡಲಿರುವ ‘ಸ್ಪಿರಿಟ್’ ಸಿನಿಮಾದಲ್ಲಿ ಪ್ರಭಾಸ್ ನಟಿಸಲಿದ್ದು, ಈ ಸಿನಿಮಾದ ಚಿತ್ರೀಕರಣ ಡಿಸೆಂಬರ್​ ತಿಂಗಳಲ್ಲಿ ಪ್ರಾರಂಭ ಆಗಲಿದೆ. ಈ ಮಾಹಿತಿಯನ್ನು ಸಿನಿಮಾದ ನಿರ್ಮಾಪಕ ಭೂಷಣ್ ಕುಮಾರ್ ಖಚಿತಪಡಿಸಿದ್ದಾರೆ. ಡಿಸೆಂಬರ್ ತಿಂಗಳಲ್ಲಿ ಮುಹೂರ್ತದ ಶಾಟ್ ತೆಗೆಯಲಿದ್ದೇವೆ, ಆ ನಂತರ ತುಸು ಸಮಯ ತೆಗೆದುಕೊಂಡು ಚಿತ್ರೀಕರಣ ಪ್ರಾರಂಭಿಸಲಿದ್ದೇವೆ ಎಂದಿದ್ದಾರೆ. ಸಿನಿಮಾ 2026ಕ್ಕೆ ಬಿಡುಗಡೆ ಆಗಲಿದೆಯಂತೆ.

ಇದನ್ನೂ ಓದಿ:ಪ್ರಭಾಸ್ ಜೊತೆ ಮೂರು ವರ್ಷಕ್ಕೆ ಮೂರು ಸಿನಿಮಾ, ಹೊಂಬಾಳೆ ಘೋಷಣೆ

‘ಸ್ಪಿರಿಟ್’ ಒಬ್ಬ ಪ್ರಾಮಾಣಿಕ ಪೊಲೀಸ್ ಅಧಿಕಾರಿಯ ಕತೆ ಎಂದು ಸಂದೀಪ್ ರೆಡ್ಡಿ ವಂಗಾ ಈ ಹಿಂದೆಯೇ ಹೇಳಿದ್ದರು. ಸಂದೀಪ್ ರೆಡ್ಡಿ ವಂಗಾ, ಅತ್ಯಂತ ವಯಲೆಂಟ್ ಸಿನಿಮಾಗಳನ್ನು ನಿರ್ಮಿಸುವುದರಲ್ಲಿ ಖ್ಯಾತರು, ಅವರ ಸಿನಿಮಾಗಳ ಹೀರೋ, ವಿಲನ್​ಗಿಂತಲೂ ಕೆಟ್ಟ ವ್ಯಕ್ತಿತ್ವ ಹೊಂದಿರುತ್ತಾನೆ. ಆದರೆ ಪ್ರಭಾಸ್, ತನ್ನ ವೃತ್ತಿ ಜೀವನದಲ್ಲಿ ಆದರ್ಶ ನಾಯಕನ ಪಾತ್ರಗಳನ್ನೇ ಮಾಡಿಕೊಂಡು ಬಂದಿದ್ದಾರೆ. ಅವರು ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ಕತೆಯನ್ನು ಹೇಗೆ ಒಪ್ಪಿಕೊಂಡರು, ಅಥವಾ ಪ್ರಭಾಸ್​ಗಾಗಿ ಸಂದೀಪ್ ಕತೆಯನ್ನು ಬದಲಾಯಿಸಿದ್ದಾರಾ ಎಂಬುದು ನೋಡಬೇಕಿದೆ.

ಪ್ರಭಾಸ್ ಪ್ರಸ್ತುತ ಬರೋಬ್ಬರಿ ಐದು ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದಾರೆ. ‘ರಾಜಾ ಸಾಬ್’, ಅದಾದ ಬಳಿಕ ರಘು ಹನುಪಡಿಯ ಸಿನಿಮಾ, ಅದರ ಬಳಿಕ ‘ಸ್ಪಿರಿಟ್’ ಸಿನಿಮಾ, ಅದಾದ ಬಳಿಕ ‘ಸಲಾರ್ 2’ ಹಾಗೂ ಅದರ ಹಿಂದೆಯೇ ಹೊಂಬಾಳೆ ನಿರ್ಮಾಣದ ಇನ್ನೊಂದು ಸಿನಿಮಾದಲ್ಲಿ ತೊಡಗಿಕೊಳ್ಳಲಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ