ಮುಗಿಯಿತು ‘ಪ್ರೇಮಂ’ ನಿರ್ದೇಶಕನ ಸಿನಿಮಾ ಜರ್ನಿ; ಅನಾರೋಗ್ಯದ ಕಾರಣಕ್ಕೆ ಶಾಕಿಂಗ್ ನಿರ್ಧಾರ
‘ಪ್ರೇಮಂ’ ಸಿನಿಮಾದಿಂದ ನಿರ್ದೇಶಕ ಅಲ್ಫಾನ್ಸ್ ಪುತ್ರನ್ ಅವರು ಸಾಕಷ್ಟು ಜನಪ್ರಿಯತೆ ಪಡೆದರು. ಹಲವರ ಮೆಚ್ಚಿನ ನಿರ್ದೇಶಕರಾಗಿ ಹೊರಹೊಮ್ಮಿದರು. ಆದರೆ ಅವರು ಈಗ ಸಿನಿಮಾ ನಿರ್ದೇಶನದಿಂದ ನಿವೃತ್ತಿ ಹೊಂದಲು ತೀರ್ಮಾನಿಸಿರುವುದು ಅಭಿಮಾನಿಗಳಿಗೆ ಬೇಸರ ಮೂಡಿಸಿದೆ. ಅಲ್ಲದೇ ಅವರ ಆರೋಗ್ಯದ ಬಗ್ಗೆ ಚಿಂತೆ ಶುರುವಾಗಿದೆ.

ಪ್ರತಿಭಾವಂತ ನಿರ್ದೇಶಕರ ಹೊಸ ಸಿನಿಮಾಗಳು ಬೇಗ ಬೇಗ ರಿಲೀಸ್ ಆಗಲಿ ಎಂದು ಫ್ಯಾನ್ಸ್ ಬಯಸುತ್ತಾರೆ. ಕಾರಣಾಂತರಗಳಿಂದ ಕೆಲವು ಸಿನಿಮಾಗಳು ತಡವಾಗುತ್ತವೆ. ಮಲಯಾಳಂ (Mollywood) ಚಿತ್ರರಂಗದ ಖ್ಯಾತ ನಿರ್ದೇಶಕ ಅಲ್ಫಾನ್ಸ್ ಪುತ್ರನ್ (Alphonse Puthren) ಅವರು ಬಹಳ ತಡವಾಗಿ ಸಿನಿಮಾದ ಕೆಲಸಗಳನ್ನು ಮುಗಿಸುತ್ತಾರೆ ಎಂಬ ಆರೋಪ ಮೊದಲಿನಿಂದಲೂ ಇದೆ. ‘ಪ್ರೇಮಂ’ (Premam) ರೀತಿಯ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ ಅವರು ಈಗ ಒಂದು ಶಾಕಿಂಗ್ ನಿರ್ಧಾರಕ್ಕೆ ಬಂದಿದ್ದಾರೆ. ಇನ್ಮುಂದೆ ತಾವು ಸಿನಿಮಾವನ್ನೇ ಮಾಡುವುದಿಲ್ಲ ಎಂದು ಅವರು ಹೇಳಿದ್ದಾರೆ. ಈ ಸುದ್ದಿ ಕೇಳಿ ಅವರ ಅಭಿಮಾನಿಗಳಿಗೆ ಶಾಕ್ ಆಗಿದೆ. ಅವರ ಈ ನಿರ್ಧಾರಕ್ಕೆ ಕಾರಣ ಆಗಿರುವುದು ಅನಾರೋಗ್ಯ!
ಸೋಶಿಯಲ್ ಮೀಡಿಯಾ ಮೂಲಕ ಅಲ್ಫಾನ್ಸ್ ಪುತ್ರನ್ ಅವರು ಈ ವಿಚಾರ ತಿಳಿಸಿದ್ದಾರೆ. ‘ನಾನು ನನ್ನ ಸಿನಿಮ್ಯಾಟಿಕ್ ವೃತ್ತಿ ಜೀವನವನ್ನು ನಿಲ್ಲಿಸುತ್ತೇನೆ. ನನಗೆ ಆಟಿಸಂ ಸಮಸ್ಯೆ ಇದೆ ಎಂಬುದು ನಿನ್ನೆ ಗೊತ್ತಾಯಿತು. ಯಾರಿಗೂ ನಾನು ಭಾರವಾಗಲು ಬಯಸುವುದಿಲ್ಲ. ನಾನು ಒಟಿಟಿಯಲ್ಲಿ ಹೆಚ್ಚಾಗಿ ಹಾಡುಗಳು, ವಿಡಿಯೋಗಳು ಮತ್ತು ಕಿರುಚಿತ್ರ ಮಾಡುತ್ತೇನೆ. ಸಿನಿಮಾ ಕ್ಷೇತ್ರವನ್ನು ತೊರೆಯಲು ನನಗೆ ಇಷ್ಟವಿಲ್ಲ. ಆದರೆ ನನಗೆ ಬೇರೆ ದಾರಿ ಇಲ್ಲ. ಈಡೇರಿಸಲು ಸಾಧ್ಯವಿಲ್ಲದ ಭರವಸೆಗಳನ್ನು ನೀಡಲು ನಾನು ಬಯಸುವುದಿಲ್ಲ. ಆರೋಗ್ಯ ದುರ್ಬಲವಾಗಿದ್ದಾಗ ಬದುಕು ಇಂಟರವಲ್ ಪಂಚ್ ರೀತಿಯ ಟ್ವಿಸ್ಟ್ ನೀಡುತ್ತದೆ’ ಎಂದು ಅಲ್ಫಾನ್ಸ್ ಪುತ್ರನ್ ಹೇಳಿದ್ದಾರೆ.
ಇದನ್ನೂ ಓದಿ: ಆಟಿಸಂ ಮಕ್ಕಳ ವಿಶೇಷ ಶಾಲೆಯಲ್ಲಿ ವಿದ್ಯಾರ್ಥಿಗಳ ದಾಖಲಾತಿ ಹೆಚ್ಚಳ
‘ಪ್ರೇಮಂ’ ಸಿನಿಮಾ 2015ರಲ್ಲಿ ಬಿಡುಗಡೆ ಆಗಿತ್ತು. ಆ ಸಿನಿಮಾದಿಂದ ನಿರ್ದೇಶಕ ಅಲ್ಫಾನ್ಸ್ ಪುತ್ರನ್ ಅವರು ಸಾಕಷ್ಟು ಜನಪ್ರಿಯತೆ ಪಡೆದರು. ಹಲವರ ಮೆಚ್ಚಿನ ನಿರ್ದೇಶಕರಾಗಿ ಹೊರಹೊಮ್ಮಿದರು. ಆದರೆ ಅವರು ಈಗ ಸಿನಿಮಾ ನಿರ್ದೇಶನದಿಂದ ನಿವೃತ್ತಿಹೊಂದಲು ತೀರ್ಮಾನಿಸಿರುವುದು ಅಭಿಮಾನಿಗಳಿಗೆ ಬೇಸರ ಮೂಡಿಸಿದೆ. ಅಲ್ಲದೇ ಅವರ ಆರೋಗ್ಯದ ಬಗ್ಗೆ ಚಿಂತೆ ಶುರುವಾಗಿದೆ.
ಇದನ್ನೂ ಓದಿ: ಮೊದಲ ಸಲ ಕೆಫೆಯಲ್ಲಿ ಆರ್ಡರ್ ಮಾಡಿದ ಆಟಿಸಂ ಬಾಲಕ, ತಾಯಿಯ ಖುಷಿಗೆ ಪಾರವೇ ಇಲ್ಲ
ಈ ಪೋಸ್ಟ್ ಮಾಡಿದ ಬಳಿಕ ನೆಟ್ಟಿಗರು ಹಲವು ರೀತಿಯಲ್ಲಿ ಕಮೆಂಟ್ ಮಾಡಿದ್ದಾರೆ. ‘ದಯವಿಟ್ಟು ನೀವು ಸೂಕ್ತ ಚಿಕಿತ್ಸೆ ಪಡೆಯಿರಿ. ನಿಮ್ಮಲ್ಲಿ ಸಾಮರ್ಥ್ಯ ಇದೆ. ನೀವು ಸಿನಿಮಾ ನಿರ್ದೇಶನವನ್ನು ಮುಂದುವರಿಸಬಹುದು’ ಎಂದು ಕೆಲವರು ಧೈರ್ಯ ತುಂಬಿದ್ದಾರೆ. ‘ಇಂಟರ್ನೆಟ್ನಲ್ಲಿ ನೋಡಿ ತಿಳಿದಿದ್ದೇ ಅಂತಿಮವಲ್ಲ. ನುರಿತ ವೈದ್ಯರ ಬಳಿ ಸಲಹೆ ಕೇಳಿ. ಒಂದು ವೇಳೆ ನೀವು ನಿರ್ದೇಶನದಿಂದ ದೂರ ಸರಿಯುವುದಾದರೆ ಓಕೆ. ಆ ನಿಮ್ಮ ನಿರ್ಧಾರವನ್ನು ನಾವು ಗೌರವಿಸುತ್ತೇವೆ. ಆದರೆ ನೀವು ನಿರ್ದೇಶನ ಮುಂದುವರಿಸಲಿ ಎಂಬುದು ನಮ್ಮ ಆಸೆ’ ಎಂದು ಅಭಿಮಾನಿಯೊಬ್ಬರು ಕಮೆಂಟ್ ಮಾಡಿದ್ದಾರೆ. ಕೆಲವು ಗಂಟೆಗಳ ಬಳಿಕ ಅಲ್ಫಾನ್ಸ್ ಪುತ್ರನ್ ಅವರು ತಮ್ಮ ಪೋಸ್ಟ್ ಡಿಲೀಟ್ ಮಾಡಿದ್ದಾರೆ. ಹಾಗಾಗಿ ಅನುಮಾನ ಬಲವಾಗಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:18 pm, Mon, 30 October 23




