‘ಪುಷ್ಪ 2’ ಯಾವ ನಗರದಲ್ಲಿ ಟಿಕೆಟ್ ದರ ಎಷ್ಟಿದೆ? ಎಲ್ಲಿ ಹೆಚ್ಚು? ಎಲ್ಲಿ ಕಡಿಮೆ?
Pushpa 2: ಅಲ್ಲು ಅರ್ಜುನ್ ನಟನೆಯ ‘ಪುಷ್ಪ 2’ ಸಿನಿಮಾದ ಅಡ್ವಾನ್ಸ್ ಬುಕಿಂಗ್ ಬಲು ಜೋರಾಗಿ ನಡೆದಿದೆ. ಅಂದಹಾಗೆ ಭಾರತದ ಯಾವ ನಗರದಲ್ಲಿ ‘ಪುಷ್ಪ 2’ ಸಿನಿಮಾದ ಟಿಕೆಟ್ ದರ ಎಷ್ಟಿದೆ? ಯಾವ ನಗರದಲ್ಲಿ ಟಿಕೆಟ್ ದರ ಹೆಚ್ಚು? ಯಾವ ನಗರದಲ್ಲಿ ಕಡಿಮೆ?
ಅಲ್ಲು ಅರ್ಜುನ್ ನಟನೆಯ ‘ಪುಷ್ಪ 2’ ಸಿನಿಮಾ 24 ಗಂಟೆಗಳ ಒಳಗಾಗಿ ಬಿಡುಗಡೆ ಕಾಣಲಿದೆ, ಬೆಂಗಳೂರು ಸೇರಿದಂತೆ ಹಲವು ನಗರಗಳಲ್ಲಿ ಇಂದು ರಾತ್ರಿ 9:30ಕ್ಕೆ ಮೊದಲ ಶೋ ಪ್ರದರ್ಶನಗೊಳ್ಳಲಿದೆ. ಅಮೆರಿಕದಲ್ಲಿಯೂ ಸಹ ಇಂದೇ ಶೋ ಪ್ರದರ್ಶನವಾಗಲಿದೆ. ಸಿನಿಮಾದ ಅಡ್ವಾನ್ಸ್ ಬುಕಿಂಗ್ ಭರ್ಜರಿಯಾಗಿ ನಡೆದಿದ್ದು, ಬಹುತೇಕ ನಗರಗಳಲ್ಲಿ ಮೊದಲ ದಿನದ ಶೋನ ಎಲ್ಲ ಟಿಕೆಟ್ಗಳು ಮುಂಗಡವಾಗಿ ಬುಕ್ ಆಗಿ ಹೋಗಿವೆ. ‘ಪುಷ್ಪ 2’ ಸಿನಿಮಾದ ಟಿಕೆಟ್ ದರಗಳ ಬಗ್ಗೆ ಚರ್ಚೆ ಜೋರಾಗಿ ನಡೆಯುತ್ತಿದೆ. ಈ ಸಿನಿಮಾದ ಟಿಕೆಟ್ ದರಗಳನ್ನು ಹೆಚ್ಚಿಸಲಾಗಿದೆ. ಅಂದಹಾಗೆ ಯಾವ ನಗರದಲ್ಲಿ ‘ಪುಷ್ಪ 2’ ಸಿನಿಮಾದ ಟಿಕೆಟ್ ದರ ಸರಾಸರಿ ಎಷ್ಟಿದೆ? ಯಾವ ನಗರದಲ್ಲಿ ‘ಪುಷ್ಪ 2’ ಸಿನಿಮಾ ನೋಡುವುದು ದುಬಾರಿ ಯಾವ ನಗರದಲ್ಲಿ ಕಡಿಮೆ ಇಲ್ಲಿದೆ ಮಾಹಿತಿ.
ಬೆಂಗಳೂರಿನಲ್ಲಿ ಟಿಕೆಟ್ ದರ ಹೆಚ್ಚಿದೆ. ಮಲ್ಟಿಪ್ಲೆಕ್ಸ್ಗಳಲ್ಲಿ 1000 ದಿಂದ 1200 ರೂಪಾಯಿಗಳಿದೆ. ಕಡಿಮೆ ದರ್ಜೆಯ ಟಿಕೆಟ್ ಬೆಲೆಯೂ ಸಹ 800 ರಿಂದ 9000 ರೂಪಾಯಿ ಇದೆ. ಇನ್ನು ಎಸಿ, ಡಿಜಿಟಲ್ ಚಿತ್ರಮಂದಿರಗಳಲ್ಲಿ ಬಾಲ್ಕನಿ ಟಿಕೆಟ್ ಬೆಲೆ 600 ರಿಂದ 800 ರೂಪಾಯಿ ಇದೆ. ಬಹುತೇಕ ಚಿತ್ರಮಂದಿರಗಳಲ್ಲಿ ಬಾಲ್ಕನಿ ಟಿಕೆಟ್ ಬೆಲೆ 600 ಹಾಗೂ ಕಡಿಮೆ ದರ್ಜೆಯ ಟಿಕೆಟ್ ಬೆಲೆ 500 ಅಥವಾ 450 ಇಡಲಾಗಿದೆ. ಇನ್ನು ಎಲ್ಲೋ ಕೆಲವೇ ಕೆಲವು ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳಲ್ಲಿ 300 ರೂಪಾಯಿಗೆ ಪುಷ್ಪ 2 ಟಿಕೆಟ್ ಮಾರಾಟವಾಗುತ್ತಿದೆ. ಬೆಂಗಳೂರಿನಲ್ಲಿ ‘ಪುಷ್ಪ 2’ ಸಿನಿಮಾದ ಅಂದಾಜು ಸರಾಸರಿ ಟಿಕೆಟ್ ಬೆಲೆ 800 ರಿಂದ 900 ಎನ್ನಬಹುದು.
ಇನ್ನು ತೆಲಂಗಾಣ ಹಾಗೂ ಆಂಧ್ರದಲ್ಲಿ ಟಿಕೆಟ್ ಬೆಲೆ ಬಹುತೇಕ ಒಂದೇ ರೀತಿ ಇದೆ. ಈ ಎರಡು ರಾಜ್ಯಗಳಲ್ಲಿ ಬಿಡುಗಡೆ ಆಗಿರುವ ತೆಲುಗು ಸಿನಿಮಾಗಳಲ್ಲಿಯೇ ಅತಿ ಹೆಚ್ಚು ಟಿಕೆಟ್ ದರ ನಿಗದಿ ಆಗಿರುವ ಸಿನಿಮಾ ಪುಷ್ಪ 2. ಎರಡೂ ರಾಜ್ಯಗಳಲ್ಲಿ ಸರ್ಕಾರಗಳ ಅನುಮತಿ ಪಡೆದು ನಿಗದಿತ ದಿನಗಳ ವರೆಗೆ ಟಿಕೆಟ್ ದರವನ್ನು ಹೆಚ್ಚಳ ಮಾಡಲಾಗಿದೆ. ಹೈದರಾಬಾದ್ನ ಎಲ್ಲ ಮಲ್ಟಿಫ್ಲೆಕ್ಸ್ಗಳಲ್ಲಿ ‘ಪುಷ್ಪ 2’ ಸಿನಿಮಾದ ಗರಿಷ್ಟ ಟಿಕೆಟ್ ದರ 590 ರೂಪಾಯಿಗಳಾಗಿದೆ. ಅದೂ ಬಾಲ್ಕನಿಗೆ. ಕಡಿಮೆ ದರ್ಜೆಯ ಟಿಕೆಟ್ಗೆ 500 ಕೆಲವು ಕಡೆ 450 ಸಹ ಇದೆ. ಆದರೆ ಟಿಕೆಟ್ ಬೆಲೆ 590ಕ್ಕೆ ಹೆಚ್ಚಿಲ್ಲ. ಕೇವಲ ಫ್ಯಾನ್ಸ್ ಶೋ ಅಥವಾ ಬೆನಿಫಿಟ್ ಶೋ ಟಿಕೆಟ್ ಬೆಲೆ ಮಾತ್ರ 800 ರೂಪಾಯಿ ನಿಗದಿ ಪಡಿಸಲಾಗಿದೆ.
ಇದನ್ನೂ ಓದಿ:ಈ ವಾರ ರಿಲೀಸ್ ಆಗಲ್ಲ ‘ಪುಷ್ಪ 2’ 3ಡಿ ವರ್ಷನ್; ಬುಕಿಂಗ್ ಸ್ಥಗಿತ
ಆಂಧ್ರ ಪ್ರದೇಶದಲ್ಲಿ ತೆಲಂಗಾಣಕ್ಕಿಂತಲೂ ಕಡಿಮೆ ಟಿಕೆಟ್ ದರ ಇದೆ. ಆಂಧ್ರದಲ್ಲಿ ‘ಪುಷ್ಪ 2’ ಸಿನಿಮಾದ ಗರಿಷ್ಟ ಟಿಕೆಟ್ ದರ 475 ರೂಪಾಯಿಗಳು ಮಾತ್ರವೇ ಇದೆ. ಅದೂ ಬಾಲ್ಕನಿ ಟಿಕೆಟ್ ಬೆಲೆ. ಮಲ್ಟಿಪ್ಲೆಕ್ಸ್ಗಳಲ್ಲಿಯೂ ಸಹ 475 ಗರಿಷ್ಟ ಬೆಲೆಯಾಗಿದೆ. ಕೆಲವು ಮಲ್ಟಿಪ್ಲೆಕ್ಸ್ಗಳಲ್ಲಿ ಕೇವಲ 350 ರೂಪಾಯಿಗೆ ಬಾಲ್ಕನಿ ಟಿಕೆಟ್ ಲಭ್ಯವಿದೆ. ಇನ್ನು ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳಲ್ಲಿ ಕೆಲವೆಡೆ ಕೇವಲ 100-150 ರೂಪಾಯಿಗೆ ‘ಪುಷ್ಪ 2’ ಸಿನಿಮಾದ ಟಿಕೆಟ್ ಸಿಗುತ್ತಿದೆ. ಆಂಧ್ರದಲ್ಲಿ ಸರಾಸರಿ ಟಿಕೆಟ್ ಬೆಲೆ 300-350 ರೂಪಾಯಿ ಮಾತ್ರವೇ ಇದೆ.
ಇನ್ನು ಮುಂಬೈನಲ್ಲಿ ಟಿಕೆಟ್ ಬೆಲೆ ಗಗನಕ್ಕೆ ಏರಿದೆ. ‘ಪುಷ್ಪ 2’ ಸಿನಿಮಾದ ಟಿಕೆಟ್ಗಳು ಅತಿ ಹೆಚ್ಚು ಬೆಲೆಗೆ ಮಾರಾಟವಾಗುತ್ತಿರುವುದು ಮುಂಬೈನಲ್ಲಿಯೆ. ಆದರೆ ಎಲ್ಲ ಚಿತ್ರಮಂದಿರಗಳಲ್ಲಿ ಅಲ್ಲ. ಕೆಲವು ಏರಿಯಾದ ಮಲ್ಟಿಪ್ಲೆಕ್ಸ್ಗಳಲ್ಲಿ ಟಿಕೆಟ್ಗಳು 800 ರೂಪಾಯಿಗೆ ಮಾರಾಟವಾಗುತ್ತಿವೆ. 3ಡಿ ಇನ್ನಿತರೆ ಶೋಗಳು 1000-1200ಕ್ಕೂ ಮಾರಾಟ ಆಗುತ್ತಿವೆ. ಆದರೆ 250 ರಿಂದ 300 ರೂಪಾಯಿ ಟಿಕೆಟ್ ಬೆಲೆಯ ಶೋಗಳೇ ಮುಂಬೈನಲ್ಲಿ ಹೆಚ್ಚಿವೆ. ಹಾಗಾಗಿ ಮುಂಬೈನಲ್ಲಿಯೂ ಸಹ ‘ಪುಷ್ಪ 2’ ಸಿನಿಮಾವನ್ನು ಕಡಿಮೆ ದರಕ್ಕೆ ನೋಡಬಹುದಾಗಿದೆ. 4ಡಿಎಕ್ಸ್ ಶೋನ ಟಿಕೆಟ್ ಬೆಲೆ ಸಹ 700 ರೂಪಾಯಿಗಿಂತಲೂ ಹೆಚ್ಚಿಲ್ಲ ಮುಂಬೈನಲ್ಲಿ. ಐಮ್ಯಾಕ್ಸ್ 2ಡಿ ಟಿಕೆಟ್ ಸಹ 500-600 ರ ಆಸುಪಾಸಿನಲ್ಲಿದೆ. ಒಂದು ಮಲ್ಟಿಪ್ಲೆಕ್ಸ್ನಲ್ಲಿ ಮಾತ್ರ 1000 ರೂಪಾಯಿಗಿಂತ ಹೆಚ್ಚಿನ ಟಿಕೆಟ್ ಬೆಲೆ ಇದೆ.
ಇದನ್ನೂ ಓದಿ:ಲಂಡನ್ ಬೀದಿಯಲ್ಲಿ ‘ಪುಷ್ಪ 2’ ಹಾಡಿಗೆ ಹೆಜ್ಜೆ ಹಾಕಿದ ಅಲ್ಲು ಅರ್ಜುನ್ ಫ್ಯಾನ್ಸ್
ಚೆನ್ನೈನಲ್ಲಿ ‘ಪುಷ್ಪ 2’ ಸಿನಿಮಾದ ಅಡ್ವಾನ್ಸ್ ಬುಕಿಂಗ್ ಸಾಧಾರಣವಾಗಿದ್ದು, ಇಡೀ ದೇಶದಲ್ಲಿ ಎಲ್ಲಿಯಾದರೂ ಕಡಿಮೆ ದರಕ್ಕೆ ಪುಷ್ಪ 2 ಟಿಕೆಟ್ ಮಾರಾಟ ಆಗುತ್ತಿದೆ ಎಂದರೆ ಅದು ತಮಿಳುನಾಡಿನಲ್ಲಿ. ತಮಿಳುನಾಡಿನಲ್ಲಿ ಕೇವಲ 100 ರೂಪಾಯಿಗಳಿಗೆ ‘ಪುಷ್ಪ 2’ ಸಿನಿಮಾ ಬಾಲ್ಕನಿಯಲ್ಲಿ ಕೂತು ನೋಡಬಹುದಾಗಿದೆ. ಸಾಮಾನ್ಯ ದರ್ಜೆಯ ಟಿಕೆಟ್ ಬೆಲೆ ಕೇವಲ 60 ರೂಪಾಯಿಗಳು. ಚೆನ್ನೈನ ಐನಾಕ್ಸ್ನಲ್ಲಿ ಸಹ ‘ಪುಷ್ಪ 2’ ಸಿನಿಮಾದ ಬಾಲ್ಕನಿ ಟಿಕೆಟ್ ಬೆಲೆ 190, ಸಾಮಾನ್ಯ ಟಿಕೆಟ್ ಬೆಲೆ ಕೇವಲ 60 ರೂಪಾಯಿಗಳು. ಕೇರಳದ ಕೊಚ್ಚಿಯಲ್ಲಿಯೂ ಸಹ ಬಹಳ ಕಡಿಮೆ ದರದ ಟಿಕೆಟ್ ಬೆಲೆ ಇದೆ. ಕೊಚ್ಚಿಯಲ್ಲಿ ಸರಾಸರಿ ಟಿಕೆಟ್ ಬೆಲೆ ಕೇವಲ 200 ರೂಪಾಯಿಗಳಾಗಿದೆ.
ಅಲ್ಲಿಗೆ ಇಡೀ ದೇಶದಲ್ಲಿ ‘ಪುಷ್ಪ 2’ ಸಿನಿಮಾದ ಟಿಕೆಟ್ಗಳು ಅತಿ ಹೆಚ್ಚು ಬೆಲೆಗೆ ಮಾರಾಟವಾಗುತ್ತಿರುವುದು ಬೆಂಗಳೂರಿನಲ್ಲಿಯೇ. ಮುಂಬೈಗಿಂತಲೂ ದುಬಾರಿ ಬೆಲೆಗೆ ಬೆಂಗಳೂರಿನಲ್ಲಿ ಟಿಕೆಟ್ಗಳು ಮಾರಾಟವಾಗುತ್ತಿವೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ