ಫೆ.27ಕ್ಕೆ ಗಿಲ್ಲಿ ಸಿನಿಮಾ ‘ಸೂಪರ್ ಹಿಟ್’ ರಿಲೀಸ್; ಈಗಲೇ ಬಂದಿದೆ ಒಟಿಟಿ ಡಿಮ್ಯಾಂಡ್
ಗಿಲ್ಲಿ ನಟ ಅವರು ಬಿಗ್ ಬಾಸ್ ಶೋಗೆ ಹೋಗುವುದಕ್ಕೂ ಮುನ್ನ ‘ಸೂಪರ್ ಹಿಟ್’ ಚಿತ್ರದಲ್ಲಿ ನಟಿಸಿದ್ದರು. ಈಗ ಅವರಿಗೆ ಅಪಾರ ಜನಪ್ರಿಯತೆ ಬಂದಿದ್ದು, ಈ ಸಿನಿಮಾ ಫೆಬ್ರವರಿ 27ರಂದು ರಿಲೀಸ್ ಆಗುತ್ತಿದೆ. ಇತ್ತೀಚೆಗೆ ‘ಸೂಪರ್ ಹಿಟ್’ ಸಿನಿಮಾದ ಸುದ್ದಿಗೋಷ್ಠಿ ನಡೆಯಿತು. ಚಿತ್ರತಂಡದವರು ಮಾಹಿತಿ ಹಂಚಿಕೊಂಡರು.

ಈ ಸಿನಿಮಾದ ಶೀರ್ಷಿಕೆಯೇ ‘ಸೂಪರ್ ಹಿಟ್’. ನಾಗೇಂದ್ರ ಪ್ರಸಾದ್ ಅವರ ಸಹೋದರ ವಿಜಯಾನಂದ್ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ‘ಬಿಗ್ ಬಾಸ್ ಕನ್ನಡ 12’ ವಿನ್ನರ್ ಗಿಲ್ಲಿ ನಟ (Gilli Nata), ಗೌರವ್ ಶೆಟ್ಟಿ, ಶ್ವೇತಾ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಫೆಬ್ರವರಿ 27ರಂದು ‘ಸೂಪರ್ ಹಿಟ್’ (Super Hit) ರಿಲೀಸ್ ಆಗಲಿದೆ. ರಿಲೀಸ್ ಡೇಟ್ ಬಗ್ಗೆ ಮಾಹಿತಿ ನೀಡಲು ಸುದ್ದಿಗೋಷ್ಠಿ ನಡೆಸಲಾಯಿತು. ಅದರಲ್ಲಿ ಗಿಲ್ಲಿ ನಟ, ಸಾಧುಕೋಕಿಲ, ನಾಗೇಂದ್ರ ಪ್ರಸಾದ್, ನಿರ್ಮಾಪಕ ಜಿ. ಉಮೇಶ್ ಮುಂತಾದವರು ಭಾಗಿಯಾಗಿದ್ದರು.
ಟೀಸರ್ ಮೂಲಕ ‘ಸೂಪರ್ ಹಿಟ್’ ಸಿನಿಮಾದ ರಿಲೀಸ್ ಡೇಟ್ ಅನೌನ್ಸ್ ಮಾಡಲಾಯಿತು. ಜಿ. ಉಮೇಶ್ ಅವರು ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ನಿರ್ದೇಶಕ ವಿಜಯಾನಂದ್ ಅವರು ಮಾತನಾಡಿದರು. ಕಥೆ ಬರೆಯಲು ಶುರು ಮಾಡಿದಾಗಿನಿಂದ ಈವರೆಗೂ ಎಲ್ಲವೂ ಹೂವೆತ್ತಿಟ್ಟಷ್ಟೇ ಸಲೀಸಾಗಿ ನಡೆಯುತ್ತಾ ಬಂದಿದೆ ಎಂಬ ಧನ್ಯತಾ ಭಾವ ವ್ಯಕ್ತಪಡಿಸಿದರು. ಯಾವುದೇ ಕೊರತೆ ಆಗದಂತೆ ಚಿತ್ರವನ್ನು ನಿರ್ಮಾಣ ಮಾಡಿರುವ ನಿರ್ಮಾಪಕ ಜಿ. ಉಮೇಶ್ ಅವರ ಸಿನಿಮಾಪ್ರೇಮವನ್ನು ಕೊಂಡಾಡಿದರು.
ಸಿನಿಮಾ ಮೂಡಿಬಂದ ರೀತಿಯ ಬಗ್ಗೆ ವಿಜಯಾನಂದ್ ಅವರಿಗೆ ಹೆಮ್ಮೆ ಇದೆ. ಅಲ್ಲದೇ ಈ ಸಿನಿಮಾ ಖಂಡಿತಾ ಹಿಟ್ ಆಗುತ್ತದೆ ಎಂಬ ಭರವಸೆ ಕೂಡ ಅವರಿಗೆ ಇದೆ. ಈಗಾಗಲೇ ಹೊಸ ಒಟಿಟಿ ಸಂಸ್ಥೆಯೊಂದು ‘ಸೂಪರ್ ಹಿಟ್’ ಸಿನಿಮಾದ ಹಕ್ಕುಗಳನ್ನು ಖರೀದಿಸಿದೆ ಎಂಬ ಸಿಹಿ ಸುದ್ದಿಯನ್ನು ಅವರು ನೀಡಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಾಧುಕೋಕಿಲ ಅವರು ಗಿಲ್ಲಿ ಬಗ್ಗೆ ಮೆಚ್ಚುಗೆ ಸೂಚಿಸಿದರು.
‘ಸೂಪರ್ ಹಿಟ್’ ಟೀಸರ್:
‘ಸೂಪರ್ ಹಿಟ್’ ಸಿನಿಮಾಗೆ ನಾಗೇಂದ್ರ ಪ್ರಸಾದ್ ಅವರು ಸಂಗೀತ ನೀಡಿ, ಸಾಹಿತ್ಯ ಬರೆದಿದ್ದಾರೆ. ಅಲ್ಲದೇ ಒಂದು ಪ್ರಮುಖ ಪಾತ್ರ ಕೂಡ ಮಾಡಿದ್ದಾರೆ. ಗಿಲ್ಲಿಯ ಜನಪ್ರಿಯತೆ ಈ ಚಿತ್ರಕ್ಕೆ ಪ್ಲಸ್ ಪಾಯಿಂಟ್ ಆಗಿದೆ ಎಂಬುದನ್ನು ನಾಗೇಂದ್ರ ಪ್ರಸಾದ್ ಪುನರುಚ್ಚರಿಸಿದರು. ಗಿಲ್ಲಿ ನಟ ಅಭಿನಯದ ಸಿನಿಮಾ ಎಂಬ ಕಾರಣಕ್ಕೆ ಅವರ ಅಭಿಮಾನಿಗಳು ಈ ಸಿನಿಮಾ ಮೇಲೆ ನಿರೀಕ್ಷೆ ಇಟ್ಟುಕೊಂಡಿದ್ದಾರೆ.
ಇದನ್ನೂ ಓದಿ: ದರ್ಶನ್ ಭೇಟಿಗೆ ಪ್ರಯತ್ನಿಸಿದ್ರೂ ಅವಕಾಶ ಸಿಗಲಿಲ್ಲ: ಸತ್ಯ ತೆರೆದಿಟ್ಟ ಗಿಲ್ಲಿ ನಟ
ಜಿ. ಉಮೇಶ್ ಅವರ ‘ವಿಜಯಲಕ್ಷ್ಮಿ ಎಂಟರ್ ಪ್ರೈಸಸ್’ ಮೂಲಕ ‘ಸೂಪರ್ ಹಿಟ್’ ಸಿನಿಮಾ ನಿರ್ಮಾಣ ಮಾಡಲಾಗಿದೆ. ಗೌರವ್ ಶೆಟ್ಟಿ ಮತ್ತು ಗಿಲ್ಲಿ ನಟ ಅವರು ಈ ಚಿತ್ರಕ್ಕೆ ನಾಯಕರಾಗಿದ್ದು, ಶ್ವೇತಾ ಅವರು ನಾಯಕಿಯಾಗಿದ್ದಾರೆ. ಆರ್.ಡಿ. ನಾಗಾರ್ಜುನ ಅವರು ಛಾಯಾಗ್ರಹಣ ಮಾಡಿದ್ದಾರೆ. ಶ್ರೀಕಾಂತ್ ಅವರ ಸಂಕಲನ ಈ ಸಿನಿಮಾಗಿದೆ. ಡ್ರ್ಯಾಗನ್ ಮಂಜು, ಸೀನು ಭಾಯ್, ನಾಗವರ್ಧನ್, ಪ್ರಮೋದ್ ಶೆಟ್ಟಿ, ಜಿಜಿ, ಗಿರಿ, ಕರಿಸುಬ್ಬು, ಟಿನಿಸ್ ಕೃಷ್ಣ, ವಂಶಿ, ಮಂಜಣ್ಣ, ಬಿ.ಎನ್. ಮಂಗಳಾ, ಮಂಗಳೂರು ಮೀನನಾಥ ಮುಂತಾದ ಕಲಾವಿದರು ಪಾತ್ರವರ್ಗದಲ್ಲಿ ಇದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 5:29 pm, Tue, 10 February 26




