New Kannada Movie: ಈ ವಾರ ರಿಲೀಸ್ ಆಗ್ತಿವೆ ಕನ್ನಡದ 12 ಸಿನಿಮಾಗಳು; ಪ್ರೇಕ್ಷಕರ ಮುಂದಿದೆ ಸಿಕ್ಕಾಪಟ್ಟೆ ಆಯ್ಕೆ
This Week Releasing Movies: ಕನ್ನಡದ 12 ಸಿನಿಮಾಗಳು ಈ ವಾರ ತೆರೆಕಾಣುತ್ತಿವೆ. ಪರಭಾಷೆಯ ಚಿತ್ರಗಳಿಂದಲೂ ಪೈಪೋಟಿ ಇದೆ. ಕಳೆದ ವಾರ ಬಿಡುಗಡೆಯಾದ ಸಿನಿಮಾಗಳು ಸಹ ಹಣಾಹಣಿ ನಡೆಸುತ್ತಿವೆ.
ಚಿತ್ರರಂಗದಲ್ಲಿ ಸಕ್ಸಸ್ ರೇಟ್ ಕಡಿಮೆ ಇದೆ. ಪ್ರತಿ ವರ್ಷ ನೂರಾರು ಸಿನಿಮಾಗಳು ರಿಲೀಸ್ ಆಗುತ್ತವೆ. ಆದರೆ ಯಶಸ್ಸು ಸಿಗುವುದು ಕೆಲವೇ ಚಿತ್ರಗಳಿಗೆ ಮಾತ್ರ. ಆದರೂ ಕನ್ನಡ ಚಿತ್ರರಂಗದಲ್ಲಿ (Kannada Film Industry) ಸಿನಿಮಾ ಮಾಡುವವರ ಉತ್ಸಾಹ ಕಡಿಮೆ ಆಗಿಲ್ಲ. ವರ್ಷದಿಂದ ವರ್ಷಕ್ಕೆ ನಿರ್ಮಾಣವಾಗುವ ಸಿನಿಮಾಗಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಇದರಿಂದ ಪ್ರತಿ ವಾರ ಹತ್ತು ಹಲವು ಚಿತ್ರಗಳು (New Kannada Movies) ರಿಲೀಸ್ ಆಗುತ್ತವೆ. ಈ ಶುಕ್ರವಾರ (ಮಾರ್ಚ್ 3) ಕನ್ನಡದ 12 ಸಿನಿಮಾಗಳು ರಿಲೀಸ್ ಆಗುತ್ತಿವೆ. ಆ ಪೈಕಿ, ‘19.20.21’, ‘ದೂರದರ್ಶನ’, ‘ಕಾಸಿನ ಸರ’ (Kasina Sara Movie) ಮುಂತಾದ ಸಿನಿಮಾಗಳು ನಿರೀಕ್ಷೆ ಮೂಡಿಸಿವೆ. ಇವುಗಳ ಜೊತೆಯಲ್ಲಿ ಪರಭಾಷೆಯ ಚಿತ್ರಗಳು ಕೂಡ ಪೈಪೋಟಿ ನೀಡುತ್ತಿವೆ. ಇದರಿಂದಾಗಿ ಪ್ರೇಕ್ಷಕರ ಎದುರು ಈ ವಾರ ಸಿಕ್ಕಾಪಟ್ಟೆ ಆಯ್ಕೆಗಳಿವೆ.
ನೈಜ ಘಟನೆ ಆಧರಿಸಿದ ‘19.20.21’:
ನಿರ್ದೇಶಕ ಮಂಸೋರೆ ಅವರು ಪ್ರತಿ ಬಾರಿಯೂ ವಿಶೇಷ ಕಥಾವಸ್ತು ಇಟ್ಟುಕೊಂಡು ಸಿನಿಮಾ ಮಾಡುತ್ತಾರೆ. ಅವರ ನಾಲ್ಕನೇ ಚಿತ್ರವಾಗಿ ‘19.20.21’ ಮೂಡಿಬಂದಿದೆ. ಹಲವು ವರ್ಷಗಳ ಕಾಲ ದೌರ್ಜನ್ಯಕ್ಕೆ ಒಳಗಾದ ಬುಡಕಟ್ಟು ಜನರ ನೈಜ ಜೀವನವನ್ನು ಆಧರಿಸಿ ಈ ಸಿನಿಮಾ ತಯಾರಾಗಿದೆ.
ಇದನ್ನೂ ಓದಿ: Mansore: ತಮ್ಮದೇ ಕಥೆಯನ್ನು ತೆರೆ ಮೇಲೆ ನೋಡಿ ಕಣ್ಣೀರು ಹಾಕಿದ ‘19.20.21’ ಚಿತ್ರದ ನೈಜ ಪಾತ್ರಗಳು
ರೆಟ್ರೋ ಕಾಲದ ‘ದೂರದರ್ಶನ’:
ಹಳ್ಳಿಗಳಿಗೆ ಮೊದಲ ಬಾರಿಗೆ ಟಿವಿ ಬಂದಾಗ ಜನರ ಜೀವನದಲ್ಲಿ ಭಾರಿ ಬದಲಾವಣೆ ಆಯಿತು. ಅದರಿಂದ ಮನೆ-ಮನಗಳ ನಡುವೆ ಸ್ನೇಹ ಬೆಸೆಯಿತು. ಅದೇ ರೀತಿ ಜಗಳಗಳೂ ಉಂಟಾದವು. ಇಂಥ ಹಲವು ಪ್ರಸಂಗಗಳನ್ನು ಇಟ್ಟಕೊಂಡು ‘ದೂರದರ್ಶನ’ ಸಿನಿಮಾ ಮಾಡಲಾಗಿದೆ. ಈ ಚಿತ್ರದಲ್ಲಿ ಪೃಥ್ವಿ ಅಂಬಾರ್, ‘ಉಗ್ರಂ’ ಮಂಜು ಮುಂತಾದವರು ನಟಿಸಿದ್ದಾರೆ.
ಇದನ್ನೂ ಓದಿ: 19.20.21 Movie: ಗಮನ ಸೆಳೆಯುತ್ತಿದೆ ‘19.20.21’ ಹೊಸ ಪೋಸ್ಟರ್; ಬಿಡುಗಡೆ ಹೊಸ್ತಿಲಿನಲ್ಲಿ ಹೆಚ್ಚಿತು ಕೌತುಕ
‘ಕಾಸಿನ ಸರ’ ಚಿತ್ರದಲ್ಲಿ ಕೃಷಿಕರ ಕಥೆ:
ವಿಜಯ್ ರಾಘವೇಂದ್ರ ಮತ್ತು ಹರ್ಷಿಕಾ ಪೂಣಚ್ಚ ಅವರು ‘ಕಾಸಿನ ಸರ’ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರಕ್ಕೆ ಎನ್.ಆರ್. ನಂಜುಂಡೇಗೌಡ ನಿರ್ದೇಶನ ಮಾಡಿದ್ದಾರೆ. ರೈತ ಹೋರಾಟಗಾರನ ಪಾತ್ರದಲ್ಲಿ ವಿಜಯ್ ರಾಘವೇಂದ್ರ ಕಾಣಿಸಿಕೊಂಡಿದ್ದು, ಅವರಿಗೆ ಬೆಂಬಲವಾಗಿ ನಿಲ್ಲುವ ಪತ್ನಿಯ ಪಾತ್ರಕ್ಕೆ ಹರ್ಷಿಕಾ ಪೂಣಚ್ಚ ಬಣ್ಣ ಹಚ್ಚಿದ್ದಾರೆ.
ಇದನ್ನೂ ಓದಿ: Kasina Sara Movie: ವಿಜಯ್ ರಾಘವೇಂದ್ರ, ಹರ್ಷಿಕಾ ನಟನೆಯ ‘ಕಾಸಿನ ಸರ’ ಚಿತ್ರ ಮಾರ್ಚ್ 3ಕ್ಕೆ ರಿಲೀಸ್; ಇದರಲ್ಲಿದೆ ರೈತರ ಕಥೆ
ಅದೇ ರೀತಿ ‘ಕಡಲ ತೀರದ ಭಾರ್ಗವ’, ‘ಪ್ರಜಾ ರಾಜ್ಯ’, ‘ಇನ್ಕಾರ್’, ‘ನಾಕು ಮುಖ’, ‘ಬೀಗ’, ‘ಅಂಬಾಸಡರ್’, ‘ರಾಕ್ಷಸ ತಂತ್ರ’, ‘ಒಂದಂಕೆ ಕಾಡು’, ‘ಚೇರ್ಮನ್’ ಸಿನಿಮಾಗಳು ಕೂಡ ಈ ವಾರವೇ ರಿಲೀಸ್ ಆಗುತ್ತಿವೆ. ಈ ಎಲ್ಲ ಚಿತ್ರಗಳು ಒಂದಿಲ್ಲೊಂದು ಕಾರಣಕ್ಕೆ ವಿಶೇಷ ಎನಿಸಿಕೊಳ್ಳುತ್ತಿವೆ. ಪ್ರೇಕ್ಷಕರು ಯಾವ ಚಿತ್ರಕ್ಕೆ ಬೆಂಬಲ ನೀಡುತ್ತಾರೆ ಎಂಬುದು ಸದ್ಯದ ಪ್ರಶ್ನೆ. ಇವುಗಳ ಜೊತೆಯಲ್ಲಿ ಕಳೆದ ವಾರ ತೆರೆಕಂಡ ಸಿನಿಮಾಗಳು ಕೂಡ ಹಣಾಹಣಿ ನಡೆಸುತ್ತಿವೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:10 pm, Thu, 2 March 23