ಬ್ರೇಕಿಂಗ್​ ನ್ಯೂಸ್​ ನೀಡಿದ ‘ಹೊಂಬಾಳೆ ಫಿಲ್ಮ್ಸ್​’: ಯುವ ರಾಜ್​ಕುಮಾರ್​ ಜತೆ ಹೊಸ ಸಿನಿಮಾ ಘೋಷಣೆ

ಬ್ರೇಕಿಂಗ್​ ನ್ಯೂಸ್​ ನೀಡಿದ ‘ಹೊಂಬಾಳೆ ಫಿಲ್ಮ್ಸ್​’: ಯುವ ರಾಜ್​ಕುಮಾರ್​ ಜತೆ ಹೊಸ ಸಿನಿಮಾ ಘೋಷಣೆ
ಯುವ ರಾಜ್​ಕುಮಾರ್

Hombale Films | Yuva Rajkumar: ಅನೇಕ ಸಿನಿಮಾಗಳನ್ನು ನಿರ್ಮಾಣ ಮಾಡುತ್ತಿರುವ ‘ಹೊಂಬಾಳೆ ಫಿಲ್ಮ್ಸ್​’ ಸಂಸ್ಥೆ ಈಗ ಇನ್ನೊಂದು ಹೊಸ ಚಿತ್ರ ಅನೌನ್ಸ್​ ಮಾಡಿದೆ. ಈ ಬಾರಿ ಯುವ ರಾಜ್​ಕುಮಾರ್​ ಜತೆ ಕೈ ಜೋಡಿಸಿದೆ.

TV9kannada Web Team

| Edited By: Madan Kumar

Apr 27, 2022 | 1:30 PM

ಸಿನಿಮಾ ನಿರ್ಮಾಣದಲ್ಲಿ ‘ಹೊಂಬಾಳೆ ಫಿಲ್ಮ್ಸ್​’ (Hombale Films) ಸಂಸ್ಥೆ ಹಲವು ಸಾಧನೆಗಳನ್ನು ಮಾಡುತ್ತಿದೆ. ‘ಕೆಜಿಎಫ್​: ಚಾಪ್ಟರ್​ 2’ ಸಿನಿಮಾದಿಂದ ಜಗತ್ತಿನಾದ್ಯಂತ ಖ್ಯಾತಿ ಪಡೆದಿರುವ ಈ ಸಂಸ್ಥೆಯಿಂದ ಈಗ ಹೊಸ ಬ್ರೇಕಿಂಗ್​ ನ್ಯೂಸ್​ ಹೊರಬಿದ್ದಿದೆ. ರಾಘವೇಂದ್ರ ರಾಜ್​ಕುಮಾರ್​ ಅವರ ಎರಡನೇ ಪುತ್ರನಾದ ಯುವ ರಾಜ್​ಕುಮಾರ್ (Yuva Rajkumar)​ ಮತ್ತು ನಿರ್ದೇಶಕ ಸಂತೋಷ್​ ಆನಂದ್​ರಾಮ್​ ಜೊತೆ ಸಿನಿಮಾ ಮಾಡಲು ನಿರ್ಮಾಪಕ ವಿಜಯ್​ ಕಿರಗಂದೂರು ಸಜ್ಜಾಗಿದ್ದಾರೆ. ಈ ಬಗ್ಗೆ ಸೋಶಿಯಲ್​ ಮೀಡಿಯಾ ಮೂಲಕ ಮಾಹಿತಿ ಹಂಚಿಕೊಳ್ಳಲಾಗಿದೆ. ‘ಬೆಳ್ಳಿ ಪರದೆಗೆ ಹೊಸದೊಂದು ಪರ್ವ’ ಎಂಬ ಸ್ಲೋಗನ್​ ಮೂಲಕ ದೊಡ್ಡ ಸುದ್ದಿ ನೀಡುವುದಾಗಿ ಮಂಗಳವಾರವೇ (ಏ.26) ಸೂಚನೆ ನೀಡಲಾಗಿತ್ತು. ಅದೇನು ಎಂಬ ಕೌತುಕ ಅಭಿಮಾನಿಗಳಲ್ಲಿ ನಿರ್ಮಾಣ ಆಗಿತ್ತು. ಅದಕ್ಕೀಗ ಉತ್ತರ ಸಿಕ್ಕಿದೆ. ನಿರ್ಮಾಪಕ ವಿಜಯ್​ ಕಿರಗಂದೂರು, ನಟ ಯುವ ರಾಜ್​ಕುಮಾರ್​ ಹಾಗೂ ನಿರ್ದೇಶಕ ಸಂತೋಷ್​ ಆನಂದ್​ ರಾಮ್ (Santhosh Ananddram)​ ಕಾಂಬಿನೇಷನ್​ ಬಗ್ಗೆ ಕೆಲವು ದಿನಗಳ ಹಿಂದೆಯೇ ಗುಸುಗುಸು ಕೇಳಿಬಂದಿತ್ತು. ಅದೀಗ ಅಧಿಕೃತ ಆಗಿದೆ.

ಪುನೀತ್ ರಾಜ್​ಕುಮಾರ್​ ಮತ್ತು ಸಂತೋಷ್​ ಆನಂದ್ ರಾಮ್​ ಅವರು ಕಾಂಬಿನೇಷನ್​ನಲ್ಲಿ ‘ರಾಜಕುಮಾರ’ ಮತ್ತು ‘ಯುವರತ್ನ’ ಸಿನಿಮಾ ಮೂಡಿಬಂದಿದ್ದವು. ಆ ಎರಡೂ ಸಿನಿಮಾಗಳಿಗೆ ‘ಹೊಂಬಾಳೆ ಫಿಲ್ಮ್ಸ್​’ ಸಂಸ್ಥೆ ಬಂಡವಾಳ ಹೂಡಿತ್ತು. ಅದೇ ಕಾಂಬಿನೇಷನ್​ನಲ್ಲಿ ಮತ್ತೊಂದು ಸಿನಿಮಾ ಸೆಟ್ಟೇರಬೇಕಿತ್ತು. ಅದು ಆ್ಯಕ್ಷನ್​ ಥ್ರಿಲ್ಲರ್​ ಸಿನಿಮಾ ಆಗಿರಲಿದೆ ಎಂಬ ಮಾಹಿತಿ ಕೂಡ ಹೊರಬಿದ್ದಿತ್ತು. ಇನ್ನೇನು ಆ ಚಿತ್ರ ಸೆಟ್ಟೇರಬೇಕು ಅನ್ನೋದಕ್ಕೂ ಮುನ್ನವೇ ಪುನೀತ್ ರಾಜ್​ಕುಮಾರ್​ ನಿಧನರಾದರು. ಈಗ ಅದೇ ಕಥೆಗೆ ಯುವ ರಾಜ್​ಕುಮಾರ್​ ಹೀರೋ ಆಗಿದ್ದಾರೆ ಎನ್ನಲಾಗುತ್ತಿದೆ. ಆದರೆ ಈ ಬಗ್ಗೆ ಚಿತ್ರತಂಡದಿಂದ ಇನ್ನಷ್ಟೇ ಸ್ಪಷ್ಟನೆ ಸಿಗಬೇಕಿದೆ.

‘ಅಭಿಮಾನದಿಂದ ಅಭಿಮಾನಕ್ಕಾಗಿ ಈ ನಮ್ಮ ಪಯಣ. ಇರಲಿ ನಿಮ್ಮ ಅಪ್ಪುಗೆ. ಲೆಗೆಸಿ ಮುಂದುವರಿಯುತ್ತದೆ. ಯುವ ರಾಜ್​ಕುಮಾರ್​ ಅವರನ್ನು ಹೊಂಬಾಳೆ ಫಿಲ್ಮ್ಸ್​ ಹೆಮ್ಮೆಯಿಂದ ಪರಿಚಯಿಸುತ್ತಿದೆ’ ಎಂದು ಪೋಸ್ಟ್​ ಮಾಡಲಾಗಿದೆ. ಯುವ ರಾಜ್​ಕುಮಾರ್ ಅವರ ಹೊಸ ಪೋಸ್ಟರ್​ಗಳನ್ನು ಕೂಡ ಹಂಚಿಕೊಳ್ಳಲಾಗಿದೆ. ಈ ಸುದ್ದಿ ಕೇಳಿ ಡಾ. ರಾಜ್​ಕುಮಾರ್​ ಕುಟುಂಬದ ಫ್ಯಾನ್ಸ್​ ಥ್ರಿಲ್​ ಆಗಿದ್ದಾರೆ.

ಯುವ ರಾಜ್​ಕುಮಾರ್ ನಟನೆಯ ಮೊದಲ ಸಿನಿಮಾ ‘ಯುವ ರಣಧೀರ ಕಂಠೀರವ’ ಚಿತ್ರ ಈ ಹಿಂದೆ ಅನೌನ್ಸ್​ ಆಗಿತ್ತು. ಟೀಸರ್​ ಮೂಲಕ ಭಾರಿ ಕೌತುಕವನ್ನೂ ಮೂಡಿಸಿತ್ತು. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಆ ಚಿತ್ರ ಸಿದ್ಧವಾಗಿರಬೇಕಿತ್ತು. ಕಾರಣಾಂತರಗಳಿಂದ ಆ ಸಿನಿಮಾ ಕೆಲಸಗಳು ವಿಳಂಬ ಆಗಿವೆ. ಹಾಗಾಗಿ ‘ಹೊಂಬಾಳೆ ಫಿಲ್ಮ್ಸ್​’ ನಿರ್ಮಾಣ ಮಾಡುವ ಚಿತ್ರವೇ ಯುವ ರಾಜ್​ಕುಮಾರ್​ ಅವರ ಮೊದಲ ಸಿನಿಮಾ ಆಗಿರಲಿದೆ.

ಇನ್ನು, ಸಂತೋಷ್​ ಆನಂದ್​ ರಾಮ್​ ಅವರು ‘ರಾಜಕುಮಾರ’, ‘ಯುವರತ್ನ’, ‘ರಾಘವೇಂದ್ರ ಸ್ಟೋರ್ಸ್​’ ಬಳಿಕ ನಾಲ್ಕನೇ ಬಾರಿಗೆ ‘ಹೊಂಬಾಳೆ ಫಿಲ್ಮ್ಸ್​’ ಜೊತೆ ಸಿನಿಮಾ ಮಾಡುತ್ತಿದ್ದಾರೆ.

ಇದನ್ನೂ ಓದಿ:

‘ಹೊಂಬಾಳೆ ಫಿಲ್ಮ್ಸ್​’ ಹೊಸ ಚಿತ್ರ ಅನೌನ್ಸ್​; ಈ ಬಾರಿ ಚಾನ್ಸ್​ ಪಡೆದಿದ್ದು ಲೇಡಿ ಡೈರೆಕ್ಟರ್​ ಸುಧಾ ಕೊಂಗರ

ಟೀಸರ್​ ಮೂಲಕ ಗಮನ ಸೆಳೆದ ‘ಕಾಂತಾರ’, ‘ರಾಘವೇಂದ್ರ ಸ್ಟೋರ್ಸ್​’; ಹೊಂಬಾಳೆ ಫಿಲ್ಮ್ಸ್​ ಪ್ರಯತ್ನಕ್ಕೆ ಸಿಕ್ತು ಮೆಚ್ಚುಗೆ

Follow us on

Related Stories

Most Read Stories

Click on your DTH Provider to Add TV9 Kannada