ರವಿಚಂದ್ರನ್ ಪುತ್ರ ಮನೋರಂಜನ್ ಜತೆ ನಟಿ ಕೀರ್ತಿ ಕಲಕೇರಿ ಹೊಸ ಕಥೆ; ಮೇ 20ರಿಂದ ‘ಪ್ರಾರಂಭ’
ಮನೋರಂಜನ್ ರವಿಚಂದ್ರನ್ ನಟಿಸಿರುವ 4ನೇ ಸಿನಿಮಾ ‘ಪ್ರಾರಂಭ’. ಈ ಚಿತ್ರದಲ್ಲಿ ಅವರಿಗೆ ಕೀರ್ತಿ ಕಲಕೇರಿ ಜೋಡಿ ಆಗಿದ್ದಾರೆ.
ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ‘ಪ್ರಾರಂಭ’ ಸಿನಿಮಾ (Prarambha Movie) ಈಗಾಗಲೇ ತೆರೆಕಂಡಿರಬೇಕಿತ್ತು. ಕೊವಿಡ್, ಲಾಕ್ಡೌನ್ ಮುಂತಾದ ಕಾರಣಗಳಿಂದಾಗಿ ಈ ಸಿನಿಮಾದ ಕೆಲಸಗಳು ತಡವಾದವು. ಈ ಚಿತ್ರಕ್ಕೆ ಕ್ರೇಜಿ ಸ್ಟಾರ್ ರವಿಚಂದ್ರನ್ ಪುತ್ರ ಮನೋರಂಜನ್ (Manoranjan Ravichandran) ಹೀರೋ. ಈಗ ‘ಪ್ರಾರಂಭ’ ಸಿನಿಮಾದ ಬಿಡುಗಡೆಗೆ ಕಾಲ ಕೂಡಿಬಂದಿದೆ. ಮೇ 20ರಂದು ಎಲ್ಲ ಕಡೆಗಳಲ್ಲಿ ರಿಲೀಸ್ ಆಗುತ್ತಿರುವ ಈ ಸಿನಿಮಾ ಬಗ್ಗೆ ಚಿತ್ರತಂಡ ಹೆಚ್ಚು ನಿರೀಕ್ಷೆ ಇಟ್ಟುಕೊಂಡಿದೆ. ಮನು ಕಲ್ಯಾಡಿ ಅವರು ‘ಪ್ರಾರಂಭ’ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಮನೋರಂಜನ್ ರವಿಚಂದ್ರನ್ ಅವರಿಗೆ ಈ ಸಿನಿಮಾದಲ್ಲಿ ಬೇರೆ ಬೇರೆ ಗೆಟಪ್ಗಳಿವೆ. ಅವರಿಗೆ ಜೋಡಿಯಾಗಿ ಹೊಸ ನಟಿ ಕೀರ್ತಿ ಕಲಕೇರಿ (Keerti Kalakeri) ಅವರು ಅಭಿನಯಿಸಿದ್ದಾರೆ. ಟ್ರೇಲರ್ ಮೂಲಕ ಗಮನ ಸೆಳೆದಿರುವ ಈ ಚಿತ್ರಕ್ಕೆ ಪ್ರೇಕ್ಷಕ ಪ್ರಭುಗಳಿಂದ ಯಾವ ರೀತಿಯ ಪ್ರತಿಕ್ರಿಯೆ ಸಿಗಲಿದೆ ಎಂಬುದನ್ನು ತಿಳಿದುಕೊಳ್ಳುವ ಸಮಯ ಬಂದಿದೆ. ಮೇ 20ಕ್ಕೆ ರಿಲೀಸ್ ಆಗುತ್ತಿರುವ ಪ್ರಯುಕ್ತ ಇತ್ತೀಚೆಗೆ ಚಿತ್ರತಂಡ ಸುದ್ದಿಗೋಷ್ಠಿ ಹಮ್ಮಿಕೊಂಡಿತ್ತು. ಸಿನಿಮಾ ಬಗ್ಗೆ ಒಂದಷ್ಟು ಮಾತುಗಳನ್ನು ಹಂಚಿಕೊಂಡಿದ್ದಾರೆ ‘ಪ್ರಾರಂಭ’ ತಂಡದವರು.
ಲೇಟ್ ಆದ್ರೂ ಲೇಟೆಸ್ಟ್ ಆಗಿ ಬರುತ್ತಿರುವ ಫೀಲ್ನಲ್ಲಿದೆ ‘ಪ್ರಾರಂಭ’ ಸಿನಿಮಾದ ಟೀಮ್. ಮನೋರಂಜನ್ ರವಿಚಂದ್ರನ್ ಅಭಿನಯದ ನಾಲ್ಕನೇ ಸಿನಿಮಾ ಇದು. ಈ ಹಿಂದೆ ‘ಸಾಹೇಬ’, ‘ಬೃಹಸ್ಪತಿ’ ಮತ್ತು ‘ಮುಗಿಲ್ ಪೇಟೆ’ ಸಿನಿಮಾಗಳ ಮೂಲಕ ಪ್ರೇಕ್ಷಕರನ್ನು ರಂಜಿಸಿದ್ದ ಅವರು ಈಗ ‘ಪ್ರಾರಂಭ’ ಸಿನಿಮಾ ಮೂಲಕ ಜನರ ಎದುರು ಬರುತ್ತಿದ್ದಾರೆ. ಈ ಚಿತ್ರದ ಥೀಮ್ ಏನು ಎಂಬುದನ್ನು ಅವರು ವಿವರಿಸಿದ್ದಾರೆ.
‘ಪ್ರೀತಿ ಕೈ ಕೊಟ್ಟರೆ ಕೆಲವರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಆದರೆ ಅದು ತಪ್ಪು. ನಮಗೂ ಅಪ್ಪ, ಅಮ್ಮ, ಅಕ್ಕ, ತಂಗಿ, ಅಣ್ಣ, ತಮ್ಮ ಹೀಗೆ ಕುಟುಂಬ ಇರುತ್ತದೆ ಎಂಬುದನ್ನು ಯೋಚಿಸಿ ಮುನ್ನಡೆಯಬೇಕು. ಇಂತಹ ಕಥೆ ಈ ಸಿನಿಮಾದಲ್ಲಿ ಇದೆ. ಇಡೀ ಚಿತ್ರತಂಡದ ಪರಿಶ್ರಮದಿಂದ ಚಿತ್ರ ಚೆನ್ನಾಗಿ ಮೂಡಿಬಂದಿದೆ’ ಎಂದು ಮನೋರಂಜನ್ ರವಿಚಂದ್ರನ್ ಹೇಳಿದ್ದಾರೆ.
ಇದನ್ನೂ ಓದಿ: ರಿಲೀಸ್ ದಿನಾಂಕ ಲಾಕ್ ಮಾಡಿದ ‘ತ್ರಿವಿಕ್ರಮ’; ಜೂ.24ಕ್ಕೆ ಬರಲಿದೆ ವಿಕ್ರಮ್ ರವಿಚಂದ್ರನ್ ಸಿನಿಮಾ
ನಟಿ ಕೀರ್ತಿ ಕಲಕೇರಿ ಅವರು ಈ ಸಿನಿಮಾದಲ್ಲಿ ಇಂಟರೆಸ್ಟಿಂಗ್ ಪಾತ್ರ ಮಾಡಿದ್ದಾರೆ. ಹಾಗಾಗಿ ಅವರು ಈ ಚಿತ್ರದ ಬಿಡುಗಡೆಗಾಗಿ ಕಾದಿದ್ದಾರೆ. ಮನೋರಂಜನ್ ಅವರ ಸಹಕಾರಕ್ಕೆ ಅವರು ಧನ್ಯವಾದ ಅರ್ಪಿಸಿದ್ದಾರೆ. ಇನ್ನೂರಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ‘ಪ್ರಾರಂಭ’ ಚಿತ್ರವನ್ನು ಬಿಡುಗಡೆ ಮಾಡುವುದಾಗಿ ವಿತರಕ ವೆಂಕಟ್ ತಿಳಿಸಿದ್ದಾರೆ. ಈ ಚಿತ್ರಕ್ಕೆ ಜಗದೀಶ್ ಕಲ್ಯಾಡಿ ಬಂಡವಾಳ ಹೂಡಿದ್ದಾರೆ. ಪ್ರಜ್ವಲ್ ಪೈ ಸಂಗೀತ ನಿರ್ದೇಶನ, ವಿಜಯ್ ಎಂ. ಕುಮಾರ್ ಸಂಕಲನ ಮಾಡಿದ್ದಾರೆ.
ಇದನ್ನೂ ಓದಿ: ‘ಅಪ್ಪು ಸರ್ ಜತೆ ನಾನು ವರ್ಕೌಟ್ ಮಾಡ್ತಿದ್ದೆ’; ಪುನೀತ್ ಜತೆಗಿನ ನೆನಪು ಹಂಚಿಕೊಂಡ ಮನುರಂಜನ್
2020ರ ಡಿಸೆಂಬರ್ನಲ್ಲಿಯೇ ಟ್ರೇಲರ್ ಮೂಲಕ ‘ಪ್ರಾರಂಭ’ ಸಿನಿಮಾ ಗಮನ ಸೆಳೆದಿತ್ತು. ಒಂದೂವರೆ ಮಿಲಿಯನ್ಗಿಂತಲೂ ಹೆಚ್ಚು ವೀವ್ಸ್ ಪಡೆದುಕೊಂಡು ಹೈಪ್ ಸೃಷ್ಟಿಸಿತ್ತು. ಹಾಗಾಗಿ ಚಿತ್ರಮಂದಿರದಲ್ಲಿ ಈ ಸಿನಿಮಾಗೆ ಪ್ರೇಕ್ಷಕರಿಗೆ ಉತ್ತಮ ಪ್ರತಿಕ್ರಿಯೆ ಸಿಗುವ ನಿರೀಕ್ಷೆ ಮೂಡಿದೆ. ಪ್ರಚಾರ ಕಾರ್ಯದಲ್ಲಿನ ಕ್ರಿಯೇಟಿವಿ ಕಾರಣದಿಂದಲೂ ‘ಪ್ರಾರಂಭ’ ಚಿತ್ರ ಇತ್ತೀಚೆಗೆ ಗಮನ ಸೆಳೆದಿತ್ತು. ಲಗ್ನ ಪತ್ರಿಕೆ ಶೈಲಿಯಲ್ಲಿ ವಿನ್ಯಾಸಗೊಂಡ ಪೋಸ್ಟರ್ ಹಂಚಿಕೊಳ್ಳುವ ಮೂಲಕ ಚಿತ್ರತಂಡ ಸದ್ದು ಮಾಡಿತ್ತು. ಮೇ 20ರಂದು 10 ಕನ್ನಡ ಸಿನಿಮಾಗಳು ರಿಲೀಸ್ ಆಗುತ್ತಿವೆ. ಅವುಗಳ ಜೊತೆ ‘ಪ್ರಾರಂಭ’ ಚಿತ್ರ ಪೈಪೋಟಿ ನಡೆಸಲಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.