AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಹೋರಾಟಕ್ಕೆ ಬನ್ನಿ ಮೈ ಡಿಯರ್ ಬ್ರದರ್ ಸುದೀಪ್​ ಅನ್ನೋದು ತಪ್ಪಾ?’; ಉಗ್ರಪ್ಪ ಪ್ರಶ್ನೆ

ಚಿತ್ರದುರ್ಗದ ಮದಕರಿ ನಾಯಕ ಜಯಂತೋತ್ಸವದಲ್ಲಿ ನಟ ಕಿಚ್ಚ ಸುದೀಪ್ ವಿರುದ್ಧ ಮಾತನಾಡಿದ್ದ ಮಾಜಿ ಸಂಸದ ವಿ.ಎಸ್. ಉಗ್ರಪ್ಪ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ಸುದೀಪ್ ಅವರಿಗೆ ತಾನು ಯಾವುದೇ ಅಗೌರವ ತೋರಿಲ್ಲ ಎಂದಿರುವ ಅವರು, ಸಮಾಜದ ಪರವಾದ ಮೀಸಲಾತಿ ಹೋರಾಟಕ್ಕೆ ಬನ್ನಿ ಎಂದು ಕರೆಯುವುದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿ ಸ್ಪಷ್ಟನೆ ನೀಡಿದ್ದಾರೆ.

‘ಹೋರಾಟಕ್ಕೆ ಬನ್ನಿ ಮೈ ಡಿಯರ್ ಬ್ರದರ್ ಸುದೀಪ್​ ಅನ್ನೋದು ತಪ್ಪಾ?’; ಉಗ್ರಪ್ಪ ಪ್ರಶ್ನೆ
ಉಗ್ರಪ್ಪ-ಸುದೀಪ್
ರಾಜೇಶ್ ದುಗ್ಗುಮನೆ
|

Updated on:Oct 14, 2026 | 2:43 PM

Share

ಮುಖ್ಯಾಂಶಗಳು

  • ಸುದೀಪ್‌ಗೆ ಅಗೌರವ ತೋರಿಲ್ಲ, ಉಗ್ರಪ್ಪ ಸ್ಪಷ್ಟನೆ
  • ಹೋರಾಟಕ್ಕೆ ಬರುವುದರಲ್ಲಿ ತಪ್ಪೇನಿಲ್ಲ ಎಂದ ಮಾಜಿ ಸಂಸದ
  • 2003ರಲ್ಲೇ ಸುದೀಪ್ ತಂದೆ ಸಂಜೀವ್ ಪರಿಚಯವಿತ್ತು ಎಂದ ಉಗ್ರಪ್ಪ

ಚಿತ್ರದುರ್ಗದಲ್ಲಿ ನಡೆದ ರಾಜ ವೀರಮದಕರಿ ನಾಯಕ ಜಯಂತೋತ್ಸವದ ವೇಳೆ ನಟ ಕಿಚ್ಚ ಸುದೀಪ್ ಹಾಗೂ ಅವರ ಅಭಿಮಾನಿಗಳ ಕುರಿತು ತಾವು ಆಡಿದ ಮಾತುಗಳ ಬಗ್ಗೆ ಮಾಜಿ ಸಂಸದ ವಿ.ಎಸ್. ಉಗ್ರಪ್ಪ ಸ್ಪಷ್ಟನೆ ನೀಡಿದ್ದಾರೆ. ತಾವು ನಟ ಸುದೀಪ್ ಅವರಿಗೆ ಯಾವುದೇ ಅಗೌರವ ತೋರಿಲ್ಲ ಎಂದು ಉಗ್ರಪ್ಪ ತಿಳಿಸಿದ್ದಾರೆ. ಬಿಜೆಪಿ ಮುಖಂಡ ರಾಜುಗೌಡ ತಮ್ಮ ಹೇಳಿಕೆಯನ್ನು ಟೀಕಿಸಿರುವುದಕ್ಕೆ ಉಗ್ರಪ್ಪ ತಿರುಗೇಟು ನೀಡಿದ್ದಾರೆ.

ಈ ಬಗ್ಗೆ ಮಾತನಾಡಿರುವ ಅವರು, ‘ಸುದೀಪ್ ಅವರು ಹೋರಾಟಕ್ಕೆ ಬರಬೇಕು ಎಂದು ನಾನು ಹೇಳಿದ್ದೇನೆ. ಈ ಸಮಾಜದ ಪರವಾಗಿ ಹೋರಾಟ ಮಾಡಬೇಕು ಎಂದಿದ್ದೇನೆ, ಇದರಲ್ಲಿ ತಪ್ಪೇನು? ರಾಜುಗೌಡ ಅವರಿಗೆ ಸುದೀಪ್ ಈಗ ಪರಿಚಯವಾಗಿರಬಹುದು, ಆದರೆ ತಮಗೆ ಹಲವು ವರ್ಷಗಳ ಹಿಂದಿನಿಂದಲೂ ಸುದೀಪ್ ಪರಿಚಯವಿದ್ದಾರೆ ಎಂದರು. 2003ರಲ್ಲೇ ಸುದೀಪ್ ಅವರ ತಂದೆ ಸಂಜೀವ್ ಅವರನ್ನು ಭೇಟಿ ಮಾಡಿದ್ದೆವು ಮತ್ತು ನಾವೂ ನಾಯಕರು ಎಂದು ಸುದೀಪ್ ತಂದೆ ಹೇಳಿದ್ದರು’ ಎಂದು ಹಳೆಯ ನೆನಪುಗಳನ್ನು ಮೆಲುಕು ಹಾಕಿದರು.

ಹಿಂದೆ ಡಾ. ರಾಜ್‌ಕುಮಾರ್ ಅವರು ಗೋಕಾಕ್ ಚಳುವಳಿಗೆ ಬಂದು ಹೋರಾಟ ಮಾಡಿದ್ದರು ಹಾಗೂ ಅಂಬರೀಷ್ ಅವರು ಕಾವೇರಿ ವಿವಾದದ ಸಂದರ್ಭದಲ್ಲಿ ಹೋರಾಟಕ್ಕೆ ಧುಮುಕಿದ್ದರು ಎಂಬುದನ್ನು ಉಗ್ರಪ್ಪ ಉಲ್ಲೇಖಿಸಿದರು. ‘ಮೈ ಡೀಯರ್ ಬ್ರದರ್, ಶೇ. 56 ರಷ್ಟು ಮೀಸಲಾತಿ ಹಾಗೂ ಹಕ್ಕುಗಳ ಹೋರಾಟಕ್ಕೆ ಬನ್ನಿ ಎನ್ನುವುದು ತಪ್ಪಾ? ಸಮಾಜ ಉಳಿದರೆ ಮಾತ್ರ ನಾವು ಉಳಿಯುತ್ತೇವೆ ಮತ್ತು ಸಿ ವರ್ಗದ ಜನರು ಬಲಗೊಂಡರೆ ಮಾತ್ರ ರಾಜಕೀಯ ಉಳಿಯುತ್ತದೆ’ ಎಂದರು.

ಇದನ್ನೂ ಓದಿ: ‘ನಾಯಕನ ಮಗನಾಗಿದ್ದರೆ ಮೀಸಲಾತಿ ಹೋರಾಟಕ್ಕೆ ಬನ್ನಿ ಮಿಸ್ಟರ್ ಸುದೀಪ್’; ಮಾಜಿ ಸಂಸದ ಉಗ್ರಪ್ಪ ಸವಾಲು

‘ಸುದೀಪ್ ಅವರ ನಾಯಕತ್ವದಲ್ಲೇ ಬೇಕಾದರೂ ಹೋರಾಟ ಮಾಡೋಣ ಅಥವಾ ಸ್ವಾಮೀಜಿಗಳು ಬಂದರೆ ಅವರ ಜತೆಯೂ ಹೋರಾಟಕ್ಕೆ ನಿಲ್ಲೋಣ. ನಾನು ಯಾರಿಗೂ ಅಗೌರವ ತೋರಿಲ್ಲ ಮತ್ತು ತೋರುವುದೂ ಇಲ್ಲ. ನಮ್ಮ ನೋವನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು ಎಂದರು. ಸುದೀಪ್‌ಗೆ ಸಮಾಜದ ಬೆಂಬಲ ಹೇಗೆ ಬೇಕೋ, ಹಾಗೆಯೇ ಈ ಸಮಾಜಕ್ಕೆ ಸುದೀಪ್ ಅವರ ಬೆಂಬಲವೂ ಬೇಕು.ಇದನ್ನು ಕೇಳುವುದರಲ್ಲಿ ಯಾವುದೇ ತಪ್ಪಿಲ್ಲ’ ಎಂದು ಸಮರ್ಥಿಸಿಕೊಂಡರು. ಎಲ್ಲಾ ಕ್ಷೇತ್ರದವರು ಹೋರಾಟಕ್ಕೆ ಬರಬೇಕು ಎಂದು ಅವರು ಕರೆ ನೀಡಿದರು.

ಇದನ್ನೂ ಓದಿ: ‘ಸುದೀಪ್ ಹೆಲಿಕಾಪ್ಟರ್​​ನಲ್ಲಿ ಬಂದಿದ್ದು ನೋಡಿ ಉಗ್ರಪ್ಪಗೆ ಹೊಟ್ಟೆ ಕಿಚ್ಚಾಗಿದೆ’; ರಾಜುಗೌಡ

ಸುದೀಪ್ ಒಬ್ಬ ಒಳ್ಳೆಯ ನಟ ಮತ್ತು ಅವರ ಕುಟುಂಬವೂ ಉತ್ತಮ ಹಿನ್ನೆಲೆ ಹೊಂದಿದೆ ಎಂದು ಕೊಂಡಾಡಿದ ಉಗ್ರಪ್ಪ, ಸುದೀಪ್ ಅವರು ಸಮಾಜದ ಹಿತಾಸಕ್ತಿಗಾಗಿ ಹೋರಾಟಕ್ಕೆ ಖಂಡಿತ ಬರಬೇಕು ಎಂದು ಮತ್ತೊಮ್ಮೆ ಮನವಿ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 2:40 pm, Wed, 14 October 26

Follow Us
ರಾಜೇಶ್ ದುಗ್ಗುಮನೆ
ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More